ಡಿಕೆಶಿ ಅಕ್ರಮ ಆಸ್ತಿ ಗಳಿಕೆ ಪ್ರಕರಣ; ಕೇಸ್ ಡೈರಿ ಸಲ್ಲಿಸಲು ಸೂಚನೆ
ಬೆಂಗಳೂರು, ಆಗಸ್ಟ್ 01; ಆದಾಯಕ್ಕೂ ಮೀರಿದ ಅಕ್ರಮ ಆಸ್ತಿಗಳಿಕೆ ಆರೋಪದಡಿ ಕರ್ನಾಟಕದ ಉಪಮುಖ್ಯಮಂತ್ರಿ, ಕೆಪಿಸಿಸಿ ಅಧ್ಯಕ್ಷ ಡಿ. ಕೆ. ಶಿವಕುಮಾರ್ ವಿರುದ್ಧ ಸಿಬಿಐ ದಾಖಲಿಸಿರುವ ಪ್ರಕರಣದ ಸಂಬಂಧ ಹೈಕೋರ್ಟ್ ಎರಡು ದಿನಗಳಲ್ಲಿ ಕೇಸ್ ಡೈರಿ ಸಲ್ಲಿಸಲು ಸೂಚನೆ ನೀಡಿದೆ. ಅಲ್ಲದೆ, ತಮ್ಮ ವಿರುದ್ಧದ ಎಫ್‌ಐಆರ್ ರದ್ದುಪಡಿಸುವಂತೆ ಕೋರಿ ಡಿ.ಕೆ. ಶಿವಕುಮಾರ್ ಸಲ್ಲಿಸಿರುವ ಅರ್ಜಿ ವಿಚಾರಣೆ ಪೂರ್ಣಗೊಳಿಸಿರುವ ಕೋರ್ಟ್ ತೀರ್ಪು ಕಾಯ್ದಿರಿಸಿದೆ.
ಡಿ. ಕೆ. ಶಿವಕುಮಾರ್ ಅರ್ಜಿಯನ್ನು ಆಲಿಸಿದ ನ್ಯಾಯಮೂರ್ತಿ ಕೆ. ನಟರಾಜನ್ ಅವರಿದ್ದ ಏಕಸದಸ್ಯ ನ್ಯಾಯಪೀಠ ಸೋಮವಾರ ಪ್ರಕರಣಕ್ಕೆ ಸಂಬಂಧಿಸಿದಂತೆ ತನಿಖೆ ನಡೆಸಿರುವ ಸಿಬಿಐ ತನಿಖಾಧಿಕಾರಿ ಕೇಸ್ ಡೈರಿಯನ್ನು ಎರಡು ದಿನಗಳ ಒಳಗಾಗಿ ಮುಚ್ಚಿದ ಲಕೋಟೆಯಲ್ಲಿ ಕೋರ್ಟ್‌ಗೆ ಸಲ್ಲಿಸುವಂತೆ ಆದೇಶಿಸಿದೆ.

ಡಿ. ಕೆ. ಶಿವಕುಮಾರ್ ಪರ ಹಿರಿಯ ವಕೀಲರು ವಾದ ಮಂಡಿಸಿ, ದಾಳಿ ನಡೆಸಲಾದ ದಿನಕ್ಕೂ ಪ್ರಕರಣ ದಾಖಲಿಸಿರುವ ದಿನಕ್ಕೂ ಅಜಗಜಾಂತರ ವ್ಯತ್ಯಾಸವಿದೆ. ಹಾಗಾಗಿ ಸಿಬಿಐ ದಾಖಲಿಸಿರುವ ಎಫ್‌ಐಆರ್ ಕಾನೂನು ಬಾಹಿರ ಎಂದು ಆಕ್ಷೇಪಿಸಿದರು.
ಕೇಸ್ ಡೈರಿ ಸಲ್ಲಿಕೆ ಮಾಡಿ; ಇದಕ್ಕೆ ಪ್ರತಿಯಾಗಿ ಸಿಬಿಐ ಪರ ವಕೀಲರು ವಾದ ಮಂಡಿಸಿ, ಶಿವಕುಮಾರ್ ಪರ ಹಿರಿಯ ವಕೀಲರಿಬ್ಬರ ವಾದಗಳನ್ನು ಬಲವಾಗಿ ತಳ್ಳಿ ಹಾಕಿದರು. ಸುದೀರ್ಘ ವಾದ ಮಂಡಿಸಿದರು. ಅಂತಿಮವಾಗಿ ಶಿವಕುಮಾರ್ ಪರ ಹಿರಿಯ ವಕೀಲರು, ಪ್ರಕರಣಕ್ಕೆ ಸಂಬಂಧಿಸಿದ ಕೇಸ್ ಡೈರಿಯನ್ನು ನ್ಯಾಯಾಲಯಕ್ಕೆ ಸಲ್ಲಿಸುವಂತೆ ನಿರ್ದೇಶಿಸಬೇಕು ಎಂದು ನ್ಯಾಯಪೀಠಕ್ಕೆ ಮನವಿ ಮಾಡಿದರು.
ಮನವಿ ಪುರಸ್ಕರಿಸಿದ ನ್ಯಾಯಪೀಠ, ಎರಡು ದಿನಗಳ ಒಳಗಾಗಿ ಕೇಸ್ ಡೈರಿಯನ್ನು ನ್ಯಾಯಾಲಯಕ್ಕೆ ಮುಚ್ಚಿದ ಲಕೋಟೆಯಲ್ಲಿ ಸಲ್ಲಿಸಿ ಎಂದು ಸಿಬಿಐ ಪರ ವಕೀಲರಿಗೆ ನಿರ್ದೇಶಿಸಿತು. ಅಂತೆಯೇ, ವಿಚಾರಣೆಯನ್ನು ಶೀಘ್ರವೇ ಮುಕ್ತಾಯಗೊಳಿಸಬೇಕು ಎಂಬ ಸಿಬಿಐ ಅವರ ಕೋರಿಕೆಯನ್ನೂ ಪುರಸ್ಕರಿಸಿತು, ವಿಚಾರಣೆ ಪೂರ್ಣಗೊಳಿಸಿ ತೀರ್ಪು ಕಾಯ್ದಿರಿಸಿರುವುದಾಗಿ ಆದೇಶಿಸಿತು.
ನವದೆಹಲಿ, ಬೆಂಗಳೂರು ಸೇರಿದಂತೆ ಇತರೆಡೆ ಡಿ. ಕೆ. ಶಿವಕುಮಾರ್‌ಗೆ ಸೇರಿದ ಮನೆಗಳ ಮೇಲೆ 2017ರ ಆಗಸ್ಟ್ 2ರಂದು ಆದಾಯ ತೆರಿಗೆ ಇಲಾಖೆ ದಾಳಿ ನಡೆಸಲಾಗಿತ್ತು. ಈ ವೇಳೆ ಅವರ ನಿಕಟವರ್ತಿಗಳ ಮನೆಯಲ್ಲಿ ದೊರೆತಿದ್ದ ಹಣವನ್ನು, ಶಿವಕುಮಾರ್ ಬೇನಾಮಿಯಾಗಿ ಇರಿಸಿದ್ದಾರೆ ಎಂದು ಆರೋಪಿಸಿ ಸಿಬಿಐ 2020ರ ಅ. 3ರಂದು ಎಫ್‌ಐಆರ್ ದಾಖಲಿಸಿತ್ತು.
ಆದಾಯ ತೆರಿಗೆ ಕಾಯ್ದೆ-1961ರ ಕಲಂ 276 ಸಿ (1), 277 ಮತ್ತು ಭಾರತೀಯ ದಂಡ ಸಂಹಿತೆಯ (ಐಪಿಸಿ) ಕಲಂ 193, 199 ಹಾಗೂ 120 'ಬಿ' ಅಡಿಯಲ್ಲಿ ಸಿಬಿಐ ದಾಖಲಿಸಿರುವ ಈ ಕ್ರಿಮಿನಲ್ ಪ್ರಕರಣದಿಂದ ತಮ್ಮನ್ನು ದೋಷಮುಕ್ತಗೊಳಿಸಬೇಕು ಎಂದು ಕೋರಿ ಡಿ. ಕೆ. ಶಿವಕುಮಾರ್ ಈ ಅರ್ಜಿ ಸಲ್ಲಿಸಿದ್ದಾರೆ.











Click it and Unblock the Notifications