ಜನಿವಾರ vs ಹಿಜಾಬ್: " ಬ್ರಾಹ್ಮಣರಿಗೆ ಜನಿವಾರ ಎಷ್ಟು ಅತ್ಯಗತ್ಯವೋ ನಮಗೆ ಹಿಜಾಬ್ ಕೂಡ ಅಗತ್ಯ"
Janivara vs Hijab: ಕರ್ನಾಟಕದಲ್ಲಿ ಜನಿವಾರ ವಿವಾದವು ತೀವ್ರ ವಿವಾದ ಸ್ವರೂಪವನ್ನು ಪಡೆದುಕೊಳ್ಳುತ್ತಿದ್ದಂತೆಯೇ ಇದೀಗ ಹಿಜಾಬ್ ಧರಿಸುವ ವಿಚಾರವೂ ಚರ್ಚೆಯ ಮುನ್ನೆಲೆಗೆ ಬಂದಿದೆ. ರಾಜ್ಯದಲ್ಲಿ ಸಿಇಟಿ ಪರೀಕ್ಷೆ ಬರೆಯುವ ಸಂದರ್ಭದಲ್ಲಿ ವಿದ್ಯಾರ್ಥಿಗಳಿಂದ ಜನಿವಾರವನ್ನು ತೆಗೆಸಿದ್ದು ಭಾರೀ ಚರ್ಚೆ ಹಾಗೂ ಆಕ್ರೋಶಕ್ಕೆ ಕಾರಣವಾಗಿದೆ. ಈ ರೀತಿ ಇರುವಾಗಲೇ ಮುಸ್ಲಿಂ ಸಮುದಾಯದವರು ಮಾಡುತ್ತಿರುವ ಪ್ರಶ್ನೆಯು ಹೊಸ ಚರ್ಚೆಗೆ ನಾಂದಿಯಾಗಿದೆ. ಇದನ್ನು ಕೆಲವರು ಸರಿ ಎನ್ನುತ್ತಿದ್ದರೆ, ಇನ್ನೂ ಕೆಲವರು ಈ ವಿಷಯ ಈಗ ಚರ್ಚೆಯಾಗುವುದು ಬೇಡ ಎನ್ನುತ್ತಿದ್ದಾರೆ. ಕರ್ನಾಟಕದಲ್ಲಿ ಬಿಜೆಪಿ ಸರ್ಕಾರದ ಆಡಳಿತದ ಅವಧಿಯಲ್ಲಿ ಹಿಜಾಬ್ ವಿವಾದ ಸೃಷ್ಟಿಯಾಗಿತ್ತು. ಹಿಜಾಬ್ ಧರಿಸಿ ಬಂದಿದ್ದ ಕೆಲವರು ಪರೀಕ್ಷೆಗೆ ಹಾಜರಾಗದೆ ಹೊರಗೆ ಉಳಿದಿದ್ದರು. ಇದೀಗ ಜನಿವಾರದ ಚರ್ಚೆ ನಡೆಯುವಾಗಲೇ ಅವರಿಗೊಂದು ನ್ಯಾಯ ನಮಗೊಂದು ನ್ಯಾಯವೇ ಎಂದು ಪ್ರಶ್ನೆ ಮಾಡಿರುವುದು ಮತ್ತೆ ವಿವಾದದ ಕಿಡಿ ಹೊತ್ತಿಕೊಳ್ಳುವ ಎಲ್ಲಾ ಲಕ್ಷಣಗಳೂ ಕಾಣಿಸುತ್ತಿವೆ.
ಕರ್ನಾಟಕದ ಶಿವಮೊಗ್ಗ, ಬೀದರ ಹಾಗೂ ಶಿವಮೊಗ್ಗದಲ್ಲಿ ಸಿಇಟಿ ಪರೀಕ್ಷೆ ಬರೆಯುವುದಕ್ಕೆ ಹಾಜರಾಗಿದ್ದ ವಿದ್ಯಾರ್ಥಿಗಳಿಂದ ಪರೀಕ್ಷಾ ಕೇಂದ್ರದ ಸಿಬ್ಬಂದಿ ಹಾಗೂ ಪೊಲೀಸರು ಬ್ರಾಹ್ಮಣ ಸಮುದಾಯಕ್ಕೆ ಸೇರಿದ್ದವರ ಜನಿವಾರವನ್ನು ತೆಗೆಸಿದ್ದಾರೆ ಎನ್ನುವುದು ರಾಜ್ಯದಾದ್ಯಂತ ಭಾರೀ ಆಕ್ರೋಶಕ್ಕೆ ಕಾರಣವಾಗಿದೆ. ಈ ಸಂಬಂಧ ಕರ್ನಾಟಕದಲ್ಲಿ ಕಳೆದ ಒಂದು ವಾರದಿಂದಲೂ ಭಾರೀ ಪ್ರತಿಭಟನೆಗಳು ನಡೆಯುತ್ತಿವೆ. ಈ ಘಟನೆಗೆ ಸಂಬಂಧಿಸಿದಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಹಾಗೂ ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಅವರು ವಿಷಾದ ವ್ಯಕ್ತಪಡಿಸಿದ್ದು, ಧರ್ಮ ಹಾಗೂ ಆಚರಣೆಯ ವಿಚಾರದಲ್ಲಿ ಯಾರೂ ತಪ್ಪಾಗಿ ನಡೆದುಕೊಳ್ಳಬಾರದು. ಈ ರೀತಿಯ ಪ್ರಕರಣಗಳನ್ನು ಗಂಭೀರವಾಗಿ ಪರಿಗಣಿಸುವುದಾಗಿ ಹೇಳಿದ್ದಾರೆ.

ಈ ವಿಷಯದಲ್ಲಿ ತಪ್ಪಿತಸ್ಥರ ಸಸ್ಪೆಂಡ್ ಆಗುತ್ತಿದ್ದು. ಪರೀಕ್ಷೆ ವಂಚಿತರಾದ ವಿದ್ಯಾರ್ಥಿಗಳಿಗೆ ಸೀಟು ಸಿಗುವ ಭರವಸೆಯೂ ಸಿಕ್ಕಿದೆ. ಇನ್ನೇನು ಈ ವಿಷಯ ನಿಧಾನವಾಗಿ ತಣ್ಣಗಾಗಿ ಎಲ್ಲವೂ ಸರಿ ಹೋಗುತ್ತಿದೆ ಎನ್ನುವಾಗಲೇ ಹೊಸ ವಿವಾದವೊಂದು ಹುಟ್ಟಿಕೊಂಡಿದೆ. ಜನಿವಾರ ವಿವಾದ ಬೆನ್ನಲ್ಲೇ ಹಿಜಾಬ್ ವಿಷಯೂ ಚರ್ಚೆಯಾಗುವಂತೆ ಆಗಿದೆ. ಕರ್ನಾಟಕದಲ್ಲಿ ಹಿಜಾಬ್ ಹೋರಾಟದಲ್ಲಿ ಮುಂಚೂಣಿಯಲ್ಲಿದ್ದ (Aliya Assadi)
ಅಲಿಯಾ ಅಸ್ಸಾದಿ ಅವರು ಟ್ವೀಟ್‌ನಲ್ಲಿ ಕೇಳಿರುವ ಪ್ರಶ್ನೆಯು ಮತ್ತೆ ಹಿಜಾಬ್ vs ಜನಿವಾರ ಎನ್ನುವಂತಹ ಚರ್ಚೆಗೆ ಕಾರಣವಾಗಿದೆ.
ಇಷ್ಟಕ್ಕೂ ಹಿಬಾಜ್ & ಜನಿವಾರದ ಬಗ್ಗೆ ಅಲಿಯಾ ಅಸ್ಸಾದಿ ಹೇಳಿದ್ದೇನು ?
ಕರ್ನಾಟಕದಲ್ಲಿ ವಿದ್ಯಾರ್ಥಿಗಳು ಹಿಜಾಬ್ ಧರಿಸುವುದು ಹಾಗೂ ಜನಿವಾರ ಧರಿಸುವ ಬಗ್ಗೆ ಟ್ವೀಟ್ ಮಾಡಿ ಅಲಿಯಾ ಅಸ್ಸಾದಿ ಅವರು ಪ್ರಶ್ನೆ ಮಾಡಿದ್ದಾರೆ. ಸೋಷಿಯಲ್ ಮೀಡಿಯಾ ಎಕ್ಸ್‌ನಲ್ಲಿ ಈ ಸಂಬಂಧ ಅವರು ಸರಣಿ ಟ್ವೀಟ್ ಮಾಡಿದ್ದಾರೆ. ಜನಿವಾರ ಹಾಕಿದ ಕಾರಣಕ್ಕೆ ಪರೀಕ್ಷೆ ಬಹಿಷ್ಕರಿಸಲ್ಪಟ್ಟ ಬ್ರಾಹ್ಮಣನ ನೋವು ಮತ್ತು ಹಿಜಾಬ್ ಕಾರಣ ಪರೀಕ್ಷೆ ಬಹಿಷ್ಕಾರಕ್ಕೊಳಗಾದ ಮುಸ್ಲಿಂ ಹೆಣ್ಮಕ್ಕಳ ನೋವು ಒಂದೇ ಅಲ್ಲವೇ ಎಂದು ಅವರು ಪ್ರಶ್ನೆ ಮಾಡಿದ್ದಾರೆ.
ಮತ್ಯಾಕೆ ತಾರತಮ್ಯ, ಜನಿವಾರ ಬ್ರಾಹ್ಮಣರಿಗೆ ಎಷ್ಟು ಅತ್ಯಗತ್ಯವೋ ಹಿಜಾಬ್ ಕೂಡ ನಮಗೆ ಅಷ್ಟೇ ಅಗತ್ಯ. ಇಲ್ಲಿ ಜನಿವಾರವನ್ನು ತಡೆದ ಅಧಿಕಾರಿಯನ್ನು ತಕ್ಷಣ ಸಸ್ಪೆಂಡ್ ಮಾಡ್ತಾರೆ ಹಿಜಾಬಿಗಳಿಗೆ ಕಾಲೇಜು ಗೇಟ್ ಬಂದ್ ಮಾಡಿದ ಅಧಿಕಾರಿಗೆ ಯಾವ ಶಿಕ್ಷೆಯೂ ಇಲ್ಲ. ಬ್ರಾಹ್ಮಣ ವಿದ್ಯಾರ್ಥಿಗೆ ಉಚಿತ ಎಂಜಿನಿಯರ್ ಸೀಟ್ ನೀಡುತ್ತೀರಿ, ನಮ್ಮನ್ನು ಇದುವರೆಗೂ ಪರೀಕ್ಷೆ ಬರೆದಿದ್ದೀರೋ ಇಲ್ಲವೋ ಎಂದು ಸೌಜನ್ಯಕ್ಕಾದರೂ ಕೇಳಿಲ್ಲ, ಇದು ನಮ್ಮ ವ್ಯವಸ್ಥೆ ಎಂದು ಅವರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಈ ಬಗ್ಗೆ ಇದೀಗ ಕರ್ನಾಟಕದಲ್ಲಿ ಪರ - ವಿರೋಧ ಚರ್ಚೆ ಶುರುವಾಗಿದೆ.












Click it and Unblock the Notifications