Jobs: 20 ಲಕ್ಷ ಉದ್ಯೋಗ ಸೃಷ್ಟಿಯಾದ್ರೂ ಕನ್ನಡಿಗರಿಗೆ ಆಗಲಿದೆಯಾ ಅನ್ಯಾಯ?
ಬೆಂಗಳೂರಿನಲ್ಲಿ ನಡೆಯುತ್ತಿರುವ ಇನ್ವೆಸ್ಟ್ ಕರ್ನಾಟಕ ಜಾಗತಿಕ ಹೂಡಿಕೆದಾರರ ಸಮಾವೇಶವು ವಿಶ್ವದ ಗಮನ ಸೆಳೆದಿದೆ. ಇದರಿಂದ ಕರ್ನಾಟಕದಲ್ಲಿ ಭವಿಷ್ಯದಲ್ಲಿ 20 ಲಕ್ಷಕ್ಕೂ ಹೆಚ್ಚು ಉದ್ಯೋಗ ಸೃಷ್ಟಿಯಾಗಲಿದೆ ಎಂದು ಹೇಳಲಾಗುತ್ತಿದೆ. ಆದರೆ, ಕನ್ನಡಿಗರಿಗೆ ಈ ಉದ್ಯೋಗಗಳಲ್ಲೂ ಅನ್ಯಾಯವಾಗಲಿದೆಯಾ? ಎನ್ನುವ ವಿಚಾರವಾಗಿ ಸೋಶಿಯಲ್ ಮೀಡಿಯಾದಲ್ಲಿ ಚರ್ಚೆ ಹುಟ್ಟುಹಾಕಿದೆ. ಈ ಬಗ್ಗೆ ಕರ್ನಾಟಕ ರಕ್ಷಣಾ ವೇದಿಕೆ (ಕರವೇ) ಕೂಡ ರಾಜ್ಯ ಸರ್ಕಾರದ ಮುಂದೆ ಗಂಭೀರ ಪ್ರಶ್ನೆಗಳನ್ನು ಇಟ್ಟಿದೆ.
ಕರ್ನಾಟಕದಲ್ಲಿ ಬಂಡವಾಳ ಹೂಡಿಕೆ ಮಾಡಿದರೆ ಉತ್ತರ ಪ್ರದೇಶ, ಬಿಹಾರದ ಜನರಿಗೆ ಉದ್ಯೋಗ ಸಿಗುತ್ತದೆ ಎಂದು ಕೇಂದ್ರ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರು "ಇನ್ವೆಸ್ಟ್ ಕರ್ನಾಟಕ"ದ ಭಾಷಣದಲ್ಲೇ ಹೇಳಿದರೂ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್, ಕೈಗಾರಿಕಾ ಸಚಿವ ಎಂಬಿ ಪಾಟೀಲ್ ಸೇರಿದಂತೆ ಸರ್ಕಾರದ ಪ್ರತಿನಿಧಿಗಳು ದಿವ್ಯಮೌನ ತಾಳಿರುವುದು ಯಾಕೆ? ರಾಜನಾಥ್ ಸಿಂಗ್ ಅವರ ಈ ಅಪಾಯಕಾರಿ ಹೇಳಿಕೆಗೆ ರಾಜ್ಯ ಸರ್ಕಾರದ ಸಮ್ಮತಿ ಇದೆಯೇ ಎಂಬ ಅನುಮಾನ ನನ್ನನ್ನು ಕಾಡುತ್ತಿದೆ ಎಂದು ಕರವೇ ರಾಜ್ಯಾಧ್ಯಕ್ಷ ಟಿ.ಎ.ನಾರಾಯಣಗೌಡ ಆಕ್ರೋಶ ಹೊರಹಾಕಿದ್ದಾರೆ.

ಕರ್ನಾಟಕದಲ್ಲಿ ಉದ್ಯಮಿಗಳು ಬಂಡವಾಳ ಹೂಡಿದಾಗ ಅದರ ಲಾಭ ಕರ್ನಾಟಕದ ಜನತೆಗೆ ಲಭಿಸಬೇಕು ಎಂಬುದು ನೈಸರ್ಗಿಕ ನ್ಯಾಯ. ಆದರೆ, ರಾಜ್ಯ ಸರ್ಕಾರದ ಬದ್ಧತೆ ಏನು ಎಂಬುದನ್ನು ಮುಖ್ಯಮಂತ್ರಿಗಳು, ಸಚಿವರುಗಳು ಬಹಿರಂಗಪಡಿಸಬೇಕು. ರಾಜನಾಥ್ ಸಿಂಗ್ ಅವರ ಹೇಳಿಕೆಗೆ ಸರ್ಕಾರದ ಪ್ರತಿನಿಧಿಗಳು ಮೌನ ತಾಳಿದರೆ, ಇದರಿಂದ ರಾಜ್ಯದ ಜನತೆಗೆ ತಪ್ಪು ಸಂದೇಶ ಹೋಗುತ್ತದೆ ಎಂಬ ತಿಳಿವಳಿಕೆ ನಮ್ಮ ಜನಪ್ರತಿನಿಧಿಗಳಿಗೆ ಇಲ್ಲವೇ? ಅಥವಾ ಕರ್ನಾಟಕದ ಉದ್ಯಮಗಳಲ್ಲಿ ಉತ್ತರ ಭಾರತೀಯರೇ ತುಂಬಿಕೊಳ್ಳಲಿ, ನಮಗೇನಾಗಬೇಕು ಎಂಬ ಅಸಡ್ಡೆ ಇದೆಯೇ? ಎಂದು ತರಾಟೆಗೆ ತೆಗೆದುಕೊಂಡಿದ್ದಾರೆ.
ರಾಜನಾಥ್ ಸಿಂಗ್ ಅವರು ಈ ಹೇಳಿಕೆ ನೀಡುವಾಗ ಸ್ಥಳದಲ್ಲಿಯೇ ನಮ್ಮ ಜನಪ್ರತಿನಿಧಿಗಳು ಪ್ರತಿಭಟಿಸಬೇಕಿತ್ತು. ಅದು ಸಾಧ್ಯವಾಗದೇ ಇದ್ದಲ್ಲಿ, ನಂತರವಾದರೂ ಆ ಕುರಿತು ಪ್ರತಿಕ್ರಿಯೆ ನೀಡಬಹುದಿತ್ತು. ಆದರೆ, ಯಾರಿಗೂ ಈ ಕುರಿತು ಆಸಕ್ತಿ ಇದ್ದ ಹಾಗೆ ತೋರುತ್ತಿಲ್ಲ. ಕನ್ನಡಿಗರ ಬದುಕಿನ ಕುರಿತು, ಕನ್ನಡದ ಮಕ್ಕಳಿಗೆ ಲಭಿಸಬೇಕಾದ ಉದ್ಯೋಗದ ಕುರಿತು ಇವರಿಗೆ ಇರುವ ತಾತ್ಸಾರ, ಉಪೇಕ್ಷೆ ಎದ್ದು ಕಾಣುತ್ತಿದೆ ಎಂದು ದೂರಿದ್ದಾರೆ.

ಇನ್ವೆಸ್ಟ್ ಕರ್ನಾಟಕದಿಂದಾಗಿ 20 ಲಕ್ಷ ಉದ್ಯೋಗಗಳು ಸೃಷ್ಟಿಯಾಗುತ್ತವೆ ಎಂದು ಸಚಿವರೇ ಹೇಳುತ್ತಿದ್ದಾರೆ. ಮಾನ್ಯ ಮುಖ್ಯಮಂತ್ರಿ ಸಿದ್ದರಾಮಯ್ಯನವರೇ, ಈ ಉದ್ಯೋಗಗಳನ್ನು ಯಾರಿಗೆ ಕೊಡುತ್ತೀರಿ? ರಾಜನಾಥ ಸಿಂಗ್ ಹೇಳಿದಂತೆ ಯುಪಿ, ಬಿಹಾರಿ ಹಿಂದಿವಾಲಾಗಳಿಗಾ? ಅಥವಾ ಕನ್ನಡಿಗರಿಗಾ? ನೀವಾದರೂ ಸ್ಪಷ್ಟಪಡಿಸಿ. ಹಿಂದಿವಾಲಾಗಳಿಗೆ ಉದ್ಯೋಗ ಕೊಡುವುದಾದರೆ, ಕರ್ನಾಟಕದ ರೈತರು ತಮ್ಮ ಬೆಲೆ ಬಾಳುವ ಜಮೀನನ್ನು ಯಾಕೆ ಸರ್ಕಾರಕ್ಕೆ ನೀಡಬೇಕು? ಕನ್ನಡಿಗರನ್ನು ಭಿಕಾರಿಗೊಳಿಸಿ, ಹಿಂದಿವಾಲಾಗಳನ್ನು ಉದ್ಧಾರ ಮಾಡುವ ನೀತಿಗೆ ನಮ್ಮ ಧಿಕ್ಕಾರವಿದೆ ಎಂದು ಖಂಡಿಸಿದ್ದಾರೆ.
ನಮ್ಮ ಜನಪ್ರತಿನಿಧಿಗಳು ಈಗಲಾದರೂ ಬಾಯಿಬಿಟ್ಟು ಮಾತಾಡಬೇಕು. ಈಗಾಗಲೇ ಸಾಮಾಜಿಕ ಜಾಲತಾಣಗಳಲ್ಲಿ ಕನ್ನಡಿಗರು ಆಕ್ರೋಶ ತೋಡಿಕೊಳ್ಳುತ್ತಿದ್ದಾರೆ. ರಾಜ್ಯ ಸರ್ಕಾರ ಬಾಯಿ ಬಿಡದಿದ್ದರೆ, ಬಾಯಿ ಬಿಡಿಸುವ ಕಾರ್ಯವನ್ನು ನಾವು ಮಾಡಬೇಕಾಗುತ್ತದೆ. ಕರ್ನಾಟಕದಲ್ಲಿ ಉದ್ಯಮಗಳನ್ನು ಸ್ಥಾಪಿಸುವುದು, ಕನ್ನಡಿಗರ ಒಳಿತಿಗಾಗಿಯೇ ಹೊರತು ಯುಪಿ, ಬಿಹಾರಿಗಳ ಅನುಕೂಲಕ್ಕಾಗಿ ಅಲ್ಲ ಎಂದು ಹೇಳುವ ಧೈರ್ಯ ಇಲ್ಲದ ಜನಪ್ರತಿನಿಧಿಗಳು ಇದ್ದರೇನು ಪ್ರಯೋಜನ? ಇಂಥಹ ಹೇಡಿ ರಾಜಕಾರಣವನ್ನು ಕನ್ನಡ ಜನತೆಯ ಮುಂದೆ ಬಯಲುಗೊಳಿಸುವ ಕಾರ್ಯವನ್ನು ನಾವು ಮಾಡುತ್ತೇವೆ ಎಂದು ಎಚ್ಚರಿಕೆ ನೀಡಿದ್ದಾರೆ.












Click it and Unblock the Notifications