HMPV Virus: ಎಚ್‌ಎಂಪಿವಿ 2001ರಿಂದಲ್ಲೂ ನಮ್ಮಲ್ಲಿ ಇದೆ, ಡೋಂಟ್ ವರಿ ಎಂದ ಆರೋಗ್ಯ ಇಲಾಖೆ!
ಕರ್ನಾಟಕದಲ್ಲಿ ಎಚ್‌ಎಂಪಿವಿ (ಹ್ಯೂಮನ್ ಮೆಟಾನ್ಯುಮೊ ವೈರಸ್) ಸೋಂಕು ಇಬ್ಬರು ಮಕ್ಕಳಲ್ಲಿ ದೃಢಪಟ್ಟಿದೆ. ಇದರ ಬೆನ್ನಲ್ಲೇ ರಾಜ್ಯದಲ್ಲಿ ಭಾರೀ ಆತಂಕ ಎದುರಾಗಿದೆ. ರಾಜ್ಯದಲ್ಲಿ ಕೋವಿಡ್ ಸಂಕಷ್ಟದಿಂದ ಚೇತರಿಸಿಕೊಂಡು ಇನ್ನೇನು ಜೀವನ ಸರಿಯಾದ ಹಳಿಗೆ ಬರುತ್ತಿದೆ ಎನ್ನುವಾಗಲೇ ಎಚ್‌ಎಂಪಿವಿ ಭೂತ ಬಂದಿದೆ ಎನ್ನುವುದು ಜನ ಸಾಮಾನ್ಯರಲ್ಲಿ ಹೊಸ ಭಯವನ್ನು ಸೃಷ್ಟಿ ಮಾಡಿತ್ತು. ಇದೀಗ ಕರ್ನಾಟಕದ ಜನ ತುಸು ನಿರಾಳರಾಗುವ ಸುದ್ದಿಯೊಂದನ್ನು ರಾಜ್ಯ ಸರ್ಕಾರ ಕೊಟ್ಟಿದೆ. ಎಚ್‌ಎಂಪಿವಿ ಎನ್ನುವ ಸೋಂಕು ದೇಶದಲ್ಲಿ 2001ರಿಂದಲೂ ಇದೆ. ಹೀಗಾಗಿ ಈ ಬಗ್ಗೆ ಜನ ಸಾಮಾನ್ಯರು ಆತಂಕಕ್ಕೆ ಒಳಗಾಗುವ ಅವಶ್ಯಕತೆ ಇಲ್ಲ ಎಂದು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಅವರು ಹೇಳಿದ್ದಾರೆ. ಈ ಮೂಲಕ ಸೋಂಕಿನ ಸುದ್ದಿ ಕೇಳಿ ಆತಂಕಕ್ಕೆ ಒಳಗಾಗಿದ್ದ ಜನರು ಸ್ವಲ್ಪ ರಿಲ್ಯಾಕ್ಸ್ ಆಗಿದ್ದಾರೆ. ಹಾಗಾದರೆ ಆರೋಗ್ಯ ಸಚಿವರು ಹೊಸ ವೈರಸ್‌ನ ಬಗ್ಗೆ ಏನೆಲ್ಲಾ ಹೇಳಿದ್ದಾರೆ ಎನ್ನುವ ಮಾಹಿತಿ ಇಲ್ಲಿದೆ.
ಕರ್ನಾಟಕದಲ್ಲಿ ಇಬ್ಬರು ಮಕ್ಕಳಲ್ಲಿ ಎಚ್‌ಎಂಪಿವಿ ಎನ್ನುವ ಸೋಂಕು ಕಾಣಿಸಿಕೊಂಡಿದೆ. ಅದರಲ್ಲೂ ರಾಜ್ಯದಲ್ಲೇ ಹೆಚ್ಚು ಜನರಿರುವ ಬೆಂಗಳೂರಿನಲ್ಲಿ ಈ ಸೋಂಕು ದೃಢಪಟ್ಟಿರುವುದು ಸಹಜವಾಗಿಯೇ ಆತಂಕಕ್ಕೆ ಕಾರಣವಾಗಿತ್ತು. ಅಲ್ಲದೆ ಈ ಸುದ್ದಿ ಇದೀಗ ದೇಶದಾದ್ಯಂತ ಚರ್ಚೆಗೆ ಕಾರಣವಾಗಿದೆ. ಬೆಳಿಗ್ಗೆ ಈ ಸುದ್ದಿ ಪ್ರಕಟವಾಗುತ್ತಿದ್ದಂತೆಯೇ ಜನ ಭಯ ಬಿದಿದ್ದರು. ಎಲ್ಲಿ ಮುಂದಿನ ದಿನಗಳಲ್ಲಿ ಕೋವಿಡ್ ಮಾದರಿಯ ಲಾಕ್‌ಡೌನ್ ಹಾಗೂ ಕೋವಿಡ್ ಸಮಯದ ಸಂಕಷ್ಟಗಳು ಎದುರಾಗಲಿವೆ ಎನ್ನುವ ಭಯ ಎದುರಾಗಿತ್ತು. ಇದೀಗ ಈ ವಿಷಯಗಳಿಗೆ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಅವರು ವಿವರಣೆ ಕೊಟ್ಟಿದ್ದಾರೆ.

ಶೇ 1ರಷ್ಟು ಜನರಲ್ಲಿ ಬರುತ್ತೆ: ಇನ್ನು ಈ ವೈರಸ್‌ನ ಬಗ್ಗೆ ಯಾರೂ ತೀವ್ರವಾಗಿ ಆತಂಕಕ್ಕೆ ಒಳಗಾಗುವ ಅವಶ್ಯಕತೆ ಇಲ್ಲ. ಐಎಲ್‌ಐ ಪ್ರಕರಣಗಳಲ್ಲಿ ಶೇ 1 ರಷ್ಟು ಜನರಲ್ಲಿ ಎಚ್‌ಎಂಪಿವಿ ದೃಢಪಡುತ್ತದೆ. ಈ ರೀತಿ ಆರೋಗ್ಯ ಸಮಸ್ಯೆ ಎದುರಿಸುತ್ತಿದ್ದ ಇಬ್ಬರು ಮಕ್ಕಳನ್ನು ಪರೀಕ್ಷೆಗೆ ಒಳಪಡಿಸಿದ ಸಂದರ್ಭದಲ್ಲಿ ಸೋಂಕು ಇರುವುದು ದೃಢಪಟ್ಟಿದೆ. ಈಗಾಗಲೇ ಮೂರು ತಿಂಗಳ ಮಗುವಿಗೆ ಚಿಕಿತ್ಸೆ ನೀಡಲಾಗಿದೆ. ಆ ಮಗುವನ್ನು ಡಿಸ್ಚಾರ್ಜ್ ಸಹ ಮಾಡಲಾಗಿದೆ. ಇದೀಗ 8 ತಿಂಗಳ ಮಗುವಿನಲ್ಲೂ ಈ ಸೋಂಕು ಕಾಣಿಸಿಕೊಂಡಿದ್ದು. ಇಂದು ಅಥವಾ ನಾಳೆ ಆಸ್ಪತ್ರೆಯಿಂದ ಡಿಸ್ಚಾರ್ಜ್ ಮಾಡಲಾಗುತ್ತದೆ ಎಂದು ಅವರು ಮಾಹಿತಿ ಹಂಚಿಕೊಂಡಿದ್ದಾರೆ.
ಇವರು ಎಚ್ಚರಿಕೆ ವಹಿಸಬೇಕು: ಉಸಿರಾಟದ ಸಮಸ್ಯೆ ಇರುವವರು. ಮಕ್ಕಳು ಹಾಗೂ ಹಿರಿಯರು ಈ ಬಗ್ಗೆ ಎಚ್ಚರವಹಿಸಬೇಕು. ಈ ವೈರಸ್ ಮಾರಣಾಂತಿಕ ಅಲ್ಲ. ನ್ಯುಮೋನಿಯಾ, ರೋಗ ನಿರೋಧಕ ಶಕ್ತಿ ಕಡಿಮೆ ಹಾಗೂ ಉಸಿರಾಟದ ತೊಂದರೆ ಇದ್ದರೆ ಸ್ವಲ್ಪ ಎಚ್ಚರಿಕೆ ವಹಿಸಬೇಕು. ಉಳಿದಂತೆ ಯಾವುದೇ ಆತಂಕಕ್ಕೆ ಒಳಗಾಗಬೇಕಿಲ್ಲ ಎಂದು ಅವರು ಹೇಳಿದ್ದಾರೆ.

ಯಾವುದೇ ಕಠಿಣ ಕ್ರಮವಿಲ್ಲ: ಮೊದಲನೆಯದಾಗಿ ಈ ವೈರಸ್ 2001ರಿಂದಲೂ ಭಾರತದಲ್ಲಿ ಇದೆ. ಈ ವೈರಸ್‌ನಿಂದ ಯಾವುದೇ ಅಪಾಯ ಉಂಟಾಗಲ್ಲ. ಸಾರ್ವಜನಿಕರು ಆತಂಕಕ್ಕೆ ಒಳಗಾಗುವ ಅವಶ್ಯಕತೆ ಇಲ್ಲ. ಕರ್ನಾಟಕದಲ್ಲಿ ಆರೋಗ್ಯ ಇಲಾಖೆ ಯಾವುದೇ ರೀತಿಯ ಕಠಿಣಕ್ರಮಗಳನ್ನು ಜಾರಿ ಮಾಡುವುದಿಲ್ಲ. ಇದಕ್ಕೆ ಸಂಬಂಧಿಸಿದಂತೆ ಕೇಂದ್ರ ಸರ್ಕಾರ ಸಹ ಯಾವುದೇ ನಿರ್ದಿಷ್ಟ ಮಾರ್ಗಸೂಚಿಯನ್ನು ಬಿಡುಗಡೆ ಮಾಡಿಲ್ಲ. ಈ ಸಂಬಂಧ ಕೇಂದ್ರ ಸರ್ಕಾರದೊಂದಿಗೆ ಸಂಪರ್ಕದಲ್ಲಿದ್ದೇವೆ. ಅಲ್ಲದೆ ಐಸಿಎಂಆರ್ ಸೂಚನೆಗಳನ್ನು ಪಾಲಿಸುವುದಾಗಿ ಅವರು ಹೇಳಿದ್ದಾರೆ.












Click it and Unblock the Notifications