ದಸರಾ, ದೀಪಾವಳಿ ಪ್ರಯಾಣಿಕರಿಗೆ ರೈಲ್ವೆ ಸಿಹಿಸುದ್ದಿ; ಜಾಲ್ನಾ–ಯಲಹಂಕ ಸ್ಪೆಷಲ್ ಟ್ರೈನ್ ವಿಸ್ತರಣೆ
ಬೆಂಗಳೂರು: ಗೌರಿ ಗಣೇಶ ಹಬ್ಬ ಈಗಷ್ಟೇ ಮುಗಿದಿದ್ದು, ಮುಂದಿನ ದಿನಗಳಲ್ಲಿ ದಸರಾ, ದೀಪಾವಳಿ, ಛತ್ ಸೇರಿದಂತೆ ಕೆಲವು ಹಬ್ಬಗಳು ಎದುರಾಗಲಿವೆ. ಈ ಹಿನ್ನೆಲೆಯಲ್ಲಿ ಪ್ರಯಾಣಿಕರ ಅನುಕೂಲಕ್ಕಾಗಿ ಮತ್ತು ಪ್ರಯಾಣಿಕರ ದಟ್ಟಣೆ ನಿಯಂತ್ರಿಸಲು, ವಿಶೇಷ ರೈಲುಗಳ ಸೇವೆ ವಿಸ್ತರಣೆ ಆಗಲಿದೆ. ಜೊತೆಗೆ ಮೆಮೂ ರೈಲುಗಳ ಅಂತಿಮ/ಆರಂಭಿಕ ನಿಲ್ದಾಣಗಳ ನಿಲುಗಡೆ ಮುಂದುವರಿಯಲಿದೆ ಎಂದು ರೈಲ್ವೆ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ದಕ್ಷಿಣ ಮಧ್ಯ ರೈಲ್ವೆ ವ್ಯಾಪ್ತಿಯ ಜಾಲ್ನಾ-ಯಲಹಂಕ-ಜಾಲ್ನಾ ವಿಶೇಷ ರೈಲುಗಳ (ಸಂಖ್ಯೆ 07601/07602) ಸೇವೆಯನ್ನು ಹಾಲಿ ಇರುವ ದಿನಗಳು, ವೇಳಾಪಟ್ಟಿ ಮತ್ತು ನಿಲುಗಡೆಗಳೊಂದಿಗೆ ವಿಸ್ತರಿಸಲಾಗಿದೆ.

ವಿಸ್ತರಣೆಗೊಂಡ ರೈಲುಗಳ ದಿನಾಂಕ, ವಿವರ
* ಜಾಲ್ನಾ-ಯಲಹಂಕ ವಿಶೇಷ ರೈಲು (07601) 2026 ಅಕ್ಟೋಬರ್ 04 ರಿಂದ ಅಕ್ಟೋಬರ್ 25 ರವರೆಗೆ ಪ್ರತಿ ಭಾನುವಾರ ಜಾಲ್ನಾದಿಂದ ಹೊರಡಲಿದೆ.
* ಯಲಹಂಕ-ಜಾಲ್ನಾ ವಿಶೇಷ ರೈಲು (07602) 2026 ಅಕ್ಟೋಬರ್ 05 ರಿಂದ 26 ರವರೆಗೆ ಪ್ರತಿ ಸೋಮವಾರ ಯಲಹಂಕ ನಿಲ್ದಾಣದಿಂದ ಹೊರಡಲಿದೆ ಎಂದು ದಕ್ಷಿಣ ಮಧ್ಯ ರೈಲ್ವೆ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
22 ಬೋಗಿಗಳ ರೈಲುಗಳಿವು
ಜಾಲ್ನಾ-ಯಲಹಂಕ-ಜಾಲ್ನಾ ವಿಶೇಷ ರೈಲುಗಳು ಒಟ್ಟು 22 ಬೋಗಿಗಳನ್ನು ಹೊಂದಿವೆ. ಅದರಲ್ಲಿ 2 ಎಸಿ 2-ಟೈರ್, 4 ಎಸಿ 3-ಟೈರ್, 10 ಸ್ಲೀಪರ್ ಕ್ಲಾಸ್, 4 ಸಾಮಾನ್ಯ ದ್ವಿತೀಯ ದರ್ಜೆ, 1 ಬ್ರೇಕ್, ಲಗೇಜ್ ಮತ್ತು ಜನರೇಟರ್ ಕಾರ್ ಹಾಗೂ 1 ದಿವ್ಯಾಂಗ ಸ್ನೇಹಿ ಕಂಪಾರ್ಟ್ಮೆಂಟ್ ಹೊಂದಿರುವ ದ್ವಿತೀಯ ದರ್ಜೆ ಲಗೇಜ್ ಮತ್ತು ಬ್ರೇಕ್ ವ್ಯಾನ್ ಬೋಗಿಗಳು ಇರಲಿವೆ.
ಮೆಮು ರೈಲುಗಳ ತಾತ್ಕಾಲಿಕ ನಿಲ್ದಾಣ ಬದಲಾವಣೆ ವಿಸ್ತರಣೆ
ಮುಂದುವರಿ ಕಾರ್ಯಾಚರಣೆಯ ಕಾರಣದಿಂದ ಕೆಎಸ್ಆರ್ ಬೆಂಗಳೂರು-ಅಶೋಕಪುರಂ-ಕೆಎಸ್ಆರ್ ಬೆಂಗಳೂರು ಮೆಮು ರೈಲುಗಳನ್ನು (ಸಂಖ್ಯೆ 66551/66552) ತಾತ್ಕಾಲಿಕವಾಗಿ ಮೈಸೂರಿನಲ್ಲಿಯೇ ಕೊನೆಗೊಳಿಸಲು ನಿರ್ಧರಿಸಲಾಗಿದೆ. ಜೊತೆಗೆ ಅಲ್ಲಿಂದಲೇ ಆರಂಭಿಸುವ ವ್ಯವಸ್ಥೆಯನ್ನು 2027ರ ಮಾರ್ಚ್ 27 ರವರೆಗೆ ಮುಂದುವರಿಸಲಾಗುತ್ತದೆ ಎಂದು ನೈಋತ್ಯ ರೈಲ್ವೆ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಕೆಎಸ್ಆರ್ ಬೆಂಗಳೂರು-ಅಶೋಕಪುರಂ ಮೆಮು ರೈಲು (ಸಂಖ್ಯೆ 66551) ಅಶೋಕಪುರಂ ಬದಲಿಗೆ ಮೈಸೂರಿನಲ್ಲಿಯೇ ತನ್ನ ಪ್ರಯಾಣ ಕೊನೆಗೊಳಿಸಲಿದೆ. ಅಶೋಕಪುರಂ-ಕೆಎಸ್ಆರ್ ಬೆಂಗಳೂರು ಮೆಮು ರೈಲು (66552) ಅಶೋಕಪುರಂ ಬದಲಿಗೆ ಮೈಸೂರಿನಿಂದಲೇ ತನ್ನ ಪ್ರಯಾಣ ಆರಂಭಿಸುತ್ತದೆ.
ಈ ಮೊದಲು ಸೆಪ್ಟೆಂಬರ್ 26, 2026 ರವರೆಗೆ ಜಾರಿಯಲ್ಲಿದ್ದ ಈ ತಾತ್ಕಾಲಿಕ ವ್ಯವಸ್ಥೆಯನ್ನು, ಇದೀಗ ಮಾರ್ಚ್ 27, 2027 ರವರೆಗೆ ವಿಸ್ತರಣೆ ಮಾಡಲಾಗಿದೆ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.


Click it and Unblock the Notifications
