ಜಾಮೀನಿಗಾಗಿ ಹೈಕೋರ್ಟ್‌ಗೆ ಪ್ರವೀಣ್ ಖಾಂಡ್ಯ
ಬೆಂಗಳೂರು, ಆಗಸ್ಟ್ 11 : ಡಿವೈಎಸ್‌ಪಿ ಕಲ್ಲಪ್ಪ ಹಂಡಿಭಾಗ್ ಆತ್ಮಹತ್ಯೆ ಪ್ರಕರಣದ ಪ್ರಮುಖ ಆರೋಪಿ ಪ್ರವೀಣ್ ಖಾಂಡ್ಯ ನಿರೀಕ್ಷಣಾ ಜಾಮೀನಿಗಾಗಿ ಹೈಕೋರ್ಟ್ ಮೆಟ್ಟಿಲೇರಿದ್ದಾರೆ. ಜುಲೈ 5ರಂದು ಕಲ್ಲಪ್ಪ ಹಂಡಿಭಾಗ್ ಆತ್ಮಹತ್ಯೆ ಮಾಡಿಕೊಂಡಿದ್ದರು.
ಆತ್ಮಹತ್ಯೆ ಪ್ರಕರಣದಲ್ಲಿ ಆರೋಪಿಯಾಗಿರುವ ಹಿಂದೂ ಪರ ಸಂಘಟನೆಯ ಮುಖಂಡ ಪ್ರವೀಣ್ ಖಾಂಡ್ಯಗಾಗಿ ಸಿಐಡಿ ಪೊಲೀಸರು ಹುಡುಕಾಟ ನಡೆಸುತ್ತಿದ್ದಾರೆ. ಚಿಕ್ಕಮಗಳೂರಿನ 2ನೇ ಹೆಚ್ಚುವರಿ ಜಿಲ್ಲಾ ಪ್ರಧಾನ ಸೆಷನ್ಸ್ ನ್ಯಾಯಾಲಯ ಖಾಂಡ್ಯ ನಿರೀಕ್ಷಣಾ ಜಾಮೀನು ಅರ್ಜಿಯನ್ನು ತಿರಸ್ಕರಿಸಿದೆ.[ಕಲ್ಲಪ್ಪ ಹಂಡಿಭಾಗ್ ಆತ್ಮಹತ್ಯೆ]

ಬುಧವಾರ ಪ್ರವೀಣ್ ಖಾಂಡ್ಯ ಹೈಕೋರ್ಟ್ ಮೆಟ್ಟಿಲೇರಿದ್ದು, ಆತ್ಮಹತ್ಯೆ ಪ್ರಕರಣದಲ್ಲಿ ನನ್ನ ಪಾತ್ರವಿಲ್ಲ. ಸಿಐಡಿ ಅಧಿಕಾರಿಗಳು ಈಗಾಗಲೇ ಪ್ರಕರಣದ ತನಿಖೆ ಭಾಗಶಃ ಪೂರ್ಣಗೊಳಿಸಿದ್ದಾರೆ. ಮುಂದಿನ ತನಿಖೆಗೆ ಸಂಪೂರ್ಣ ಸಹಕಾರ ನೀಡುತ್ತೇನೆ ಜಾಮೀನು ನೀಡಿ ಎಂದು ಮನವಿ ಮಾಡಿದ್ದಾರೆ.[ಕಲ್ಲಪ್ಪ ಸಾವಿಗೆ ಕಿರುಕುಳ ಕಾರಣವಲ್ : ಎಸ್ಪಿ ಸಂತೋಷ್]
ಹೈಕೋರ್ಟ್ ವಿಧಿಸುವ ಎಲ್ಲ ಷರತ್ತು ಪಾಲಿಸಲು ಸಿದ್ಧ. ನಿರೀಕ್ಷಣಾ ಜಾಮೀನನ್ನು ನೀಡಿ ಎಂದು ಪ್ರವೀಣ್ ಖಾಂಡ್ಯ ಪರ ವಕೀಲರು ನ್ಯಾಯಮೂರ್ತಿ ಬಿ. ಶ್ರೀನಿವಾಸೇಗೌಡ ಅವರಿದ್ದ ಏಕಸದಸ್ಯ ಪೀಠದ ಮುಂದೆ ಅರ್ಜಿ ಸಲ್ಲಿಸಿದ್ದಾರೆ. ಕೋರ್ಟ್ ವಿಚಾರಣೆಯನ್ನು ಮುಂದೂಡಿದ್ದು, ಒಂದು ವಾರದೊಳಗೆ ಆಕ್ಷೇಪಣೆ ಸಲ್ಲಿಸುವಂತೆ ಸರ್ಕಾರಕ್ಕೆ ನೋಟಿಸ್ ನೀಡಿದೆ.[ಕಲ್ಲಪ್ಪ ಪ್ರಕರಣದಲ್ಲಿ ಕಿಡ್ನಾಪ್ ಆಗಿದ್ದ ತೇಜಸ್ ಹೇಳಿದ್ದೇನು?]
ಅಪಹರಣ ಪ್ರಕರಣ : ಉದ್ಯಮಿಯನ್ನು ಅಪಹರಣ ಮಾಡಿದ ಆರೋಪ ಎದುರಿಸುತ್ತಿದ್ದ ಚಿಕ್ಕಮಗಳೂರು ಡಿವೈಎಸ್‌ಪಿ ಕಲ್ಲಪ್ಪ ಹಂಡಿಭಾಗ್ ಅವರು ಜುಲೈ 5ರಂದು ಬೆಳಗಾವಿಯಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದರು. ಸರ್ಕಾರ ಆತ್ಮಹತ್ಯೆ ಪ್ರಕರಣದ ತನಿಖೆಯನ್ನು ಸಿಐಡಿಗೆ ಒಪ್ಪಿಸಿದೆ.












Click it and Unblock the Notifications