ಬೆಂಗಳೂರು ರೈಲ್ವೆ ಯೋಜನೆಗಳು ವಿಳಂಬ: ಅಂದಾಜು ವೆಚ್ಚ ಶೇ.303ರಷ್ಟು ಹೆಚ್ಚಳ, ಬಾಕಿ ಉಳಿದ ಕಾಮಗಾರಿಗಳು
ಬೆಂಗಳೂರು: ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಅನೇಕ ರಸ್ತೆ ಮತ್ತು ರೈಲ್ವೆ ಮೂಲಸೌಕರ್ಯ ಯೋಜನೆಗಳು ಪ್ರಗತಿಯಲ್ಲಿವೆ. ಬೈಯಪ್ಪನಹಳ್ಳಿ-ಹೊಸೂರು ರೈಲು ಹಳಿ ಮತ್ತು ಯಶವಂತಪುರ-ಚನ್ನಸಂದ್ರ ರೈಲು ಹಳಿ ಡಬ್ಲಿಂಗ್ ಹಾಗೂ ಕಂಟೋನ್ಮೆಂಟ್-ವೈಟ್‌ಫೀಲ್ಡ್ ಚತುಷ್ಪಥ ಯೋಜನೆಗಳನ್ನು ಕೈಗೆತ್ತಿಕೊಂಡು ವರ್ಷಗಳೇ ಕಳೆದರೂ ಇನ್ನೂವರೆಗೂ ಪೂರ್ಣಗೊಂಡಿಲ್ಲ. ಈ ವಿಳಂಬದಿಂದ ಆರಂಭಿಕ ಅಂದಾಜು ವೆಚ್ಚವು ಬರೋಬ್ಬರಿ ಶೇ. 303ರಷ್ಟು ಏರಿಕೆ ಆಗಿದೆ.
ಸರ್ಕಾರದಿಂದ 2018-19ರಲ್ಲಿ ಅನುಮೋದನೆ ಪಡೆದಿದ್ದ 48 ಕಿಲೋ ಮೀಟರ್ ಉದ್ದದ ಬೈಯಪ್ಪನಹಳ್ಳಿ-ಹೊಸೂರು ರೈಲು ಹಳಿ ಡಬ್ಲಿಂಗ್ ಯೋಜನೆ ಇನ್ನೂ ಪೂರ್ಣಗೊಂಡಿಲ್ಲ. ವರ್ಷಗಳ ವಿಳಂಬದ ಬಳಿಕ ಶೇಕಡಾ 30ರಷ್ಟು ಅಂದರೆ ಬರೀ 14 ಕಿಲೋ ಮೀಟರ್ ಮಾತ್ರವೇ ಪೂರ್ಣಗೊಂಡಿದ್ದು, ಇಷ್ಟು ಕಡಿಮೆ ಮಾರ್ಗದಲ್ಲಿ ಮಾತ್ರವೇ ಕಾರ್ಯಾರಂಭ ಮಾಡಲಾಗಿದೆ.

ಹೆಚ್ಚುವರಿ ಮೂಲಸೌಕರ್ಯ ಮತ್ತು ನಿಲ್ದಾಣಗಳ ನವೀಕರಣಗಳು ಹಾಗೂ ವಿಳಂಬ ಕಾರಣದಿಂದ ಯೋಜನಾ ವೆಚ್ಚವು 498.7 ಕೋಟಿ ರೂಪಾಯಿಂದ 688.8 ಕೋಟಿಗೆ ರೂಪಾಯಿಗೆ ಹೆಚ್ಚಾಗಿದೆ. ಇದು ಸುಮಾರು 190 ಕೋಟಿಯಷ್ಟು ಹೆಚ್ಚಾಗಿದೆ ಎಂದು ವರದಿ ಆಗಿದೆ. ಸದ್ಯ ಈ ಮಾರ್ಗದಲ್ಲಿ 4 ನಿಲ್ದಾಣಗಳು ಪೂರ್ಣಗೊಂಡಿವೆ. ಇನ್ನು ಹಲವಾರು ಸೇತುವೆಗಳು, ರೈಲು ಮೇಲ್ಸೇತುವೆ ಮತ್ತು ಸುಮಾರು 18 ಕಿಲೋ ಮೀಟರ್ ಹಳಿ ಕೆಲಸಗಳು ಇನ್ನೂ ಬಾಕಿ ಉಳಿದಿವೆ. ಅವೆಲ್ಲವುಗಳನ್ನು ಪೂರ್ಣಗೊಳಿಸುವತ್ತ ಕರ್ನಾಟಕ ರೈಲ್ವೆ ಮೂಲಸೌಕರ್ಯ ಅಭಿವೃದ್ಧಿ ಕಂಪನಿ (K-RIDE) ಕಾರ್ಯ ನಿರತವಾಗಿದೆ.
ಹೀಲಲಿಗೆ-ಹೊಸೂರು ಮಾರ್ಗ 2027ಕ್ಕೆ ಓಪನ್?
ಇನ್ನೂ ಹೀಲಲಿಗೆ-ಹೊಸೂರು ವಿಭಾಗವು 2026 ರ ಅಂತ್ಯದ ವೇಳೆಗೆ ಪೂರ್ಣಗೊಳ್ಳುವ ನಿರೀಕ್ಷೆ ಇದ್ದು. ಅದು 2027ರ ಆರಂಭದ ವೇಳೆಗೆ ಕಾರಿಡಾರ್ ಪೂರ್ಣವಾಗಿ ಕಾರ್ಯಾರಂಭ ಮಾಡುವ ಸಾಧ್ಯತೆ ಇದೆ. ಇತ್ತೀಚೆಗೆ ರೈಲ್ವೆ ಗುತ್ತಿಗೆದಾರರಿಗೆ ಸಚಿವರು, ಸಂಬಂಧಿಸಿ ಎಂಜಿನಿಯರ್‍ಗಳು ನಿರಂತರ ಪರಿಶೀಲನೆ ನಡೆಸಿ ಕಾಮಗಾರಿಗೆ ವೇಗ ನೀಡುವ ಯತ್ನ ಮಾಡುತ್ತಿದ್ದಾರೆ.
ರೈಲ್ವೆ ಯೋಜನೆಗಳ ಒಟ್ಟು ವೆಚ್ಚ 2498 ಕೋಟಿಗೆ ಏರಿಕೆ!
ಬೆಂಗಳೂರು ಕಂಟೋನ್ಮೆಂಟ್-ವೈಟ್‌ಫೀಲ್ಡ್ ಚತುಷ್ಪಥ ಯೋಜನೆ ಸಹ ಕುಂಟುತ್ತ ಸಾಗಿದೆ. ಯಶವಂತಪುರ-ಚನ್ನಸಂದ್ರ ಡಬ್ಲಿಂಗ್ ಯೋಜನೆಗಳ ಹಾಗೂ ಹಾಲಿ ಬೈಯಪ್ಪನಹಳ್ಳಿ-ಹೊಸೂರು ಪ್ರಮುಖ ರೈಲ್ವೆ ಯೋಜನೆಗಳು ವೆಚ್ಚವು ಆರಂಭಿಕ ಅಂದಾಜು ಮೊತ್ತಕ್ಕಿಂತ ಸಾಕಷ್ಟು ಪಟ್ಟು ಹೆಚ್ಚಾಗಿದೆ. ಂ ಯೋಜನೆಗಳಿಗೆ ಅನುದಾನ ಮಂಜುರಾದಾಗ 1,161 ಕೋಟಿ ರೂಪಾಯಿ ತಗುಲಬಹುದೆಂದು ಅಂದಾಜಿಸಲಾಗಿತ್ತು. ನಿರಂತರ ವಿಳಂಬ ಕಾರಣದಿಂದಾಗಿ 2,498 ಕೋಟಿ ರೂಪಾಯಿಗೆ ಹೆಚ್ಚಾಗಿರುವುದು ದಾಖಲೆಗಳಲ್ಲಿ ಉಲ್ಲೇಖಿಸಲಾಗಿದೆ.
ನೈಋತ್ಯ ರೈಲ್ವೆ (SWR) ಬೆಂಗಳೂರು ಕಂಟೋನ್ಮೆಂಟ್-ವೈಟ್‌ಫೀಲ್ಡ್ ಡಬ್ಲಿಂಗ್ ಯೋಜನೆಯನ್ನು ಕಾರ್ಯಗತಗೊಳಿಸುತ್ತಿದೆ. ಕರ್ನಾಟಕ ಮತ್ತು ಕೇಂದ್ರ ಸರ್ಕಾರಗಳ ಜಂಟಿ ಉದ್ಯಮವಾದ ಕೆ-ರೈಡ್ ಬೈಯಪ್ಪನಹಳ್ಳಿ-ಹೊಸೂರು ಮತ್ತು ಯಶವಂತಪುರ-ಚನ್ನಸಂದ್ರ ಡಬ್ಲಿಂಗ್ ಯೋಜನೆಗಳ ಕಾಮಗಾರಿ ಮುಂದುವರಿಸಿದೆ. ಬೆಂಗಳೂರು ಸಂಚಾರ ದಟ್ಟಣೆ, ರೈಲು ಸೇವೆ ಸುಧಾರಣೆ ದೃಷ್ಟಿಯಿಂದ ನಿಗದಿತ ಅವಧಿಯಲ್ಲಿ ಪೂರ್ಣಗೊಳಿಸಬೇಕಾದ ಅನಿವಾರ್ಯತೆ ಇದೆ. ಒಂದು ವೇಳೆ ಇನ್ನೂ ತಡವಾದರೆ ಅಂದಾಜು ವೆಚ್ಚ ಪ್ರಮಾಣ ಮತ್ತಷ್ಟು ಹೆಚ್ಚಾಗುವ ನಿರೀಕ್ಷೆಗಳು ಇವೆ.
ಬೆಂಗಳೂರು ಉಪನಗರ ರೈಲು ಯೋಜನೆ ಸಹ ನಿಧಾನ
ರಾಜಧಾನಿ ಬೆಂಗಳೂರಿನಲ್ಲಿ ಒಟ್ಟು 148 ಕಿಲೋ ಮೀಟರ್ ವ್ಯಾಪ್ತಿಯಲ್ಲಿ ಉಪನಗರ ರೈಲು ಯೋಜನೆ ಕೈಗೆತ್ತಿಕೊಳ್ಳಲಾಗಿದೆ. ಆರಂಭದಲ್ಲಿ ಸುಮಾರು 40 ತಿಂಗಳಲ್ಲಿ ಉದ್ಘಾಟನೆ ಆಗಲಿದೆ ಎಂದಿದ್ದ ಸರ್ಕಾರವು ಇದೀಗ 2030ರ ಡೆಡ್‌ಲೈನ್ ನೀಡಿದೆ.
'ಕನಕ, ಮಲ್ಲಿಗೆ, ಪಾರಿಜಾತ ಮತ್ತು ಸಂಪಿಗೆ' ಎಂಬ ನಾಲ್ಕು ಕಾರಿಡಾರ್ ಯೋಜನೆಗಳನ್ನು ರೂಪಿಸಲಾಗಿದೆ. ಅದರಲ್ಲಿ 'ಕನಕ ಮತ್ತು ಮಲ್ಲಿಗೆ' ರೈಲು ಯೋಜನೆಗಳ ಕಾಮಗಾರಿಗಳು ಮಾತ್ರವೇ ನಿಧಾನಗತಿಯಲ್ಲಿ ಸಾಗಿವೆ. ಸಮೀಕ್ಷೆ ಕಾರ್ಯ, ಭೂಸ್ವಾಧೀನ ಹಂತದಲ್ಲಿರುವ ಪಾರಿಜಾತ ಹಾಗೂ ಸಂಪಿಗೆ ಕಾರಿಡಾರ್‍ಗಳು ಇನ್ನೇನು ಆರಂಭಗೊಳ್ಳಲಿವೆ ಎಂದು ರೈಲ್ವೆ ಇಲಾಖೆ ಮೂಲಗಳು ಮಾಹಿತಿ ನೀಡಿವೆ.














Click it and Unblock the Notifications