ಮಹಿಳೆಯರು ತಮ್ಮನ್ನು ತಾವೇ ರಕ್ಷಿಸಿಕೊಳ್ಳಬೇಕು
ಪ್ರ : ಸೌಜನ್ಯ ಮರ್ಡರ್ ಆಯ್ತು, ಮಣಿಪಾಲದಲ್ಲಿ ವೈದ್ಯಕೀಯ ವಿದ್ಯಾರ್ಥಿನಿ ಅತ್ಯಾಚಾರ ನಡೆಯಿತು, ನಮ್ಮ ಮೆಟ್ರೋದಲ್ಲಿ ಮಹಿಳೆ ಮೇಲೆ ಲೈಂಗಿಕ ದೌರ್ಜನ್ಯ ನಡೆಯಿತು... ಕರ್ನಾಟಕ ರಕ್ಷಣಾ ವೇದಿಕೆ ಏನು ಮಾಡುತ್ತಿದೆ? ಮಹಿಳೆಯರ ರಕ್ಷಣೆಗೆ ಯಾಕೆ ಹೋರಾಟಕ್ಕಿಳಿಯುತ್ತಿಲ್ಲ?
ನಾ. ಗೌಡ : ನಮ್ಮಲ್ಲಿಯೂ ಅಧಿಕೃತವಾಗಿ ಸದಸ್ಯತ್ವ ಪಡೆದಿರುವ 4 ಲಕ್ಷ ಮಹಿಳೆಯರಿದ್ದಾರೆ. ಮಹಿಳೆಗೆ ತೊಂದರೆಯಾದರೆ ಪುರುಷರಿಗೂ ಕಡಿಮೆ ಇಲ್ಲದ ಹಾಗೆ ದನಿಎತ್ತಿದ್ದಾರೆ. ಇಂದು ಯಾರನ್ನೂ ಯಾರೂ ರಕ್ಷಣೆ ಮಾಡುವುದು ಸಾಧ್ಯವಿಲ್ಲ. ಅವರನ್ನು ಅವರೇ ರಕ್ಷಣೆ ಮಾಡಿಕೊಳ್ಳಬೇಕು. ಸಂಘಸಂಸ್ಥೆಗಳು ಬೀದಿಯಲ್ಲಿ ನಿಂತು ಪ್ರತಿಭಟಿಸಬಹುದು, ತನಿಖೆಗೆ ಒತ್ತಾಯಿಸಬಹುದು. ಅದು ಬಿಟ್ಟರೆ, ಸರಕಾರವೇ ಮಹಿಳೆಯರ ರಕ್ಷಣೆಗೆ ಗಟ್ಟಿ ನೀತಿಯನ್ನು ರೂಪಿಸಬೇಕು. ತಪ್ಪಿತಸ್ಥರನ್ನು ಹಿಡಿದು ಅವರ ವಿರುದ್ಧ ಕ್ರಮ ತೆಗೆದುಕೊಳ್ಳುವ ಕೆಲಸ ಸರಕಾರದಿಂದಲೇ ನಡೆಯಬೇಕು.

ಮುಸಲ್ಮಾನರಿಗೆ 50 ಸಾವಿರ ರು. ಕೊಡುತ್ತೇನೆಂದು ಸರಕಾರ ಹೇಳಿದೆ. ಆದರೆ, ನೊಂದಬೆಂದ ಮಹಿಳೆಯರನ್ನು ಗುರುತಿಸಿ ಅವರಿಗೆ ಸಹಾಯ, ಸಹಕಾರ ನೀಡಲಿ. ಎಲ್ಲ ಕುಲದಲ್ಲೂ ಬಡವರಿದ್ದಾರೆ. ಒಂದು ಧರ್ಮವನ್ನು ಓಲೈಸಲು ಇಂಥ ಆಮಿಷ ಒಡ್ಡುವುದು ಸರಿಯಲ್ಲ. ಈ ಕುರಿತು ಸಿದ್ದರಾಮ್ಯನವರಿಗೆ ಪತ್ರ ಬರೆದಿದ್ದೇನೆ. ತಪ್ಪು ಯಾರೇ ಎಸಗಲಿ ಅವರ ವಿರುದ್ಧ ನಿರ್ದಾಕ್ಷಿಣ್ಯ ಕ್ರಮ ತೆಗೆದುಕೊಳ್ಳಬೇಕೆಂದು ಒತ್ತಾಯಿಸಿದ್ದೇನೆ. ಪ್ರಭಾವಿ ರಾಜಕಾರಣಿಗಳು, ಪಾಳೇಗಾರಿಕೆ ಇರುವಂಥ ಪ್ರಭಾವಿ ವ್ಯಕ್ತಿಗಳು ಪ್ರಕರಣಗಳನ್ನು ಮುಚ್ಚಿಹಾಕಲು ಸಾಧ್ಯವಿದೆ ಎನ್ನುವುದಾದರೆ, ಅಂಥ ಬಲಿಷ್ಠರೆಲ್ಲರೂ ತಪ್ಪಿಸಿಕೊಳ್ಳುವಂತಾದರೆ ಕಾನೂನು ಉಳಿಯಲಿಕ್ಕೆ ಹೇಗೆ ಸಾಧ್ಯ?
ಪ್ರ : ಡಾ. ಸರೋಜಿನಿ ಮಹಿಷಿ ವರದಿ ಅನುಷ್ಠಾನದ ಬಗ್ಗೆ ಸಿಎಂ ಏನು ಭರವಸೆ ನೀಡಿದ್ದಾರೆ?
ನಾ. ಗೌಡ : ಸನ್ಮಾನ್ಯ ರಾಮಕೃಷ್ಣ ಹೆಗಡೆಯವರು ಮುಖ್ಯಮಂತ್ರಿ ಆಗಿದ್ದ ಕಾಲದಲ್ಲಿ, 1983ರಲ್ಲಿ ಎಲ್ಲ ಕ್ಷೇತ್ರಗಳಲ್ಲಿ ಕನ್ನಡಿಗರಿಗೆ ಉದ್ಯೋಗ ನೀಡಬೇಕೆಂಬ ಡಾ. ಸರೋಜಿನಿ ಮಹಿಷಿ ವರದಿ ಮಂಡನೆಯಾಯಿತು. ಆ ವರದಿ ಇನ್ನೂ ಜಾರಿಯಾಗಿಲ್ಲ. ಆ ವರದಿಗೆ ಮರುಜೀವ ಕೊಡಬೇಕು, ನಾಡಿನ ಲಕ್ಷಾಂತರ ಮಕ್ಕಳ ಬದುಕು ಅದರಲ್ಲಿ ಉಳಿದೆ ಎನ್ನುವ ಕಾರಣಕ್ಕೆ ಮುಖ್ಯಮಂತ್ರಿಯನ್ನು ಭೇಟಿ ಮಾಡಿದ್ದೇವೆ. ಸಿದ್ದರಾಮಯ್ಯನವರಿಗೂ ಅದರ ಬಗ್ಗೆ ಕಳಕಳಿ ಇದೆ. ಅದಕ್ಕಾಗಿ ಒಂದು ಸಮಿತಿಯನ್ನು ರಚಿಸಿ ನೀತಿಯನ್ನು ತಿದ್ದುಪಡಿ ಮಾಡುವುದಾಗಿ ಭರವಸೆ ನೀಡಿದ್ದಾರೆ.
ನ.1ರೊಳಗೆ ಘೋಷಣೆ ಮಾಡಬೇಕು, ಕನ್ನಡಿಗರಿಗೆ ಕನ್ನಡ ರಾಜ್ಯೋತ್ಸವ ಸಂದರ್ಭದಲ್ಲಿ ಅತ್ಯುತ್ತಮ ಕಾಣಿಕೆ ನೀಡಿದಂತಾಗುತ್ತದೆ ಎಂದು, ದೊಡ್ಡ ಮೆರವಣಿಗೆ ಆಯೋಜಿಸುವ ಮೂಲಕ ಅವರಿಗೆ ಮನವಿ ಮಾಡಿದ್ದೇವೆ. ಆದರೆ, ನವೆಂಬರ್ ಅಂತ್ಯದೊಳಗಡೆ ಜಾರಿ ಮಾಡುವುದಾಗಿ ಭರವಸೆ ನೀಡಿದ್ದಾರೆ. ವರದಿ ಅನುಷ್ಠಾನದ ಜವಾಬ್ದಾರಿಯನ್ನು ಮುಖ್ಯಮಂತ್ರಿ ಚಂದ್ರು ಅವರ ಅಧ್ಯಕ್ಷತೆಯ ಕನ್ನಡ ಅಭಿವೃದ್ಧಿ ಪ್ರಾಧಿಕಾರಕ್ಕೆ ನೀಡಿದ್ದಾರೆ ಎಂದು ತಿಳಿದುಬಂದಿದೆ. ಅದರ ಪ್ರತಿ ತೆಗೆದುಕೊಂಡು, ಮುಖ್ಯಮಂತ್ರಿಗಳೊಂದಿಗೆ ಮತ್ತೆ ಚರ್ಚೆ ಮಾಡಿ, ನವೆಂಬರ್ ಅಂತ್ಯದೊಳಗೆ ಜಾರಿ ಮಾಡುವಂತೆ ಅವರ ಬೆನ್ನು ಬೀಳಲಿದ್ದೇವೆ.












Click it and Unblock the Notifications