ಜೆಡಿಎಸ್ ಪ್ರಣಾಳಿಕೆ: ಆಟೋ ಚಾಲಕರಿಗೆ ಪ್ರತಿ ತಿಂಗಳು 2,000 ರೂ ಮಾಸಾಶನ, ಇಲ್ಲಿದೆ ಸಂಪೂರ್ಣ ಮಾಹಿತಿ
ಬೆಂಗಳೂರು, ಏಪ್ರಿಲ್ 27: ಕರ್ನಾಟಕ ವಿಧಾನಸಭಾ ಚುನಾವಣೆಗೆ ಜೆಡಿಎಸ್ ಪಕ್ಷ ಪ್ರಣಾಳಿಕೆ ಬಿಡುಗಡೆ ಮಾಡಿದೆ. ಮಾಜಿ ಮುಖ್ಯಮಂತ್ರಿ ಎಚ್.ಡಿ ಕುಮಾರಸ್ವಾಮಿ, ಪಕ್ಷದ ರಾಜ್ಯಾಧ್ಯಕ್ಷ ಸಿಎಂ ಇಬ್ರಾಹಿಂ, ಪ್ರಣಾಳಿಕೆ ಸಮಿತಿ ಅಧ್ಯಕ್ಷ ಬಿ ಎಂ ಫಾರೂಕ್, ಪಕ್ಷದ ಕಾರ್ಯಾಧ್ಯಕ್ಷ ಅಲ್ಕೋಡ್ ಹನುಮಂತಪ್ಪ, ವಿಧಾನ ಪರಿಷತ್ ಮಾಜಿ ಸದಸ್ಯ ರಮೇಶ್ ಗೌಡ ಉಪಸ್ಥಿತಿಯಲ್ಲಿ ಜೆಡಿಎಸ್ ಪಕ್ಷ ಪ್ರಣಾಳಿಕೆ ಬಿಡುಗಡೆ ಮಾಡಲಾಗಿದೆ.
ಜೆಡಿಎಸ್ ಪಕ್ಷದ ಪ್ರಣಾಳಿಕೆಯಲ್ಲಿ ಇಂಧನ ಕ್ಷೇತ್ರಕ್ಕೆ ಸಾಕಷ್ಟು ಭರವಸೆಗಳನ್ನು ನೀಡಲಾಗಿದೆ. ಜಲ, ಸೌರ, ಪವನ ವಿದ್ಯುತ್ ಕ್ಷೇತ್ರಗಳಿಗೆ ಆದ್ಯತೆ ನೀಡಲಾಗಿದೆ. ಜೊತೆಗೆ ಜನಸಾಮಾನ್ಯರಿಗೂ ನೆರವಾಗುವ ಯೋಜನೆಗಳ ಭರವಸೆಗಳನ್ನು ಜೆಡಿಎಸ್ ನೀಡಿದೆ. 'ಸಾರಥಿಗೆ ಸೈ ಯೋಜನೆ' ಹೆಸರಿನಲ್ಲಿ ರಾಜ್ಯದಲ್ಲಿರುವ ಪ್ರತಿ ಆಟೋ ಚಾಲಕನಿಗೆ ಪ್ರತಿ ತಿಂಗಳು 2,000 ರೂಗಳ ಮಾಸಾಶನ ನೀಡುವುದಾಗಿ ಜೆಡಿಎಸ್ ಭರವಸೆ ನೀಡಿದೆ.

ಇನ್ನು 'ರಕ್ಷಕ ಬಂಧು ಯೋಜನೆ' ಹೆಸರಿನಲ್ಲಿ ನೋಂದಾಯಿತ ಖಾಸಗಿ ಸೆಕ್ಯೂರಿಟಿ ಗಾರ್ಡ್‌ಗಳಿಗೆ ಪ್ರತಿ ತಿಂಗಳೂ 2,000 ರೂಪಾಯಿ ಸಹಾಯ ಧನ ನೀಡಲಾಗುವುದು ಎಂದು ಜೆಡಿಎಸ್ ಭರವಸೆ ನೀಡಿದೆ.
ಜೆಡಿಎಸ್ ಪಕ್ಷದ ಪ್ರಣಾಳಿಕೆಯಲ್ಲಿ 'ಹಿರಿ-ಸಿರಿ ಯೋಜನೆ'ಯನ್ನು ದಾಖಲಿಸಲಾಗಿದ್ದು, ಈ ಯೋಜನೆಯ ಪ್ರಕಾರ ರಾಜ್ಯದಲ್ಲಿರುವ 57,91,032 ಹಿರಿಯ ನಾಗರಿಕರಲ್ಲಿ ಬಡತನ ರೇಖೆಗಿಂತ ಕೆಳಗಿರುವ 42,35,609 ಹಿರಿಯ ನಾಗರಿಕರ ಮಾಸಾಶನವನ್ನು1,200 ರೂ.ನಿಂದ 5,000 ರೂ.ಗಳಿಗೆ ಹೆಚ್ಚಳ ಮಾಡಲಾಗುವುದು ಎಂದು ಜೆಡಿಎಸ್ ತಿಳಿಸಿದೆ.
'ಚೈತನ್ಯ ಯೋಜನೆ'ಯ ಅಡಿಯಲ್ಲಿ ವಿರಳ ರೋಗಗಳಿಂದ ಬಳಲುತ್ತಿರುವ ರೋಗಿಗಳ ಚಿಕಿತ್ಸೆಗೆ ವಿಶೇಷ ಪರಿಹಾರವಾಗಿ ಮುಖ್ಯಮಂತ್ರಿಗಳ ಪರಿಹಾರ ನಿಧಿಯಿಂದ 25 ಲಕ್ಷ ರೂ.ಗಳವರೆಗೆ ಪರಿಹಾರವನ್ನು 24 ಗಂಟೆಗಳ ಒಳಗಾಗಿ ನೀಡಲಾಗುವುದು ರಾಜ್ಯದಲ್ಲಿ ಒಟ್ಟು 13,24,205 ವಿಕಲಚೇತನರಿದ್ದು, ಪ್ರಸ್ತುತ ಅವರಿಗೆ ನೀಡಲಾಗುತ್ತಿರುವ 600 ರೂ.ಗಳ ಪಿಂಚಣಿಯನ್ನು2,500 ರೂ.ಗಳಿಗೆ ಹೆಚ್ಚಿಸಲಾಗುವುದು ಎಂದು ಜೆಡಿಎಸ್ ಭರವಸೆ ನೀಡಿದೆ.












Click it and Unblock the Notifications