ಸಿಎಂ ಕುರ್ಚಿಗಾಗಿಯೇ ಹನಿಟ್ರ್ಯಾಪ್ ಆಗಿದೆ: ಆರ್.ಅಶೋಕ್ ಹೊಸ ಬಾಂಬ್
ರಾಜ್ಯ ಕಾಂಗ್ರೆಸ್ ಸರ್ಕಾರದ ಸಹಕಾರಿ ಸಚಿವ ಕೆ.ಎನ್.ರಾಜಣ್ಣ ಅವರ ಮೇಲೆ ಹನಿಟ್ರ್ಯಾಪ್ ಯತ್ನ ನಡೆದಿತ್ತು ಎಂಬ ವಿಚಾರ ರಾಜಕೀಯ ವಲಯವನ್ನು ತಲ್ಲಣಗೊಳಿಸಿದೆ. ಸದನದಲ್ಲೇ ಈ ಬಗ್ಗೆ ರಾಜಣ್ಣ ಬಹಿರಂಗ ಹೇಳಿಕೆ ನೀಡಿದ ಮೇಲೆ ಎಲ್ಲರೂ ಶಾಕ್‌ಗೆ ಒಳಗಾಗಿದ್ದಾರೆ. ಈ ಬಗ್ಗೆ ದೂರು ನೀಡುತ್ತೇನೆ, ತನಿಖೆ ನಡೆಸಿ ಎಂದೂ ರಾಜಣ್ಣ ಕೇಳಿದ್ದಾರೆ. ಮತ್ತೊಂದೆಡೆ ವಿಪಕ್ಷ ನಾಯಕ ಆರ್.ಅಶೋಕ್ ಅವರು ಹನಿಟ್ರ್ಯಾಪ್‌ಗೆ ಕಾರಣವೇನು? ಎಂಬ ಶಾಕಿಂಗ್ ಆರೋಪ ಕೂಡ ಮಾಡಿದ್ದಾರೆ.
ಇಂದು ಮಾಧ್ಯಮಗಳೊಂದಿಗೆ ಮಾತನಾಡಿರುವ ಆರ್.ಅಶೋಕ್ ಅವರು, ಸಚಿವ ರಾಜಣ್ಣ ಅವರೇ ಸದನದಲ್ಲಿ 48 ಜನರ ಮೇಲೆ ಹನಿಟ್ರ್ಯಾಪ್ ಆಗಿದೆ ಎಂದಿದ್ದಾರೆ. ಈ ಆರೋಪಕ್ಕೆ ಸಿಎಂ ಸಿದ್ದರಾಮಯ್ಯ ಅವರು ಸರಿಯಾದ ಉತ್ತರ ಕೊಟ್ಟಿಲ್ಲ. ಇದು ಚಿಕ್ಕ ವಿಚಾರ ಅಲ್ಲ, ಗಂಭೀರ ಪ್ರಕರಣ. ಇದು ಎಲ್ಲ ಶಾಸಕರು, ಸದನದ ಹಾಗೂ ರಾಜ್ಯದ ಮರ್ಯಾದೆ ಪ್ರಶ್ನೆಯೂ ಹೌದು. ಹಾಗಾಗಿ ಈ ಬಗ್ಗೆ ಸಿಬಿಐ ಅಥವಾ ಹಾಲಿ ನ್ಯಾಯಾಧೀಶರ ನೇತೃತ್ವದಲ್ಲಿ ತನಿಖೆ ನಡೆಸಬೇಕು ಎಂದು ಆಗ್ರಹಿಸಿದ್ದಾರೆ.

ಕೆ.ಎನ್.ರಾಜಣ್ಣ ಅವರು ಸಾಮಾನ್ಯ ವ್ಯಕ್ತಿಯೇನಲ್ಲ. ಅವರು ಇದೇ ಕಾಂಗ್ರೆಸ್ ಸರ್ಕಾರದ ಸಚಿವರು. ಹೀಗಿರುವಾಗ ಅವರೇ ಸದನದಲ್ಲಿ ಆರೋಪ ಮಾಡಿದ್ದು, ಈ ಸರ್ಕಾರದಲ್ಲಿ ದಲಿತ ಸಚಿವರಿಗೆ ಸೂಕ್ತ ರಕ್ಷಣೆಯೇ ಇಲ್ಲ. ಇದನ್ನೆಲ್ಲ ಗಮನಿಸಿದರೆ ಸಿಎಂ ಕುರ್ಚಿಗಾಗಿಯೇ ಹನಿಟ್ರ್ಯಾಪ್ ಯತ್ನ ನಡೆದಿದೆ ಎಂದು ಅಶೋಕ್ ಹೊಸ ಬಾಂಬ್ ಸಿಡಿಸಿದ್ದಾರೆ.
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ತಮ್ಮ ಕ್ಯಾಬಿನೆಟ್ ಸಚಿವರ ಗೌರವ ಕಾಪಾಡಬೇಕು. ಹನಿಟ್ರ್ಯಾಪ್ ದಂಧೆಯ ಕುರಿತು ಸಮಗ್ರ ತನಿಖೆ ನಡೆಸಬೇಕು. ಹನಿಟ್ರ್ಯಾಪ್ ದಂಧೆಯಲ್ಲಿ ನ್ಯಾಯಾಧೀಶರನ್ನು, ರಾಜಕೀಯ ನಾಯಕರನ್ನೂ ಬೀಳಿಸಲಾಗಿದೆ ಎಂದು ಪತ್ರಿಕೆಗಳು ವರದಿ ಮಾಡಿವೆ. ಹೀಗಾಗಿ, ಹಾಲಿ ಹೈಕೋರ್ಟ್ ನ್ಯಾಯಾಧೀಶರ ಮೂಲಕ ಈ ಬಗ್ಗೆ ತನಿಖೆ ನಡೆಸಬೇಕು. ಮುಖ್ಯಮಂತ್ರಿ ಪದವಿಗೋ, ರಾಜಕೀಯ ಹಿತಾಸಕ್ತಿಗೋ ಇಷ್ಟು ಕೀಳುಮಟ್ಟಕ್ಕೆ ಯಾರೂ ಇಳಿಯಬಾರದು ಎಂದು ವಾಗ್ದಾಳಿ ನಡೆಸಿದ್ದಾರೆ.

ಸಿಎಂ ಸಿದ್ದರಾಮಯ್ಯ ಹೇಳಿದ್ದೇನು?:
ಹನಿಟ್ರ್ಯಾಪ್ ವಿಚಾರವಾಗಿ ಪ್ರತಿಕ್ರಿಯಿಸಿರುವ ಸಿಎಂ ಸಿದ್ದರಾಮಯ್ಯ ಅವರು, ಸಚಿವರು ಹಾಗೂ ಪರಿಶಿಷ್ಟ ವರ್ಗದ ನಾಯಕರೂ ಆಗಿರುವ ಕೆ.ಎನ್.ರಾಜಣ್ಣ ಅವರು ತಮ್ಮ ಮೇಲೆ ಹನಿಟ್ರ್ಯಾಪ್ ಪ್ರಯತ್ನ ನಡೆದಿದೆ ಎಂದು ಆರೋಪಿಸಿರುವ ಬಗ್ಗೆ ಈಗಾಗಲೇ ಗೃಹ ಸಚಿವರು ಉತ್ತರಿಸಿದ್ದಾರೆ. ರಾಜಣ್ಣ ಅವರು ದೂರು ಕೊಟ್ಟರೆ ಉನ್ನತ ಮಟ್ಟದ ತನಿಖೆ ನಡೆಸಲಾಗುತ್ತದೆ ಎಂದು ಪರಮೇಶ್ವರ್ ಅವರು ಭರವಸೆ ನೀಡಿದ ಮೇಲೂ ವಿಪಕ್ಷಗಳ ಶಾಸಕರು ಸದನದಲ್ಲಿ ಮತ್ತೆ ಅದನ್ನ ಪ್ರಸ್ತಾಪಿಸುವುದು ಸರಿಯಲ್ಲ ಎಂದಿದ್ದಾರೆ.
ಇಂತಹ ಪ್ರಕರಣದಲ್ಲಿ ಯಾರೇ ತೊಂದರೆಗೆ ಒಳಗಾಗಿದ್ದರೂ ಅವರಿಗೆ ರಕ್ಷಣೆ ಕೊಡಬೇಕಿರುವುದು ಸರ್ಕಾರದ ಜವಾಬ್ದಾರಿ. ಕಾನೂನಿನ ಪ್ರಕಾರ ತಪ್ಪಿತಸ್ಥರಿಗೆ ಶಿಕ್ಷೆಯಾಗಲೇಬೇಕು. ಎತ್ತು ಈಯಿತು ಎಂದ ಮಾತ್ರಕ್ಕೆ ಕೊಟ್ಟಿಗೆಗೆ ಕಟ್ಟು ಎಂದು ಹೇಳಲಾಗಲ್ಲ. ರಾಜಣ್ಣ ಅವರು ಯಾರ ಹೆಸರನ್ನೂ ಇಲ್ಲಿವರೆಗೆ ಹೇಳಿಲ್ಲ. ಹೇಳಿದ್ದರೆ ಕ್ರಮ ತೆಗೆದುಕೊಳ್ಳಬಹುದಾಗಿತ್ತು. ಪ್ರಕರಣದಲ್ಲಿ ಯಾರನ್ನೂ ರಕ್ಷಿಸುವ ಪ್ರಶ್ನೆಯೇ ಇಲ್ಲ ಎಂದೂ ಸಿಎಂ ಸ್ಪಷ್ಟಪಡಿಸಿದ್ದಾರೆ.
ಇದೇ ವಿಚಾರ ಮುಂದಿಟ್ಟುಕೊಂಡು ಬಿಜೆಪಿ ಸದಸ್ಯರು ಸದನದ ಅಮೂಲ್ಯ ಸಮಯವನ್ನು ವ್ಯರ್ಥ ಮಾಡುತ್ತಿರುವುದು ನೋವಿನ ವಿಚಾರ. ರಾಜ್ಯದ ಕೋಟ್ಯಂತರ ಜನರ ಆಶೋತ್ತರಗಳನ್ನು, ದುಃಖ ದುಮ್ಮಾನಗಳನ್ನು ಚರ್ಚಿಸಿ, ಅವುಗಳಿಗೆ ಪರಿಹಾರ ಕಂಡುಕೊಳ್ಳಬೇಕಿರುವುದು ನಮ್ಮ ಕರ್ತವ್ಯ. ಇದಕ್ಕೆ ವಿಪಕ್ಷಗಳು ಪ್ರತಿಭಟನೆ ಕೈಬಿಟ್ಟು ನಮ್ಮ ಜೊತೆ ಸಹಕರಿಸಬೇಕು ಎಂದೂ ಮನವಿ ಮಾಡಿದ್ದಾರೆ. ಒಟ್ಟಾರೆ ಹನಿಟ್ರ್ಯಾಪ್ ವಿಚಾರವು ವಿಪಕ್ಷಗಳಿಗೆ ದೊಡ್ಡ ಅಸ್ತ್ರವಾಗಿ ಪರಿಣಮಿಸಿದೆ.












Click it and Unblock the Notifications