Goravanahalli: ಗೊರವನಹಳ್ಳಿ ಮಹಾಲಕ್ಷ್ಮಿ ದೇವಿ ದರ್ಶನ ಪಡೆಯಲು ಹರಿದು ಬಂದ ಭಕ್ತಸಾಗರ!
ಕೊರಟಗೆರೆ: ಅದ್ಧೂರಿಯಾಗಿ ರಾಜ್ಯದೆಲ್ಲೆಡೆ ಇಂದು ವರಮಹಾಲಕ್ಷ್ಮಿ ದೇವಿಗೆ ಪೂಜೆಯನ್ನ ಭಕ್ತರು ನೆರವೇರಿಸಿದ್ದಾರೆ. ವರಮಹಾಲಕ್ಷ್ಮಿ ಹಬ್ಬದ ಹಿನ್ನೆಲೆಯಲ್ಲಿ ದೇವಿಗೆ ಭಕ್ತರು ವಿವಿಧ ವರ ಕೇಳಿದ್ದಾರೆ. ಹೀಗೆ ವಿಶೇಷ ದಿನದಂದು ಗೊರವನಹಳ್ಳಿಯ ಮಹಾಲಕ್ಷ್ಮಿ ದೇವಿ ದರ್ಶನ ಪಡೆಯಲು ಜನಸಾಗರವೇ ಹರಿದು ಬಂದಿತ್ತು.
ಹೌದು ತುಮಕೂರು ಜಿಲ್ಲೆಯ ಕೊರಟಗೆರೆ ತಾಲೂಕಿನ ಗೊರವನಹಳ್ಳಿ ಗ್ರಾಮದ ಮಹಾಲಕ್ಷ್ಮಿ ದೇವಿ ದೇಗುಲದಲ್ಲಿ ಇಂದು ವಿಶೇಷ ಪೂಜೆ ನೆರವೇರಿತು. ಮುಂಜಾನೆಯೇ ಶುರುವಾಗಿದ್ದ ಭಕ್ತರ ಆಗಮನ ಸಂಜೆಯ ತನಕ ಮುಂದುವರಿದಿತ್ತು. ತಮ್ಮ ಮನೆಗಳಲ್ಲಿ ಮಹಾಲಕ್ಷ್ಮಿಗೆ ಪೂಜೆ ಸಲ್ಲಿಸಿದ ಮಹಿಳೆಯರು ಹಾಗೂ ಭಕ್ತ ವೃಂದ ದೇಗುಲಕ್ಕೂ ಆಗಮಿಸಿ ವಿಶೇಷವಾದ ಪೂಜೆ ಸಲ್ಲಿಸಿ ದೇವಿಗೆ ನಮಿಸಿದ್ದಾರೆ. ಶ್ರಾವಣ ಮಾಸದ 2ನೇ ಶುಕ್ರವಾರ ಪೌರ್ಣಿಮೆ ಮೊದಲು ಬರುವ ವರ ಮಹಾಲಕ್ಷ್ಮಿ ಹಬ್ಬ ಭಕ್ತರಿಗೆ ಸಕಲ ಸಂಪತ್ತು ತಂದುಕೊಡುತ್ತದೆ ಎಂಬ ವಾಡಿಕೆ ಇದೆ. ಹೀಗಾಗಿ ಭಕ್ತರು ಮಹಾಲಕ್ಷ್ಮಿ ದೇವಿಗೆ ಭಕ್ತಿಯಿಂದ ನಮಿಸಿದ್ದಾರೆ.

ರಾಜ್ಯದ ಮೂಲೆ ಮೂಲೆಯಿಂದ ಬಂದ ಭಕ್ತರು
ಹಾಗೇ ಗೊರವನಹಳ್ಳಿಯ ಮಹಾಲಕ್ಷ್ಮಿ ದೇವಿ ದರ್ಶನ ಪಡೆಯಲು ಸಾಮಾನ್ಯ ದಿನಗಳಲ್ಲೇ ಸಾವಿರಾರು ಭಕ್ತರು ಆಗಮಿಸುತ್ತಾರೆ. ಇಂದು ವಿಶೇಷ ದಿನವಾದ ಹಿನ್ನೆಲೆಯಲ್ಲಿ ಈ ಸಂಖ್ಯೆ ಲಕ್ಷ ದಾಟಿದೆ ಎನ್ನಲಾಗಿದೆ. ಹೀಗೆ ದೂರದ ಊರುಗಳಿಂದ ಗೊರವನಹಳ್ಳಿಯ ಮಹಾಲಕ್ಷ್ಮಿ ದೇವಿ ದರ್ಶನ ಪಡೆಯಲು ಬಂದಿದ್ದ ಭಕ್ತರಿಗೆ ದಾಸೋಹ ಕಾರ್ಯಕ್ರಮ ಏರ್ಪಡಿಸಿದ್ದರು. ಜೊತೆಗೆ ಭಕ್ತರಿಗೆ ಅಗತ್ಯವಿರುವ ಸೌಲಭ್ಯಗಳನ್ನು ಒದಗಿಸಲಾಗಿತ್ತು. ಹೀಗೆ ರಾಜ್ಯದ ಮೂಲೆ ಮೂಲೆಯಿಂದ ಬಂದಿದ್ದ ಭಕ್ತರು ಗೊರವನಹಳ್ಳಿಯ ಮಹಾಲಕ್ಷ್ಮಿ ದೇವಿ ದರ್ಶನ ಪಡೆದು ಭಕ್ತಿಯಿಂದ ನಮಿಸಿದರು.
ಭಕ್ತರಿಗಾಗಿ ಭದ್ರತೆಯೂ ಹೆಚ್ಚಳ
ರಾಜ್ಯ ಸೇರಿ ಹೊರ ರಾಜ್ಯದಿಂದಲೂ ಭಕ್ತಾಧಿಗಳು ಈ ಕ್ಷೇತ್ರಕ್ಕೆ ಆಗಮಿಸಿ ದೇವಿಯ ಆಶೀರ್ವಾದ ಪಡೆಯುತ್ತಾರೆ. ಪ್ರತಿವರ್ಷ ಕೂಡ ಅದ್ಧೂರಿಯಾಗಿ ಮಹಾಲಕ್ಷ್ಮಿ ಹಬ್ಬ ಆಚರಿಸಲಾಗುತ್ತದೆ. ಈ ವರ್ಷ ಮತ್ತೊಂದು ವಿಶೇಷ ಕೂಡ ಸೇರಿತ್ತು. ಅದೇನೆಂದ್ರೆ ಶಕ್ತಿ ಯೋಜನೆಯ ಹಿನ್ನೆಲೆ ಮಹಿಳಾ ಭಕ್ತರಿಗೆ ಸಾಕಷ್ಟು ಅನುಕೂಲ ಆಗಿತ್ತು. ಹೀಗಾಗಿ ಈ ಬಾರಿ ಮಹಾಲಕ್ಷ್ಮಿ ಹಬ್ಬಕ್ಕೆ ಭಕ್ತರ ಸಂಖ್ಯೆ ಹೆಚ್ಚಾಗಿಯೇ ಇತ್ತು. ಇದರ ಬಗ್ಗೆ ಅಧಿಕಾರಿಗಳು ಕೂಡ ಪ್ರತಿಕ್ರಿಯೆಯನ್ನು ನೀಡಿದ್ದಾರೆ. ಹಾಗೇ ಭಕ್ತರಿಗೆ ಯಾವುದೇ ರೀತಿ ಸಮಸ್ಯೆ ಎದುರಾಗದಂತೆ ಭದ್ರತೆಯನ್ನ ಕೂಡ ಹೆಚ್ಚಿಸಲಾಗಿತ್ತು.

ಶಕ್ತಿ ಯೋಜನೆಯಿಂದ ಭಾರಿ ಅನುಕೂಲ
ತುಮಕೂರು ಜಿಲ್ಲಾಧಿಕಾರಿ ಕೆ.ಶ್ರೀನಿವಾಸ್, ಗೊರವನಹಳ್ಳಿ ಕ್ಷೇತ್ರಕ್ಕೆ ಹೆಚ್ಚಿನ ಮಹಿಳಾ ಭಕ್ತರು ಆಗಮಿಸುತ್ತಿದ್ದಾರೆ. ರಾಜ್ಯ ಸರ್ಕಾರದ ಶಕ್ತಿ ಯೋಜನೆ ಸದುಪಯೋಗ ಪಡೆದು ಕ್ಷೇತ್ರಕ್ಕೆ ಬಂದು ಮಹಾಲಕ್ಷ್ಮಿ ದೇವಿ ದರ್ಶನ ಪಡೆಯುತ್ತಿದ್ದಾರೆ. ಹಬ್ಬದ ಹಿನ್ನೆಲೆಯಲ್ಲಿ ಹೆಚ್ಚಿನ ಭಕ್ತಾಧಿಗಳು ಬರುತ್ತಿದ್ದಾರೆ. ಭದ್ರತೆಗೆ ಸಂಬಂಧಿಸಿದ ಹೆಚ್ಚಿನ ಕೆಲಸವನ್ನ ತಾಲೂಕು ಆಡಳಿತ ನಿರ್ವಸಿದೆ, ದೇವಾಲಯದ ಟ್ರಸ್ಟ್ ಸಹ ಅನುಕೂಲ ಕಲ್ಪಿಸಿದೆ ಎಂದಿದ್ದಾರೆ.
ಒಟ್ನಲ್ಲಿ ರಾಜ್ಯದ ಶಕ್ತಿ ಯೋಜನೆ ಸದುಪಯೋಗ ಮಾಡಿಕೊಂಡು ಮಹಿಳಾ ಭಕ್ತರು ಪುಣ್ಯ ಕ್ಷೇತ್ರಗಳಿಗೆ ತೆರಳುತ್ತಿದ್ದಾರೆ. ಈ ಪ್ರಮಾಣ ಉಚಿತ ಬಸ್ ಪ್ರಯಾಣ ಆರಂಭವಾದ ನಂತರ ಹೆಚ್ಚಾಗಿದೆ. ರಾಜ್ಯದ ವಿವಿಧ ಕ್ಷೇತ್ರಕ್ಕೆ ಭೇಟಿ ನೀಡಿ, ತಮ್ಮಿಷ್ಟದ ದೇವರಿಗೆ ನಮಿಸುತ್ತಿರುವ ಭಕ್ತರು ಪುನೀತರಾಗುತ್ತಿದ್ದಾರೆ. ಹೀಗಾಗಿಯೇ ರಾಜ್ಯ ಸರ್ಕಾರ ಹಾಗೂ ಸಾರಿಗೆ ಇಲಾಖೆಯು ಕೂಡ ದೊಡ್ಡ ದೊಡ್ಡ ದೇಗುಲ ಇರುವ ಪ್ರದೇಶಕ್ಕೆ ಸೂಕ್ತ ಬಸ್ ವ್ಯವಸ್ತೆಯನ್ನ ಕಲ್ಪಸಿದೆ. ಹಾಗೇ ಭಕ್ತರಿಗೆ ಅನುಕೂಲ ಆಗುವ ರೀತಿ ಶ್ರೀಕ್ಷೇತ್ರಗಳಿಗೆ ಸಂಪರ್ಕ ಕಲ್ಪಿಸಿದೆ.












Click it and Unblock the Notifications