ಕಾಲೇಜ್ ಫೀಸ್ ಕಟ್ಟಲು ಪೆಟ್ರೋಲ್ ಬಂಕ್‌ನಲ್ಲಿ ಪಾರ್ಟ್ ಟೈಮ್ ಕೆಲಸ: ವಿದ್ಯಾರ್ಥಿನಿಯ ಸ್ಪೂರ್ತಿದಾಯಕ ಕಥೆ ವೈರಲ್
ಸಾಮಾನ್ಯವಾಗಿ ನಾವುಗಳು ಒಂದು ಒಳ್ಳೆಯ ಸ್ಯಾಲರಿ ಬರುವ ಕೆಲಸದಲ್ಲಿ ಇದ್ದರೂ ಕೂಡ ನಿತ್ಯದ ಟ್ರಾಫಿಕ್, ಆಫೀಸ್ ಕೆಲಸದ ಒತ್ತಡ ಹಾಗೂ ಇತರ ಸಣ್ಣಪುಣ್ಣ ಕಷ್ಟಗಳಿಗೆ ಅದೆಷ್ಟೂ ಬೇಸರ ಮಾಡಿಕೊಳ್ಳುತ್ತೇವೆ. ಆದರೆ ಬದುಕಿನಲ್ಲಿ ಏನನ್ನಾದರೂ ಕಲಿಬೇಕು ಅಥವಾ ಸಾಧಿಸಬೇಕು ಎಂಬ ಛಲವಿದ್ದರೆ ಯಾವ ಕೆಲಸವೂ ಚಿಕ್ಕದಲ್ಲ ಎಂಬುದಕ್ಕೆ ಈ ಘಟನೆಯೇ ಒಂದು ಉತ್ತಮ ಉದಾಹರಣೆ.
ಹೌದು, ಇಲ್ಲೊಬ್ಬಳು ಕಾಲೇಜು ವಿದ್ಯಾರ್ಥಿನಿ ತನ್ನ ವಿದ್ಯಾಭ್ಯಾಸದ ವೆಚ್ಚವನ್ನ ತಾನೇ ಭರಿಸಿಕೊಳ್ಳಲು ಪೆಟ್ರೋಲ್ ಬಂಕ್‌ನಲ್ಲಿ ಪಾರ್ಟ್ ಟೈಮ್ ಕೆಲಸ ಮಾಡುತ್ತಿರುವ ಸ್ಪೂರ್ತಿದಾಯಕ ಕಥೆ ಈಗ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ಮೆಚ್ಚುಗೆಗೆ ಕಾರಣವಾಗಿದೆ.

ಸಾಮಾನ್ಯವಾಗಿ ಎಲ್ಲರೂ ಪೆಟ್ರೋಲ್ ಬಂಕ್‌ಗಳಿಗೆ ಹೋಗೋದೇ ನಾವು ಇಂಧನ ಹಾಕಿಸಿಕೊಳ್ಳಲು. ಅದನ್ನಾ ಹಾಕಿಸಿಕೊಂಡು ಅಲ್ಲಿ ನಿಲ್ಲದೇ ಮುಂದೆ ಹೋಗಿ ಬಿಡುತ್ತೇವೆ. ಆದರೆ, ಇಲ್ಲೊಬ್ಬರಿಗೆ ಪೆಟ್ರೋಲ್ ಬಂಕ್‌ನಲ್ಲಿ ಆದ ಅನುಭವ ಬದುಕಿನ ಬಗ್ಗೆ ಎಲ್ಲರೂ ಹೊಸದಾಗಿ ಆಲೋಚಿಸುವಂತೆ ಮಾಡಿದೆ. ಈ ಘಟನೆಯನ್ನ ವಿನೀತ್ ಕೆ. ಎಂಬುವವರು ತಮ್ಮ ಎಕ್ಸ್ ಖಾತೆಯಲ್ಲಿ ಹಂಚಿಕೊಂಡಿದ್ದು, ಸದ್ಯ ಈ ಪೋಸ್ಟ್ ವೈರಲ್ ಆಗಿದೆ.
ಪೆಟ್ರೋಲ್ ಬಂಕ್ ಉದ್ಯೋಗಿಯ ಸ್ಪೂರ್ತಿದಾಯಕ ಕಥೆ
ಒಂದು ದಿನ ವಿನೀತ್ ಅವರು ರಾತ್ರಿ ಸುಮಾರು 9 ಗಂಟೆಯ ಸಮಯದಲ್ಲಿ ಭಾರಿ ಟ್ರಾಫಿಕ್‌ನಲ್ಲಿ ಸಿಕ್ಕಿಕೊಂಡಿದ್ದು, ಕೇವಲ 4 ಕಿಲೋಮೀಟರ್ ಕ್ರಮಿಸಲು ಸುಮಾರು 45 ನಿಮಿಷ ತೆಗೆದುಕೊಂಡಿದ್ದರು. ಆಯಾಸದಿಂದಲೇ ಪೆಟ್ರೋಲ್‌ಗಾಗಿ ಶೆಲ್ ಬಂಕ್‌ಗೆ ತೆರಳಿದಾಗ, ಅಲ್ಲಿ ಕೆಲಸ ಮಾಡುತ್ತಿದ್ದ ಯುವತಿ ಹಿಂದಿಯಲ್ಲಿ ಮಾತನಾಡಿದ್ದಳು. ಏಕೆಂದರೆ ಈ ಬಂಕ್ ನಗರದಿಂದ ಸ್ವಲ್ಪ ದೂರದಲ್ಲಿ ಇರುವುದರಿಂದ ಅಲ್ಲಿನವರೆಲ್ಲರು ಮರಾಠಿಯಲ್ಲಿ ಮಾತನಾಡುತ್ತಾರೆ. ಆಕೆಯ ಭಾಷೆ ಹಾಗೂ ಕೆಲಸವನ್ನಾ ಗಮನಿಸಿದ ವಿನೀತ್, ಕುತೂಹಲದಿಂದ ಆಕೆಯ ಹಿನ್ನೆಲೆ ಬಗ್ಗೆ ವಿಚಾರಿಸಿದ್ದಾರೆ. ಆಗ ಆ ಯುವತಿ ತಾನು ಮೂಲತಃ ರಾಯಗಡದವಳು ಎಂದು ಪರಿಚಯಿಸಿಕೊಂಡಿದ್ದಾಳೆ.
ಹೀಗೆ, ಮುಂದೆ ಮಾತನಾಡುತ್ತಾ ಹೋದಾಗ ಆಕೆ ಪೆಟ್ರೋಲ್ ಬಂಕ್‌ನಲ್ಲಿ ಕೆಲಸ ಮಾಡಲು ಕಾರಣವೇನು ಎಂಬ ಅಸಲಿ ವಿಚಾರ ಬೆಳಕಿಗೆ ಬಂದಿದೆ. ಆಕೆ ಕೇವಲ ಉದ್ಯೋಗಿಯಾಗಿರದೆ, ಉನ್ನತ ವ್ಯಾಸಂಗ ಮಾಡುತ್ತಿರುವ ಕಾಲೇಜು ವಿದ್ಯಾರ್ಥಿನಿ ಎಂಬುದು ತಿಳಿದುಬಂದಿದೆ.
ವಿದ್ಯಾರ್ಥಿಗಳ ಪಾರ್ಟ್ ಟೈಮ್ ಕೆಲಸ
ಈ ವಿದ್ಯಾರ್ಥಿನಿ ಪ್ರತಿದಿನ ಬೆಳಗ್ಗೆಯಿಂದ ಸಂಜೆಯವರೆಗೆ ಕಾಲೇಜಿಗೆ ಹೋಗಿ ವ್ಯಾಸಂಗ ಮಾಡುತ್ತಾಳೆ. ಕಾಲೇಜು ಮುಗಿದ ನಂತರ ನೇರವಾಗಿ ಪೆಟ್ರೋಲ್ ಬಂಕ್‌ಗೆ ಬಂದು ರಾತ್ರಿ 10 ಗಂಟೆಯವರೆಗೆ ಕೆಲಸ ಮಾಡುತ್ತಾಳೆ. ಅಷ್ಟೇ ಅಲ್ಲದೆ, ಆಕೆ ವಾರಾಂತ್ಯದಲ್ಲಿ ಅಂದರೆ ಶನಿವಾರ ಮತ್ತು ಭಾನುವಾರ ಬೆಳಗ್ಗೆ ಹಾಗೂ ಸಂಜೆ ಎರಡೂ ಸಮಯ ಡಬಲ್ ಶಿಫ್ಟ್‌ನಲ್ಲಿ ಕೆಲಸ ಮಾಡಿ ತನ್ನ ಕಾಲೇಜಿನ ಶುಲ್ಕಕ್ಕೆ ಬೇಕಾದ ಹಣವನ್ನು ತಾನೇ ಹೊಂದಿಸಿಕೊಳ್ಳುತ್ತಿದ್ದಾಳೆ.
"ನನಗೆ ನಿಜಕ್ಕೂ ಆಶ್ಚರ್ಯವಾಯಿತು ಮತ್ತು ಅದಕ್ಕಿಂತ ಹೆಚ್ಚಾಗಿ ಸ್ಪೂರ್ತಿ ಸಿಕ್ಕಿತು. ನಾವು ಸಣ್ಣಪುಟ್ಟ ಸಮಸ್ಯೆಗಳಿಗೆ ದೂರುತ್ತೇವೆ, ಆದರೆ ಇಲ್ಲೊಬ್ಬಳು ಯುವತಿ ತನ್ನ ಉತ್ತಮ ಭವಿಷ್ಯಕ್ಕಾಗಿ ದುಪ್ಪಟ್ಟು ಶ್ರಮಿಸುತ್ತಿದ್ದಾಳೆ. ಸ್ಪೂರ್ತಿ ಎನ್ನುವುದು ಕೇವಲ ಭಾವನೆಯಲ್ಲ, ಅದು ಏನನ್ನಾದರೂ ಮಾಡುವಂತೆ ಪ್ರೇರೇಪಿಸುತ್ತದೆ" ಎಂದು ವಿನೀತ್ ತಮ್ಮ ಪೋಸ್ಟ್‌ನಲ್ಲಿ ಬರೆದುಕೊಂಡಿದ್ದಾರೆ. ಅಷ್ಟೇ ಅಲ್ಲದೆ, ಆಕೆಗೆ ಶಿಕ್ಷಣಕ್ಕೆ ಏನಾದರೂ ಸಹಾಯ ಬೇಕಿತ್ತೇ ಎಂದೂ ಅವರು ವಿಚಾರಿಸಿದ್ದಾರೆ.
Dude… this is what inspiration looks like. ❤️
— Vineeth K (@DealsDhamaka) August 1, 2026
You don’t have to search for it. It’s literally everywhere.
I was at a Shell pump today, filling petrol ⛽️ for my car. A little frustrated with the traffic, took me 45 minutes to drive just 4 km to reach the pump. Petrol was… pic.twitter.com/PvncG5Wu07
ಸಾಮಾಜಿಕ ಜಾಲತಾಣಗಳಲ್ಲಿ ವೈರಲ್
ವಿನೀತ್ ಅವರ ಈ ಪೋಸ್ಟ್‌ನ್ನಾ ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಳ್ಳುತ್ತಿದ್ದಂತೆ ಸಾವಿರಾರು ಜನರು ಈ ವಿದ್ಯಾರ್ಥಿನಿಯ ಶ್ರಮಕ್ಕೆ ಸಲಾಂ ಎಂದಿದ್ದಾರೆ. ನಮ್ಮ ದೇಶದಲ್ಲೂ ವಿದೇಶಗಳಂತೆ ವಿದ್ಯಾರ್ಥಿಗಳ ಪಾರ್ಟ್ ಟೈಮ್ ಕೆಲಸ ಸಂಸ್ಕೃತಿ ಸಾಮಾನ್ಯವಾಗಬೇಕು ಎಂದು ಹಲವರು ಅಭಿಪ್ರಾಯಪಟ್ಟಿದ್ದಾರೆ.
ನೆಟ್ಟಿಗರೊಬ್ಬರು ಪ್ರತಿಕ್ರಿಯಿಸಿ, "ನಮ್ಮ ಪೋಷಕರು ಕಷ್ಟಪಟ್ಟು ಹಣ ಹಾಕಿ ಓದಿಸಿದರೂ ನಾವು ಕೆಲವೊಮ್ಮೆ ಸಮಯ ವ್ಯರ್ಥ ಮಾಡುತ್ತೇವೆ. ಇಂತಹ ಕಥೆಗಳನ್ನ ಓದಿದಾಗ ನಮ್ಮ ಜವಾಬ್ದಾರಿ ಅರಿವಾಗುತ್ತದೆ" ಎಂದಿದ್ದಾರೆ. ಮತ್ತೊಬ್ಬರು, "ನಮ್ಮ ಪೆಟ್ರೋಲ್ ಬಂಕ್‌ನಲ್ಲೂ ಒಬ್ಬ ವಿದ್ಯಾರ್ಥಿ ರಜಾ ದಿನಗಳಲ್ಲಿ ಬಂದು ಕೆಲಸ ಮಾಡಿ ಕಾಲೇಜು ಫೀಸ್ ಕಟ್ಟಿಕೊಳ್ಳುತ್ತಾನೆ. ಇಂತಹ ಮಕ್ಕಳು ನಿಜಕ್ಕೂ ಶ್ರಮಜೀವಿಗಳು" ಎಂದು ತಮ್ಮ ಅನುಭವ ಹಂಚಿಕೊಂಡಿದ್ದಾರೆ. ಹಲವು ದಾನಿಗಳು ಆಕೆಯ ಮುಂದಿನ ವಿದ್ಯಾಭ್ಯಾಸಕ್ಕೆ ಆರ್ಥಿಕ ಸಹಾಯ ಮಾಡುವುದಾಗಿ ಮುಂದೆ ಬಂದಿದ್ದು, ಯುವತಿಯ ಉಜ್ವಲ ಭವಿಷ್ಯಕ್ಕೆ ಶುಭ ಹಾರೈಸಿದ್ದಾರೆ.


Click it and Unblock the Notifications
