'ಬಾದಾಮಿ'ಗೆ ಹಠ ಹಿಡಿದ ಸಿದ್ದರಾಮಯ್ಯ, ಬೇಸ್ತು ಬಿತ್ತೇ ಹೈಕಮಾಂಡ್?
Recommended Video

ದಿನದಿಂದ ದಿನಕ್ಕೆ ಚಾಮುಂಡೇಶ್ವರಿಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯನವರಿಗೆ ಗೆಲುವು ಕಬ್ಬಿಣದ ಕಡಲೆಯಾಗುತ್ತಿದೆಯೇ? ಎರಡು ಕ್ಷೇತ್ರದಲ್ಲಿ ಸ್ಪರ್ಧಿಸಿಯೇ ತೀರುತ್ತೇನೆ ಎನ್ನುವ ಹಠಕ್ಕೆ ಮುಖ್ಯಮಂತ್ರಿಗಳು ಬಿದ್ದಿದ್ದಾರೆಯೇ?
ತಾಜಾ ಮಾಹಿತಿಗಳ ಪ್ರಕಾರ, ಒಂದು ಕ್ಷೇತ್ರದಲ್ಲಿ ಮಾತ್ರ ಸ್ಪರ್ಧಿಸಬೇಕು ಎನ್ನುವ ಹೈಕಮಾಂಡ್ ನಿಲುವಿಗೆ ಸಿಟ್ಟಾಗಿರುವ ಸಿದ್ದರಾಮಯ್ಯ, ಬಾದಾಮಿ ಕ್ಷೇತ್ರದಲ್ಲೂ ಬಿಫಾರಂ ನೀಡಲೇಬೇಕು ಎನ್ನುವ ಜಿದ್ದಿಗೆ ಬಿದ್ದಿದ್ದು, ಮುಖ್ಯಮಂತ್ರಿಗಳ ನಡೆಗೆ ಹೈಕಮಾಂಡ್ ಬೇಸ್ತು ಬಿದ್ದಿದೆ ಎನ್ನುವ ಮಾಹಿತಿಯಿದೆ.
ಅಭ್ಯರ್ಥಿಗಳ ಪಟ್ಟಿ : ಕಾಂಗ್ರೆಸ್ | ಬಿಜೆಪಿ | ಜೆಡಿಎಸ್
ಮೂಲಗಳ ಪ್ರಕಾರ, ಮೈಸೂರಿನಲ್ಲಿರುವ ಮುಖ್ಯಮಂತ್ರಿಗಳ ಜೊತೆ ಮಾತುಕತೆ ನಡೆಸಲು ಕೆಪಿಸಿಸಿ ಅಧ್ಯಕ್ಷ ಪರಮೇಶ್ವರ್ ದೌಡಾಯಿಸಿದ್ದು, ಹೈಕಮಾಂಡ್ ನಿರ್ಧಾರವನ್ನು ಮನದಟ್ಟು ಮಾಡುವ ಕೆಲಸಕ್ಕೆ ಮುಂದಾಗಿದ್ದಾರೆ ಎನ್ನಲಾಗುತ್ತಿದೆ.

ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಪ್ರಚಾರದಲ್ಲಿರುವ ಮುಖ್ಯಮಂತ್ರಿಗಳು ಅವರನ್ನು ಭೇಟಿಯಾಗಲು ಬಂದ ಟಿಕೆಟ್ ಆಕಾಂಕ್ಷಿಗಳ ಜೊತೆಗೂ ಸಿಟ್ಟಾಗಿ ವರ್ತಿಸಿದ್ದಾರೆ ಎನ್ನುವ ಸುದ್ದಿಯಿದೆ. ಮುನಿದ ಮುಖ್ಯಮಂತ್ರಿಗಳ ಮನವೊಲಿಕೆಗೆ ಎಐಸಿಸಿ ಉಸ್ತುವಾರಿ ಕೆ ಸಿ ವೇಣುಗೋಪಾಲ್ ಕೂಡಾ ಮುಂದಾಗಿದ್ದಾರೆ.
ಎರಡು ಕ್ಷೇತ್ರದಲ್ಲಿ ಟಿಕೆಟ್ ನೀಡದಿದ್ದರೆ, ಬೇರೆ ಕ್ಷೇತ್ರಗಳಲ್ಲಿ ಪ್ರಚಾರಕ್ಕೆ ಬರುವುದಿಲ್ಲ, ನನ್ನ ಕ್ಷೇತ್ರಕ್ಕೆ ಸೀಮಿತವಾಗಿ ಕೆಲಸ ಮಾಡುತ್ತೇನೆಂದು ಸಿದ್ದರಾಮಯ್ಯ, ಹೈಕಮಾಂಡ್ ಮುಂದೆ ಹೇಳಿದ್ದಾರೆಂದು ಕೆಲವು ಪತ್ರಿಕೆಗಳು ವರದಿ ಮಾಡಿವೆ. ಸಿಎಂ ಸಮಾಧಾನ ಪಡಿಸುವ ಕೆಲಸಕ್ಕೆ ಕಾಂಗ್ರೆಸ್ ಹೈಕಮಾಂಡ್ ಮುಂದಾಗಿದೆ.
ಇತ್ತೀಚಿನ ದಿನಗಳಲ್ಲಿ ಕರ್ನಾಟಕ ಕಾಂಗ್ರೆಸ್ಸಿನ 'ಹೈಕಮಾಂಡ್' ಎಂದೇ ಕರೆಯಲ್ಪಡುವ ಸಿದ್ದರಾಮಯ್ಯ ಎರಡು ದಿನಗಳ ಕೆಳಗೆ, ಚಿಕ್ಕಪೇಟೆ (ಬೆಂಗಳೂರು ನಗರ) ಮತ್ತು ಬಾದಾಮಿ ಕ್ಷೇತ್ರದ ಬಿಫಾರಂ ನೀಡದಂತೆ ಪರಮೇಶ್ವರ್ ಅವರಿಗೆ ಸೂಚಿಸಿದ್ದರು ಎಂದು ಮಾಧ್ಯಮಗಳು ವರದಿ ಮಾಡಿದ್ದವು.
ಚಿಕ್ಕಪೇಟೆಯಿಂದ ಆರ್ ವಿ ದೇವರಾಜ್ ಮತ್ತು ಬಾದಾಮಿಯಿಂದ ದೇವರಾಜ್ ಪಾಟೀಲ್ ಗೆ ಈಗಾಗಲೇ ಟಿಕೆಟ್ ಘೋಷಣೆಯಾಗಿದೆ. ಅನಾರೋಗ್ಯದ ಕಾರಣದಿಂದಾಗಿ ನನ್ನ ಬದಲಿಗೆ ನನ್ನ ಪುತ್ರನಿಗೆ ಟಿಕೆಟ್ ನೀಡಬೇಕೆಂದು ಆರ್ ವಿ ದೇವರಾಜ್ ವಿನಂತಿಸಿಕೊಂಡಿದ್ದರು ಎನ್ನುವ ಸುದ್ದಿಯಿದೆ. ಜೊತೆಗೆ, ಬಾದಾಮಿಯಲ್ಲೂ ಬಿಫಾರಂ ನೀಡದಂತೇ ಸೂಚಿಸಿರುವುದು, ಸಿಎಂ ಬಾದಾಮಿಯಲ್ಲೂ ಕೊನೆ ಗಳಿಗೆಯಲ್ಲಿ ಸ್ಪರ್ಧಿಸುವ ಸಾಧ್ಯತೆಯಿದೆ ಎನ್ನಲಾಗುತ್ತಿದೆ.
ಆದರೆ, ಒಂದು ಕ್ಷೇತ್ರದಲ್ಲಿ ಮಾತ್ರ ಸ್ಪರ್ಧಿಸುವಂತೆ ಹೈಕಮಾಂಡ್ ಸೂಚಿಸಿರುವುದು ಸಿದ್ದರಾಮಯ್ಯನವರನ್ನು ಇಕ್ಕಟ್ಟಿಗೆ ಸಿಲುಕಿಸಿದೆ. ಇದರ ಜೊತೆಗೆ, ಬಾದಾಮಿಯಲ್ಲೂ ಸ್ಪರ್ಧಿಸುವಂತೆ ಕಾರ್ಯಕರ್ತರು ಒತ್ತಡ ಹೇರುತ್ತಿದ್ದಾರೆಂದು ಸಿದ್ದರಾಮಯ್ಯ ಹೇಳಿರುವುದು, ಹೈಕಮಾಂಡ್ ಅನ್ನು ಗೊಂದಲಕ್ಕೀಡು ಮಾಡಿದೆ.












Click it and Unblock the Notifications