Basangouda Patil Yatnal: ಯತ್ನಾಳ್ ಉಚ್ಛಾಟನೆಯಿಂದ ರಾಜ್ಯ ಬಿಜೆಪಿಗೆ ಲಾಭನಾ? ನಷ್ಟನಾ?

ಬೆಂಗಳೂರು, ಮಾರ್ಚ್ 27: ಹಿರಿಯ ನಾಯಕ, ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಅವರನ್ನು ಆರು ವರ್ಷಗಳ ಕಾಲ ಉಚ್ಛಾಟನೆ ಮಾಡುವುದರ ಮೂಲಕ ರಾಜ್ಯ ಬಿಜೆಪಿಯಲ್ಲಿ ಹೊಸದೊಂದು ಬೆಳವಣಿಗೆ ನಡೆದಿದೆ. ಯತ್ನಾಳ್ ಉಚ್ಛಾಟನೆಯಿಂದ ರಾಜ್ಯ ಬಿಜೆಪಿಯಲ್ಲಿ ಎಲ್ಲವೂ ಸರಿಹೋಗಿ ಬಿಡುತ್ತಾ? ನಾಳೆಯಿಂದಲೇ ಬಣಮುಕ್ತ ಬಿಜೆಪಿ ಆಗಿ ಬಿಡುತ್ತಾ? ಹೀಗೆಂಬ ಪ್ರಶ್ನೆಗಳಿಗೆ 'ಇಲ್ಲ' ಎಂಬ ಉತ್ತರಗಳೇ ರಾಜಕೀಯ ಪಡಸಾಲೆಯಿಂದ ಕೇಳಿ ಬರುತ್ತಿದೆ. ಹೈಕಮಾಂಡ್ ತೀರ್ಮಾನ ರಾಜ್ಯದಲ್ಲಿ ಬಿಜೆಪಿಗೆ ಅನುಕೂಲಕರ ವಾತಾವರಣವನ್ನು ನಿರ್ಮಾಣ ಮಾಡಲಿದೆ ಎನ್ನುವುದನ್ನು ಒಪ್ಪಿಕೊಳ್ಳುವುದು ಕಷ್ಟವೇ.

ಸದ್ಯದ ಪರಿಸ್ಥಿತಿಯಲ್ಲಿ ರಾಜ್ಯದ ಹಿರಿಯ ನಾಯಕರು ಮತ್ತು ಬಣ ಬಡಿದಾಟದಲ್ಲಿ ತೊಡಗಿರುವ ನಾಯಕರನ್ನು ಒಂದೆಡೆ ಸೇರಿಸಿ ಭಿನ್ನಾಭಿಪ್ರಾಯಗಳನ್ನು ಸರಿಪಡಿಸುವ ಕೆಲಸವನ್ನು ಹೈಕಮಾಂಡ್ ನಾಯಕರು ಮಾಡಬಹುದಿತ್ತು. ಆದರೆ ಅದ್ಯಾವುದನ್ನೂ ಮಾಡದೆ ಉಚ್ಛಾಟನೆಯನ್ನು ಮಾಡಿ ಬಿಟ್ಟರೆ ಸಮಸ್ಯೆಗಳಿಗೆ ಪರಿಹಾರ ಸಿಕ್ಕಿದಂತಾಯಿತಾ? ಈಗಾಗಲೇ ರಾಜ್ಯದಲ್ಲಿ ಬಿಜೆಪಿ ಕಥೆ ಊರು ಬಾಗಿಲಾಗಿದೆ. 2023ರ ವಿಧಾನ ಸಭಾ ಚುನಾವಣೆ ಬಳಿಕ ಪಕ್ಷ ದುರ್ಬಲವಾಗುತ್ತಾ ಹೋಗುತ್ತಿದೆ. ಜತೆಗೆ ನಾಯಕಗಳ ನಡುವಿನ ಅಸಮಾಧಾನಗಳು ಪಕ್ಷ ಸಂಘಟನೆಗೆ ಮಾರಕವಾಗುತ್ತಿದೆ. ಅದರಲ್ಲೂ ಬಿ.ವೈ.ವಿಜಯೇಂದ್ರ ಅವರು ರಾಜ್ಯಾಧ್ಯಕ್ಷರಾದ ಮೇಲೆ ಹಲವು ಹಿರಿಯ ನಾಯಕರು ತಮಗೆ ರಾಜ್ಯಾಧ್ಯಕ್ಷ ಸ್ಥಾನ ಸಿಕ್ಕಿಲ್ಲ ಎಂಬ ಕಾರಣಕ್ಕೆ ಪಕ್ಷ ಸಂಘಟನೆಯಲ್ಲಿ ಆಸಕ್ತಿಯನ್ನೇ ಕಳೆದು ಕೊಂಡಿದ್ದಾರೆ.

Impact of Basangouda Patil Yatnal Expulsion on Karnataka BJP Benefit or Loss

2021ರಲ್ಲಿ ಬಿ.ಎಸ್.ಯಡಿಯೂರಪ್ಪ ಅವರನ್ನು ಸಿಎಂ ಸ್ಥಾನದಿಂದ ಕೆಳಗಿಳಿಸಿ ಬಸವರಾಜ ಬೊಮ್ಮಾಯಿ ಅವರನ್ನು ಸಿಎಂ ಸ್ಥಾನಕ್ಕೆ ತಂದ ಹೈಕಮಾಂಡ್ ಆ ನಂತರದ ಬೆಳವಣಿಗೆಯಿಂದ ಬೆಚ್ಚಿ ಬಿದ್ದಿತು. 2023ರ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಹೀನಾಯ ಸೋಲು ಕಂಡಾಗ ಎಚ್ಚೆತ್ತುಕೊಂಡ ಹೈಕಮಾಂಡ್ ಬಿ.ಎಸ್.ಯಡಿಯೂರಪ್ಪ ಅವರನ್ನು ಪಕ್ಷದಿಂದ ದೂರವಿಟ್ಟ ಪರಿಣಾಮ ರಾಜ್ಯದಲ್ಲಿ ಸೋಲು ಕಾಣುವಂತಾಯಿತು. ಹೀಗಾಗಿ ಪಕ್ಷದಿಂದ ದೂರ ಹೋದ ಲಿಂಗಾಯಿತ ಮತವನ್ನು ಮತ್ತೆ ಸೆಳೆದುಕೊಳ್ಳಲು ಬಿ.ಎಸ್.ಯಡಿಯೂರಪ್ಪ ಅವರ ಪುತ್ರ ಬಿ.ವೈ.ವಿಜಯೇಂದ್ರ ಅವರಿಗೆ ರಾಜ್ಯಾಧ್ಯಕ್ಷ ಸ್ಥಾನವನ್ನು ನೀಡಲಾಯಿತು.

Take a Poll

ತಮ್ಮವರ ವಿರುದ್ಧವೇ ಹರಿಹಾಯುತ್ತಾ ಬಂದ ಯತ್ನಾಳ್

ಇಲ್ಲಿ ಆಗಿದ್ದೇ ಬೇರೆ ಹೈಕಮಾಂಡ್ ಏನು ಅಂದುಕೊಂಡಿತ್ತೋ ಅದು ಉಲ್ಟಾ ಆಗಿತ್ತು. ವಿಜಯೇಂದ್ರ ಅವರಿಗೆ ರಾಜ್ಯಾಧ್ಯಕ್ಷ ಸ್ಥಾನ ನೀಡಿದ್ದನ್ನು ಮೊದಲಿಗೆ ವಿರೋಧಿಸಿದವರೇ ಲಿಂಗಾಯತ ನಾಯಕರು. ಅವತ್ತು ರಾಜ್ಯಾಧ್ಯಕ್ಷ ಸ್ಥಾನಕ್ಕೆ ದೊಡ್ಡ ಮಟ್ಟದಲ್ಲಿ ಆಕಾಂಕ್ಷಿಗಳಿದ್ದರು. ಬಸನಗೌಡ ಪಾಟೀಲ್ ಯತ್ನಾಳ್. ಸಿ.ಟಿ.ರವಿ, ಸುನೀಲ್ ಕುಮಾರ್ ಹೀಗೆ ಹಲವರು ತೆರೆಮರೆಯ ಪ್ರಯತ್ನ ನಡೆಸಿದ್ದರು. ಆದರೆ ಯಾರಿಗೂ ಸೊಪ್ಪು ಹಾಕದ ಹೈಕಮಾಂಡ್ ಬಿ.ವೈ.ವಿಜಯೇಂದ್ರ ಅವರಿಗೆ ರಾಜ್ಯಾಧ್ಯಕ್ಷ ಪಟ್ಟವನ್ನು ನೀಡಿತ್ತು. ಇದು ಹಲವು ಹಿರಿಯ ನಾಯಕರ ಅಸಮಾಧಾನಕ್ಕೆ ಕಾರಣವಾದರೂ ಕೆಲವರು ಹೊರಗೆ ತೋರಿಸಿ ಕೊಳ್ಳದೆ ಒಳಗೊಳಗೆ ಹಿಡಿಶಾಪ ಹಾಕಿಕೊಂಡು ಸುಮ್ಮನಾಗಿದ್ದರು.

Impact of Basangouda Patil Yatnal Expulsion on Karnataka BJP Benefit or Loss

ಬಸನಗೌಡ ಯತ್ನಾಳ್ ಮಾತ್ರ ಸುಮ್ಮನಾಗಲಿಲ್ಲ. ಅಧ್ಯಕ್ಷ ಸ್ಥಾನ ಸಿಗದಿದ್ದರೂ ವಿಧಾನ ಸಭೆಯಲ್ಲಿ ವಿರೋಧಪಕ್ಷದ ಸ್ಥಾನವಾದರೂ ಸಿಗುತ್ತದೆ ಎಂದು ನಂಬಿದ್ದರು. ಆದರೆ ಅದು ಕೂಡ ಸಿಗಲಿಲ್ಲ. ಆದರೆ ಅದಾಗಲೇ ಬಿಜೆಪಿ ಅಧಿಕಾರದಲ್ಲಿದ್ದಾಗಲೇ ಅವರಿಗೆ ಸಚಿವ ಸ್ಥಾನ ಕೊಡುತ್ತಾರೆ ಎಂದು ನಂಬಿದ್ದರು. ಆದರೆ ಕೊಟ್ಟಿರಲಿಲ್ಲ ಆ ಆಕ್ರೋಶವೂ ಅವರಲ್ಲಿ ಒಳಗೊಳಗೆ ಕುದಿಯುತ್ತಿತ್ತು. ನಾನು ಅಟಲ್ ಬಿಹಾರಿ ವಾಜಪೇಯಿ ಅವರ ಸಂಪುಟದಲ್ಲಿ ಕೇಂದ್ರ ಸಚಿವನಾಗಿದ್ದವನು ನನ್ನನ್ನು ರಾಜ್ಯ ಸಂಪುಟಕ್ಕೆ ಪರಿಗಣಿಸಿಲ್ಲ ಎಂಬ ಕೋಪವಂತು ಇದ್ದೇ ಇತ್ತು. ಹೀಗಾಗಿ ಆಗಾಗ್ಗೆ ಸಮಯ ಸಿಕ್ಕಾಗಲೆಲ್ಲ ತಮ್ಮದೇ ಪಕ್ಷದ ಬಗ್ಗೆ ಮಾತನಾಡ ತೊಡಗಿದ್ದರು.

ಆ ಹೇಳಿಕೆಯೊಂದು ಕಾಂಗ್ರೆಸ್‌ಗೆ ಪ್ರಬಲ ಅಸ್ತ್ರವಾಗಿತ್ತು

2500 ಕೋಟಿ ಕೊಟ್ಟರೆ ಸಿಎಂ ಆಗಬಹುದು ಎಂಬ ಅವರ ಮಾತು ಅವತ್ತು ಕಾಂಗ್ರೆಸ್ ಗೆ ಅಸ್ತ್ರವಾಗಿ ಸಿಕ್ಕಿತ್ತು. ಇವತ್ತಿಗೂ ಕಾಂಗ್ರೆಸ್ ನವರು ಬಿಜೆಪಿಯನ್ನು ಟೀಕಿಸುವಾಗಲೆಲ್ಲ ಆ ಮಾತನ್ನು ನೆನಪಿಸಿಕೊಳ್ಳುತ್ತಾರೆ. ಹೀಗಾಗಿ ಸ್ವತಃ ಯತ್ನಾಳ್ ಅವರೇ ಹಲವು ಸಂದರ್ಭಗಳಲ್ಲಿ ಬಿಜೆಪಿ ನಾಯಕರನ್ನು ಮಾತಿನಲ್ಲಿಯೇ ಬೆತ್ತಲೆ ಮಾಡಿದ್ದಾರೆ. ಅದರಲ್ಲೂ ಬಿ.ಎಸ್.ಯಡಿಯೂರಪ್ಪ ಮತ್ತು ಬಿ.ವೈ.ವಿಜಯೇಂದ್ರ ಅವರನ್ನು ಸಮಯ ಸಿಕ್ಕಾಗಲೆಲ್ಲಾ ತೆಗಳುತ್ತಲೇ ಬಂದಿದ್ದಾರೆ. ಆದರೆ ಇಷ್ಟರವರಗೆ ಕಾದು ನೋಡುವ ತಂತ್ರ ಅನುಸರಿಸಿರುವ ಹೈಕಮಾಂಡ್ ಇದೀಗ ಉಚ್ಛಾಟನೆ ಮಾಡಿದೆ.

Impact of Basangouda Patil Yatnal Expulsion on Karnataka BJP Benefit or Loss

ಯತ್ನಾಳ್ ಅವರನ್ನು ಉಚ್ಛಾಟನೆ ಮಾಡಿ ಇನ್ನೊಂದಷ್ಟು ಮಂದಿಗೆ ನೋಟೀಸ್ ನೀಡಿ ನಮ್ಮದು ಶಿಸ್ತಿನ ಪಕ್ಷ ಎಂದು ಬೆನ್ನು ತಟ್ಟಿಕೊಂಡಿರುವ ಹೈಕಮಾಂಡ್ ಮುಂದಿನ ಬೆಳವಣಿಗೆ ಬಗ್ಗೆ ಆಲೋಚಿಸಿದಂತೆ ಕಾಣಿಸುತ್ತಿಲ್ಲ. ಯತ್ನಾಳ್ ಉಚ್ಛಾಟನೆಯಿಂದ ಬಿಜೆಪಿಗೆ ಲಾಭವಾಗುತ್ತೋ ಇಲ್ಲವೋ ಗೊತ್ತಿಲ್ಲ ಆದರೆ ಇದರ ಲಾಭವನ್ನು ಕಾಂಗ್ರೆಸ್ ಮಾಡಿಕೊಳ್ಳುವ ಎಲ್ಲ ಲಕ್ಷಣಗಳು ಕಾಣಿಸುತ್ತಿವೆ. ಯತ್ನಾಳ್ ಅವರನ್ನು ಗುರಿಯಾಗಿಸಿಕೊಂಡು ಬಿಜೆಪಿ ಮೇಲೆ ಮಾತಿನ ಗುಂಡು ಹಾರಿಸುವ ಪ್ರಯತ್ನ ಮಾಡುವುದರೊಂದಿಗೆ ಇಡೀ ಪಂಚಮಸಾಲಿ ಸಮುದಾಯವನ್ನು ಬಿಜೆಪಿ ವಿರುದ್ಧ ತಿರುಗಿ ಬೀಳುವಂತೆ ಮಾಡಿದರೂ ಅಚ್ಚರಿಯಿಲ್ಲ.

ಉಚ್ಛಾಟನೆ ಸುತ್ತಲೂ ಲಾಭ ನಷ್ಟದ ಲೆಕ್ಕಾಚಾರ

ರಾಜ್ಯದಲ್ಲಿ ಹಿಂದೂಗಳ ಮೇಲೆ ಏನೇ ದೌರ್ಜನ್ಯ ನಡೆದರೂ ಮೊದಲಿಗೆ ಎದ್ದೇಳುತ್ತಿದ್ದದ್ದು, ಯತ್ನಾಳ್. ಹೀಗಾಗಿಯೇ ಹಿಂದೂ ಹುಲಿ ಎಂಬ ಹೆಸರು ಪಡೆದಿದ್ದರು. ಹಿಂದೂ ಸಂಘಟನೆಗಳು ಮತ್ತು ಪಂಚಮಸಾಲಿ ಸಮುದಾಯ ಉಚ್ಛಾಟನೆಯನ್ನು ಯಾವ ರೀತಿ ನೋಡುತ್ತದೆಯೋ ಗೊತ್ತಿಲ್ಲ. ಉಚ್ಛಾಟನೆ ಮಾಡಿರುವುದು ವಿಜಯೇಂದ್ರ ಬಣವನ್ನು ಹೊರತುಪಡಿಸಿ ಉಳಿದಂತೆ ಯಾವುದೇ ನಾಯಕರಿಗೆ ಸಮಾಧಾನ ತಂದಂತೆ ಕಾಣಿಸುತ್ತಿಲ್ಲ. ಏಕೆಂದರೆ ಯತ್ನಾಳ್ ಅವರನ್ನು ಬೆಂಬಲಿಸುವ ಬಹಳಷ್ಟು ನಾಯಕರು ಬಿಜೆಪಿಯಲ್ಲಿದ್ದಾರೆ. ಅವರು ಈಗ ಮೌನಕ್ಕೆ ಜಾರಿದಂತೆ ಗೋಚರಿಸಿದರೂ ಅವರ ನಿಲುವು ಏನು ಎಂಬುದು ಕೂಡ ಇಲ್ಲಿ ಮುಖ್ಯವಾಗುತ್ತದೆ.

ಈಗಾಗಲೇ ರಾಜ್ಯ ಬಿಜೆಪಿಯಲ್ಲಿ ಬಣಬಡಿದಾಟದಿಂದಾಗಿ ಕಾರ್ಯಕರ್ತರು ಅತಂತ್ರರಾಗಿದ್ದಾರೆ. ಹೀಗಾಗಿ ಪಕ್ಷ ಸಂಘಟನೆ ಹಳ್ಳಹಿಡಿದಿದೆ. ಇನ್ನು ಇರುವ ನಾಯಕರಲ್ಲಿ ಹಲವರು ಹಲವು ದಿಕ್ಕು ಎಂಬಂತಾಗಿದೆ. ಹೀಗಾಗಿ ಒಗ್ಗಟ್ಟು ಪ್ರದರ್ಶನ ಮರೀಚಿಕೆಯಾಗಿದೆ. ಇದುವರೆಗೆ ಜಿಲ್ಲಾವಾರು ಮಟ್ಟದಲ್ಲಿ ಕಾರ್ಯಕರ್ತರ ಸಮಾವೇಶ, ನಾಯಕರ ಸಭೆ, ಪಕ್ಷ ಸಂಘಟನೆ ಕುರಿತಂತೆ ಚರ್ಚೆ ಯಾವುದೂ ನಡೆದಂತೆ ಕಾಣುತ್ತಿಲ್ಲ. ಅತ್ತ ಆಡಳಿತ ಪಕ್ಷ ಕಾಂಗ್ರೆಸ್ ರಾಜ್ಯದಲ್ಲಿ ಗಟ್ಟಿಯಾಗುತ್ತಿದ್ದರೆ, ಇತ್ತ ವಿಪಕ್ಷ ಬಿಜೆಪಿ ದುರ್ಬಲವಾಗುತ್ತಿದೆ. ಈಗಿನ ಬೆಳವಣಿಗೆಯಿಂದ ಬಿ.ವೈ.ವಿಜಯೇಂದ್ರ ಬಣಕ್ಕೆ ಲಾಭವಾಗಿರಬಹುದೇನೋ ಆದರೆ ರಾಜ್ಯ ಬಿಜೆಪಿಗೆ ಲಾಭನಾ? ನಷ್ಟನಾ? ಎನ್ನುವುದು ಮುಂದಿನ ದಿನಗಳಲ್ಲಿ ಗೊತ್ತಾಗಲಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+