IAS Transfer: ಐಎಎಸ್ ಅಧಿಕಾರಿಗಳ ವರ್ಗಾವಣೆ, ಕೋಲಾರಕ್ಕೆ ಹೊಸ ಡಿಸಿ
ಬೆಂಗಳೂರು, ಡಿಸೆಂಬರ್ 26: ಕರ್ನಾಟಕ ಸರ್ಕಾರ ಬುಧವಾರ ಆಡಳಿತ ಯಂತ್ರದಲ್ಲಿ ಕೆಲವು ಬದಲಾವಣೆಗಳನ್ನು ಮಾಡಿದೆ. ಹಲವು ಐಎಎಸ್ ಅಧಿಕಾರಿಗಳನ್ನು ವರ್ಗಾವಣೆ ಮಾಡಿದೆ. ಕೋಲಾರ ಜಿಲ್ಲಾಧಿಕಾರಿಗಳನ್ನು ತಕ್ಷಣದಿಂದ ಮತ್ತು ಮುಂದಿನ ಆದೇಶದ ತನಕ ವರ್ಗಾವಣೆ ಮಾಡಿದ್ದು, ಹೊಸ ಜಿಲ್ಲಾಧಿಕಾರಿಯಾಗಿ ಡಾ. ರವಿ ಎಂ. ಆರ್. ಅವರನ್ನು ನೇಮಕ ಮಾಡಲಾಗಿದೆ.
ಬುಧವಾರ ಕರ್ನಾಟಕ ಸರ್ಕಾರ ಐಎಎಸ್ ಅಧಿಕಾರಿಗಳನ್ನು ವರ್ಗಾವಣೆಗೊಳಿಸಿ ಆದೇಶವನ್ನು ಹೊರಡಿಸಿದೆ. ಕೋಲಾರ ಜಿಲ್ಲಾಧಿಕಾರಿಯಾಗಿದ್ದ ಅಕ್ರಂ ಪಾಷ (ಕೆಎನ್: 2012) ಅವರನ್ನು ವರ್ಗಾವಣೆಗೊಳಿಸಲಾಗಿದೆ. ಅವರನ್ನು ಕರ್ನಾಟಕ ಗೃಹ ಮಂಡಳಿ (ಕೆಹೆಚ್‌ಬಿ) ಆಯುಕ್ತರಾಗಿ ನೇಮಕ ಮಾಡಲಾಗಿದೆ.

ಕೋಲಾರ ಜಿಲ್ಲಾಧಿಕಾರಿಯಾಗಿ ಡಾ. ರವಿ ಎಂ. ಆರ್. (ಕೆಎನ್: 2012) ಅವರನ್ನು ತಕ್ಷಣದಿಂದ ಮತ್ತು ಮುಂದಿನ ಆದೇಶದ ತನಕ ನೇಮಕ ಮಾಡಲಾಗಿದೆ. ಅವರು ಮಕ್ಕಳ ರಕ್ಷಣಾ ನಿರ್ದೇಶನಾಲಯದ ನಿರ್ದೇಶಕರಾಗಿ ಕೆಲಸ ಮಾಡುತ್ತಿದ್ದರು.
ಅಕ್ರಂ ಪಾಷ ಅವರನ್ನು ಕರ್ನಾಟಕ ಗೃಹ ಮಂಡಳಿ (ಕೆಹೆಚ್‌ಬಿ) ಆಯುಕ್ತರಾಗಿ ತತ್‌ಕ್ಷಣದಿಂದ ಮತ್ತು ಮುಂದಿನ ಆದೇಶದ ತನಕ ನೇಮಕ ಮಾಡಲಾಗಿದೆ. ಈ ಹುದ್ದೆಯಲ್ಲಿದ್ದ ಕವಿತಾ ಎಸ್. ಮನ್ನಿಕೇರಿ ಅವರನ್ನು ವರ್ಗಾವಣೆ ಮಾಡಲಾಗಿದೆ.
ಕವಿತಾ ಎಸ್. ಮನ್ನಿಕೇರಿ (ಕೆಎನ್: 2012) ಅವರನ್ನು ತತ್‌ಕ್ಷಣದಿಂದ ಮತ್ತು ಮುಂದಿನ ಆದೇಶದ ತನಕ ಆಯುಕ್ತರು, ಕಬ್ಬು ಅಭಿವೃದ್ಧಿ ಹಾಗೂ ಸಕ್ಕರೆ ನಿರ್ದೇಶನಾಲಯದ ಹುದ್ದೆಗೆ ನೇಮಕ ಮಾಡಲಾಗಿದೆ.
2023ರ ಜೂನ್‌ನಲ್ಲಿ ಕೋಲಾರ ಜಿಲ್ಲೆಗೆ ಅಕ್ರಂ ಪಾಷ ಅವರನ್ನು ಜಿಲ್ಲಾಧಿಕಾರಿಯಾಗಿ ನೇಮಕ ಮಾಡಲಾಗಿತ್ತು. ಅದಕ್ಕೂ ಮೊದಲು ಕೋಲಾರದಲ್ಲಿ ವೆಂಕಟ್ ರಾಜಾ ಜಿಲ್ಲಾಧಿಕಾರಿಯಾಗಿದ್ದರು. ಅವರನ್ನು ಕೊಡಗು ಜಿಲ್ಲಾಧಿಕಾರಿಯಾಗಿ ವರ್ಗಾವಣೆ ಮಾಡಿ, ಅಕ್ರಂ ಪಾಷಾ ಅವರನ್ನು ನೂತನ ಜಿಲ್ಲಾಧಿಕಾರಿಯಾಗಿ ನೇಮಿಸಲಾಗಿತ್ತು.
ಅಕ್ರಂ ಪಾಷ ಕೋಲಾರ ಜಿಲ್ಲಾಧಿಕಾರಿಯಾಗುವ ಮೊದಲು ಕಾರ್ಮಿಕ ಇಲಾಖೆಯ ಆಯುಕ್ತರಾಗಿ ಕಾರ್ಯ ನಿರ್ವಹಣೆ ಮಾಡುತ್ತಿದ್ದರು. ವೆಂಕಟ್ ರಾಜಾ ಅವರು 2022ರ ಜನವರಿ 25ರಂದು ಕೋಲಾರ ಜಿಲ್ಲಾಧಿಕಾರಿಯಾಗಿ ಅಧಿಕಾರ ಸ್ವೀಕರಿಸಿದ್ದರು.
ಕಡಿಮೆ ಅವಧಿಯಲ್ಲಿಯೇ ಕೋಲಾರ ಜಿಲ್ಲಾಧಿಕಾರಿ ಅಕ್ರಂ ಪಾಷ ವರ್ಗಾವಣೆ ಮಾಡಿರುವ ಹಿಂದೆ ರಾಜಕೀಯ ಅಡಗಿದೆ ಎಂಬ ಮಾತುಗಳು ಕೇಳಿ ಬರುತ್ತಿವೆ. ಜಿಲ್ಲಾ ಕಾಂಗ್ರೆಸ್‌ನ ಪ್ರಭಾವಿಗಳ ಕೈವಾಡ ಇದರ ಹಿಂದಿದೆ ಎಂಬ ಸುದ್ದಿಗಳಿವೆ.
ಮಾಜಿ ಸ್ಪೀಕರ್ ರಮೇಶ್ ಕುಮಾರ್ ಅರಣ್ಯ ಭೂಮಿ ಒತ್ತುವರಿ ವಿವಾದ ಮತ್ತು ಡಿಸಿಸಿ ಬ್ಯಾಂಕ್ ಚುನಾವಣೆ ವಿಚಾರದಲ್ಲಿ ಜಿಲ್ಲಾಧಿಕಾರಿಗಳು ಕಾಂಗ್ರೆಸ್ ನಾಯಕರ ಮಾತು ಕೇಳಿಲ್ಲ ಎಂಬ ಸುದ್ದಿಗಳು ಹಬ್ಬಿದ್ದವು. ಈ ಸುದ್ದಿಗಳ ನಡುವೆಯೇ ಜಿಲ್ಲಾಧಿಕಾರಿಗಳ ವರ್ಗಾವಣೆಯಾಗಿದೆ.
ಸಾಮಾನ್ಯವಾಗಿ ಜಿಲ್ಲಾಧಿಕಾರಿಗಳು ಎರಡು ವರ್ಷಗಳ ಕಾಲ ಒಂದೇ ಜಿಲ್ಲೆಯಲ್ಲಿ ಕಾರ್ಯ ನಿರ್ವಹಣೆ ಮಾಡಲು ಸರ್ಕಾರ ಅವಕಾಶ ಮಾಡಿಕೊಡುತ್ತದೆ. ಆದರೆ 2023ರ ಜೂನ್‌ನಲ್ಲಿ ಕೋಲಾರ ಜಿಲ್ಲಾಧಿಕಾರಿಯಾಗಿ ನೇಮಕವಾದ ಅಕ್ರಂ ಪಾಷ ಅವರನ್ನು 2024ರ ಡಿಸೆಂಬರ್‌ನಲ್ಲಿ ವರ್ಗಾವಣೆ ಮಾಡಲಾಗಿದೆ.












Click it and Unblock the Notifications