ಸರ್ಕಾರದ 'ಆಪರೇಷನ್ ಧರ್ಮಸ್ಥಳ'ಕ್ಕೆ ಧರ್ಮ ತಿರುಗೇಟು ಕೊಟ್ಟಿದೆ: ಜೆಡಿಎಸ್
ಧರ್ಮಸ್ಥಳ ಕೇಸ್ ವಿಚಾರದಲ್ಲಿ ಕಾಂಗ್ರೆಸ್ ತಲೆಬುಡವಿಲ್ಲದ ತೀರ್ಮಾನಗಳನ್ನ ತೆಗೆದುಕೊಂಡಿದೆ ಎಂದು ಜೆಡಿಎಸ್ ಟೀಕಿಸಿದೆ. ಕರ್ನಾಟಕ ಸರ್ಕಾರ ತನ್ನ ಭ್ರಷ್ಟಾಚಾರ, ವೈಫಲ್ಯಗಳನ್ನು ಮುಚ್ಚಿಕೊಳ್ಳಲು, ಜನರ ದಿಕ್ಕು ತಪ್ಪಿಸಲು ದಿನಕ್ಕೊಂದು ಷಡ್ಯಂತ್ರ ರೂಪಿಸುತ್ತಿದೆ. ಅದರ ಹುನ್ನಾರವೇ ಆಪರೇಷನ್ ಧರ್ಮಸ್ಥಳ, ಧರ್ಮ ಸರ್ಕಾರಕ್ಕೆ ತಿರುಗಿಸಿ ತಿರುಗೇಟು ಕೊಟ್ಟಿದೆ ಎಂದು ವಾಗ್ದಾಳಿ ನಡೆಸಿದೆ.
ಹಿಂದೂಗಳ ಧಾರ್ಮಿಕ ಕೇಂದ್ರಗಳನ್ನು ಗುರಿಯಾಗಿಸಿ ನಿರಂತರವಾಗಿ ಅಪಪ್ರಚಾರ ಮಾಡುತ್ತಿದೆ. ಕೋಟ್ಯಂತರ ಭಕ್ತರ ಧಾರ್ಮಿಕ ಭಾವನೆಗಳಿಗೆ ಧಕ್ಕೆ ತರಲು ಕಾಂಗ್ರೆಸ್ ಟೂಲ್ ಕಿಟ್ ರಾಜಕಾರಣ ಇದೇ ಹೊಸತಲ್ಲ. ಎಲ್ಲಿಂದಲೋ ಅನಾಮಿಕ ವ್ಯಕ್ತಿಯನ್ನು ಕರೆತಂದು, ಬರುಡೆ ಕಥೆ ಕಟ್ಟುತ್ತಾರೆ. ಇದನ್ನು ನಂಬುವ ಮುಖ್ಯಮಂತ್ರಿ ಸಿದ್ದರಾಮಯ್ಯ ಪೂರ್ವಾಪರ, ಸತ್ಯಾಸತ್ಯತೆ ಅರಿಯದೇ ರಾತ್ರೋರಾತ್ರಿ ಎಸ್‌ಐಟಿ ತನಿಖೆಗೆ ಆದೇಶ ಮಾಡುತ್ತಾರೆ ಎಂದು ದೂರಿದೆ.
ಸಿದ್ದರಾಮಯ್ಯ ಯಾರದೋ ಒತ್ತಡಕ್ಕೆ ಮಣಿದು ಎಸ್‌ಐಟಿ ರಚಿಸಿದ್ದನ್ನು ಅವರದೇ ಸಚಿವರು, ಶಾಸಕರು, ನಾಯಕರು ವಿರೋಧ ವ್ಯಕ್ತಪಡಿಸುತ್ತಾರೆ. ಒಂದೆಡೆ ತೊಟ್ಟಿಲು ತೂಗುವುದು ಇವರೇ, ಮತ್ತೊಂದ್ಕಡೆ ಮಗುವನ್ನು ಚಿವುಟುವುದು ಇವರೇ. ಸತ್ಯ ಆಚೆಗೆ ಬಂದಿದೆ. ಧರ್ಮಸ್ಥಳ ಧರ್ಮ ತಪ್ಪಿಲ್ಲ, ಸರ್ಕಾರ ಮಾತ್ರ ದಾರಿ ತಪ್ಪಿದೆ ಎಂದು ಹರಿಹಾಯ್ದಿದೆ.

ಧರ್ಮಸ್ಥಳಕ್ಕೆ ಜೆಡಿಎಸ್ ಯಾತ್ರೆ
ಶ್ರೀಕ್ಷೇತ್ರ ಧರ್ಮಸ್ಥಳದ ವಿರುದ್ಧ ನಡೆಯುತ್ತಿರುವ ಅಪಪ್ರಚಾರದ ವಿರುದ್ಧ ಮಾಜಿ ಸಚಿವ ಸಿ.ಎಸ್.ಪುಟ್ಟರಾಜು ಹಾಗೂ ಸಾ.ರಾ. ಮಹೇಶ್ ಅವರ ನೇತೃತ್ವದಲ್ಲಿ ಮಂಡ್ಯ ಹಾಗೂ ಮೈಸೂರು ಜಿಲ್ಲೆಯ ಭಕ್ತಾದಿಗಳ ವತಿಯಿಂದ "ಧರ್ಮರಕ್ಷಣೆಗಾಗಿ ಧರ್ಮಸ್ಥಳ ಯಾತ್ರೆ" ಹೊರಟು ಧರ್ಮಸ್ಥಳಕ್ಕೆ ಭೇಟಿ ನೀಡಿ ಶ್ರೀಮಂಜುನಾಥ ಸ್ವಾಮಿಯ ದರ್ಶನ ಪಡೆದಿದ್ದಾರೆ.
ಧರ್ಮಸ್ಥಳದ ವಿರುದ್ಧ ನಡೆಯುತ್ತಿರುವ ಬುರುಡೆ ಷಡ್ಯಂತ್ರವನ್ನು ರಾಜ್ಯ ಸರ್ಕಾರ ಎನ್‌ಐಎ ತನಿಖೆಗೆ ವಹಿಸಬೇಕು. ಇದೇ ಆಗ್ರಹವನ್ನಿಟ್ಟುಕೊಂಡು ಸೆಪ್ಟೆಂಬರ್ 1ರಂದು ಧರ್ಮಸ್ಥಳ ಚಲೋ ಕಾರ್ಯಕ್ರಮ ಮತ್ತು ಬೃಹತ್ ಸಮಾವೇಶವನ್ನು ಪಕ್ಷದ ವತಿಯಿಂದ ನಡೆಸಲಿದ್ದೇವೆ. ರಾಜ್ಯದ ಪ್ರತಿ ಮೂಲೆಯಿಂದಲೂ ಕಾರ್ಯಕರ್ತರು, ಪದಾಧಿಕಾರಿಗಳು, ಧರ್ಮಸ್ಥಳದ ಭಕ್ತಾದಿಗಳು ನಮ್ಮೊಂದಿಗೆ ಜೊತೆಯಾಗಲಿದ್ದಾರೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿವೈ ವಿಜಯೇಂದ್ರ ಹೇಳಿದ್ದಾರೆ.
ಧರ್ಮಸ್ಥಳ ಪವಿತ್ರ ಶ್ರೀಕ್ಷೇತ್ರದ ಕುರಿತು ದಾರಿಯಲ್ಲಿ ಹೋಗುವ ಬುರುಡೆ ಹಿಡಿದ ವ್ಯಕ್ತಿಯೊಬ್ಬ ಬಂದು ಬುರುಡೆ ಹೊಡೆದರೆ, ಆ ವ್ಯಕ್ತಿಯ ಹಿನ್ನೆಲೆ ಏನು? ಅವನ ಹಿಂದಿರುವ ಶಕ್ತಿಗಳು, ಯಾವ ಸಂಘಟನೆಗಳು ಕೆಲಸ ಮಾಡುತ್ತಿವೆ ಎಂದು ಮಾಹಿತಿ ಸಂಗ್ರಹಿಸಬೇಕಿತ್ತು. ಅಥವಾ ಬೇಹುಗಾರಿಕಾ ದಳದಿಂದ ವರದಿ ಪಡೆದು ಮುಖ್ಯಮಂತ್ರಿಗಳು ಸ್ಪಷ್ಟ ನಿರ್ಧಾರ ತೆಗೆದುಕೊಳ್ಳಬೇಕಿತ್ತು ಎಂದು ವಾಗ್ದಾಳಿ ನಡೆಸಿದ್ದಾರೆ.
ಧರ್ಮಸ್ಥಳದ ವಿಷಯದಲ್ಲಿ ಕಳೆದ ಒಂದು ತಿಂಗಳಿನಿಂದ ರಾಜ್ಯ, ರಾಷ್ಟ್ರ ಮತ್ತು ಅಂತರರಾಷ್ಟ್ರೀಯ ಮಟ್ಟದಲ್ಲಿ ಸಾಕಷ್ಟು ಚರ್ಚೆಗಳು ಸದ್ದು ಮಾಡಿವೆ. ಕಾಂಗ್ರೆಸ್ ಸರ್ಕಾರ ಮತ್ತು ಮುಖ್ಯಮಂತ್ರಿ ಸಿದ್ದರಾಮಯ್ಯನವರು ಯಾರೋ ಒಬ್ಬ ವ್ಯಕ್ತಿ ದೂರು ನೀಡುತ್ತಾನೆಂದು ತಿಳಿದಾಗ ತಕ್ಷಣ ಎಸ್‍ಐಟಿಗೆ ನೀಡುವ ಘೋಷಣೆ ಮಾಡಲಾಗಿತ್ತು ಎಂದು ವಿಜಯೇಂದ್ರ ಟೀಕಿಸಿದ್ದಾರೆ.












Click it and Unblock the Notifications