ಡಿ. 31 ರ ಕರ್ನಾಟಕ ಬಂದ್ ಗೆ ಬೆಂಬಲ ಕೋರಿ ಕನ್ನಡ ಚಲನ ಚಿತ್ರ ವಾಣಿಜ್ಯ ಮಂಡಳಿಗೆ ಮುತ್ತಿಗೆ
ಬೆಂಗಳೂರು, ಡಿ. 25: ಮಹಾರಾಷ್ಟ್ರ ಏಕೀಕರಣ ಸಮಿತಿ (ಎಂಇಎಸ್) ನಿಷೇಧಕ್ಕೆ ಆಗ್ರಹಿಸಿ ಕನ್ನಡ ಪರ ಸಂಘಟನೆಗಳು ಡಿ. 31ಕ್ಕೆ ಕರೆ ಕೊಟ್ಟಿರುವ ಕರ್ನಾಟಕ ಬಂದ್ ಗೊಂದಲಕ್ಕೆ ಎಡೆ ಮಾಡಿಕೊಟ್ಟಿದೆ. ವರ್ಷದ ಕೊನೆಯ ದಿನ ಶುಕ್ರವಾರ ಮೂರು ಸಿನಿಮಾ ಬಿಡುಗಡೆ ಹಿನ್ನೆಲೆಯಲ್ಲಿ ಕೆಲ ನಟರು, ನಿರ್ದೇಶಕರು ಬಂದ್ ಬೆಂಬಲ ನೀಡುವುದಿಲ್ಲ ಎಂಬ ಸಂದೇಶ ರವಾನಿಸಿದ ಬೆನ್ನಲ್ಲೇ ಕನ್ನಡ ಪರ ಸಂಘಟನೆಗಳು ತಿರುಗಿ ಬಿದ್ದಿವೆ. ವಾಟಾಳ್ ನಾಗರಾಜ್ ನೇತೃತ್ವದಲ್ಲಿ ಕನ್ನಡ ಪರ ಸಂಘಟನೆಗಳ ಕಾರ್ಯಕರ್ತರು ಶನಿವಾರ ಕನ್ನಡ ಚಲನಚಿತ್ರ ವಾಣಿಜ್ಯ ಮಂಡಳಿಗೆ ಮತ್ತಿಗೆ ಹಾಕಿ ಪ್ರತಿಭಟನೆ ನಡೆಸಿದರು.
ಬೆಳಗಾವಿ ಅಧಿವೇಶನ ವೇಳೆ ಕನ್ನಡ ಧ್ವಜವನ್ನು ಸುಡುವ ಮೂಲಕ ಎಂಇಎಸ್ ಪುಂಡರು ಪುಂಡತನ ಮೆರೆದಿದ್ದರು. ಬಸವಣ್ಣ, ಸಂಗೊಳ್ಳಿ ರಾಯಣ್ಣ ಪ್ರತಿಮೆ ವಿರೂಪಗೊಳಿಸಿ ಉದ್ದಟತನ ತೋರಿದ್ದರು. ಇದಕ್ಕೆ ರಾಜ್ಯದೆಲ್ಲೆಡೆ ಅಕ್ರೋಶ ವ್ಯಕ್ತವಾಗಿತ್ತು. ಕನ್ನಡ ಪರ ಸಂಘಟನೆಗಳು ಎಂಇಎಸ್ ಕಾರ್ಯಕರ್ತರ ಪುಂಡತನ ಖಂಡಿಸಿ ಪ್ರತಿಭಟನೆ ನಡೆಸಿದ್ದರು.
ವಾಟಾಳ್ ನೇತೃತ್ವದಲ್ಲಿ ಬಂದ್‌ಗೆ ಕರೆ:
ಎಂಎಎಸ್ ಸಂಘಟನೆಯನ್ನು ನಿಷೇಧಿಸುವಂತೆ ಕನ್ನಡ ಪರ ಸಂಘಟನೆಗಳ ಒಕ್ಕೂಟ ರಾಜ್ಯ ಸರ್ಕಾರಕ್ಕೆ ಡಿ. 28 ರ ವರೆಗೆ ಗಡುವು ನೀಡಿದೆ. ಎಂಇಎಸ್ ನಿಷೇಧ ಮಾಡದಿದ್ದರೆ, ಡಿ. 31 ಕ್ಕೆ ಕರ್ನಾಟಕ ರಾಜ್ಯ ಬಂದ್ ಮಾಡುವುದಾಗಿ ಕನ್ನಡ ಪರ ಸಂಘಟನೆಗಳ ಒಕ್ಕೂಟ ಕರೆ ನೀಡಿತ್ತು. ಡಿ. 31 ಕ್ಕೆ ಕರೆ ಕೊಟ್ಟಿರುವ ಬಂದ್‌ಗೆ ಕೆಲವು ಸಂಘಟನೆಗಳು ನೈತಿಕ ಬೆಂಬಲ ನೀಡಿದ್ದವು. ಕರ್ನಾಟಕ ರಕ್ಷಣಾ ವೇದಿಕೆ ನಾರಾಯಣಗೌಡ ಬಣ ಬಂದ್ ಗೆ ವಿರೋಧ ವ್ಯಕ್ತಪಡಿಸಿತ್ತು.

ಹೊಸ ತಿಕ್ಕಾಟ:
ಕ್ರಿಸ್‌ಮಸ್ ರಜೆ ಹಿನ್ನೆಲೆಯಲ್ಲಿ ಮೂರು ಕನ್ನಡ ಸಿನಿಮಾಗಳು ಬಿಡುಗಡೆಗೆ ಸಿದ್ಧಗೊಂಡಿವೆ. ಡಿ.31 ರಂದು ಕರ್ನಾಟಕ ಬಂದ್ ಮಾಡಿದರೆ ಸಿನಿಮಾಗಳಿಗೆ ದೊಡ್ಡ ಪೆಟ್ಟು ಬೀಳಲಿದೆ. ಈ ಹಿನ್ನೆಲೆಯಲ್ಲಿ ಸಿನಿಮಾ ರಂಗ ಬಂದ್ ಗೆ ಬೆಂಬಲ ನೀಡಲು ಹಿಂದೇಟು ಹಾಕಿದೆ. ಹೀಗಾಗಿ ಡಿ. 28 ರಂದು ಬೇಕಾದರೆ ಬಂದ್ ಮಾಡಲಿ, ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ನೈತಿಕ ಬೆಂಬಲ ನೀಡಲಿದೆ. ಆದರೆ ಡಿ. 31 ರ ಕರ್ನಾಟಕ ಬಂದ್ ಗೆ ಬೆಂಬಲ ನೀಡುವುದಿಲ್ಲ ಎಂದು ಪ್ರಕಟಿಸಿದ ಬೆನ್ನಲ್ಲೇ ಕನ್ನಡ ಪರ ಸಂಘಟನೆಗಳು ಸಿನಿಮಾ ರಂಗದ ವಿರುದ್ಧ ತಿರುಗಿ ಬಿದ್ದಿವೆ. ಚಲನ ಚಿತ್ರ ವಾಣಿಜ್ಯ ಮಂಡಳಿ ಈ ತೀರ್ಮಾನ ಹೊರ ಬೀಳುತ್ತಿದ್ದಂತೆ ಕನ್ನಡ ಪರ ಸಂಘಟನೆಗಳು ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಗೆ ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸಿದರು.

ಈ ವೇಳೆ ಸುದ್ದಿಗಾರರ ಜತೆ ಮಾತನಾಡಿದ ಕನ್ನಡ ಪರ ಸಂಘಟನೆಗಳ ಒಕ್ಕೂಟದ ಹೋರಾಟಗಾರ ವಾಟಾಳ್ ನಾಗರಾಜ್, ಡಿ. 31 ರಂದು ಕರ್ನಾಟಕ ಬಂದ್ ಮಾಡುವುದು ಖಾಯಂ. ಇದಕ್ಕೆ ಪ್ರತಿಯೊಬ್ಬ ಕನ್ನಡಿಗನ ಬೆಂಬಲ ಬೇಕಿದೆ. ಮಹಾರಾಷ್ಟ್ರ ಏಕೀಕರಣ ಸಮಿತಿ ನಿಷೇಧಕ್ಕೆ ಸರ್ಕಾರಕ್ಕೆ ಗಡುವು ನೀಡಲಾಗಿದೆ. ಅಷ್ಟರಲ್ಲಿ ಸರ್ಕಾರ ಕ್ರಮ ಜರುಗಿಸದಿದ್ದರೆ ಬಂದ್ ಮಾಡುವುದು ನಿಶ್ಚಿತ. ಕನ್ನಡ ಸಿನಿಮಾಗಳ ಬಗ್ಗೆ ನಮಗೂ ಅಭಿಮಾನವಿದೆ. ಆದರೆ, ಎಂಇಎಸ್ ಪುಂಡತನ ವಿರುದ್ಧ ಕನ್ನಡಿಗರು ಹೋರಾಟ ನಡೆಸಲೇಬೇಕಿದೆ. ಇನ್ನು ಬಂದ್ ಗೆ ಬೆಂಬಲ ನೀಡುವುದಿಲ್ಲ ಎನ್ನುತ್ತಿರುವ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಬೇಕಾದರೆ, ಮುಖ್ಯಮಂತ್ರಿಗನ್ನು ಭೇಟಿ ಮಾಡಿ ಎಂಇಎಸ್ ನ್ನು ನಿಷೇಧಿಸುವಂತೆ ಮಾತನಾಡಲಿ. ಸರ್ಕಾರ ಎಂಇಎಸ್ ನಿಷೇಧಿಸಿದರೆ ಡಿ. 31 ರಂದು ಕರೆ ಕೊಟ್ಟಿರುವ ಬಂದ್ ವಾಪಸು ಪಡೆಯುತ್ತೇವೆ. ಬಿಟ್ಟರೆ ಯಾವ ಕಾರಣಕ್ಕೂ ಬಂದ್ ವಾಪಸು ಪಡೆಯುವುದಿಲ್ಲ. ಕರ್ನಾಟಕ ಚಲನಚಿತ್ರ ರಂಗ ಕೂಡ ಬಂದ್ ಗೆ ಬೆಂಬಲ ಕೊಡಬೇಕು. ಇದು ಕನ್ನಡಿಗರ ಸ್ವಾಭಿಮಾನದ ಪ್ರಶ್ನೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಸ್ಪಷ್ಟತೆ ಇಲ್ಲದ ಬಂದ್:
ವಾಟಾಳ್ ನಾಗರಾಜ್ ನೇತೃತ್ವದಲ್ಲಿ ಕನ್ನಡ ಪರ ಸಂಘಟನೆಗಳು ಕರೆ ಕೊಟ್ಟಿರುವ ಡಿ. 31 ರ ಕರ್ನಾಟಕ ಬಂದ್‌ಗೆ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ. ಕೆಲವು ಕನ್ನಡ ಪರ ಸಂಘಟನೆಗಳು ಬಂದ್ ನಿಂದ ಹಿಂದಕ್ಕೆ ಸರಿದಿವೆ. ಇನ್ನೂ ಕೆಲವು ಸಂಘಟನೆಗಳು ಬಂದ್ ಮುಂದುವರೆಸುವುದಾಗಿ ಸ್ಪಷ್ಟಪಡಿಸಿವೆ. ಇದರ ನಡುವೆ ಕ್ಯಾಬ್‌ಗಳು, ಓಲಾ, ಉಬರ್ ನೈತಿಕ ಬೆಂಬಲ ನೀಡುವುದಾಗಿ ಪ್ರಕಟಿಸಿವೆ. ಬಿಎಂಟಿಸಿ- ಕೆಎಸ್ಆರ್ ಟಿಸಿ ಕೂಡ ಅಂದು ಪ್ರಯಾಣಿಕರಿಗೆ ಯಾವುದೇ ತೊಂದರೆ ಇಲ್ಲದಂತೆ ಬಸ್ ಸಂಚಾರ ಮುಂದುವರೆಸುವುದಾಗಿ ಪ್ರಕಟಿಸಿವೆ. ಅಂತೂ ಕರ್ನಾಟಕ ಬಂದ್ ಗೆ ಗೊಂದಲದ ವಾತಾವರಣ ನಿರ್ಮಾಣವಾಗಿದ್ದು, ಯಾವ ಸ್ವರೂಪ ಪಡೆದುಕೊಳ್ಳಲಿದೆಯೋ ಕಾದು ನೋಡಬೇಕು.












Click it and Unblock the Notifications