ಈ ಸಾವು ನ್ಯಾಯನಾ? ಬೇಕೇ ಬೇಕು ನ್ಯಾಯ ಬೇಕು
ಬೆಂಗಳೂರು ಮಾ. 17: ಬೇಕೇ ಬೇಕು ನ್ಯಾಯ ಬೇಕು, ಬೇಕೇ ಬೇಕು ನ್ಯಾಯ ಬೇಕು, ಕೋಲಾರದ ಹುಲಿಗೆ ಜಯವಾಗಲಿ, ಕೊಲೆ ಮಾಡಿದವರಿಗೆ ಮರಣದಂಡನೆಯಾಗಲಿ, ಬೇಕೇ ಬೇಕು ನ್ಯಾಯ ಬೇಕು, ಪ್ರಾಮಾಣಿಕರಿಗೆ ಇದು ಕಾಲವಲ್ಲ... ಈ ರೀತಿಯ ಘೋಷಣೆಗಳು ಕೇಳಿಬಂದಿದ್ದು ಡಿ.ಕೆ.ರವಿಯವರ ಅಂತಿಮ ದರ್ಶನ ಪಡೆಯಲು ಆಗಮಿಸಿದ್ದ ನಾಗರೀಕರಿಂದ. [ರವಿ ಸಾವಿಗೆ ಕಾರಣವೇನು? ಓಟ್ ಹಾಕಿ]
ಡಿ.ಕೆ. ರವಿ ಪಾರ್ಥಿವ ಶರೀರವನ್ನು ಮಲ್ಲತ್ತಹಳ್ಳಿಯ ಅವರ ಮಾವನ ಮನೆಯಲ್ಲಿ ಮಂಗಳವಾರ , ಮಧ್ಯಾಹ್ನ ಸಾರ್ವಜನಿಕರ ದರ್ಶನಕ್ಕೆ ಇಡಲಾಗಿತ್ತು. ಬೆಂಗಳೂರು ನಾಗರಬಾವಿಯ ಮಲ್ಲತ್ತಹಳ್ಳಿಗೆ ತುಮಕೂರು, ಕೋಲಾರ ಮತ್ತು ನಗರದ ಮೂಲೆ ಮೂಲೆಗಳಿಂದ ಆಗಮಿಸಿದ್ದ ನಾಗರೀಕರು ರವಿ ಅಂತಿಮ ದರ್ಶನ ಪಡೆದರು. ಡಿಕೆ ರವಿ ಹೆಂಡತಿ ಕುಸುಮಾ ಅವರ ಕಡು ಮೌನವೇ ಘಟನೆಯ ಕರಾಳತೆಯನ್ನು ಎತ್ತಿ ಹೇಳುತ್ತಿತ್ತು.

ಜನರ ಪ್ರೀತಿ
ಡಿಕೆ ರವಿ ಎಷ್ಟು ಜನಪ್ರಿಯ ಅಧಿಕಾರಿಯಾಗಿದ್ದರು ಎಂಬುದಕ್ಕೆ ಅಂತಿಮ ದರ್ಶನಕ್ಕೆ ಆಗಮಿಸಿದ್ದ ಜನರೇ ಸಾಕ್ಷಿ. ನಾಗರಬಾವಿಯ ಅಂಬೇಡ್ಕರ್ ಕಾಲೇಜಿನ ಸಮೀಪದ ಮನೆಯಲ್ಲಿ ಇರಿಸಿದ್ದ ಪಾರ್ಥೀವ ಶರೀರವನ್ನು ನೋಡಲು ಸುಮಾರು 10 ಸಾವಿರಕ್ಕೂ ಅಧಿಕ ಮಂದಿ ಆಗಮಿಸಿದ್ದರು.

ನಿರ್ಮಲಾನಂದ ಸ್ವಾಮೀಜಿ ನಮನ
ಆದಿಚುಂಚನಗಿರಿ ಮಠದ ಶ್ರೀ ನಿರ್ಮಲಾನಂದ ಸ್ವಾಮೀಜಿ ನಾಗರಬಾವಿಗೆ ಆಗಮಿಸಿ ಡಿಕೆ ರವಿಯವರಿಗೆ ಅಂತಿಮ ದರ್ಶನ ಪಡೆದರು. ರವಿ ಹೆಂಡತಿ ಮತ್ತು ಕುಟುಂಬದವರಿಗೆ ಸಾಂತ್ವನ ಹೇಳಿದರು.

ನೂಕು ನುಗ್ಗಲು
ಡಿಕೆ ರವಿಯವರ ಪಾರ್ಥಿವ ಶರೀರವನ್ನು ಮರಣೋತ್ತರ ಪರೀಕ್ಷೆ ನಂತರ ನಾಗರಬಾವಿಯಲ್ಲಿ ಇಡಲಾಗುವುದು ಎಂದು ತಿಳಿದ ಅಪಾರ ಸಂಖ್ಯೆಯ ಅಭಿಮಾನಿಗಳು ಸ್ಥಳದಲ್ಲಿ ಜಮಾಯಿಸಿದ್ದರು. ಜನರನ್ನು ನಿಯಂತ್ರಿಸಲು ಪೊಲೀಸರು ಹರಸಾಹಸ ಪಡಬೇಕಾಯಿತು.

ಮಹಡಿ ಏರಿ ನೋಡಿದರು
ಅಂತಿಮ ದರ್ಶನಕ್ಕೆ ನೂಕು ನುಗ್ಗಲು ಇದ್ದುದರಿಂದ ಅನೇಕರು ಹತ್ತಿರದ ಮನೆ, ಕಾಂಪೌಂಡ್ ಏರಿ ರವಿಯವರ ಅಂತಿಮ ದರ್ಶನ ಪಡೆದರು.

ಫೋಟೋ ತೇಗಿಬೇಡಿ..ಪ್ಲೀಸ್
ಡಿಕೆ ರವಿ ಅಂತಿಮ ದರ್ಶನ ಸುದ್ದಿಯನ್ನು ಬಿತ್ತರಿಸಲು ಎಲ್ಲ ಮಾಧ್ಯಮಗಳು ತೆರಳಿದ್ದವು. ರವಿ ಹೆಂಡತಿ ಕುಸುಮಾ ಅವರು ಅಳುತ್ತಿರುವ ದೃಶ್ಯವನ್ನು ಫೋಟೋ ತೆಗೆಯಲು ಮುಗಿಬಿದ್ದರು. ಆದರೆ ಇದಕ್ಕೆ ಅಡ್ಡಿಪಡಿಸಿದ ರವಿಯವರ ತಮ್ಮ ದಯವಿಟ್ಟು ಫೋಟೋ ತೆಗಯಬೇಡಿ ಎಂದು ವಿನಂತಿ ಮಾಡಿಕೊಂಡರು.

ಮಹಿಳೆಯರು ಆಗಮಿಸಿದ್ದರು
ಕೇವಲ ಹಿರಿಯ ಐಎಎಸ್ ಕೆಎಎಸ್ ಅಧಿಕಾರಿಗಳು ಮಾತ್ರವಲ್ಲದೇ ಹೆಚ್ಚಿನ ಸಂಖ್ಯೆಯಲ್ಲಿ ಮಹಿಳೆಯರು ಆಗಮಿಸಿದ್ದು ವಿಶೇಷ. ವಯೋವೃದ್ಧ ಮಹಿಳೆಯರು ಡಿಕೆ ರವಿ ಅಂತಿಮ ದರ್ಶನ ಪಡೆದು ಕಂಬನಿ ಮಿಡಿದಿದ್ದು ಎಂಥವರ ಹೃದಯವನ್ನು ಕಲಕುವಂತಿತ್ತು.

ರೈತರ ನಮನ
ಕೋಲಾರ, ಚಿಕ್ಕಬಳ್ಳಾಪುರ ಮತ್ತು ತೂಮಕೂರು ಭಾಗದಿಂದ ಆಗಮಿಸಿದ್ದ ರೈತರು ಕಂಬನಿ ಮಿಡಿದರು. ದಕ್ಷ ಅಧಿಕಾರಿ ಡಿಕೆ ರವಿಯವರಿಗೆ ಅಂತಿಮ ನಮನ ಸಲ್ಲಿಸಿದರು.

ಕೋಲಾರದಲ್ಲಿ ಶಾಶ್ವತವಾಗಿ ಇರ್ತಿರಾ
'ರವಿ ಸರ್, ನೀವು ಮಾಡಿದ ಕೆಲಸ ಎಂದೆಂದಿಗೂ ಶಾಶ್ವತ. ಕೋಲಾರದ ಜನತೆಯ ಎದೆಯಲ್ಲಿ ನೀವು ಯಾವಾಗಲೂ ನೆಲೆ ನಿಂತಿರುತ್ತೀರಾ, ನಿಮ್ಮ ಪ್ರಾಮಾಣಿಕತೆ ಮತ್ತು ದಕ್ಷತೆ ಎಲ್ಲ ಅಧಿಕಾರಿಗಳಿಗೆ ಮಾದರಿ' ಎಂಬ ಭಿತ್ತಿಪತ್ರವೇ ರವಿಯವರ ಮೇಲೆ ಜನರಿಗಿದ್ದ ಅಭಿಮಾನದ ಕನ್ನಡಿಯಾಗಿತ್ತು.












Click it and Unblock the Notifications