National Highway: ಜೇವರ್ಗಿ - ಹಿರಿಯೂರು ರಾಷ್ಟೀಯ ಹೆದ್ದಾರಿ 150 (A) ಮೇಲ್ದರ್ಜೆಗೆ, ಏನೆಲ್ಲಾ ಪ್ರಯೋಜನಗಳಿವೆ?
ಮಸ್ಕಿ: ಕಲ್ಯಾಣ ಕರ್ನಾಟಕ ಮತ್ತು ಮಧ್ಯ ಕರ್ನಾಟಕವನ್ನು ಬೆಸೆಯುವ ಪ್ರಮುಖ ರಸ್ತೆ ಸಂಪರ್ಕವಾಗಿರುವ ಜೇವರ್ಗಿ-ಹಿರಿಯೂರು ರಾಷ್ಟ್ರೀಯ ಹೆದ್ದಾರಿ-150 (A) ಇದೀಗ ಹೈಟೆಕ್ ಸ್ಪರ್ಶ ಪಡೆಯಲು ಸಜ್ಜಾಗಿದೆ. ಮಸ್ಕಿ ಪಟ್ಟಣದ ಮಾರ್ಗವಾಗಿ ಹಾದು ಹೋಗಿರುವ ಈ ಪ್ರಮುಖ ರಸ್ತೆಯು ಶೀಘ್ರದಲ್ಲೇ ಅತ್ಯಾಧುನಿಕ ತಂತ್ರಜ್ಞಾನ ಆಧಾರಿತ 'AI ಹೆದ್ದಾರಿ'ಯಾಗಿ ಮೇಲ್ದರ್ಜೆಗೇರಲಿದೆ. ಇದರೊಂದಿಗೆ ಈ ಭಾಗದ ಜನರ ಬಹುಕಾಲದ ಬೇಡಿಕೆಯಾಗಿದ್ದ ಸುಸಜ್ಜಿತ ಹಾಗೂ ಸುರಕ್ಷಿತ ರಸ್ತೆ ನಿರ್ಮಾಣದ ಕನಸು ನನಸಾಗುವ ಕಾಲ ಕೂಡಿಬಂದಿದೆ.
ಕೇಂದ್ರ ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆಯಡಿ ಈ ಹೆದ್ದಾರಿಯನ್ನು ಅಭಿವೃದ್ಧಿಪಡಿಸಲಾಗುತ್ತಿದ್ದು, ಈ ಕುರಿತು ಭಾರತ ಸರ್ಕಾರದ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರವು (NHAI) ಕಳೆದ ಏಪ್ರಿಲ್ 30ರಂದೇ ಅಧಿಕೃತ ಅಧಿಸೂಚನೆ ಹೊರಡಿಸಿದೆ. ಈ ಹಿಂದೆ ಕೇಂದ್ರ ಭೂಸಾರಿಗೆ ಮತ್ತು ಹೆದ್ದಾರಿ ಸಚಿವಾಲಯದ ಅಧೀನದಲ್ಲಿದ್ದ ಈ ರಸ್ತೆಯನ್ನು ಇದೀಗ ಅಭಿವೃದ್ಧಿ ದೃಷ್ಟಿಯಿಂದ ನೇರವಾಗಿ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ವ್ಯಾಪ್ತಿಗೆ ಹಸ್ತಾಂತರಿಸಲು ಎಲ್ಲ ಅಗತ್ಯ ಕ್ರಮಗಳನ್ನು ಕೈಗೊಳ್ಳಲಾಗಿದೆ.

409 ಕಿ.ಮೀ ರಸ್ತೆ ಪ್ರಾಧಿಕಾರದ ತೆಕ್ಕೆಗೆ
ಹೆದ್ದಾರಿ ವಿಭಾಗದ ಹಿರಿಯ ಅಧಿಕಾರಿಗಳು ನೀಡಿರುವ ಮಾಹಿತಿಯ ಪ್ರಕಾರ, ಮಸ್ಕಿ ಮತ್ತು ಸಿಂಧನೂರು ಬೈಪಾಸ್ ರಸ್ತೆಗಳನ್ನು ಒಳಗೊಂಡಂತೆ ಒಟ್ಟು 409 ಕಿಲೋಮೀಟರ್ ಉದ್ದದ ರಸ್ತೆಯು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ (NHAI) ವ್ಯಾಪ್ತಿಗೆ ಸೇರ್ಪಡೆಯಾಗುವ ಸಾಧ್ಯತೆಯಿದೆ. ಇದುವರೆಗೆ ಕೇವಲ ನಿರ್ವಹಣೆಗಷ್ಟೇ ಸೀಮಿತವಾಗಿದ್ದ ಈ ಮಾರ್ಗವು, ಪ್ರಾಧಿಕಾರದ ಆಡಳಿತಕ್ಕೆ ಒಳಪಡುವುದರಿಂದ ಅಭಿವೃದ್ಧಿ ಕಾಮಗಾರಿಗಳು ವೇಗ ಪಡೆದುಕೊಳ್ಳಲಿವೆ.
ನಾಲ್ಕು ಪಥದ ರಸ್ತೆಯಾಗಿ ಅಭಿವೃದ್ಧಿ
ರಾಷ್ಟ್ರೀಯ ಹೆದ್ದಾರಿ 150 (A) ಅಧಿಕೃತವಾಗಿ AI ಹೆದ್ದಾರಿಯಾಗಿ ಪರಿವರ್ತನೆಗೊಂಡರೆ, ಜೇವರ್ಗಿ-ಹಿರಿಯೂರು ಮಾರ್ಗವನ್ನು ಸಂಪೂರ್ಣವಾಗಿ ನಾಲ್ಕು ಪಥದ ರಸ್ತೆಯಾಗಿ ಅಭಿವೃದ್ಧಿಪಡಿಸುವ ನಿರೀಕ್ಷೆ ಹೆಚ್ಚಿದೆ. AI ಹೆದ್ದಾರಿಯೆಂದರೆ ಕೃತಕ ಬುದ್ಧಿಮತ್ತೆ ತಂತ್ರಜ್ಞಾನವನ್ನು ಬಳಸಿಕೊಂಡು ಸಂಚಾರ ದಟ್ಟಣೆ ನಿರ್ವಹಣೆ, ಅಪಘಾತಗಳ ತಡೆಗೆ ಸ್ಮಾರ್ಟ್ ಕ್ಯಾಮೆರಾಗಳ ಅಳವಡಿಕೆ, ಆಟೋಮ್ಯಾಟಿಕ್ ನಂಬರ್ ಪ್ಲೇಟ್ ರೆಕಗ್ನಿಷನ್ ಸಿಸ್ಟಮ್ ಮತ್ತು ವೇಗದ ಮಿತಿ ನಿಯಂತ್ರಣದಂತಹ ಹೈಟೆಕ್ ಸೌಲಭ್ಯಗಳನ್ನು ಈ ರಸ್ತೆ ಹೊಂದಿರಲಿದೆ. ಇದರಿಂದ ಪ್ರಯಾಣದ ಅವಧಿ ಕಡಿತಗೊಳ್ಳುವುದರ ಜೊತೆಗೆ, ಪ್ರಯಾಣಿಕರ ಸುರಕ್ಷತೆಯೂ ಹೆಚ್ಚಾಗಲಿದೆ.
"ರಾಷ್ಟ್ರೀಯ ಹೆದ್ದಾರಿ 150 (A) ಇದೀಗ AI ರಸ್ತೆಯಾಗಿ ಮೇಲ್ದರ್ಜೆಗೇರುತ್ತಿರುವ ಹಿನ್ನೆಲೆಯಲ್ಲಿ, ಈ ಸಂಪೂರ್ಣ ಮಾರ್ಗವು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ (NHAI) ವ್ಯಾಪ್ತಿಗೆ ಒಳಪಡಲಿದೆ. ಕೇವಲ ಒಂದು ವಾರದೊಳಗೆ ಈ ರಸ್ತೆಯನ್ನು ಪ್ರಾಧಿಕಾರಕ್ಕೆ ಅಧಿಕೃತವಾಗಿ ಹಸ್ತಾಂತರಿಸುವ ಪ್ರಕ್ರಿಯೆ ಪೂರ್ಣಗೊಳ್ಳಲಿದೆ," ಎಂದು ಹೆದ್ದಾರಿ ಇಲಾಖೆಯ ವಿಜಯಪುರ ವಿಭಾಗದ ಕಾರ್ಯನಿರ್ವಾಹಕ ಅಭಿಯಂತರರಾದ (ಇಇ) ವಿಜಯಕುಮಾರ ಅವರು ಸ್ಪಷ್ಟಪಡಿಸಿದ್ದಾರೆ.
ಒಟ್ಟಾರೆಯಾಗಿ ಜೇವರ್ಗಿ-ಹಿರಿಯೂರು ಹೆದ್ದಾರಿಯ ಈ ಬೃಹತ್ ಬದಲಾವಣೆಯು ಕೇವಲ ಸಾರಿಗೆ ವ್ಯವಸ್ಥೆಯನ್ನಷ್ಟೇ ಅಲ್ಲದೆ, ಈ ಭಾಗದ ಆರ್ಥಿಕ, ಕೃಷಿ ಮತ್ತು ವಾಣಿಜ್ಯ ಚಟುವಟಿಕೆಗಳಿಗೂ ದೊಡ್ಡ ಮಟ್ಟದ ಉತ್ತೇಜನ ನೀಡಲಿದೆ ಎಂದು ಸ್ಥಳೀಯರು ವಿಶ್ವಾಸ ವ್ಯಕ್ತಪಡಿಸಿದ್ದಾರೆ.












Click it and Unblock the Notifications