ಯಾರು ಏನು ಮಾಡಿದರೂ ಕುಮಾರಸ್ವಾಮಿಯ ಕೈ ಬಿಡುವುದಿಲ್ಲ: ಡಿಕೆಶಿ ಅಭಯ
ಬೆಂಗಳೂರು, ಜುಲೈ 07: ಕಾಂಗ್ರೆಸ್-ಜೆಡಿಎಸ್ ಪಕ್ಷಗಳು ಏನೇ ತೀರ್ಮಾನ ತೆಗೆದುಕೊಂಡರೂ ಸರಿಯೇ, ಕುಮಾರಸ್ವಾಮಿಗೆ ಬೆನ್ನಿಗೆ ಚೂರಿ ಹಾಕುವ ಕೆಲಸ ಮಾಡುವುದಿಲ್ಲ ಎಂದು ಸಚಿವ ಡಿ.ಕೆ.ಶಿವಕುಮಾರ್ ಹೇಳಿದರು.
ಇಂದು ಬೆಳಿಗ್ಗೆ ದೇವೇಗೌಡ ಅವರ ಭೇಟಿ ನಂತರ ಮಾತನಾಡಿದ ಡಿ.ಕೆ.ಶಿವಕುಮಾರ್ ಅವರು, ಕುಮಾರಸ್ವಾಮಿ ಅವರೇ ಐದು ವರ್ಷ ಸಿಎಂ ಆಗಿರಬೇಕು ಎಂದು ನಾವು ಮಾತು ಕೊಟ್ಟಾಗಿದೆ. ಅದರಿಂದ ಹಿಂದೆ ಸರಿಯುವ ಪ್ರಶ್ನೆಯೇ ಇಲ್ಲ ಎಂದು ಹೇಳಿದರು.
ಸರ್ಕಾರಕ್ಕೆ ಆಗಿರುವ ಸಮಸ್ಯೆಗೆ ಈಗಾಗಲೇ ಔಷದ ಅರೆಯುತ್ತಿದ್ದೇವೆ, ಯಾವ ರೀತಿಯ ಔಷದ ಬೇಡುತ್ತಿದೆಯೋ ಅದೇ ಔಷದ ತಯಾರು ಮಾಡುತ್ತಿದ್ದೇವೆ, ಚಿಕಿತ್ಸೆ ನೀಡಿ ಎಲ್ಲವನ್ನೂ ಸರಿ ಮಾಡುತ್ತೇವೆ ಎಂದು ಡಿ.ಕೆ.ಶಿವಕುಮಾರ್ ಮಾರ್ಮಿಕವಾಗಿ ಹೇಳಿದರು.

ಈಗಾಗಲೇ ಹಲವು ಸಭೆಗಳನ್ನು ಮಾಡಿದ್ದೇವೆ, ಸಿಎಂ ರಾಜಕೀಯ ಕಾರ್ಯದರ್ಶಿ ಮುನಿಯಪ್ಪ ಅವರು ಬಂದಿದ್ದಾರೆ. ಅವರೂ ಸಹ ಕೆಲವರನ್ನು ಭೇಟಿ ಮಾಡಿ ಮಾತುಕತೆ ನಡೆಸಿದ್ದಾರೆ, ಎಲ್ಲವೂ ಸರಿಯಾದ ದಾರಿಯಲ್ಲಿ ಸಾಗುತ್ತಿದೆ ಎಂದರು.
ಬಿಜೆಪಿಯವರು ಸರ್ಕಾರ ರಚನೆ ಮಾಡಲ್ಲ ಎಂದಿದ್ದರು, ಈಗ ರಚಿಸುತ್ತೇವೆ ಎನ್ನುತ್ತಿದ್ದಾರೆ. ಕೇಂದ್ರ ಬಿಜೆಪಿ ನೋಡಿದರೆ ಮತ್ತೆ ಚುನಾವಣೆ ಎನ್ನುತ್ತಿದೆ. ಅವರು ಕಣ್ಣು ಮುಚ್ಚಿಕೊಂಡು ಹಾಕು ಕುಡಿಯುತ್ತಿದ್ದಾರೆ, ಅದು ನಮಗೆ ಗೊತ್ತಾಗದೇ ಇರಲು ಸಾಧ್ಯವೇ ಎಂದು ಪ್ರಶ್ನೆ ಮಾಡಿದರು.
ಬಿಜೆಪಿ ಯಾರನ್ನೆಲ್ಲಾ ಭೇಟಿ ಮಾಡಿದೆ, ಯಾರೊಂದಿಗೆ ಮಾತುಕತೆ ನಡೆಸಿದೆ ಎಲ್ಲವೂ ನಮಗೆ ಗೊತ್ತಿದೆ, ಈ ರೀತಿಯ ಆಟಗಳನ್ನು ನಾವು ಸಾಕಷ್ಟು ನೋಡಿದ್ದೇವೆ, ಮೈತ್ರಿ ಸರ್ಕಾರ ಉಳಿಸಿಕೊಳ್ಳಲು ನಾವು ಬದ್ಧ, ಕುಮಾರಸ್ವಾಮಿಯೇ ಐದು ವರ್ಷ ಸಿಎಂ ಆಗಿರುತ್ತಾರೆ ಎಂದು ಡಿ.ಕೆ.ಶಿವಕುಮಾರ್ ಹೇಳಿದರು.












Click it and Unblock the Notifications