ಅಂತರರಾಜ್ಯ ಜಲವಿವಾದ: ದೆಹಲಿಯಲ್ಲಿ ಕಾನೂನು ತಜ್ಞರೊಂದಿಗೆ ಸಭೆ: ಬಸವರಾಜ ಬೊಮ್ಮಾಯಿ
ಬೆಂಗಳೂರು, ಆ. 24: ಅಂತರರಾಜ್ಯ ಜಲ ವಿವಾದಗಳ ಬಗ್ಗೆ ನವದೆಹಲಿಯಲ್ಲಿ ಕಾನೂನು ತಜ್ಞರ ಜತೆ ಸಭೆ ನಡೆಸಲಾಗುವುದು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದ್ದಾರೆ. ಬೆಂಗಳೂರಿನಲ್ಲಿ ಮಾದ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ್ದಾರೆ.
ರಾಜ್ಯ ಸರ್ಕಾರದ ಅಡ್ವೋಕೇಟ್ ಜನರಲ್, ರಾಜ್ಯದ ಹಿರಿಯ ವಕೀಲರು, ಕಾನೂನು ತಜ್ಞರು ಈ ಸಭೆಯಲ್ಲಿ ಭಾಗವಹಿಸಲಿದ್ದಾರೆ. ರಾಜ್ಯದ ನೀರಾವರಿ ವಿವಾದದ ಬಗ್ಗೆ ರಾಜ್ಯದ ಮುಂದಿನ ನಡೆಯ ಬಗ್ಗೆ ಈ ಸಭೆಯಲ್ಲಿ ತೀರ್ಮಾನಿಸಲಾಗುವುದು. ಕರ್ನಾಟಕದ ನೆಲ, ಜಲ, ಭಾಷೆಯ ಹಿತರಕ್ಷಣೆ ಗೆ ಸರ್ವ ಪ್ರಯತ್ನ ಮಾಡಲಾಗುವುದು, ಈ ವಿಷಯದಲ್ಲಿ ಯಾವುದೇ ರೀತಿಯ ಆತಂಕ ಬೇಡ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು.
ಇದೆ ತಿಂಗಳ 25 ನೇ ತಾರೀಖಿನಂದು ನವದೆಹಲಿಗೆ ತೆರಳಿ 26 ರಂದು ಎಲ್ಲ ಕೇಂದ್ರ ಸಚಿವರನ್ನು ಭೇಟಿ ಮಾಡಿ ರಾಜ್ಯದ ಅಭಿವೃದ್ಧಿಯ ಬಗ್ಗೆ ಚರ್ಚಿಸಲಾಗುವುದು. ಕೇಂದ್ರ ಆರೋಗ್ಯ, ಹಣಕಾಸು, ಜಲಶಕ್ತಿ , ಕೃಷಿ ಹಾಗೂ ರಕ್ಷಣಾ ಸಚಿವರ ಸಮಯ ಕೇಳಿದ್ದು, ಅವರನ್ನು ನವದೆಹಲಿಯಲ್ಲಿ ಭೇಟಿಯಾಗಲಿದ್ದೇನೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು.

ಕೋವಿಡ್ ನಿಯಂತ್ರಣಕ್ಕೆ ಸಂಬಂಧಿಸಿದಂತೆ ಈಗಾಗಲೇ ಇರುವ ತಜ್ಞರ ಸಮಿತಿ ಮುಂದುವರೆಯಲಿದೆ. ಕೇಂದ್ರ ವಿಪತ್ತು ನಿರ್ವಹಣಾ ಸಮಿತಿ ಆಕ್ಟೊಬರ್ ಮಾಹೆಯಲ್ಲಿ ರಾಜ್ಯಕ್ಕೆ ಬರಬಹುದು. ಕೋವಿಡ್ ಮೂರನೇ ಅಲೆಯ ನಿಯಂತ್ರಣ ಕ್ಕೆ ಮುಂಜಾಗ್ರತಾ ಕ್ರಮಗಳ ಬಗ್ಗೆ ಚರ್ಚಿಸಲು ಕೋವಿಡ್ ತಜ್ಞರ ಸಮಿತಿ ಹಾಗೂ ಸಂಬಂಧ ಪಟ್ಟ ಸಚಿವರೊಂದಿಗೆ ಸಭೆ ನಡೆಸಲಾಗುವುದು ಎಂದು ಮುಖ್ಯಮಂತ್ರಿ ಬೊಮ್ಮಾಯಿ ತಿಳಿಸಿದ್ದಾರೆ.
ಮೊದಲ ದಿನವೇ ವಿದ್ಯಾರ್ಥಿಗಳ ಉತ್ತಮ ಹಾಜರಾತಿ; ಸಿಎಂ ಬೊಮ್ಮಾಯಿ ಹರ್ಷ:
ರಾಜ್ಯದಲ್ಲಿ ಆ. 23ರಿಂದ 9, 10, 11 ಮತ್ತು 12ನೇ ತರಗತಿಗಳು ಪ್ರಾರಂಭವಾಗಿದ್ದು, ಮೊದಲ ದಿನವೇ ವಿದ್ಯಾರ್ಥಿಗಳು ಬಹಳ ಉತ್ಸಾಹದಿಂದ ತರಗತಿಗಳಿಗೆ ಹಾಜರಾಗಿರುವ ಬಗ್ಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಇದೇವ ಸಂದರ್ಭದಲ್ಲಿ ಹರ್ಷ ವ್ಯಕ್ತಪಡಿಸಿದ್ದಾರೆ. ಮೊದಲ ದಿನ ಬೆಂಗಳೂರಿನ ಮಲ್ಲೇಶ್ವರದ ಸರ್ಕಾರಿ ಪದವಿ ಪೂರ್ವ ಕಾಲೇಜು ಹಾಗೂ ನಿರ್ಮಲಾರಾಣಿ ಪ್ರೌಢ ಶಾಲೆಗೆ ಭೇಟಿ ನೀಡಿ ವಿದ್ಯಾರ್ಥಿಗಳೊಂದಿಗೆ ಸಂವಾದ ನಡೆಸಿದ್ದೆ.
ನೇರ ತರಗತಿ ನಡೆಸುವುದಕ್ಕೆ ವಿದ್ಯಾರ್ಥಿಗಳು ಬೆಂಬಲ ವ್ಯಕ್ತಪಡಿಸಿದ್ದರು ಎಂದರು. ವಿದ್ಯಾರ್ಥಿಗಳ ಹಾಜರಾತಿಯಿಂದ ಮುಂದಿನ ದಿನಗಳಲ್ಲಿ ಗಡಿ ಜಿಲ್ಲೆಗಳಲ್ಲಿಯೂ ಶಾಲೆ ಆರಂಭಿಸಲು ಚಿಂತನೆ ಮಾಡುವಂತಾಗಿದೆ. ಹೀಗಾಗಿ ಶಾಲಾ-ಕಾಲೇಜುಗಳನ್ನು ಪ್ರಾರಂಭಿಸುವ ಬಗ್ಗೆ ಜಿಲ್ಲಾಧಿಕಾರಿಗಳಿಂದ ವರದಿಯನ್ನು ಪಡೆದು ಈ ತಿಂಗಳ ಕೊನೆಯ ವಾರದಲ್ಲಿ ತಜ್ಞರುಗಳೊಂದಿಗೆ ಚರ್ಚಿಸಿ ಕ್ರಮಗಳನ್ನು ತೆಗೆದುಕೊಳ್ಳುಲಾಗುವುದು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದ್ದಾರೆ.












Click it and Unblock the Notifications