ರಾಜೀನಾಮೆ ಬಗ್ಗೆ ಶಾಸಕ ಶ್ರೀಮಂತ ಪಾಟೀಲ್ ಹೇಳಿದ್ದೇನು?
ಬೆಂಗಳೂರು, ಏಪ್ರಿಲ್ 25 : 'ರಮೇಶ್ ಜಾರಕಿಹೊಳಿ ಅವರ ರಾಜೀನಾಮೆ ಬಗ್ಗೆ ನನಗೇನು ತಿಳಿದಿಲ್ಲ. ನಾನು ಯಾವುದೇ ಕಾರಣಕ್ಕೂ ರಾಜೀನಾಮೆ ನೀಡುವುದಿಲ್ಲ' ಎಂದು ಕಾಗವಾಡ ಕ್ಷೇತ್ರದ ಕಾಂಗ್ರೆಸ್ ಶಾಸಕ ಶ್ರೀಮಂತ್ ಪಾಟೀಲ್ ಸ್ಪಷ್ಟಪಡಿಸಿದರು.
ಶಾಸಕ ಶ್ರೀಮಂತ್ ಪಾಟೀಲ್ ಗುರುವಾರ ಬೆಂಗಳೂರಿಗೆ ಆಗಮಿಸಿದ್ದು ಬಾರಿ ಕುತೂಹಲಕ್ಕೆ ಕಾರಣವಾಗಿತ್ತು. ಅವರು ರಮೇಶ್ ಜಾರಕಿಹೊಳಿ ಅವರನ್ನು ಭೇಟಿಯಾಗಿ, ಮಾತುಕತೆ ನಡೆಸಲಿದ್ದಾರೆ ಎಂಬ ಸುದ್ದಿಗಳು ಹಬ್ಬಿದ್ದವು.

ಉಪ ಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ, ಜಲಸಂಪನ್ಮೂಲ ಸಚಿವ ಡಿ.ಕೆ.ಶಿವಕುಮಾರ್ ಅವರನ್ನು ಶ್ರೀಮಂತ ಪಾಟೀಲ್ ಅವರು ಸದಾಶಿವನಗರದ ಮನೆಯಲ್ಲಿ ಭೇಟಿ ಮಾಡಿದರು. ಬಳಿಕ ಮಾತನಾಡಿದ ಅವರು, 'ನಾನು ಯಾವುದೇ ಕಾರಣಕ್ಕೂ ರಾಜೀನಾಮೆ ನೀಡುವುದಿಲ್ಲ' ಎಂದು ಹೇಳಿದರು.
'ರಾಜೀನಾಮೆ ಕೊಡುವ ಯೋಚನೆಯೇ ಇಲ್ಲ. ನಮ್ಮ ಜಿಲ್ಲೆಯಲ್ಲಿ ನೀರಿನ ಸಮಸ್ಯೆ ಇತ್ತು. ಈ ಬಗ್ಗೆ ಸಚಿವರ ಬಳಿ ಚರ್ಚೆ ಮಾಡಲು ಬಂದಿದ್ದೆ. ಅದು ಬಿಟ್ಟರೆ ಬೇರೆ ಯಾವುದೇ ವಿಚಾರವನ್ನು ಚರ್ಚೆ ಮಾಡಿಲ್ಲ' ಎಂದು ಶ್ರೀಮಂತ್ ಪಾಟೀಲ್ ತಿಳಿಸಿದರು.
ರಮೇಶ್ ಅಜ್ಞಾತ ಸ್ಥಳಕ್ಕೆ : ಬುಧವಾರ ಬೆಂಗಳೂರಿಗೆ ಬಂದಿದ್ದ ಗೋಕಾಕ್ ಕ್ಷೇತ್ರದ ಶಾಸಕ ರಮೇಶ್ ಜಾರಕಿಹೊಳಿ ಅವರು ಗುರುವಾರ ಅಜ್ಞಾತ ಸ್ಥಳಕ್ಕೆ ತೆರಳಿದ್ದಾರೆ. ಗುರುವಾರ ಕೆಲವು ಆಪ್ತರ ಜೊತೆ ಮಾತುಕತೆ ನಡೆಸಿದ ಬಳಿಕ ಯಾರಿಗೂ ಮಾಹಿತಿ ನೀಡದೆ ಅವರು ಬೆಂಗಳೂರಿನಿಂದ ತೆರಳಿದ್ದಾರೆ.












Click it and Unblock the Notifications