DK Shivakumar Money Laundering Case: ಚುನಾವಣೆ ಹೊತ್ತಲ್ಲೂ ಸಿಗದ ರಿಲೀಫ್
ಬೆಂಗಳೂರು, ಏಪ್ರಿಲ್ 20: ಆದಾಯ ಮೀರಿ ಆಸ್ತಿ ಗಳಿಕೆ ಪ್ರಕರಣಕ್ಕೆ ಸಂಬಂಧಿಸಿದಂತೆ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಅವರು ಸಿಬಿಐ ತನಿಖೆಗೆ ಅನುಮತಿ ಪ್ರಶ್ನಿಸಿ ಸಲ್ಲಿಸಿದ್ದ ಅರ್ಜಿ ತಿರಸ್ಕೃತಗೊಂಡಿದೆ.
ಕರ್ನಾಟಕ ವಿಧಾನಸಭಾ ಚುನಾವಣೆಗೆ ಕನಕಪುರ ವಿಧಾನಸಭಾ ಕ್ಷೇತ್ರದಿಂದ ನಾಮಪತ್ರ ಸಲ್ಲಿಸಿರುವ ಡಿಕೆ ಶಿವಕುಮಾರ್ ಅವರ ಆದಾಯ ಮೀರಿ ಆಸ್ತಿ ಗಳಿಕೆ ಪ್ರಕರಣ ಸಂಬಂಧ ಸಿಬಿಐ ತನಿಖೆಗೆ ತಡೆಯಾಜ್ಞೆ ಕೋರಿದ್ದ ಅರ್ಜಿ ವಿಚಾರಣೆ ಇಂದು ಅಂತ್ಯಗೊಳಿಸಿದ ಕರ್ನಾಟಕ ಹೈಕೋರ್ಟ್ ತೀರ್ಪು ಕಾಯ್ದಿರಿಸಿತ್ತು.

ಸಿಬಿಐ ತನಿಖೆಗೆ ಸರ್ಕಾರ ನೀಡಿದ್ದ ಅನುಮತಿ ಪ್ರಶ್ನಿಸಿದ್ದ ಅರ್ಜಿ ವಿಚಾರಣೆಯನ್ನು ನ್ಯಾಯಮೂರ್ತಿ ಕೆ. ನಟರಾಜನ್ ಅವರಿದ್ದ ಹೈಕೋರ್ಟ್ ಪೀಠ ನಡೆಸುತ್ತಿತ್ತು. ಸದ್ಯ ಡಿ.ಕೆ.ಶಿವಕುಮಾರ್ ಹಾಗೂ ಸಿಬಿಐ ವಕೀಲರ ವಾದ ಮಂಡನೆ ಅಂತ್ಯಗೊಂಡಿದ್ದು, ಕೋರ್ಟ್ ಆದೇಶ ಕಾಯ್ದಿರಿಸಲಾಗಿತ್ತು. ಇದೇ ವೇಳೆ ಪೀಠವು, ಸಿಬಿಐ ತನಿಖೆಗೆ ಇದ್ದ ತಡೆಯಾಜ್ಞೆಯನ್ನು ವಿಸ್ತರಿಸಿತ್ತು.
ಆದಾಯ ಮೀರಿ ಆಸ್ತಿ ಗಳಿಕೆ ಪ್ರಕರಣ ಸಂಬಂಧ ಸರ್ಕಾರ ಸಿಬಿಐ ತನಿಖೆಗೆ ಆದೇಶಿಸಿತ್ತು. ಇದನ್ನು ಪ್ರಶ್ನಿಸಿದ್ದ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಹೈಕೋರ್ಟ್ ಮೆಟ್ಟಿಲೇರಿದ್ದರು. ತನ್ನ ವಿರುದ್ಧದ ಸಿಬಿಐ ತನಿಖೆಗೆ ತಡೆಯಾಜ್ಞೆ ನೀಡುವಂತೆ ಕೋರಿ ಅರ್ಜಿ ಸಲ್ಲಿಸಿದ್ದರು. ಅದರಂತೆ ವಿಚಾರಣೆ ಕೈಗೆತ್ತಿಕೊಂಡಿದ್ದ ಹೈಕೋರ್ಟ್, ಅರ್ಜಿದಾರರ ಪರ ಹಾಗೂ ಸಿಬಿಐ ಪರ ವಕೀಲರ ವಾದ ಪ್ರತಿವಾದ ಆಲಿಸುತ್ತಾ ಹಲವು ಬಾರಿ ತಡೆಯಾಜ್ಞೆಯನ್ನು ವಿಸ್ತರಿಸಿತ್ತು.
ಡಿಕೆ ಶಿವಕುಮಾರ್ ವಿರುದ್ಧ ಸಿಬಿಐ ತನಿಖೆಗೆ ಅನುಮತಿ ನೀಡಿದ ಸರ್ಕಾರದ ಆದೇಶವನ್ನು ಪ್ರಶ್ನಿಸಿ ಹೈಕೋರ್ಟ್ ಮೆಟ್ಟಿಲೇರಿದ್ದ ಡಿಕೆ ಶಿವಕುಮಾರ್ ಅವರಿಗೆ ಆರಂಭದಲ್ಲಿ ಕೊಂಚ ನೆಮ್ಮದಿ ಸಿಕ್ಕಿತ್ತು. ಫೆಬ್ರವರಿ 24ರವರೆಗೂ ಸಿಬಿಐ ತನಿಖೆಗೆ ಮಧ್ಯಂತರ ತಡೆ ನೀಡಿ ಹೈಕೋರ್ಟ್ ಆದೇಶ ಹೊರಡಿಸಿತ್ತು. ಬಳಿಕ ನಡೆದ ವಿಚಾರಣೆಗಳ ಸಮಯದಲ್ಲಿ ಕೋರ್ಟ್, ಮಾರ್ಚ್ 31ಕ್ಕೆ, ಏಪ್ರಿಲ್ 6ಕ್ಕೆ, ಏಪ್ರಿಲ್ 13ಕ್ಕೆ, ಏಪ್ರಿಲ್ 17ರ ವರೆಗೆ ಮಧ್ಯಂತರ ತಡೆ ವಿಸ್ತರಿಸಿತ್ತು. ಇದೀಗ ಮತ್ತೆ ವಿಸ್ತರಣೆಗೊಂಡಿದೆ. ಆದರೆ ವಿಚಾರಣೆ ಅಂತ್ಯಗೊಂಡಿದ್ದು, ತೀರ್ಪು ಕಾಯ್ದಿರಿಸಲಾಗಿತ್ತು. ಆ ತೀರ್ಪು ಇಂದು ಗುರುವಾರ ಏಪ್ರಿಲ್ 20ರಂದು ಬಂದಿದೆ.
ಈ ಬೆನ್ನಲ್ಲೇ ಈಗ ಕನಕಪುರದಿಂದ ಡಿಕೆ ಶಿವಕುಕುಮಾರ್ ಅವರ ತಮ್ಮ ಡಿಕೆ ಸುರೇಶ್ ಅವರು ಕನಕಪುರ ವಿಧಾನಸಭಾ ಕ್ಷೇತ್ರದಿಂದ ನಾಮಪತ್ರ ಸಲ್ಲಿಸಿದ್ದಾರೆ. ಶಿವಕುಮಾರ್ ಅವರ ವಿರುದ್ಧ ಹಲವು ಪ್ರಕರಣಗಳು ಬಾಕಿ ಇರುವುದರಿಂದ ಅವರ ನಾಮಪತ್ರ ತಿರಸ್ಕೃತವಾಗುವ ಆತಂಕದಲ್ಲಿ ಈ ನಿರ್ಧಾರ ಕೈಗೊಳ್ಳಲಾಗಿದೆ ಎಂಬ ಮಾಹಿತಿ ಲಭ್ಯವಾಗಿದೆ.
ನಮ್ಮ ವಿರುದ್ಧ ಕುತಂತ್ರ ನಡೆಯುತ್ತಿದೆ, ನನಗೆ ದ್ವೇಷದ ರಾಜಕಾರಣ ಮಾಡಿ ಗೊತ್ತಿಲ್ಲ. ಅದನ್ನು ಬಿಜೆಪಿಯವರು ಬೇಕಿದ್ದರೆ ಮಾಡಲಿ ನಾಮಪತ್ರ ಸಲ್ಲಿಕೆ ಕ್ರಮಬದ್ಧವಾಗಿದೆ. ಚುನಾವಣಾಧಿಕಾರಿಗಳು ಸರ್ಕಾರಿ ಅಧಿಕಾರಿಗಳೇ. ಮುಂಜಾಗ್ರತಾ ಕ್ರಮವಾಗಿ ಕನಕಪುರದಿಂದ ನಾಮಪತ್ರ ಸಲ್ಲಿಸಿದ್ದೇನೆ. ಮೇ 10ರ ವರೆಗೂ ಕಾದುನೋಡಿ ಕನಕಪುರದ ಜನ ಎಲ್ಲದಕ್ಕೂ ಉತ್ತರ ನೀಡಲಿದ್ದಾರೆ ಎಂದು ಡಿಕೆ ಸುರೇಶ್ ಹೇಳಿದ್ದಾರೆ.












Click it and Unblock the Notifications