HMPV Virus: ಬೆಂಗಳೂರಿನ ಮಗುವಿನಲ್ಲಿ ಎಚ್ಎಂಪಿವಿ ವೈರಸ್ ಪತ್ತೆ: HMPV ವೈರಸ್‌ಗೆ ಚಿಕಿತ್ಸೆ ಏನು?
ಬೆಂಗಳೂರು, ಜನವರಿ 06: ಚೀನಾದಲ್ಲಿ ಕೋರೋನ ವೈರಸ್ ಗಿಂತಲೂ ವಿಭಿನ್ನವಾದ ಎಚ್ಎಂಪಿವಿ ಹೊಸ ವೈರಸ್ ಅಬ್ಬರಿಸುತ್ತಿದ್ದು, ಈ ಒಂದು ವೈರಸ್ ಇದೀಗ ಭಾರತಕ್ಕೂ ದಾಂಗುಡಿ ಇಟ್ಟಿದೆ. ಕರ್ನಾಟಕದ ಬೆಂಗಳೂರಿನಲ್ಲಿ 8 ತಿಂಗಳ ಮಗುವಿನಲ್ಲಿ ಎಚ್ಎಂಪಿವಿ ವೈರಸ್ ಪತ್ತೆಯಾಗಿದ್ದು, ಕರುನಾಡ ಜನತೆಗೆ ಮತ್ತೆ ಆತಂಕ ಎದುರಾಗಿದೆ.
ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ 8 ತಿಂಗಳ ಮಗುವಿನಲ್ಲಿ ಎಚ್ಎಂಪಿವಿ ವೈರಸ್ ಪತ್ತೆಯಾಗಿದೆ. ಆದರೆ, ಆರೋಗ್ಯ ಇಲಾಖೆ ಇದನ್ನು ಇದುವರೆಗೂ ಖಚಿತಪಡಿಸಿಲ್ಲ ಎಂದು ತಿಳಿದುಬಂದಿದೆ. ನಗರದಲ್ಲಿ 8 ತಿಂಗಳ ಮಗುವೊಂದಕ್ಕೆ ಹೆಚ್‌ಎಂಪಿವಿ ವೈರಸ್ ತಗುಲಿದೆ ಎಂದು ಖಾಸಗಿ ಆಸ್ಪತ್ರೆ ತನ್ನ ವರದಿಯಲ್ಲಿ ತಿಳಿಸಿದೆ. ಆದರೆ ರಾಜ್ಯ ಆರೋಗ್ಯ ಇಲಾಖೆ ವೈರಸ್ ಪತ್ತೆಯಾಗಿರುವುದನ್ನು ಖಚಿತಪಡಿಸಿಲ್ಲ.

'HMPV' ವೈರಸ್ ತಗುಲಿರುವ ಶಂಕೆ ಹಿನ್ನೆಲೆಯಲ್ಲಿ ಮಗುವಿನ ಟ್ರಾವೆಲ್ ಹಿಸ್ಟರಿ ಸಂಗ್ರಹಿಸಿದ್ದು, ಯಾವುದೇ ಸೋಂಕು ತಗುಲಿರುವ ಸಾಧ್ಯತೆ ಖಚಿತವಾಗಿಲ್ಲ. ಹೆಚ್ಚಿನ ತಪಾಸಣೆಗಾಗಿ ಪುಣೆಯ ಪ್ರಯೋಗಾಲಯಕ್ಕೆ ಮಾದರಿಯನ್ನು ಕಳಿಸಿಕೊಡಲಾಗಿದ್ದು, ಅದರ ವರದಿಯನ್ನು ನಿರೀಕ್ಷಿಸಲಾಗುತ್ತಿದೆ ಎಂದು ರಾಜ್ಯ ಆರೋಗ್ಯ ಮತ್ತು ಕುಟುಂಬ ಇಲಾಖೆಯ ಹಿರಿಯ ಅಧಿಕಾರಿಗಳು ತಿಳಿಸಿದ್ದಾರೆ.
HMPV ವೈರಸ್‌ಗೆ ಯಾವುದೇ ನಿರ್ದಿಷ್ಟ ಆಂಟಿವೈರಲ್ ಚಿಕಿತ್ಸೆ ಇಲ್ಲ. ನಿರ್ವಹಣೆ ಸಾಮಾನ್ಯವಾಗಿ ರೋಗಲಕ್ಷಣಗಳನ್ನು ನಿವಾರಿಸುವುದರ ಮೇಲೆ ಕೇಂದ್ರೀಕರಿಸುತ್ತದೆ ಎಂದು ವೈದ್ಯರು ತಿಳಿಸಿದ್ದಾರೆ. ಈ ಎಚ್ಎಂಪಿವಿ ಹೊಸ ವೈರಸ್ ಕಂಡು ಬಂದಲ್ಲಿ, ವಿಶ್ರಾಂತಿಯ ಅವಶ್ಯಕತೆ ಇದೆ ಎಂದು ಹೇಳಲಾಗಿದೆ. ಜ್ವರ ಮತ್ತು ನೋವಿಗೆ ಪ್ರತ್ಯಕ್ಷವಾದ ಔಷಧಗಳನ್ನ ತೆಗೆದುಕೊಳ್ಳಬೇಕಾಗುತ್ತದೆ. ಇನ್ನೂ ತೀವ್ರ ಉಸಿರಾಟದ ತೊಂದರೆಯ ಸಂದರ್ಭಗಳಲ್ಲಿ ಆಸ್ಪತ್ರೆಗೆ ದಾಖಲಾಗಬೇಕು ಎಂದು ಹಿರಿಯ ಅಧಿಕಾರಿಗಳು ತಿಳಿಸಿದ್ದಾರೆ.
ಚೀನಾದಲ್ಲಿ ಕಾಣಿಸಿಕೊಂಡಿರುವ ಹೆಚ್‌ಎಂಪಿವಿ ವೈರಸ್ ಬಗ್ಗೆ ಎಚ್ಚರಿಕೆಯಿಂದಿರುವಂತೆ ಕೇಂದ್ರ ಸರ್ಕಾರ ರಾಜ್ಯಗಳಿಗೆ ಸೂಚನೆ ನೀಡಿರುವ ಬೆನ್ನಲ್ಲೆ ರಾಜ್ಯ ಆರೋಗ್ಯ ಇಲಾಖೆ ವೈರಸ್ ನಿಯಂತ್ರಿಸಲು ಕೆಲವು ಮಾರ್ಗಸೂಚಿಗಳನ್ನು ಪಾಲಿಸುವಂತೆ ಜನತೆ ಬಳಿ ಮನವಿ ಮಾಡಿಕೊಂಡಿದೆ.
ಆರೋಗ್ಯ ಇಲಾಖೆ ಕೊಟ್ಟ ಸೂಚನೆ ಏನು?
* ನೀವು ಕೆಮ್ಮುವಾಗ ಅಥವಾ ಸೀನುವಾಗ ನಿಮ್ಮ ಬಾಯಿ ಮತ್ತು ಮೂಗನ್ನು ಕರವಸ್ತ್ರ ಅಥವಾ ಟಿಶ್ಯೂ ಪೇಪರ್‌ನಿಂದ ಮುಚ್ಚಿಕೊಳ್ಳಿ.
*ನಿಮ್ಮ ಕೈಗಳನ್ನು ಸಾಬೂನು ಮತ್ತು ನೀರು ಅಥವಾ ಆಲ್ಕೋಹಾಲ್ ಆಧಾರಿತ ಸ್ಯಾನಿಟೈಜರ್‌ನಿಂದ ಹೆಚ್ಚಾಗಿ ತೊಳೆಯಿರಿ
* ಜನಸಂದಣಿ ಇರುವ ಸ್ಥಳಗಳನ್ನು ತಪ್ಪಿಸಿ
* ನಿಮಗೆ ಜ್ವರ, ಕೆಮ್ಮು ಮತ್ತು ಸೀನುವಿಕೆ ಇದ್ದಲ್ಲಿ ಸಾರ್ವಜನಿಕ ಸ್ಥಳಗಳಿಂದ ದೂರವಿರಿ.
* ಪ್ರಸರಣವನ್ನು ಕಡಿಮೆ ಮಾಡಲು ಎಲ್ಲಾ ಸೆಟ್ಟಿಂಗ್‌ಗಳಲ್ಲಿ ಹೊರಾಂಗಣ ಗಾಳಿಯೊಂದಿಗೆ ಸಾಕಷ್ಟು ವಾತಾಯನವನ್ನು ಶಿಫಾರಸು ಮಾಡಲಾಗಿದೆ
* ಮನೆಯಲ್ಲಿಯೇ ಇರಿ ಮತ್ತು ನೀವು ಅನಾರೋಗ್ಯದಿಂದ ಬಳಲುತ್ತಿದ್ದರೆ ಇತರರೊಂದಿಗೆ ಸಂಪರ್ಕವನ್ನು ಮಿತಿಗೊಳಿಸಿ
* ಸಾಕಷ್ಟು ನೀರು ಕುಡಿಯಿರಿ ಮತ್ತು ಪೌಷ್ಟಿಕ ಆಹಾರವನ್ನು ಸೇವಿಸಿ
*ಮಕ್ಕಳು ಹಾಗೂ ಹಿರಿಯರ ಬಗ್ಗೆ ಹೆಚ್ಚಿನ ಜಾಗೃತೆ ವಹಿಸಿ.
ಯಾವ ಕೆಲಸವನ್ನ ಮಾಡಬಾರದು
* ಟಿಶ್ಯೂ ಪೇಪರ್ ಮತ್ತು ಕೈ ಕರ್ಚೀಫ್ ಮರುಬಳಕೆ
* ಅನಾರೋಗ್ಯದ ಜನರೊಂದಿಗೆ ನಿಕಟ ಸಂಪರ್ಕ, ಟವೆಲ್, ಬಟ್ಟೆಗಳನ್ನು ಇತ್ಯಾದಿಗಳನ್ನು ಹಂಚಿಕೊಳ್ಳುವುದು.
* ಕಣ್ಣು, ಮೂಗು ಮತ್ತು ಬಾಯಿಯನ್ನು ಆಗಾಗ್ಗೆ ಸ್ಪರ್ಶಿಸುವುದು
* ಸಾರ್ವಜನಿಕ ಸ್ಥಳಗಳಲ್ಲಿ ಉಗುಳುವುದು
* ವೈದ್ಯರನ್ನು ಸಂಪರ್ಕಿಸದೆ ಸ್ವ-ಔಷಧಿ ತೆಗೆದುಕೊಳ್ಳುವುದು












Click it and Unblock the Notifications