ಒಳ ಮೀಸಲಾತಿ ಜಾರಿ ಚರ್ಚೆ ಸಂದರ್ಭದಲ್ಲೇ ಮಹತ್ವದ ಮಾಹಿತಿ ಬಹಿರಂಗ!
Internal Reservation Karnataka: ರಾಜ್ಯದಲ್ಲಿ ಒಳಮೀಸಲಾತಿ ಜಾರಿ ಮಾಡಬೇಕು ಎನ್ನುವ ಆಗ್ರಹ ಹೆಚ್ಚಾಗಿದೆ. ಇದೇ ಸಂದರ್ಭದಲ್ಲಿ ಒಳಮೀಸಲಾತಿ ಜಾರಿ ಮಾಡಬೇಕೇ ಅಥವಾ ಬೇಡವೇ ಎನ್ನುವ ವಿಚಾರಕ್ಕೆ ಸಂಬಂಧಿಸಿದಂತೆ ಪರ - ವಿರೋಧ ಚರ್ಚೆಗಳು ನಡೆದಿವೆ. ಇದೀಗ ಈ ಒಳ ಮೀಸಲಾತಿ ಜಾರಿ ಚರ್ಚೆ ಸಂದರ್ಭದಲ್ಲೇ ಮಹತ್ವದ ಮಾಹಿತಿ ಬಹಿರಂಗವಾಗಿದೆ. ಅಲ್ಲದೇ ಈ ವಿಷಯದಿಂದ ಒಳ ಮೀಸಲಾತಿ ಜಾರಿ ಮಾಡಬೇಕು ಎನ್ನುವ ಒತ್ತಾಯ ಇನ್ನಷ್ಟು ಹೆಚ್ಚಳವಾಗಿದೆ.
ಪರಿಶಿಷ್ಟ ಜಾತಿಗಳ ಸಮುದಾಯದವರು ಶೈಕ್ಷಣಿಕವಾಗಿ ಹಿಂದುಳಿದಿದ್ದಾರೆ ಎನ್ನುವ ವಿಷಯ ಬಹಿರಂಗವಾಗಿದ್ದು. ಇದೀಗ ಈ ವಿಚಾರ ಭಾರೀ ಚರ್ಚೆಗೆ ಕಾರಣವಾಗಿದೆ. ನ್ಯಾಯಮೂರ್ತಿ ನಾಗಮೋಹನ್ ದಾಸ್ ಆಯೋಗವು ಒಳ ಮೀಸಲಾತಿಗೆ ಸಂಬಂಧಿಸಿದಂತೆ ಪರಿಶಿಷ್ಟ ಜಾತಿಗಳ ಸಮೀಕ್ಷೆ ನಡೆಸಿ ಸರ್ಕಾರಕ್ಕೆ ವರದಿ ಸಲ್ಲಿಕೆ ಮಾಡಿದೆ. ಈ ವರದಿಯಲ್ಲಿ ವಿದ್ಯಾಭ್ಯಾಸ ಮುಗಿಸಿದವರಲ್ಲಿ ಕೇವಲ 7.41% ರಷ್ಟು ಜನ ಮಾತ್ರ ಪದವೀಧರರಾಗಿದ್ದಾರೆ ಎಂದು ವರದಿಯಾಗಿದೆ.

ಅಲ್ಲದೇ ಸಮೀಕ್ಷಾ ವರದಿಯ ಪ್ರಕಾರ, SC ಸಮುದಾಯದ ಸಾಕ್ಷರತಾ ಪ್ರಮಾಣವು 80.85% (86.54 ಲಕ್ಷ) ಆಗಿದೆ. ಇದು 2011 ರ ಜನಗಣತಿಯ ಪ್ರಕಾರ ಎಸ್‌ಸಿಯ ಸಾಕ್ಷರತಾ ಪ್ರಮಾಣಕ್ಕಿಂತ ಹೆಚ್ಚಾಗಿದೆ. ಆದರೆ ಇದಾಗಿಯೂ ಇವರಲ್ಲಿ ಕೇವಲ 6.33 ಲಕ್ಷ (7.41%) ಜನ ಮಾತ್ರ ಪದವೀಧರರಾಗಿದ್ದಾರೆ. ಈ ಸಮುದಾಯದ 1.07 ಕೋಟಿ ಜನರಲ್ಲಿ ಕೇವಲ 5.91% ಮಾತ್ರ ಪದವೀಧರರಾಗಿದ್ದಾರೆ ಎಂದು ವರದಿ ಉಲ್ಲೇಖ ಮಾಡಿದೆ.
ಈ ಅಂಶವು ವಿದ್ಯಾಭ್ಯಾಸದಿಂದ ಈ ಸಮುದಾಯದ ವಿದ್ಯಾರ್ಥಿಗಳು ಎಷ್ಟು ಪ್ರಮಾಣದಲ್ಲಿ ಶೈಕ್ಷಣಿಕವಾಗಿ ಹಿಂದುಳಿದಿದ್ದಾರೆ ಎನ್ನುವುದನ್ನು ಬಹಿರಂಗ ಮಾಡಿದೆ. ಅದರಲ್ಲೂ ವಿಶೇಷವಾಗಿ ಉನ್ನತ ಶಿಕ್ಷಣ ಸಂಸ್ಥೆಗಳಲ್ಲಿ ಈ ಸಮುದಾಯದ ವಿದ್ಯಾರ್ಥಿಗಳು ಸಾಕಷ್ಟು ಹಿಂದುಳಿದಿದ್ದಾರೆ ಎಂದು ಉಲ್ಲೇಖಿಸಲಾಗಿದೆ. ವಿದ್ಯಾಭ್ಯಾಸವು ಒಂದು ನಿರ್ದಿಷ್ಟ ಸಮುದಾಯದ ಅಭಿವೃದ್ಧಿಯನ್ನು ಸೂಚಿಸುತ್ತದೆ. ಪದವಿ, ಸ್ನಾತಕೋತ್ತರ ಪದವಿಗಳು, ತಾಂತ್ರಿಕ ಹಾಗೂ ವೃತ್ತಿಪರ ಕ್ಷೇತ್ರಗಳಲ್ಲಿ ಈ ಸಮಯದಾಯದ ವಿದ್ಯಾರ್ಥಿಗಳು ವಿದ್ಯಾಭ್ಯಾಸ ಮಾಡುವುದಕ್ಕೆ ಸಾಧ್ಯವಾಗುತ್ತಿಲ್ಲ. ಇದಕ್ಕೆ ಸಾಮಾಜಿಕ ಹಾಗೂ ಶೈಕ್ಷಣಿಕ ಹಿನ್ನಡೆಯೇ ಮುಖ್ಯ ಕಾರಣ ಎಂದು ಹೇಳಲಾಗಿದೆ.
ಶಿಕ್ಷಣವು ಮೂಲಭೂತ ಹಕ್ಕಾಗಿರುವುದರಿಂದ, ಪ್ರಾಥಮಿಕ ಮತ್ತು ಮಧ್ಯಮ ಶಾಲಾ ಶಿಕ್ಷಣವು ಸಾರ್ವತ್ರಿಕ ಹಾಗೂ ಕಡ್ಡಾಯವಾಗಿರುವುದರಿಂದ ಹಿಂದುಳಿದ ಸಮುದಾಯ ಎಲ್ಲರಿಗೂ ಪ್ರಾಥಮಿಕ ಹಂತದ ಶಿಕ್ಷಣ ಸಿಗುತ್ತಿದೆ. ಆದರೆ ಇವರು ಉನ್ನತ ಶಿಕ್ಷಣದಿಂದ ಹಿಂದುಳಿದಿದ್ದಾರೆ ಎಂದು ವರದಿ ಉಲ್ಲೇಖಿಸಲಾಗಿದೆ.
ಪರಿಶಿಷ್ಟ ಜಾತಿ ಒಳ ಮೀಸಲಾತಿ ಪರ - ವಿರೋಧ ಚರ್ಚೆ!
ಪರಿಶಿಷ್ಟ ಜಾತಿಗೆ ಒಳ ಮೀಸಲಾತಿ ನೀಡುವ ವಿಚಾರವು ಕರ್ನಾಟಕದಲ್ಲಿ ಪರ - ವಿರೋಧ ಚರ್ಚೆಗೆ ಕಾರಣವಾಗಿದೆ. ಹಲವು ಸಮುದಾಯಗಳು ಒಳ ಮೀಸಲಾತಿ ಬೇಕು ಎಂದು ಆಗ್ರಹಿಸುತ್ತಿದ್ದರೆ ಇನ್ನೂ ಕೆಲವು ಸಮುದಾಯಗಳು ಈ ಆಯೋಗ ನೀಡಿದ ವರದಿಯು ಪಕ್ಷಪಾತದಿಂದ ಕೂಡಿದೆ. ಇಲ್ಲವೇ ನಿಖರವಾಗಿ ಇಲ್ಲ ಎಂದು ವಿರೋಧ ವ್ಯಕ್ತಪಡಿಸಿದ್ದಾರೆ. ಈ ವಿಚಾರವಾಗಿ ರಾಜ್ಯದ ವಿವಿಧ ಭಾಗದಲ್ಲಿ ಪ್ರತಿಭಟನೆಗಳು ಸಹ ನಡೆದಿವೆ.












Click it and Unblock the Notifications