ಜಯಮಂಗಲಿ ನದಿ ಪುನಃಶ್ಚೇತನ; ಮೇ 16ರಂದು ಒಂದು ದಿನದ ಕಾರ್ಯಾಗಾರ
ಜಯಮಂಗಲಿ ತುಮಕೂರು ಜಿಲ್ಲೆಯ ಪ್ರಮುಖ ನದಿಗಳಲ್ಲಿ ಒಂದು. ಇದು ತುಮಕೂರು ಜಿಲ್ಲೆಯ ಪುಣ್ಯಕ್ಷೇತ್ರ ಹಾಗೂ ಸಂರಕ್ಷಿತ ಅರಣ್ಯ ಪ್ರದೇಶವಾದ ದೇವರಾಯನದುರ್ಗ ಬೆಟ್ಟದಲ್ಲಿ ಉಗಮವಾಗುತ್ತದೆ. ಅಲ್ಲಿನ ದೊಡ್ಡ ಬಂಡೆಯ ಬುಡದಲ್ಲಿ ನೀರು ಉಕ್ಕಿ ಹರಿಯುತ್ತದೆ. ಉಗಮ ಸ್ಥಾನದಲ್ಲಿ ಬೃಹತ್ ಕಲ್ಯಾಣಿ ಇರುವುದನ್ನು ಗಮನಿಸಬಹುದು.
ದೇವರಾಯನದುರ್ಗದಿಂದ ಉತ್ತರಕ್ಕೆ ಹರಿದು ಆಂಧ್ರಪ್ರದೇಶದ ಸಂಗಮೇಶ್ವರದ ಬಳಿ ಪಿನಾಕಿನಿ (ಪೆನ್ನಾರ್) ನದಿಗೆ ಕೂಡಿಕೊಳ್ಳುತ್ತದೆ. ಕರ್ನಾಟಕದಲ್ಲಿ ತುಮಕೂರು, ಕೊರಟಗೆರೆ, ಮಧುಗಿರಿ ತಾಲೂಕುಗಳಲ್ಲಿ ಹಾಗೂ ಆಂಧ್ರದ ಮಡಕಶಿರಾ ತಾಲೂಕಿನಲ್ಲಿ ಇದರ ಹರಿವು. ಕೊರಟಗೆರೆ ತಾಲೂಕಿನಲ್ಲಿಯೇ ಅತಿ ಹೆಚ್ಚು ಉದ್ದ ಹರಿಯುತ್ತದೆ. ಚನ್ನಸಾಗರದ ಬಳಿ ಮಧುಗಿರಿ ತಾಲೂಕಿಗೆ ಸೇರಿ, ಮುದ್ದೇನಹಳ್ಳಿಯ ಬಳಿ ಆಂಧ್ರಕ್ಕೆ ಕಾಲಿಡುತ್ತದೆ. ಸುಮಾರು 80 ಕಿ.ಮೀ. ಉದ್ದದ ನದಿ.

ಇದಕ್ಕೆ ಎರಡು ಉಪನದಿಗಳಿವೆ. ಕೊರಟಗೆರೆ ತಾಲೂಕು ಕ್ಯಾಮೇನಹಳ್ಳಿಯ ಬಳಿ ಗೌರಿಬಿದನೂರು ಕಡೆಯಿಂದ ಬರುವ ಗರುಡಾಚಲ ಹಾಗೂ ಅಕ್ಕಿರಾಂಪುರದ ಬಳಿ ಸಿದ್ದರಬೆಟ್ಟದ ಕಡೆಯಿಂದ ಬರುವ ಸುವರ್ಣಮುಖಿ ನದಿಗಳು ಜಯಮಂಗಲಿಗೆ ಸೇರಿ ಅಲ್ಲಿಂದ ಮುಂದಕ್ಕೆ ನದಿಯ ಹರಿವು ದೊಡ್ಡದಾಗುತ್ತದೆ.
ಹದಿನಾರನೇ ಶತಮಾನದಲ್ಲಿ ಮಧುಗಿರಿಯನ್ನು ಇಮ್ಮಡಿ ಚಿಕ್ಕಪ್ಪಗೌಡರು ಆಳುತ್ತಿದ್ದಾಗ ಅವರ ಸಾಮಂತರಾಗಿದ್ದ ತೆರಿಯೂರು ಸಂಸ್ಥಾನದ ಪಾಳೆಯಗಾರರು ಜಯಮಂಗಲಿ ನದಿ ಪಕ್ಕದಲ್ಲೇ ದೇವಾಲಯಗಳನ್ನು ನಿರ್ಮಿಸಿದ್ದರಂತೆ. 1985ರಲ್ಲಿ ಈ ನದಿಗೆ ಗೊರವನಹಳ್ಳಿ ಬಳಿ ತೀತಾ ಗ್ರಾಮದಲ್ಲಿ ಜಲಾಶಯ ನಿರ್ಮಿಸಲಾಯಿತು.
ಜಯಮಂಗಲಿ ನದಿ ತೀರದಲ್ಲಿ, ಮಧುಗಿರಿ ತಾಲೂಕಿನ ಮೈದನಹಳ್ಳಿಯಲ್ಲಿ ಪ್ರಸಿದ್ಧ ಜಯಮಂಗಲಿ ಕೃಷ್ಣಮೃಗ ಸಂರಕ್ಷಣಾ ಮೀಸಲು ಪ್ರದೇಶ (Jayamangali Blackbuck Conservation Reserve) ಇದೆ. ಇದು ಸುಮಾರು 798 ಎಕರೆ ಹುಲ್ಲುಗಾವಲು ಪ್ರದೇಶವಾಗಿದ್ದು, ನೂರಾರು ಕೃಷ್ಣಮೃಗಗಳಿಗೆ ಆಶ್ರಯ ನೀಡಿದೆ.
21ನೇ ಮಾರ್ಚ್ 1933ರಲ್ಲಿ ಮೈಸೂರು ಸಂಸ್ಥಾನದ ದಿವಾನರಾದ ಸರ್ ಮಿರ್ಜಾ ಇಸ್ಮಾಯಿಲ್ ಅವರು ಕೊರಟಗೆರೆ ತಾಲ್ಲೂಕು ಕ್ಯಾಮೇನಹಳ್ಳಿಯ ಬಳಿ ನದಿಗೆ ಅಣೆಕಟ್ಟು ನಿರ್ಮಿಸಲು ಅಡಿಗಲ್ಲು ಹಾಕುತ್ತಾರೆ. ಈ ಕಲ್ಲಿನ ಅಣೆಕಟ್ಟು ಈಗಲೂ ಸುಭದ್ರವಾಗಿದೆ. ಹಾಗೆಯೇ ಮಧುಗಿರಿ ತಾಲ್ಲೂಕಿನ ಪುರವರದ ಬಳಿ ನದಿ ದಾಟಲು ಅನುಕೂಲವಾಗುವಂತೆ 1949, ಜುಲೈ 30ರಂದು ಆಗಿನ ಮೈಸೂರು ಅರಸರಾದ ಶ್ರೀ ಜಯಚಾಮರಾಜೇಂದ್ರ ಒಡೆಯರ್ ಅವರು ಸೇತುವೆ ನಿರ್ಮಿಸುತ್ತಾರೆ.
70-80ರ ದಶಕದಲ್ಲಿ ನದಿಯು ಪ್ರತಿವರ್ಷ ಕನಿಷ್ಟ 2-3 ತಿಂಗಳಾದರೂ ಹರಿಯುತ್ತಿತ್ತು. ಉತ್ತಮ ಮಳೆಯಾದ ವರ್ಷ 6 ತಿಂಗಳು ನೀರಿನ ಹರಿವು ಇರುತ್ತಿತ್ತು. ಮಳೆಗಾಲದಲ್ಲಿ ಇಷ್ಟು ಹರಿದರೆ ಉಳಿದ ಅವಧಿಯಲ್ಲಿ ನದಿ ಪಕ್ಕದ ಬಾವಿಗಳು, ಕೆರೆಗಳು, ತಲಪರಿಗೆಗಳು ನೀರಿನಿಂದ ಸಮೃದ್ಧವಾಗಿರುತ್ತಿದ್ದವು. ನದಿ ಪಾತ್ರದ ಸಾವಿರಾರು ಎಕರೆ ಭೂಮಿಯಲ್ಲಿ ಕೃಷಿ ಚಟುವಟಿಕೆಗಳು ನಡೆಯುತ್ತಿದ್ದವು. ಇಂತಹ ಬಹುಪಯೋಗಿ ನದಿಯು ಇಂದು ಒತ್ತುವರಿ, ಮರಳು ಗಣಿಗಾರಿಕೆ, ಮಾಲಿನ್ಯ, ನದಿ ಜಲಾನಯನದಲ್ಲಿ ಕಾಡುಗಳ ನಾಶ ಮುಂತಾದ ಅನೇಕ ಸಮಸ್ಯೆಗಳಿಗೆ ತುತ್ತಾಗಿದೆ. ಯುವ ತಲೆಮಾರಿಗೆ ಈ ನದಿಯ ನೆನಪು ಮಸುಕಾಗುತ್ತಿದೆ.
ಈ ಹಿನ್ನೆಲೆಯಲ್ಲಿ ಜಯಮಂಗಲಿ ನದಿ ಪುನಃಶ್ಚೇತನದ ಕುರಿತು 16.5.2026ರಂದು ಶನಿವಾರ ಒಂದು ದಿನದ ಕಾರ್ಯಾಗಾರವನ್ನು ಹಮ್ಮಿಕೊಳ್ಳಲಾಗಿದೆ. ನದಿಯ ಮಹತ್ವವನ್ನು ತಿಳಿಸುವುದು, ಸರ್ಕಾರ ಮತ್ತು ಸಂಬಂಧಿಸಿದ ಇಲಾಖೆಗಳ ಗಮನಸೆಳೆಯುವುದು ಹಾಗೂ ಪುನರುಜ್ಜೀವನದ ಕುರಿತು ಚರ್ಚಿಸುವುದು ಕಾರ್ಯಾಗಾರದ ಮುಖ್ಯ ಉದ್ದೇಶಗಳಾಗಿವೆ. ತುಮಕೂರು ವಿಶ್ವವಿದ್ಯಾನಿಲಯದ ಪ್ರೊ.ಎಂ.ಡಿ.ನಂಜುಂಡಸ್ವಾಮಿ ಅಧ್ಯಯನ ಪೀಠ ಮತ್ತು ಸಮಾಜಕಾರ್ಯ ಅಧ್ಯಯನ ಮತ್ತು ಸಂಶೋಧನಾ ವಿಭಾಗ, ಸಂಪನ್ಮೂಲ ಅಭಿವೃದ್ಧಿ ಮತ್ತು ಪರಿಸರ ಪುನಃಶ್ಚೇತನ ಸಂಸ್ಥೆ (ಆರ್ಡರ್) ಹಾಗೂ ಧಾನ್ಯ ಸಂಸ್ಥೆಗಳ ಸಹಯೋಗದಲ್ಲಿ ಈ ಕಾರ್ಯಾಗಾರವನ್ನು ಹಮ್ಮಿಕೊಳ್ಳಲಾಗಿದೆ.
ಜಯಮಂಗಲಿ ನದಿಯ ಮೇಲೆ ಪ್ರೀತಿ ಉಳ್ಳವರು, ನದಿ ಪಾತ್ರದ ರೈತರು, ಯುವಕರು, ವಿದ್ಯಾರ್ಥಿಗಳು, ನಾಗರಿಕರು, ಇಲಾಖೆಗಳು, ಸಂಸ್ಥೆಗಳು ಈ ಕಾರ್ಯಾಗರದಲ್ಲಿ ಭಾಗವಹಿಸಿ ನದಿ ಪುನಃಶ್ಚೇತನಕ್ಕೆ ಕೈಜೋಡಿಸಲು ಮನವಿ. ಭಾಗವಹಿಸಲು ಯಾವುದೇ ಶುಲ್ಕ ಇರುವುದಿಲ್ಲ. ಆದರೆ ನೋಂದಣಿ ಮಾಡಿಕೊಳ್ಳಬೇಕು. ನೋಂದಣಿಗೆ ಸಂಪರ್ಕಿಸಿ; ಹೆಚ್.ಜೆ. ಪದ್ಮರಾಜು-99453 23787 ಮತ್ತು ರವಿ- 80737 57384












Click it and Unblock the Notifications