ಕಮಲಾಕರ್ ಭಟ್ ಪ್ರಕರಣ: ಮಹಿಳೆಗೆ ಮತ್ತೊಬ್ಬರ ಜೊತೆಗೂ ನಂಟು, ಖಾಸಗಿ ಫೋಟೋಗಳು ಪತ್ತೆ
ವಸಂತ ನಾಯಕ್ ಹತ್ಯೆ ಪ್ರಕರಣ ರಾಜ್ಯದಾದ್ಯಂತ ಭಾರೀ ಸಂಚಲನ ಮೂಡಿಸಿದೆ. ಇದರ ಪ್ರಮುಖ ಆರೋಪಿಗಳಾದ ಜ್ಯೋತಿಷಿ ಕಮಲಾಕರ್ ಭಟ್ ಹಾಗೂ ಸುಚಿತ್ರಾ ಎನ್ನುವ ಮಹಿಳೆ ವಿರುದ್ಧದ ಆರೋಪಗಳು ದಿನದಿಂದ ದಿನಕ್ಕೆ ಹೊಸ ತಿರುವು ಪಡೆದುಕೊಳ್ಳುತ್ತಿವೆ. ಪ್ರಕರಣದ ತನಿಖೆ ಮುಂದುವರಿದಿದ್ದು, ಆ ಮಹಿಳೆಯ ಹಳೆಯ ಜೀವನ, ಸಂಪರ್ಕಗಳು ಮತ್ತು ಹಣಕಾಸು ಚಟುವಟಿಕೆಗಳ ಬಗ್ಗೆ ಹೊಸ ಅಂಶಗಳು ಬಹಿರಂಗಗೊಂಡಿದ್ದು, ಪ್ರಕರಣಕ್ಕೆ ಟ್ವಿಸ್ಟ್ ನೀಡಿದೆ.
ಇತ್ತೀಚಿನ ತನಿಖೆಯಲ್ಲಿ ಆ ಮಹಿಳೆ ಜ್ಯೋತಿಷಿ ಕಮಲಾಕರ್ ಭಟ್ ಅವರಿಗೆ ಪರಿಚಯವಾಗುವ ಮುನ್ನವೇ ಕಲಬುರಗಿ ಮೂಲದ ಭೂಸ್ವಾಮಿ ಶರಣಬಸಪ್ಪ ಅವರೊಂದಿಗೆ ಸುಮಾರು ಮೂರು ವರ್ಷಗಳ ಕಾಲ ಆಪ್ತ ಸಂಬಂಧ ಹೊಂದಿದ್ದರು ಎಂಬ ಮಾಹಿತಿ ಬೆಳಕಿಗೆ ಬಂದಿದೆ. ಈ ವಿಚಾರವನ್ನು ಪೊಲೀಸರು ಹಾಗೂ ತನಿಖಾಧಿಕಾರಿಗಳು ಪ್ರಕರಣದ ಹಿನ್ನೆಲೆ ತಿಳಿದುಕೊಳ್ಳುವ ಸಲುವಾಗಿ ಪರಿಶೀಲನೆಗೆ ತೆಗೆದುಕೊಂಡಿದ್ದಾರೆ.

ಭೂಸ್ವಾಮಿಯ ಹಣದಲ್ಲಿ ಆರ್ಕೆಸ್ಟ್ರಾ
ಮೂಲಗಳ ಪ್ರಕಾರ, ಶರಣಬಸಪ್ಪ ನೀಡಿದ ಹಣದ ಸಹಾಯದಿಂದ ಆ ಮಹಿಳೆ 'ಅಪ್ಪು ಮೆಲೋಡೀಸ್ ಗುಲ್ಬರ್ಗಾ' ಎಂಬ ಆರ್ಕೆಸ್ಟ್ರಾ ತಂಡವನ್ನು ನಡೆಸುತ್ತಿದ್ದರು ಎನ್ನಲಾಗಿದೆ. ಈ ಸಂಬಂಧಕ್ಕೆ ಸಂಬಂಧಿಸಿದಂತೆ ಇಬ್ಬರ ಕೆಲವು ಖಾಸಗಿ ಫೋಟೋಗಳು ಸಹ ಹೊರಬಿದ್ದಿದ್ದು, ಪ್ರಕರಣದ ಕುರಿತು ಸಾರ್ವಜನಿಕ ಕುತೂಹಲ ಮತ್ತಷ್ಟು ಹೆಚ್ಚಾಗಿದೆ. ವರದಿಗಳ ಪ್ರಕಾರ, ಆ ಮಹಿಳೆ ತನ್ನ ಪತಿಯನ್ನು ಬಿಟ್ಟು ಕಲಬುರಿಗೆ ತೆರಳಿ ಅಲ್ಲೇ ವಾಸವಿದ್ದರು. ಆ ಸಮಯದಲ್ಲಿ ಶರಣಬಸಪ್ಪ ಅವರೊಂದಿಗೆ ಸಾರ್ವಜನಿಕವಾಗಿ ಕಾಣಿಸಿಕೊಂಡಿರುವುದೂ ತನಿಖೆಯ ವೇಳೆ ಗಮನಕ್ಕೆ ಬಂದಿದೆ. ಪತಿ ಮನೆಯಲ್ಲಿಲ್ಲದ ವೇಳೆ ಶರಣಬಸಪ್ಪ ಅವರನ್ನು ಮನೆಗೆ ಆಹ್ವಾನಿಸುತ್ತಿದ್ದರು ಎಂಬ ಆರೋಪವೂ ಕೇಳಿಬರುತ್ತಿದೆ ಎಂದು ಪೊಲೀಸರು ಪತ್ತೆ ಹಚ್ಚಿದ್ದಾರೆ.
ಕಾರು ಬೈಕ್ ಉಡುಗೊರೆ
ಮತ್ತೊಂದೆಡೆ ಶರಣಬಸಪ್ಪ ಅವರಿಂದ ಬಂದ ಹಣವನ್ನು ಬಳಸಿಕೊಂಡು ಮಹಿಳೆಯು ಸಿದ್ದಾಪುರ ಪ್ರದೇಶದಲ್ಲಿ ಖಾಸಗಿ ಸಾಲ ವ್ಯವಹಾರ ನಡೆಸುತ್ತಿದ್ದರು ಎನ್ನಲಾಗಿದೆ. ಈ ಅಂಶವೂ ಈಗ ತನಿಖಾಧಿಕಾರಿಗಳ ಪರಿಶೀಲನೆಯಲ್ಲಿದೆ. ಮಹಿಳೆಯು ಶರಣಬಸಪ್ಪ ಜೊತೆಗಿನ ಸಂಬಂಧದ ಬಗ್ಗೆ ಜ್ಯೋತಿಷಿ ಕಮಲಾಕರ್ ಭಟ್‌ಗೆ ಮಾಹಿತಿ ತಿಳಿದ ನಂತರ, ಇಬ್ಬರ ನಡುವೆ ತೀವ್ರ ಸಂಘರ್ಷ ಆರಂಭವಾಯಿತು ಎಂದು ಮೂಲಗಳು ಹೇಳುತ್ತಿವೆ. ಈ ಬೆಳವಣಿಗೆಯ ನಂತರ ಮಹಿಳೆ ಕಲಬುರಗಿ ವ್ಯಕ್ತಿಯ ಸಂಪರ್ಕ ಕಡಿದುಕೊಂಡು, ಸಂಪೂರ್ಣವಾಗಿ ಕಮಲಾಕರ್ ಭಟ್ ಜೊತೆಗೆ ಇದ್ದರು ಎನ್ನಲಾಗಿದೆ. ಕಮಲಾಕರ್ ಭಟ್ ಅವರು ಆ ಮಹಿಳೆಗೆ ಕಾರು ಮತ್ತು ಬೈಕ್ ಉಡುಗೊರೆಯಾಗಿ ನೀಡಿದ್ದರು ಎಂಬ ಮಾಹಿತಿಯೂ ಲಭ್ಯವಾಗಿದೆ.
ಆ ಮಹಿಳೆಯ ಪತಿ ಮಹೇಶ್ ನಾಯಕ್ ಕಳೆದ ಆರು ತಿಂಗಳಿಂದಲೇ ಅವರಿಂದ ದೂರವಿದ್ದು, ಪ್ರತ್ಯೇಕವಾಗಿ ಜೀವನ ನಡೆಸುತ್ತಿದ್ದರೆಂದು ಹೇಳಲಾಗಿದೆ. ಪತ್ನಿಯ ಮೇಲೆ ಕೇಳಿಬಂದಿರುವ ಆರೋಪಗಳೇ ಇದಕ್ಕೆ ಕಾರಣ ಎಂಬ ಮಾತುಗಳು ಕೇಳಿಬರುತ್ತಿವೆ. ಇನ್ನು ವಸಂತ ನಾಯಕ್ ಹತ್ಯೆ ಪ್ರಕರಣದಲ್ಲಿ ಮಹಿಳೆ ಮತ್ತು ಜ್ಯೋತಿಷಿ ಕಮಲಾಕರ್ ಭಟ್ ಪ್ರಮುಖ ಆರೋಪಿಗಳಾಗಿದ್ದು, ಮಹಿಳೆಯ ಹಿನ್ನೆಲೆ, ಹಣಕಾಸು ವ್ಯವಹಾರಗಳು ಮತ್ತು ವೈಯಕ್ತಿಕ ಬದುಕು ಈ ಕೊಲೆ ಪ್ರಕರಣದೊಂದಿಗೆ ನಂಟು ಹೊಂದಿರುವ ಬಗ್ಗೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಮುಂದಿನ ದಿನಗಳಲ್ಲಿ ಇನ್ನಷ್ಟು ಆಘಾತಕಾರಿ ಸಂಗತಿಗಳು ಬಹಿರಂಗವಾಗುವ ಸಾಧ್ಯತೆ ಇದೆ ಎಂಬುದಾಗಿ ಪೊಲೀಸರು ಸುಳಿವು ನೀಡಿದ್ದಾರೆ.












Click it and Unblock the Notifications