Breaking: ಕರ್ನಾಟಕದ 11 ಜಿಲ್ಲೆಗಳಿಗೆ 2 ದಿನ ಯೆಲ್ಲೋ ಅಲರ್ಟ್
ಬೆಂಗಳೂರು, ಅಕ್ಟೋಬರ್ 09: ಕರ್ನಾಟಕದ ವಿವಿಧ ಜಿಲ್ಲೆಗಳಲ್ಲಿ ಇನ್ನೂ ಎರಡು ದಿನ ಮಳೆ ಅಬ್ಬರ ಇರಲಿದೆ. ಹೀಗಾಗಿ ರಾಜ್ಯದ ಒಟ್ಟು 11 ಜಿಲ್ಲೆಗಳಿಗೆ ಹವಾಮಾನ ಇಲಾಖೆ ಯೆಲ್ಲೋ ಅಲರ್ಟ್ ಘೋಷಣೆ ಮಾಡಿದೆ.
ರಾಜ್ಯದಲ್ಲಿ ನಿತ್ಯ ಒಂದಲ್ಲ ಒಂದು ಜಿಲ್ಲೆಗಳಲ್ಲಿ ಮಳೆಯಾಗುತ್ತಿದೆ. ಈ ಪೈಕಿ ಕಳೆದ ಕೆಲವು ದಿನಗಳು ಧಾರಾಕಾರ ಮಳೆ ಕಂಡಿದ್ದ ಕರಾವಳಿ ಜಿಲ್ಲೆಗಳು ಹಾಗೂ ಉತ್ತರ ಒಳನಾಡಿನ ಜಿಲ್ಲೆಗಳಲ್ಲಿ ಇದೀಗ ಮಳೆ ದುರ್ಬಲಗೊಂಡಿದೆ. ದಕ್ಷಿಣ ಒಳನಾಡಿನ ಜಿಲ್ಲೆಗಳಲ್ಲಿ ಒಂದೆರಡು ಕಡೆಗಳಲ್ಲಿ ಮಳೆ ತೀವ್ರಗೊಳ್ಳುವ ಲಕ್ಷಣಗಳಿವೆ.
ಈ ಭಾಗದ ಜಿಲ್ಲೆಗಳಲ್ಲಿ ಅಕ್ಟೋಬರ್ 10 ಮತ್ತು 11ರಂದು ಗುಡುಗು, ಮಿಂಚು ಸಹಿತ ಸಾಧಾರಣದಿಂದ ಭಾರೀ ಪ್ರಮಾಣದಲ್ಲಿ ಮಳೆ ಸುರಿಯಲಿದೆ. ಹೀಗಾಗಿ ತುಮಕೂರು, ರಾಮನಗರ, ಕೋಲಾರ, ಮಂಡ್ಯ, ಚಿತ್ರದುರ್ಗ, ಚಿಕ್ಕಬಳ್ಳಾಪುರ, ಚಾಮರಾಜನಗರ, ಬೆಂಗಳೂರು ನಗರ ಹಾಗೂ ಬೆಂಗಳೂರು ಗ್ರಾಮಾಂತರ ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ ನೀಡಲಾಗಿದೆ. ಇದರೊಂದಿಗೆ ಉತ್ತರ ಒಳನಾಡಿನ ಎರಡು ಜಿಲ್ಲೆಗಳಾದ ರಾಯಚೂರು ಮತ್ತು ಯಾದಗಿರಿ ಜಿಲ್ಲೆಗಳಿಗೆ ಸಹ ಅಲರ್ಟ್ ಘೋಷಿಸಲಾಗಿದೆ.

ಉಳಿದಂತೆ ರಾಜ್ಯ ಕೆಲವು ಜಿಲ್ಲೆಗಳಲ್ಲಿ ಅಲ್ಲಲ್ಲಿ ಮೋಡ ಕವಿದ ವಾತಾವರಣ ಹಾಗೂ ತುಂತುರು ಮಳೆ ಕಾಣಬಹುದಾಗಿದ್ದು, ಕೆಲವು ಜಿಲ್ಲೆಗಳಲ್ಲಿ ಬಿಸಿಲಿನ ತಾಪ ಮುಂದುವರಿದಿದೆ. ಇದರ ಹೊರತು ಹವಾಮಾನದಲ್ಲಿ ಯಾವುದೇ ಗಂಭೀರ ರೂಪದ ಬದಲಾವಣೆಗಳು ಇಲ್ಲ ಎಂದು ಹವಾಮಾನ ಇಲಾಖೆ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಕರ್ನಾಟಕದಲ್ಲಿ ಕಳೆದ 24 ಗಂಟೆಯಲ್ಲಿ ತುಮಕೂರು, ಬೆಂಗಳೂರು ಗ್ರಾಮಾಂತರ, ಬೀದರ್, ಚಿಕ್ಕಬಳ್ಳಾಪುರ ಭಾಗದಲ್ಲಿ ಸಾಧಾರಣವಾಗಿ ಮಳೆ ದಾಖಲಾಗಿದೆ.
ಕಲಬುರಗಿಯಲ್ಲಿ ರಾಜ್ಯದ ಗರಿಷ್ಠ ತಾಪಮಾನ 32ಡಿಗ್ರಿ ಸೆಲ್ಸಿಯಸ್ ದಾಖಲಾಗಿದ್ದು, ಕನಿಷ್ಠ ತಾಪಮಾನ ಬೆಳಗಾವಿಯಲ್ಲಿ 17.6 ಡಿಗ್ರಿ ಸೆಲ್ಸಿಯಸ್ ದಾಖಲಾಗಿದೆ. ಮುಂದಿನ ಎರಡು ದಿನ ರಾಜ್ಯದಲ್ಲಿ ಇದೇ ವಾತಾವರಣ ಮುಂದುವರಿಯಲಿದೆ ಎಂದು ಹವಾಮಾನ ಇಲಾಖೆ ವರದಿ ತಿಳಿಸಿದೆ.












Click it and Unblock the Notifications