Kannada Marathi: ಈ ವಿಷಯಕ್ಕೆ ಒಂದಾದ ಮಹಾರಾಷ್ಟ್ರದ ಎಂಎನ್‌ಎಸ್ - ಕರ್ನಾಟಕದ ಕರವೇ: ನಾರಾಯಣಗೌಡ ಹೇಳಿದ್ದೇನು
Kannada Marathi: ಮಹಾರಾಷ್ಟ್ರದ ಮಹಾರಾಷ್ಟ್ರ ನವನಿರ್ಮಾಣ ಸೇನೆಯ (ಎಂಎನ್‌ಎಸ್) ಹಾಗೂ ಕರ್ನಾಟಕದ ಕರ್ನಾಟಕ ರಕ್ಷಣಾ ವೇದಿಕೆಯ ಮುಖ್ಯಸ್ಥರು ಒಂದೇ ಕಡೆ ಸೇರಿದ್ದು, ಈ ಸಂದರ್ಭದಲ್ಲಿ ಮಹತ್ವದ ಚರ್ಚೆ ನಡೆದಿದೆ. ಈ ವಿಷಯವನ್ನು ಕರ್ನಾಟಕ ರಕ್ಷಣಾ ವೇದಿಕೆಯ ರಾಜ್ಯಾಧ್ಯಕ್ಷ ನಾರಾಯಣಗೌಡ್ರು.ಟಿ.ಎ ಅವರು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ.
ಮಹಾರಾಷ್ಟ್ರ ನವನಿರ್ಮಾಣ ಸೇನೆಯ (ಎಂಎನ್‌ಎಸ್)ನ ಪ್ರಧಾನ ಕಾರ್ಯದರ್ಶಿ ಯೋಗೇಶ್ ಪರುಲೇಕರ್, ಮುಂಬೈ ಘಟಕದ ಅಧ್ಯಕ್ಷ ಸಂದೀಪ್ ದೇಶಪಾಂಡೆ ನನ್ನನ್ನು ಭೇಟಿಯಾಗಲು ನಮ್ಮ ಕಚೇರಿಗೆ ಬಂದಿದ್ದರು. ಅತ್ಯಂತ ಮಹತ್ವದ ವಿಷಯಗಳ ಕುರಿತು ನಾವು ಚರ್ಚೆ ನಡೆಸಿದೆವು. ಸಂದೀಪ್ ದೇಶಪಾಂಡೆ ನನಗೆ ಹಳೆಯ ಪರಿಚಯ. 2017ರ ಜೂನ್ ತಿಂಗಳಿನಲ್ಲಿ ನಾವು ಬೆಂಗಳೂರಿನಲ್ಲಿ ಏರ್ಪಡಿಸಿದ್ದ ಹಿಂದಿ ಹೇರಿಕೆ ವಿರೋಧಿಸುವ ದುಂಡುಮೇಜಿನ ಸಭೆಯೊಂದಕ್ಕೆ ಅವರನ್ನು ಆಹ್ವಾನಿಸಿದ್ದೆವು. ಅವರು ಬಂದು ಸಭೆಯಲ್ಲಿ ಪಾಲ್ಗೊಂಡಿದ್ದರು. ನಮ್ಮ ಮೆಟ್ರೋದಲ್ಲಿ ಹಿಂದಿಹೇರಿಕೆಯನ್ನು ತೊಲಗಿಸುವ ಹೋರಾಟದ ಭಾಗವಾಗಿ ಈ ದುಂಡುಮೇಜಿನ ಸಭೆಯನ್ನು ಆಯೋಜಿಸಲಾಗಿತ್ತು.

ರಾಜ್ ಠಾಕ್ರೆಯವರ ನೇತೃತ್ವದ ಮಹಾರಾಷ್ಟ್ರ ನವನಿರ್ಮಾಣ ಸೇನೆ ಮೊದಲಿನಿಂದಲೂ ಭಾರತೀಯ ಭಾಷೆಗಳ ವಿರುದ್ಧ ಹಿಂದಿಯನ್ನು ಹೇರುವ ಹಿಂದಿ ಸಾಮ್ರಾಜ್ಯಶಾಹಿಯ ವಿರುದ್ಧ ಸೆಟೆದು ನಿಂತು ಹೋರಾಟಗಳನ್ನು ಸಂಘಟಿಸುತ್ತ ಬಂದಿದೆ. ಕರ್ನಾಟಕ ರಕ್ಷಣಾ ವೇದಿಕೆ 2005ರಿಂದಲೇ ಹಿಂದಿ ಹೇರಿಕೆಯ ಅಪಾಯಗಳನ್ನು ಗ್ರಹಿಸಿ ನಿರಂತರ ಚಳವಳಿ, ಅಭಿಯಾನಗಳನ್ನು ಹಮ್ಮಿಕೊಳ್ಳುತ್ತ ಬಂದಿದೆ. ಎರಡೂ ಸಂಘಟನೆಗಳು ಒಂದೇ ರೀತಿಯ ವಿಚಾರಧಾರೆಗಳನ್ನು ಪ್ರತಿಪಾದಿಸುತ್ತ ಬಂದಿವೆ.
ಯೋಗೇಶ್ ಪಾರುಲೇಕರ್ ಮತ್ತು ಸಂದೀಪ್ ದೇಶಪಾಂಡೆಯವರು ಅತ್ಯಂತ ಗಂಭೀರವಾದ ವಿಷಯಗಳನ್ನು ಪ್ರಸ್ತಾಪಿಸಿದರು. ವಿಶೇಷವಾಗಿ ಮಹಾರಾಷ್ಟ್ರ ಮತ್ತು ಕರ್ನಾಟಕ ರಾಜ್ಯಗಳಿಗೆ ವ್ಯವಸ್ಥಿತ ರೂಪದಲ್ಲಿ ನಡೆಯುತ್ತಿರುವ ಮಹಾವಲಸೆಯ ಬಗ್ಗೆ ಚರ್ಚಿಸಿದರು. ಮಹಾರಾಷ್ಟ್ರದಲ್ಲಿ ಮರಾಠಿ ಭಾಷಿಕರು ಮತ್ತು ಕರ್ನಾಟಕದಲ್ಲಿ ಕನ್ನಡ ಭಾಷಿಕರು ಅನುಭವಿಸುತ್ತಿರುವ ಸಮಸ್ಯೆಗಳು ಬಹುತೇಕ ಒಂದೇ ಆಗಿದೆ. ಮಹಾರಾಷ್ಟ್ರದಲ್ಲಿ ಬಹಳ ಮೊದಲಿನಿಂದಲೇ ಈ ಸಮಸ್ಯೆಗಳು ಆರಂಭವಾದವು. ಮರಾಠಿ ಭಾಷೆಯನ್ನು ದೇವನಾಗರಿ ಲಿಪಿಯಲ್ಲಿ ಬರೆಯಲಾಗುವುದರಿಂದ ಅದೇ ಲಿಪಿಯನ್ನು ಬಳಸುವ ಹಿಂದಿ ಭಾಷಿಕರು ಬಹಳ ಸುಲಭವಾಗಿ ಮಹಾರಾಷ್ಟ್ರದಲ್ಲಿ ನೆಲೆ ನಿಲ್ಲಲು ಸಾಧ್ಯವಾಯಿತು ಎಂಬುದನ್ನು ಸಂದೀಪ್ ದೇಶಪಾಂಡೆ ಹೇಳಿದರು ಎಂದು ನಾರಾಯಣಗೌಡ್ರು.ಟಿ.ಎ ಅವರು ಹೇಳಿದ್ದಾರೆ.
Kannada Marathi: ಹಿಂದಿ ಹೇರಿಕೆ ವಿಷಯದ ಬಗ್ಗೆ ಚರ್ಚೆ
ಮಹಾರಾಷ್ಟ್ರದ ಭೂಮಿ ಮರಾಠಿಗರ ಕೈ ತಪ್ಪಿಹೋಗುತ್ತಿದೆ. ಮುಂಬೈ ಮಾತ್ರವಲ್ಲ, ಎರಡು ಮತ್ತು ಮೂರನೇ ಹಂತದ ನಗರಗಳಲ್ಲೂ ಉತ್ತರ ಭಾರತೀಯರು ಬಂದು ಬೇರುಬಿಡುತ್ತಿದ್ದಾರೆ. ರಾಜಕೀಯವಾಗಿಯೂ ಬೆಳೆಯುತ್ತಿದ್ದಾರೆ. ಉತ್ತರ ಭಾರತೀಯರ ವಲಸೆಗಾಗಿಯೇ ಸುಮಾರು 40 ರೈಲುಗಳು ಪ್ರತಿನಿತ್ಯ ಮಹಾರಾಷ್ಟ್ರದ ನಗರಗಳಿಗೆ ಬರುತ್ತಿವೆ ಎಂದು ಯೋಗೇಶ್ ಪಾರುಲೇಕರ್ ಹೇಳಿದರು. ಇದೆಲ್ಲವೂ ಕರ್ನಾಟಕದ ವಿಷಯದಲ್ಲೂ ನಡೆಯುತ್ತಿದೆ. ನಮ್ಮಲ್ಲೂ ಇದೇ ಸಮಸ್ಯೆಗಳು ಇವೆ ಎಂದು ನಾನು ಹೇಳಿದೆ. ಇದೇ ಸಂದರ್ಭದಲ್ಲಿ ಹಿಂದಿ ಹೇರಿಕೆ, ಕ್ಷೇತ್ರ ಪುನರ್ ವಿಂಗಡಣೆ, ಜನಸಂಖ್ಯಾ ನಿಯಂತ್ರಣದ ಹೆಸರಿನಲ್ಲಿ ಆಗಿರುವ ಅನ್ಯಾಯಗಳು, ತೆರಿಗೆ ಹಂಚಿಕೆಯಲ್ಲಿ ನಿರಂತರವಾಗಿ ನಡೆದುಬಂದಿರುವ ಅನ್ಯಾಯಗಳು ಇತ್ಯಾದಿ ವಿಷಯಗಳ ಕುರಿತು ಚರ್ಚಿಸಿದೆವು.
ಹಿಂದಿಯೇತರ ಭಾಷಾ ರಾಜ್ಯಗಳ ಸಮಸ್ಯೆಯ ಬಗ್ಗೆ ಚರ್ಚೆ
ಹಿಂದಿಯೇತರ ಭಾಷಾ ರಾಜ್ಯಗಳು ಅನುಭವಿಸುತ್ತಿರುವ ಸಮಸ್ಯೆಗಳನ್ನು ಈ ಎಲ್ಲ ರಾಜ್ಯಗಳು ಒಂದಾಗಿ ನಿಂತು ಎದುರಿಸಬೇಕಾಗಿರುವ ಅಗತ್ಯಗಳ ಕುರಿತು ಚರ್ಚೆಯಾಯಿತು. ಈ ಹಿನ್ನೆಲೆಯಲ್ಲಿ ಭಾರತೀಯ ಭಾಷೆಗಳ ವೇದಿಕೆ (Indian Languages Forum) ರಚಿಸಲು ನಿರ್ಧರಿಸಲಾಯಿತು. ಈ ವೇದಿಕೆಯಲ್ಲಿ ಕನ್ನಡ-ಮರಾಠಿ ಭಾಷಿಕರು ಮಾತ್ರವಲ್ಲದೆ ತಮಿಳು, ತೆಲುಗು, ಮಲಯಾಳಂ, ಪಂಜಾಬಿ, ಬಂಗಾಳಿ ಮತ್ತು ಇತರ ಭಾರತೀಯ ಭಾಷೆಗಳನ್ನು ಆಡುವ ಸಮುದಾಯಗಳನ್ನು ಒಟ್ಟಿಗೆ ತರುವ ಪ್ರಯತ್ನಗಳನ್ನು ಮಾಡುವ ತೀರ್ಮಾನ ಕೈಗೊಳ್ಳಲಾಯಿತು.
ಕರ್ನಾಟಕ - ಮಹಾರಾಷ್ಟ್ರದ ಸಮಸ್ಯೆ ಸಣ್ಣದಲ್ಲ
ನಾವು ಎದುರಿಸುತ್ತಿರುವ ಸಮಸ್ಯೆ, ಸವಾಲು ಸಣ್ಣದೇನೂ ಅಲ್ಲ. ಕರ್ನಾಟಕ, ಮಹಾರಾಷ್ಟ್ರದಂಥ ರಾಜ್ಯಗಳ ಭೌಗೋಳಿಕ, ಸಾಂಸ್ಕೃತಿಕ, ಸಾಮಾಜಿಕ ಚಹರೆಯೇ ಬದಲಾಗುತ್ತಿದೆ. ನಾವೆಲ್ಲರೂ ಒಂದೇ ದೋಣಿಯಲ್ಲಿ ಪಯಣಿಸುತ್ತಿದ್ದೇವೆ. ಹೀಗಾಗಿ ಒಂದಾಗುವ ಅನಿವಾರ್ಯವಾಗಿದೆ ಎಂಬ ನಿರ್ಧಾರಕ್ಕೆ ನಾವು ಬಂದೆವು. ಮುಂಬರುವ ದಿನಗಳಲ್ಲಿ ಈ ಒಗ್ಗಟ್ಟಿನ ಚಟುವಟಿಕೆಗಳನ್ನು ಮತ್ತಷ್ಟು ತೀವ್ರಗತಿಯಲ್ಲಿ ಮುಂದುವರೆಸುತ್ತ ಹೋಗುತ್ತೇವೆ.


Click it and Unblock the Notifications
