Gruhalakshmi: ಗೃಹಲಕ್ಷ್ಮಿ ಯೋಜನೆಗೆ ಅರ್ಹರಿದ್ದೀರಾ ಎಂದು ತಿಳಿಯುವುದು ಹೇಗೆ? ಇಲ್ಲಿದೆ ವಿವರ
ಗೃಹಲಕ್ಷ್ಮಿ ಯೋಜನೆಗೆ ನೋಂದಣಿ ಪ್ರಕ್ರಿಯೆ ಆರಂಭವಾಗಿದ್ದು, ಆಗಸ್ಟ್ 9 ರ ವೇಳೆಗೆ ರಾಜ್ಯಾದ್ಯಂತ 1.03 ಕೋಟಿ ಮಹಿಳೆಯರು ಯೋಜನೆಗೆ ನೋಂದಣಿ ಮಾಡಿಕೊಂಡಿದ್ದಾರೆ. ಆಗಸ್ಟ್ 21ರಂದು ಅರ್ಹ ಫಲಾನುಭವಿಗಳ ಖಾತೆಗೆ ಹಣ ಹಾಕುವುದಾಗಿ ಸಿಎಂ ಸಿದ್ದರಾಮಯ್ಯ ಮಾಹಿತಿ ನೀಡಿದ್ದಾರೆ.
ಗೃಹಲಕ್ಷ್ಮಿ ಯೋಜನೆಗೆ ಅರ್ಜಿ ಸಲ್ಲಿಸುವ ಸಂದರ್ಭದಲ್ಲಿ ಮನೆ ಯಜಮಾನಿಯ ಆಧಾರ್ ಕಾರ್ಡ್ ಬ್ಯಾಂಕ್ ಖಾತೆಗೆ ಲಿಂಕ್ ಹಾಕಿದ್ದರೆ ಯಾವುದೇ ಗೊಂದಲ ಇಲ್ಲದೆ ಹಣ ಖಾತೆಗೆ ಬರಲಿದೆ. ಒಂದು ವೇಳೆ ನೀವು ಆಧಾರ್ ಕಾರ್ಡ್ ಅನ್ನು ಬ್ಯಾಂಕ್ ಖಾತೆಗೆ ಲಿಂಕ್ ಮಾಡದೇ ಇದ್ದಲ್ಲಿ ತಕ್ಷಣವೇ ಲಿಂಕ್ ಮಾಡಬೇಕು, ಎನ್‌ಪಿಸಿಐ ಸೀಡಿಂಗ್ ಮಾಡಿಸಬೇಕಿದೆ, ಆಧಾರ್ ಕಾರ್ಡ್‌ಗೆ ಲಿಂಕ್ ಆಗಿರುವ ಖಾತೆಗೆ ಹಣ ಬರಲಿದೆ.

ರೇಷನ್ ಕಾರ್ಡ್‌ನಲ್ಲಿ ಮನೆ ಯಜಮಾನಿ ಎಂದು ನಮೂದಾಗಿರುವ ಮಹಿಳೆಯರ ಖಾತೆಗೆ ಹಣ ಬರಲಿದೆ. ಈಗಾಗಲೇ ಅನ್ನಭಾಗ್ಯ ಯೋಜನೆಯ ಹಣವನ್ನು ಇದೇ ರೀತಿ ಜಮೆ ಮಾಡಲಾಗಿದೆ.
ರೇಷನ್ ಕಾರ್ಡ್ ಯಜಮಾನಿಯರ ಮಾಹಿತಿ ತಿಳಿಯುವುದು ಹೇಗೆ?
https://ahara.kar.nic.in/Home/EServices ವೆಬ್‌ಸೈಟ್‌ಗೆ ಭೇಟಿ ನೀಡಬೇಕು. ಮುಖಪುಟದ ಎಡಭಾಗದಲ್ಲಿ ಹಲವು ಆಯ್ಕೆಗಳು ಕಾಣುತ್ತವೆ. ಅದರಲ್ಲಿ e-Ration card ಎನ್ನುವ ಆಯ್ಕೆ ಮೇಲೆ ಕ್ಲಿಕ್ ಮಾಡಬೇಕು, ನಂತರ ಹಲವು ಆಯ್ಕೆಗಳು ಕಾಣಿಸಲಿದ್ದು ಅದರಲ್ಲಿ show village list ಎನ್ನುವ ಆಯ್ಕೆ ಮೇಲೆ ಕ್ಲಿಕ್ ಮಾಡಿ.
ನಂತರ ನಿಮ್ಮ ಜಿಲ್ಲೆ, ತಾಲೂಕು, ಗ್ರಾಮ ಪಂಚಾಯಿತಿ, ಹಳ್ಳಿಯ ಹೆಸರನ್ನು ಆಯ್ಕೆ ಮಾಡಿ Go ಎನ್ನುವ ಆಯ್ಕೆ ಮೇಲೆ ಕ್ಲಿಕ್ ಮಾಡಿದರೆ. ನಿಮ್ಮ ಗ್ರಾಮದಲ್ಲಿ ರೇಷನ್ ಕಾರ್ಡ್ ಹೊಂದಿರುವ ಎಲ್ಲಾ ಕುಟುಂಬಗಳ ಪಟ್ಟಿ ಕಾಣಸಿಗುತ್ತದೆ. ಪಟ್ಟಿಯಲ್ಲಿರುವ ಮಹಿಳೆಯರು ಗೃಹಲಕ್ಷ್ಮಿ ಯೋಜನೆಯಡಿ ಹಣ ಪಡೆಯಲು ಅರ್ಹರಾಗಿರುತ್ತಾರೆ.
ರೇಷನ್ ಕಾರ್ಡ್‌ಗೆ ಶೀಘ್ರದಲ್ಲೇ ಅರ್ಜಿ ಸ್ವೀಕಾರ
ಗೃಹಲಕ್ಷ್ಮಿ ಯೋಜನೆಗೆ ಅರ್ಜಿ ನೋಂದಾಯಿಸಲು ಎಪಿಎಲ್, ಬಿಪಿಎಲ್, ಅಂತ್ಯೋದಯ ಕಾರ್ಡ್ ಹೊಂದಿರುವ ಕುಟುಂಬಗಳ ಮನೆ ಯಜಮಾನಿಯರು ಗೃಹಲಕ್ಷ್ಮಿ ಯೋಜನೆಯಡಿ ಹಣ ಪಡೆಯಲು ಅರ್ಹರಾಗಿರುತ್ತಾರೆ.
ಸದ್ಯ ಸರ್ಕಾರ ರೇಷನ್ ಕಾರ್ಡ್ ವಿತರಿಸಲು ಅರ್ಜಿ ಸ್ವೀಕರಿಸುವುದನ್ನು ನಿಲ್ಲಿಸಿದ್ದು ಇನ್ನೊಂದು ವಾರದಲ್ಲಿ ಅರ್ಜಿ ಸ್ವೀಕರಿಸುವ ಪ್ರಕ್ರಿಯೆ ಆರಂಭಿಸಲಿದೆ. ಅಲ್ಲದೆ ಈಗಾಗಲೇ ಸ್ವೀಕೃತವಾಗಿರುವ ಅರ್ಜಿಗಳ ವಿಲೇವಾರಿ ಪ್ರಕ್ರಿಯೆ ಕೂಡ ಆರಂಭವಾಗಲಿದೆ. ಒಂದು ತಿಂಗಳ ಒಳಗಾಗಿ ರೇಷನ್ ಕಾರ್ಡ್ ವಿತರಣೆಗೆ ಕ್ರಮ ವಹಿಸುವುದಾಗಿ ಆಹಾರ ಸಚಿವ ಮುನಿಯಪ್ಪ ಹೇಳಿದ್ದಾರೆ.
ಗೃಹಲಕ್ಷ್ಮಿ ಯೋಜನೆಯಡಿ ನೋಂದಾಯಿಸಲು ಯಾವುದೇ ಕೊನೆಯ ದಿನಾಂಕವಿಲ್ಲದ ಕಾರಣ ಹೊಸದಾಗಿ ರೇಷನ್ ಕಾರ್ಡ್ ಪಡೆದುಕೊಂಡ ನಂತರ ಅರ್ಜಿ ಸಲ್ಲಿಕೆ ಮಾಡಬಹುದಾಗಿದೆ.











Click it and Unblock the Notifications