Kabini Dam: ಕಬಿನಿ ಜಲಾಶಯಕ್ಕೆ ಒಂದೇ ದಿನ 3 ಅಡಿ ನೀರು; ಉಳಿದ ಜಲಾಶಯಗಳ ಒಳಹರಿವು ಎಷ್ಟಿದೆ?
ಕಾವೇರಿ ಜಲಾನಯನ ಪ್ರದೇಶದಲ್ಲಿ ವ್ಯಾಪಕ ಮಳೆಯಾಗುತ್ತಿದ್ದು, ಮುಂಗಾರು ಮತ್ತಷ್ಟು ಚುರುಕಾಗುವ ಮುನ್ಸೂಚನೆ ಸಿಕ್ಕಿದೆ. ಕಳೆದ 24 ಗಂಟೆಗಳಿಂದ ಭಾರಿ ಮಳೆಯಾಗುತ್ತಿರುವ ಕಾರಣ ನದಿಗಳ ಮಟ್ಟದಲ್ಲಿ ಹೆಚ್ಚಳವಾಗಿದೆ.
ಕಬಿನಿ ಜಲಾಶಯದ ಒಳಹರಿವು ಭಾರಿ ಪ್ರಮಾಣದಲ್ಲಿ ಹೆಚ್ಚಾಗಿದೆ. ಬುಧವಾರ 6003 ಕ್ಯೂಸೆಕ್ಸ್ ಇದ್ದ ಒಳಹರಿವು ಗುರುವಾರ 16,977 ಕ್ಯೂಸೆಕ್ಸ್‌ಗೆ ಏರಿಕೆಯಾಗಿದೆ. ಕಳೆದ 24 ಗಂಟೆಗಳಲ್ಲಿ ಜಲಾಶಯದ ನೀರಿನ ಮಟ್ಟ 3 ಅಡಿ ಏರಿಕೆಯಾಗಿದೆ.

ಕಬಿನಿ ಜಲಾಶಯದ ಒಳಹರಿವು ಸದ್ಯ 16,977 ಕ್ಯೂಸೆಕ್ಸ್ ಇದ್ದು, 1000 ಕ್ಯೂಸೆಕ್ಸ್ ನೀರು ಹೊರಬಿಡಲಾಗುತ್ತಿದೆ. 19.52 ಟಿಎಂಸಿ ಸಂಗ್ರಹ ಸಾಮರ್ಥ್ಯದ ಜಲಾಶಯದಲ್ಲಿ ಪ್ರಸ್ತುತ 11.30 ಟಿಎಂಸಿ ಅಡಿ ನೀರು ಸಂಗ್ರಹವಾಗಿದೆ.
ಮುತನ್ಕೇರಾ - ವಯನಾಡಿನಲ್ಲಿ ನದಿಯ ಹರಿವಿನ ಮಟ್ಟದಲ್ಲಿ ಹೆಚ್ಚಾಗಿದ್ದು ಶುಕ್ರವಾರ ಕಬಿನಿ ಅಣೆಕಟ್ಟೆಗೆ 22-25 ಸಾವಿರ ಕ್ಯೂಸೆಕ್ ಒಳಹರಿವು ನಿರೀಕ್ಷಿಸಲಾಗಿದೆ.
ಕೆಆರ್ ಎಸ್ ಜಲಾಶಯಕ್ಕೂ ನೀರು
ಕೆಆರ್ ಎಸ್ ಜಲಾಶಯದ ಒಳಹರಿವು ಕೂಡ ಹೆಚ್ಚಾಗಿದ್ದು, ಸದ್ಯ 3856 ಕ್ಯೂಸೆಕ್ಸ್ ನೀರು ಜಲಾಶಯ ಸೇರುತ್ತಿದೆ. 472 ಕ್ಯೂಸೆಕ್ಸ್ ನೀರನ್ನು ಜಲಾಶಯದಿಂದ ಹೊರಬಿಡಲಾಗುತ್ತಿದೆ. 49.452 ಟಿಎಂಸಿ ಸಾಮರ್ಥ್ಯದ ಜಲಾಶಯದಲ್ಲಿ 15.007 ಟಿಎಂಸಿ ಸಂಗ್ರಹವಾಗಿದೆ. ಕೇರಳದಲ್ಲಿ ಕೂಡ ವ್ಯಾಪಕ ಮಳೆಯಾಗುತ್ತಿದ್ದು, ಮುಂದಿನ 24 ಗಂಟೆಗಳಲ್ಲಿ ಜಲಾಶಯದ ಒಳಹರಿವು ಮತ್ತಷ್ಟು ಹೆಚ್ಚಾಗುವ ಸಾಧ್ಯತೆ ಇದೆ.
#Kabini dam in Mysuru sees inflow of 16,977 cusecs today morning 🤩
— ರವಿ ಕೀರ್ತಿ ಗೌಡ (@ravikeerthi22) June 27, 2024
Dam level has increased 3ft compared to yesterday.#WayanadRains
ಹೇಮಾವತಿ ಜಲಾಶಯದ ಒಳಹರಿವು 4252 ಕ್ಯೂಸೆಕ್ಸ್ ಇದ್ದು, ಹಾರಂಗಿ ಜಲಾಶಯಕ್ಕೆ 1425 ಕ್ಯೂಸೆಕ್ಸ್ ನೀರು ಹರಿದುಬರುತ್ತಿದೆ.
ಕೊಡಗು ಜಿಲ್ಲೆಯಲ್ಲಿ ಭಾರಿ ಮಳೆ
ಕೊಡಗು ಜಿಲ್ಲೆಯಲ್ಲಿ ಉತ್ತಮ ಮಳೆಯಾಗುತ್ತಿದ್ದು, ಭಾಗಮಂಡಲದಲ್ಲಿ ಕಳೆದ 24 ಗಂಟೆಯಲ್ಲಿ 212 ಮಿ.ಮೀ ಮಳೆಯಾಗಿದೆ. ಮಡಿಕೇರಿ 158.6 ಮಿ.ಮೀ, ಸಂಪಾಜೆ 138.5 ಮಿ.ಮೀ, ನಾಪೋಕ್ಲು 131.20 ಮಿ.ಮೀ ಮಳೆಯಾಗಿದೆ.












Click it and Unblock the Notifications