ಹಾಸನಾಂಬೆ ಎದುರು ಪಕ್ಷ ಬಿಡಲ್ಲ ಎಂದು ಆಣೆ ಮಾಡಿದ್ರಾ ಜೆಡಿಎಸ್ ಶಾಸಕರು: ದೇವೇಗೌಡ ಹೇಳಿದ್ದೇನು?
ಹಾಸನ, ನವೆಂಬರ್ 11: ಹಾಸನಾಂಬೆ ಎದುರು ಪಕ್ಷ ಬಿಡಲ್ಲ ಎಂದು ಜೆಡಿಎಸ್ ಶಾಸಕರು ಆಣೆ ಮಾಡಿದ್ದಾರೆ ಎಂಬ ಮಾತುಗಳು ಕೇಳಿ ಬಂದಿದ್ದು, ಹಾಸನಾಂಬೆ ಎದುರು ನಾವ್ಯಾರು ಆಣೆ ಮಾಡಿಲ್ಲ, ಪಕ್ಷ ಕಟ್ಟುವ ಕುರಿತು ಪ್ರತಿಜ್ಞೆ ಮಾಡಿದ್ದೇವೆ ಎಂದು ಜೆಡಿಎಸ್ ಕೋರ್ ಕಮಿಟಿ ಅಧ್ಯಕ್ಷ ಜಿ ಟಿ ದೇವೇಗೌಡ ಅವರು ಸ್ಪಷ್ಟ ಪಡಿಸಿದ್ದಾರೆ.
ಈ ಕುರಿತು ಹಾಸನದಲ್ಲಿ ಮಾಧ್ಯಮಗಳ ಜೊತೆಗೆ ಮಾತನಾಡಿದ ಅವರು, ಜೆಡಿಎಸ್ ನಾಯಕರು ಯಾರು ಪಕ್ಷ ಬಿಡುವುದಿಲ್ಲ. ಲಕ್ಷಾಂತರ ಜನರು ಬರುವ ತಾಯಿ ಎದುರು ಆಣೆ - ಪ್ರಮಾಣ ಸಾಧ್ಯವಾ?
ನಾವೆಲ್ಲರೂ ಕೂಡ ನಮ್ಮ ಮನಸಿನಲ್ಲಿರುವುದನ್ನು ಕೇಳಿಕೊಂಡಿದ್ದೇವೆ. ರಾಜ್ಯದಲ್ಲಿ ಪಕ್ಷ ಬಲವರ್ಧನೆ, ಕುಮಾರಸ್ವಾಮಿಯನ್ನು ಸಿಎಂ ಮಾಡುವುದು ನಮ್ಮ ಗುರಿ. ಆ ಕುರಿತು ನಾವು ಸಂಘಟನಾತ್ಮಕವಾಗಿ ಕೆಲಸ ಮಾಡುತ್ತೇವೆ ಎಂದು ಹೇಳಿದ್ದಾರೆ.

ಬಿಜೆಪಿ ರಾಜ್ಯಾಧ್ಯಕ್ಷರಾಗಿ ಬಿ ವೈ ವಿಜಯೇಂದ್ರ ಆಯ್ಕೆ ವಿಚಾರವಾಗಿ ಮಾತನಾಡಿ, ಬಿ ವೈ ವಿಜಯೇಂದ್ರ ಪ್ರಬಲ ಸಮುದಾಯದ ನಾಯಕ. ಅವರನ್ನು ಬಿಜೆಪಿ ರಾಜ್ಯಾಧ್ಯಕ್ಷರನ್ನಾಗಿ ಮಾಡಿರುವುದು ಒಳ್ಳೆಯ ಬೆಳವಣಿಗೆ. ಯಡಿಯೂರಪ್ಪ ಸಿಎಂ ಆಗಬೇಕು ಅಂತ 50 ಸಾವಿರ ಜನ ಸೇರಿಸಿದವನು ನಾನು, ಅವರು ಮುಖ್ಯಮಂತ್ರಿ ಆದ ಮೇಲೆ ವೀರಶೈವರು ಮಾತ್ರವಲ್ಲ, ಎಲ್ಲಾ ಸಮುದಾಯದವರನ್ನು ಸೇರಿಸಿಕೊಂಡು ಒಟ್ಟಾಗಿ ಕರೆದುಕೊಂಡು ಹೋದರು. ಯಡಿಯೂರಪ್ಪ, ಕುಮಾರಸ್ವಾಮಿ ಒಟ್ಟಾಗಿ ಹೋದ ಕಾರಣಕ್ಕಾಗಿಯೇ ಅಧಿಕಾರ ಸಿಕ್ಕಿದ್ದು ಮಾತ್ರವಲ್ಲದೇ ಇಬ್ಬರು ಮುಖ್ಯಮಂತ್ರಿಯಾಗಲು ಸಾಧ್ಯವಾಯಿತು.
ಈಗ ಅದೇ ರೀತಿ ಯಡಿಯೂರಪ್ಪನವರ ಮಗನಿಗೆ ಬಿಜೆಪಿ ರಾಜ್ಯಾಧ್ಯಕ್ಷ ಸ್ಥಾನ ಕೊಡಲಾಗಿದೆ. ಮತ್ತೊಂದು ಕಡೆ ಕುಮಾರಸ್ವಾಮಿ ಜೆ ಡಿ ಎಸ್ ರಾಜ್ಯಾಧ್ಯಕ್ಷ ಆಗಿದ್ದಾರೆ, ಇಬ್ಬರು ಒಟ್ಟಾಗಿ ಹೋದರೆ ಕಾಂಗ್ರೆಸ್ ವಿರುದ್ಧ ಹೋರಾಟ ಮಾಡಲು ಸುಲಭವಾಗುತ್ತದೆ. ವಿಜಯೇಂದ್ರ ಯುವ ನಾಯಕ, ಅವರಿಗೆ ಎಲ್ಲಾ ಸಮುದಾಯದ ಬೆಂಬಲ ಇದೆ, ಯಡಿಯೂರಪ್ಪ ಸಿಎಂ ಆಗಲು ವಿಜಯೇಂದ್ರ ಚಾಣಾಕ್ಷತವು ಇದೆ.
ಯಡಿಯೂರಪ್ಪರನ್ನು ಮೂಲೆ ಗುಂಪು ಮಾಡಿದರು ಎನ್ನುವ ಕಾರಣಕ್ಕೆ ಬಿಜೆಪಿಗೆ ಹಿನ್ನಡೆಯಾಗಿತ್ತು.ಆದ್ದರಿಂದ ವಿಜಯೇಂದ್ರ ಆಯ್ಕೆ ಸೂಕ್ತವಾಗಿದೆ, ಇದೆಲ್ಲವನ್ನು ಯೋಚನೆ ಮಾಡಿಯೇ ಬಿಜೆಪಿ ವರಿಷ್ಠರು ವಿಜಯೇಂದ್ರಗೆ ಅಧಿಕಾರ ಕೊಟ್ಟಿದ್ದಾರೆ ಎಂದು ತಿಳಿಸಿದರು.
ಲೋಕಸಭಾ ಚುನಾವಣೆ ಬಳಿಕ ರಾಜ್ಯ ಸರ್ಕಾರ ಪತನ ವಿಚಾರವಾಗಿ ಮಾತನಾಡಿ, ಈ ವಿಚಾರವನ್ನು ನಾವು ಹೇಳ್ತಿಲ್ಲ. ಸಾರ್ವಜನಿಕರು ಸಹ ಈ ಕುರಿತು ಮಾತನಾಡಿಕೊಳ್ತಿದ್ದಾರೆ, ಅವರ ಮನದ ಆಸೆಯೂ ಅದೇ ಆಗಿದೆ. ಸರ್ಕಾರ ಅಧಿಕಾರಕ್ಕೆ ಬಂದ ಮೇಲೆ ಅಭಿವೃದ್ಧಿ ಮಾಡಿಲ್ಲ.
ಕೇವಲ ಗ್ಯಾರಂಟಿಗಳ ಹಿಂದೆ ಹೋಗ್ತಿದ್ದಾರೆ, ಇನ್ನು ಆರು ತಿಂಗಳು ಇದೇ ಸ್ಥಿತಿ ಎದುರಾದರೆ ಕಾಂಗ್ರೆಸ್ ಶಾಸಕರೇ ಸ್ವ ಕ್ಷೇತ್ರಕ್ಕೆ ತೆರಳಲು ಕಷ್ಟವಾಗುತ್ತದೆ. ಇದೆಲ್ಲವೂ ಮುಂಬರುವ ಲೋಕಸಭಾ ಚುನಾವಣೆ ಮೇಲೆ ಎಫೆಕ್ಟ್ ಆಗಲಿದೆ, ಹೀಗಾಗಿ ಲೋಕಸಭಾ ಚುನಾವಣೆ ಬಳಿಕ ರಾಜ್ಯ ಸರ್ಕಾರ ಪತನವಾಗಲಿದೆ. ಸಮ್ಮಿಶ್ರ ಸರ್ಕಾರ ರಚನೆಗೆ ಅವಕಾಶ ಮಾಡಿಕೊಡಲಿದೆ ಎಂದು ಹೇಳಿದರು.
ಬಿಜೆಪಿಯಲ್ಲಿ ಅಸಮಾಧಾನಕ್ಕೆ ಅವಕಾಶ ಇಲ್ಲ, ಎಲ್ಲರೂ ಹೈಕಮಾಂಡ್ ತೀರ್ಮಾನಕ್ಕೆ ಬದ್ದರಾಗುತ್ತಾರೆ. ಡಿ ಕೆ ಶಿವಕುಮಾರ್ ಸಿಎಂ ಆಗುತ್ತಾರೆ ಅಂತ ಹೇಳುತ್ತಿದ್ದರು, ಆದರೆ ಹೈಕಮಾಂಡ್ ಸಿದ್ದರಾಮಯ್ಯಗೆ ಮಣೆ ಹಾಕಿತು. ಇದಾದ ಬಳಿಕ ಸಮಾಧಾನವಾಗಲಿಲ್ಲವೇ. ಬಿಜೆಪಿಯಲ್ಲೂ ಅದೇ ರೀತಿ ಅಸಮಾಧಾನ ಇದೆ, ಹೈಕಮಾಂಡ್ ಮುಂದೆ ಎಲ್ಲ ನಾಯಕರು ಸುಮ್ಮನಾಗುತ್ತಾರೆ.
ವಿ ಸೋಮಣ್ಣನವರಿಗೆ ಅಸಮಾಧಾನ ಇದೆ. ಎಲ್ಲವನ್ನು ನಾಯಕರು ಮುಂದಿನ ಹಂತದಲ್ಲಿ ಸರಿಪಡಿಸುತ್ತಾರೆ, ಲೋಕಸಭಾ ಚುನಾವಣೆಯಲ್ಲಿ ಗೆಲ್ಲುವುದು ನಮ್ಮಗುರಿ. ನಾವು ಇಷ್ಟು ಸ್ಥಾನ ಬಿಟ್ಟುಕೊಡಿ ಎಂದು ಕೇಳುವುದಿಲ್ಲ, ಗೆಲ್ಲುವುದು ಒಂದೇ ಮಾನದಂಡ ಎಂದರು.
ಇನ್ನೂ ಅಭ್ಯರ್ಥಿ ಆಯ್ಕೆ ವಿಚಾರದಲ್ಲಿ ಎರಡು ಕಡೆಯಿಂದಲೂ ಸರ್ವೇ ನಡೆಸಲಾಗುತ್ತದೆ. ಮೈಸೂರು ಲೋಕಸಭಾ ಕ್ಷೇತ್ರದ ವಿಚಾರದಲ್ಲೂ ಇದೇ ಮಾನದಂಡ ಅನುಸರಿಸಲಾಗುತ್ತದೆ. ಇಷ್ಟೇ ಕ್ಷೇತ್ರ ಬಿಟ್ಟುಕೊಡಿ ಅಂತ ನಾವು ಕೇಳಿಲ್ಲ. ಇನ್ನು ವಿರೋಧ ಪಕ್ಷದ ನಾಯಕರನ್ನಾಗಿ ಬಿಜೆಪಿಯವರನ್ನೇ ಮಾಡಿ ಎಂದು ಕುಮಾರಸ್ವಾಮಿ ಅವರೇ ಹೇಳಿದ್ದಾರೆ, ಇದನ್ನು ಬಿಜೆಪಿ ಹೈಕಮಾಂಡ್ ಮುಂದೆ ಕುಮಾರಸ್ವಾಮಿಯವರು ಹೇಳಿ ಬಂದಿದ್ದಾರೆ. ನಾವು ವಿರೋಧ ಪಕ್ಷ ನಾಯಕ ಸ್ಥಾನವನ್ನು ಬಿಟ್ಟುಕೊಡಿ ಎಂದು ಕೇಳಿಲ್ಲ ಎಂದು ಹೇಳಿದರು.












Click it and Unblock the Notifications