ಕರ್ನಾಟಕದಲ್ಲಿ ರಜನಿಯ 'ಕಾಲಾ' ಬಿಡುಗಡೆಗೆ ಅಭಯ ನೀಡಿದ ಹೈಕೋರ್ಟ್
ಬೆಂಗಳೂರು, ಜೂನ್ 05: ರಜನೀಕಾಂತ್ ಅಭಿನಯದ ತಮಿಳಿನ 'ಕಾಲಾ' ಚಿತ್ರ ಪ್ರದರ್ಶನಕ್ಕೆ ಸೂಕ್ತ ಭದ್ರತೆ ಕಲ್ಪಿಸಿಕೊಡುವಂತೆ ರಾಜ್ಯ ಹೈಕೋರ್ಟ್ ಸರ್ಕಾರಕ್ಕೆ ಸೂಚನೆ ನೀಡಿದೆ.
ಕನ್ನಡ ಪರ ಸಂಘಟನೆಗಳು ಹಾಗೂ ಇನ್ನಿತರ ಸಂಘಟನೆಗಳು ರಜನೀಕಾಂತ್ ಅಭಿನಯದ 'ಕಾಲಾ' ಚಿತ್ರವನ್ನು ನಿರ್ಬಂಧಿಸುವಂತೆ ಪಟ್ಟು ಹಿಡಿದಿದ್ದವು. ಬಿಡುಗಡೆ ಮಾಡಿದರೆ ಪ್ರತಿಭಟನೆ ಮಾಡುವುದಾಗಿ ಹೇಳಿದ್ದವು. ಹಾಗಾಗಿ ಚಿತ್ರದ ನಿರ್ಮಾಪಕರಾದ ಧನುಷ್ ಮತ್ತು ಸೌಂದರ್ಯ ಅವರು ಹೈಕೋರ್ಟ್ ಮೆಟ್ಟಿಲೇರಿದ್ದರು.
ಅರ್ಜಿಯ ವಿಚಾರಣೆ ನಡೆಸಿದ ಹೈಕೋರ್ಟ್ ಮಧ್ಯಂತರ ಆದೇಶ ನೀಡಿದ್ದು, ಡಿಐಜಿ, ಐಜಿಪಿಗಳು ಭದ್ರತೆಯ ಮೇಲುಸ್ತುವಾರಿ ವಹಿಸಬೇಕು ಎಂದಿದೆ. ಅಲ್ಲದೆ ಚಿತ್ರತಂಡವು ಚಿತ್ರ ಪ್ರದರ್ಶನದ ವಿವರಗಳನ್ನು ಪೊಲೀಸ್ ಇಲಾಖೆಯೊಂದಿಗೆ ಹಂಚಿಕೊಳ್ಳಬೇಕು ಎಂದು ಸೂಚಿಸಿದೆ.

ರಜನೀಕಾಂತ್ ಅವರು ಕಾವೇರಿ ವಿವಾದಕ್ಕೆ ಸಂಬಂಧಿಸಿದಂತೆ ಬೇಜವಾಬ್ದಾರಿ ಹೇಳಿಕೆ ನೀಡಿದ್ದಾರೆ ಎಂದು ಆರೋಪಿಸಿ ಅವರ 'ಕಾಲಾ' ಚಿತ್ರ ಬಿಡುಗಡೆಗೆ ನಿರ್ಬಂಧ ಹೇರಬೇಕೆಂದು ಕನ್ನಡ ಸಂಘಟನೆಗಳು ಹೋರಾಟಕ್ಕೆ ಇಳಿದಿದ್ದವು. ಚಿತ್ರವು ವಿಶ್ವದಾದ್ಯಂತ ಗುರುವಾರ, ಮೇ 7ರಂದು ಬಿಡುಗಡೆ ಆಗುತ್ತಿದೆ.












Click it and Unblock the Notifications