2 ದಿನ ಭಾರಿ ಮಳೆ; 15 ಜಿಲ್ಲೆಗಳಿಗೆ Yellow ಅಲರ್ಟ್
ಬೆಂಗಳೂರು, ಜೂನ್ 30 : ಕರ್ನಾಟಕದ 15 ಜಿಲ್ಲೆಗಳಲ್ಲಿ ಎರಡು ದಿನಗಳ ಕಾಲ ಭಾರಿ ಮಳೆಯಾಗುವ ಮುನ್ಸೂಚನೆ ನೀಡಲಾಗಿದೆ. ಬೆಂಗಳೂರು ನಗರದಲ್ಲಿ ಮಂಗಳವಾರ ಮುಂಜಾನೆಯೇ ಮಳೆ ಆರಂಭವಾಗಿದೆ.
ಭಾರತೀಯ ಹವಾಮಾನ ಇಲಾಖೆ ಕರಾವಳಿ, ದಕ್ಷಿಣ ಒಳನಾಡಿನ ಜಿಲ್ಲೆಗಳಲ್ಲಿ ಜೂನ್ 30 ಮತ್ತು ಜುಲೈ 01ರಂದು ಭಾರಿ ಮಳೆಯಾಗಲಿದೆ ಎಂದು ಹೇಳಿದೆ. ಗುಡುಗು ಸಹಿತ ಮಳೆಯಾಗಲಿದ್ದು, ಯೆಲ್ಲೊ ಅಲರ್ಟ್ ನೀಡಿದೆ.
ಉತ್ತರ ಕನ್ನಡ, ದಕ್ಷಿಣ ಕನ್ನಡ, ಉಡುಪಿ, ಬೆಂಗಳೂರು, ಬೆಂಗಳೂರು ಗ್ರಾಮಾಂತರ, ಚಿಕ್ಕಬಳ್ಳಾಪುರ, ಚಿಕ್ಕಮಗಳೂರು, ಹಾಸನ, ಕೊಡಗು, ಕೋಲಾರ, ಮಂಡ್ಯ ಜಿಲ್ಲೆಗಳಲ್ಲಿ ಭಾರಿ ಮಳೆಯಾಗಲಿದೆ.

ಮೈಸೂರು, ರಾಮನಗರ, ಶಿವಮೊಗ್ಗ ಮತ್ತು ತುಮಕೂರು ಜಿಲ್ಲೆಗಳಲ್ಲಿಯೂ ಮಳೆಯ ಮುನ್ಸೂಚನೆ ನೀಡಲಾಗಿದೆ. ಸೋಮವಾರ ಸಂಜೆ ಶಿವಮೊಗ್ಗ ಜಿಲ್ಲೆಯ ವಿವಿಧ ಪ್ರದೇಶಗಳಲ್ಲಿ ಮಳೆಯಾಗಿದೆ.
ಮುಂದಿನ 48 ಗಂಟೆಗಳ ಕಾಲ ಉತ್ತರ ಒಳನಾಡಿನಲ್ಲಿ ಮಳೆ ಕಡಿಮೆ ಇರಲಿದೆ. ಕರಾವಳಿ ಭಾಗದಲ್ಲಿ ಮೀನುಗಾರರು ಸಮುದ್ರಕ್ಕೆ ಇಳಿಯದಂತೆ ಎಚ್ಚರಿಕೆ ನೀಡಲಾಗಿದೆ. ಗಂಟೆಗೆ 40 ರಿಂದ 50 ಕಿ. ಮೀ. ವೇಗದಲ್ಲಿ ಗಾಳಿ ಬೀಸಲಿದೆ ಎಂದು ಮುನ್ಸೂಚನೆ ಕೊಡಲಾಗಿದೆ.
ಬೆಂಗಳೂರು ನಗರದಲ್ಲಿ ಮಂಗಳವಾರ ಮುಂಜಾನೆಯೇ ತುಂತುರು ಮಳೆ ಆರಂಭವಾಗಿದೆ. ಸೋಮವಾರದಿಂದಲೇ ಮೋಡ ಕವಿದ ವಾತಾವರಣವಿತ್ತು.
ಸೋಮವಾರ ಮಂಗಳೂರಿನಲ್ಲಿ ಅತಿ ಹೆಚ್ಚಿನ ಅಂದರೆ 6 ಸೆಂ. ಮೀ. ಮಳೆಯಾಗಿದೆ. ಮೈಸೂರು, ಕುಕ್ಕೆ ಸುಬ್ರಮಣ್ಯದಲ್ಲಿ 5, ಭಾಗಮಂಡಲದಲ್ಲಿ 4, ಪುತ್ತೂರು ಮತ್ತು ಚಿಕ್ಕಮಗಳೂರಿನಲ್ಲಿ 3 ಸೆಂ. ಮೀ. ಮಳೆಯಾದ ವರದಿಯಾಗಿದೆ.












Click it and Unblock the Notifications