ಹೊಸ ಅಭ್ಯರ್ಥಿಗೆ ಬಿಜೆಪಿ ಮಣೆ: ಪಕ್ಷ ಬದಲಿಸಿದ ಜಯಪ್ರಕಾಶ್ ಹೆಗ್ಡೆಗೆ 'ಕೈ' ತಪ್ಪುತ್ತಾ ಟಿಕೆಟ್?
ಉಡುಪಿ, ಮಾರ್ಚ್ 16: ಕಾಂಗ್ರೆಸ್‌ಗೂ ಮೊದಲು ಅಭ್ಯರ್ಥಿ ಘೋಷಣೆ ಮಾಡುವ ಮೂಲಕ ಬಿಜೆಪಿ ಕಾಂಗ್ರೆಸ್ ಪಕ್ಷದ ತಲೆನೋವು ಹೆಚ್ಚು ಮಾಡಿದೆ. ಉಡುಪಿ ಚಿಕ್ಕಮಗಳೂರು ಕ್ಷೇತ್ರದಲ್ಲಿ ಹಾಲಿ ಸಂಸದೆ ಶೋಭಾ ಕರಂದ್ಲಾಜೆಗೆ ಟಿಕೆಟ್ ಸಿಗಬಹುದು ಎನ್ನುವ ಲೆಕ್ಕಾಚಾರ ಹಾಕಿದ ಕಾಂಗ್ರೆಸ್ ಜಯಪ್ರಕಾಶ್ ಹೆಗ್ಡೆಯನ್ನು ಪಕ್ಷಕ್ಕೆ ಸೆಳೆದುಕೊಂಡಿತ್ತು.
ಈ ನಡುವೆ ಹಿಂದುಳಿದ ವರ್ಗದ ನಾಯಕನಿಗೆ ಟಿಕೆಟ್ ಕೊಟ್ಟು ಬಿಜೆಪಿ ಹೊಸ ದಾಳ ಉರುಳಿಸಿದೆ. ಅನಿರೀಕ್ಷಿತ ಅಚ್ಚರಿ ಎಂಬಂತೆ ಬಿಜೆಪಿ ಕೋಟ ಶ್ರೀನಿವಾಸ ಪೂಜಾರಿಗೆ ಉಡುಪಿ ಚಿಕ್ಕಮಗಳೂರು ಬಿಜೆಪಿ ಟಿಕೆಟ್ ನೀಡಿದೆ. ಹೀಗಾಗಿ ಕಾಂಗ್ರೆಸ್ ಮತ್ತೆ ಹೊಸದಾಗಿ ಕೂಡಿ ಕಳೆಯುವ ಲೆಕ್ಕಾಚಾರ ಮಾಡುತ್ತಿದೆ.

ಹೊಸ ಅಭ್ಯರ್ಥಿ ಘೋಷಣೆ ಮಾಡಿ ಬಿಜೆಪಿ ಕಾಂಗ್ರೆಸ್ ತಂತ್ರ ಬುಡಮೇಲು ಮಾಡಿದೆ. ಜಾತಿ ಲೆಕ್ಕಾಚಾರ ಮಾಡಿ ಬಿಜೆಪಿ ಟಿಕೆಟ್ ನೀಡಿದ್ದು, ಕಾಂಗ್ರೆಸ್ ಹೊಸ ಲೆಕ್ಕ ಶುರು ಮಾಡಿದೆ. ಬಿಜೆಪಿ ಗೌಡ ಸಮುದಾಯದ ಶೋಭಾ ಕರಂದ್ಲಾಜೆಗೆ ಟಿಕೆಟ್ ಎಂದು ಭಾವಿಸಿದ್ದ ಕಾಂಗ್ರೆಸ್, ಬಂಟ ಸಮುದಾಯದ ಜಯಪ್ರಕಾಶ್ ಹೆಗ್ಡೆಯನ್ನು ಪಕ್ಷಕ್ಕೆ ಸೆಳೆದಿತ್ತು. ಬದಲಾದ ಪರಿಸ್ಥಿತಿಯಲ್ಲಿ ಶೋಭಾ ಕರಂದ್ಲಾಜೆ ಬೆಂಗಳೂರು ಉತ್ತರಕ್ಕೆ ಶಿಫ್ಟ್ ಆದರು. ಶೋಭಾ ಸ್ಥಾನಕ್ಕೆ ಕೋಟ ಶ್ರೀನಿವಾಸ ಪೂಜಾರಿ ಅಭ್ಯರ್ಥಿಯಾಗಿದ್ದಾರೆ.
ಹೀಗಾಗಿ ಕಾಂಗ್ರೆಸ್ ಹೊಸದಾಗಿ ಎಲ್ಲಾ ಸಾಧ್ಯತೆಗಳನ್ನು ಅಳೆದು ತೂಗುತ್ತಿದೆ. ಟಿಕೆಟ್ ಜಯಪ್ರಕಾಶ್ ಹೆಗ್ಡೆಗೇ ಕೊಡಬೇಕಾ? ಮಾಜಿ ಸಚಿವ ಮಾಜಿ ಸಂಸದ ವಿನಯಕುಮಾರ್ ಸೊರಕೆಗೋ? ಈ ನಡುವೆ ಆಕಾಂಕ್ಷಿಗಳಾಗಿರುವ ಡಾ. ಅಂಶುಮಂತ್- ಸುಧೀರ್ ಕುಮಾರ್ ಮರೋಳ್ಳಿ ಹೆಸರು ಮತ್ತೆ ಚರ್ಚೆಗೆ ಬಂದಿದೆ. ಬಿಲ್ಲವ ಅಭ್ಯರ್ಥಿ ಎದುರು ಯಾರನ್ನು ಕಣಕ್ಕಿಳಿಸಬೇಕು ಎಂಬ ಚರ್ಚೆ ಕಾಂಗ್ರೆಸ್‌ನಲ್ಲಿ ನಡೆಯುತ್ತಿದೆ.

ಈವರೆಗೆ ಜಯಪ್ರಕಾಶ್ ಹೆಗ್ಡೆಯ ಒಂದು ಹೆಸರನ್ನು ಮಾತ್ರ ಹೈಕಮಾಂಡ್‌ಗೆ ಕಳುಹಿಸಿರುವ ರಾಜ್ಯ ನಾಯಕರು ಈಗ ಪುನರ್ ವಿಮರ್ಷೆ ಮಾಡುತ್ತಿದ್ದಾರಂತೆ. ಬಿಜೆಪಿಯನ್ನು ಎದುರಿಸಲು ಚಿಕ್ಕಮಗಳೂರು ಮೂಲದ ಅಭ್ಯರ್ಥಿಗೆ ಅವಕಾಶ ನೀಡುವ ಬಗ್ಗೆ ಕಾಂಗ್ರೆಸ್ ಪಾಳಯದಲ್ಲಿ ಚರ್ಚೆ ನಡೆಯುತ್ತಿದೆ. ಹೀಗಾಗಿ ಈವರೆಗೆ ಟಿಕೆಟ್ ಕೂಡಾ ಘೋಷಣೆಯಾಗಿಲ್ಲ. ಅಧಿಕೃತ ಘೋಷಣೆಗಾಗಿ ಟಿಕೆಟ್ ಆಕಾಂಕ್ಷಿಗಳು ಮಾತ್ರವಲ್ಲ ಕಾಂಗ್ರೆಸ್ ಕಾರ್ಯರ್ಯರು ಕೂಡ ಕಾಯುತ್ತಿದ್ದಾರೆ.
ಜಯಪ್ರಕಾಶ್ ಹೆಗ್ಡೆಗೆ ಟಿಕೆಟ್ ಕೊಡುವುದಾಗಿ ಈಗಾಗಲೇ ಪಕ್ಷ ನಿರ್ಧರಿಸಿತ್ತು. ಆದರೆ ಈ ನಡುವೆ ಕಳೆದ ವಿಧಾನಸಭಾ ಚುನಾವಣೆಯಲ್ಲಿ ಚಿಕ್ಕಮಗಳೂರಿನ ನಾಲ್ಕು ವಿಧಾನಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ ಗೆದ್ದಿದೆ. ಹೀಗಾಗಿ ನಾಲ್ಕು ಶಾಸಕರ ಅಭಿಪ್ರಾಯ ಪಡೆದು ಕಾಂಗ್ರೆಸ್ ಹೊಸ ತಂತ್ರಗಾರಿಕೆ ಮಾಡುತ್ತಿದೆ. ಚಿಕ್ಕಮಗಳೂರು ಜಿಲ್ಲೆಯಿಂದ ಅಭ್ಯರ್ಥಿ ಆಯ್ಕೆ ಮಾಡಿದರೆ ಕಣ ರಂಗೇರುತ್ತದೆ ಎಂಬ ಲೆಕ್ಕಾಚಾರವೂ ಕಾಂಗ್ರೆಸ್ ಪಡಸಾಲೆಯಲ್ಲಿ ನಡೆಯುತ್ತಿದೆ.












Click it and Unblock the Notifications