ಡಿ.ಕೆ.ಸುರೇಶ್ ಏಕೆ ಸೋತರು ಎಂಬುದು ಅರ್ಥವಾಗಿಲ್ಲ, ಮತಯಂತ್ರ ದೋಷವೋ? :ಡಿ ಕೆ ಶಿವಕುಮಾರ್ ಹೇಳಿದ್ದೇನು?
ರಾಮನಗರ, ಅಕ್ಟೋಬರ್ 05: ಲೋಕಸಭಾ ಚುನಾವಣೆಯಲ್ಲಿ ಡಿಕೆ ಸುರೇಶ್ ಅವರು ಏಕೆ ಸೋತರು ಎಂಬುದು ಇನ್ನೂ ಅರ್ಥವಾಗಿಲ್ಲ. ಮತಯಂತ್ರ ದೋಷವು ಅಥವಾ ಬೇರೆ ಏನೋ ತಿಳಿದಿಲ್ಲ. ಮುಂದಿನ ವಿಧಾನಸಭಾ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದಿಂದ ಯಾರೇ ಅಭ್ಯರ್ಥಿಯಾದರು ನೀವು ಗೆಲ್ಲಿಸಬೇಕು. ಹಾಗೂ ನಾವೆಲ್ಲ ಸೇರಿ ಒಗ್ಗಟ್ಟಿನಿಂದ ಚನ್ನಪಟ್ಟಣಕ್ಕೆ ಹೊಸ ರೂಪ ನೀಡಬೇಕು ಎಂದು ಡಿಸಿಎಂ ಡಿ ಕೆ ಶಿವಕುಮಾರ್ ಹೇಳಿದರು.
ಕೋಡಂಬಳ್ಳಿ ಗ್ರಾಮದಲ್ಲಿ ಟೊಯೋಟಾ ಕಿರ್ಲೊಸ್ಕರ್ ಮೋಟರ್ ಪ್ರೈವೇಟ್ ಸಂಸ್ಥೆ ಅವರು ಸಿ ಎಸ್ ಆರ್ ಅನುದಾನದ ಅಡಿ ನಿರ್ಮಾಣ ಮಾಡಿರುವ ಸರ್ಕಾರಿ ಹಿರಿಯ ಪ್ರಾಥಮಿಕ ಪಾಠಶಾಲೆಯ ನೂತನ ಕಟ್ಟಡವನ್ನು ಉದ್ಘಾಟನೆ ನಂತರ ಡಿ. ಕೆ. ಶಿವಕುಮಾರ್ ಅವರ ಮಾತನಾಡಿ, ಮೂರು ತಿಂಗಳಿನಿಂದ ಕಾಂಗ್ರೆಸ್ ಸರ್ಕಾರ ಚನ್ನಪಟ್ಟಣದಲ್ಲಿ ಮಾಡುತ್ತಿರುವ ಅಭಿವೃದ್ಧಿ ಕಾರ್ಯಗಳನ್ನು 25 ವರ್ಷಗಳಿಂದ ಯಾರೂ ಮಾಡಿಲ್ಲ.

ಈ ಹಿಂದೆ ಸಿಎಂ ಆಗಿದ್ದವರು, ಸಚಿವರು, ಶಾಸಕರಾಗಿದ್ದವರು ಯಾರೂ ಮಾಡದ ಕೆಲಸವನ್ನು ನಮ್ಮ ಸರ್ಕಾರ ಚನ್ನಪಟ್ಟಣದ ಅಭಿವೃದ್ಧಿಗಾಗಿ ಮಾಡುತ್ತಿದೆ. ಇದಕ್ಕೆ ನಿಮ್ಮ ಕಣ್ಣುಗಳೇ ಸಾಕ್ಷಿ. ಪಕ್ಷಾತೀತವಾಗಿ ಕಾಂಗ್ರೆಸ್ ಜನತಾದಳ, ಬಿಜೆಪಿಯವರು ನಮ್ಮ ಬೆಂಬಲಕ್ಕೆ ನಿಲ್ಲಬೇಕು.
ಕಣ್ವ ನದಿಗೆ ಅಡ್ಡಲಾಗಿ ಈಗಾಗಲೇ ಒಂಬತ್ತು ಸೇತುವೆಗಳನ್ನು ತಲಾ ಐದು ಕೋಟಿ ವೆಚ್ಚದಲ್ಲಿ ನಿರ್ಮಾಣ ಮಾಡಲಾಗುತ್ತಿದೆ. ಇದನ್ನು ಯಾರು ಮಾಡಿದ್ದು ಯಾವ ಸರ್ಕಾರ ಮಾಡಿದ್ದು ಎನ್ನುವ ಆಯ್ಕೆ ನಿಮಗೆ ಬಿಟ್ಟಿದ್ದು. ಒಂದಷ್ಟು ಕೆರೆಗಳಿಗೆ ನೀರು ತುಂಬಿಸಲಾಗುತ್ತಿದೆ. ಮಿಕ್ಕ ಕೆರಳಿಗೆ ನೀರು ತುಂಬಿಸುವ ಕೆಲಸ ಮಾಡಲಾಗುವುದು. ನ್ಯಾಯವಾಗಿ ಕೆಲಸ ಮಾಡಬೇಕು. ಅನ್ಯಾಯ, ಭ್ರಷ್ಟಾಚಾರ ಮಾಡದೆ ಚನ್ನಪಟ್ಟಣದ ಅಭಿವೃದ್ಧಿಗೆ ದುಡಿಯಬೇಕು ಎಂದು ಅಧಿಕಾರಿಗಳಿಗೆ ಸೂಚನೆ ಕೊಟ್ಟಿದ್ದೇನೆ.
ಕಳೆದ 35 ವರ್ಷಗಳಿಂದ ಹಳ್ಳಿಹಳ್ಳಿಯಲ್ಲೂ ಯಾವ ರೀತಿ ಸಂಘಟನೆ ಮಾಡಿ, ಕೆಲಸ ಮಾಡಿದ್ದೇನೆ ಎಂಬುದಕ್ಕೆ ಜನರ ಬಳಿ ಸಾಕ್ಷಿ ಇದೆ. ಕೋಡಂಬಳ್ಳಿ ಕ್ಷೇತ್ರ ಹಿಂದೆ ಹೇಗಿತ್ತು, ಈಗ ಹೇಗಿದೆ ಎಂಬುದನ್ನು ಇಂದಿನ ಪೀಳಿಗೆ ತಿಳಿದುಕೊಳ್ಳಬೇಕು. ಅಂದು ಮಾಜಿ ಪ್ರಧಾನಿ ದೇವೇಗೌಡರು ವಿಪಕ್ಷ ನಾಯಕರನ್ನು ಕಳುಹಿಸಿ ಯಾವ, ಯಾವ ಸುಳ್ಳು ಆರೋಪ ಮಾಡಿದ್ದಾರೆ ಎಂಬುದು ನಿಮಗೆ ತಿಳಿದಿದೆ. ಇಲ್ಲಿನ ಮುಖ್ಯ ರಸ್ತೆಯನ್ನು ಅಗಲ ಮಾಡುವಾಗ ಸಾಕಷ್ಟು ತೊಂದರೆ ಎದುರಾಯಿತು. ಎಲ್ಲವನ್ನು ಮೀರಿ ಅಭಿವೃದ್ಧಿ ಕೆಲಸ ಮಾಡಲಾಯಿತು.
ನಗರ ಭಾಗದ ಮಕ್ಕಳಿಗೆ ದೊರಕುವ ಉತ್ತಮ ಶಿಕ್ಷಣ ಗ್ರಾಮೀಣ ಭಾಗದ ಮಕ್ಕಳಿಗೂ ದೊರಕಬೇಕು ಎಂದು ಸಿಎಸ್ ಆರ್ ಅನುದಾನದ ಮೂಲಕ ಉತ್ತಮ ಶಾಲೆ ನಿರ್ಮಾಣ ನನ್ನ ಕನಸಾಗಿತ್ತು. ಅದು ಇಂದು ನನಸಾಗಿದೆ. ಇದು ರಾಷ್ಟ್ರಕ್ಕೆ ದೊಡ್ಡ ಮಾದರಿ. ಇದಕ್ಕೆ ಕೈ ಜೋಡಿಸಿರುವ ಟೊಯೋಟೋ ಸಂಸ್ಥೆಗೆ ಅಭಿನಂದನೆಗಳು. ಇವರಿಗೆ ಸಿಎಂ ಅವರಿಂದ ಅಭಿನಂದನಾ ಪತ್ರ ತಲುಪಿಸಲಾಗುವುದು. ಜಿಲ್ಲೆಯಲ್ಲಿ ಉತ್ತಮ ಶಾಲೆಗಳ ನಿರ್ಮಾಣ ನನ್ನ ಗುರಿ.
ನನ್ನ ಕಷ್ಟಕಾಲದಲ್ಲಿ ಬೆಳೆಸಿ ನನ್ನ ಸಲಹಿದವರು ಕೋಡಂಬಳ್ಳಿ ಜನತೆ. ನನ್ನನ್ನು ನಾಲ್ಕು ಬಾರಿ ವಿಧಾನಸೌಧಕ್ಕೆ ಆಯ್ಕೆ ಮಾಡಿ ಕಳುಹಿಸಿಕೊಟ್ಟಿದ್ದೀರಿ. ನಾನು ಈಗ ಡಿಸಿಎಂ ಆಗಿದ್ದೇನೆ. ಜೊತೆಗೆ ಎಷ್ಟೇ ಉನ್ನತ ಸ್ಥಾನಕ್ಕೆ ಹೋದರು ನಿಮ್ಮನ್ನು ಮರೆಯುವುದಿಲ್ಲ ಎಂದು ಹೇಳಿದರು.












Click it and Unblock the Notifications