2026ರಲ್ಲಿ ಚುನಾವಣೆ ಪರ್ವ: ಸ್ಥಳೀಯ ಅಖಾಡ ಸೇರಿದಂತೆ ಹಲವು ರಾಜ್ಯದಲ್ಲಿ ಎಲೆಕ್ಷನ್ ಹಬ್ಬ: ಸಂಪೂರ್ಣ ಡಿಟೇಲ್ಸ್ ಇಲ್ಲಿದೆ
ಬೆಂಗಳೂರು: 2025ರ ವರ್ಷಕ್ಕೆ ಗುಡ್ ಬೈ ಹೇಳುತ್ತಾ, 2026ರ ವರ್ಷಕ್ಕೆ ಕಾಲಿಟ್ಟಿದ್ದೇವೆ. 2026 ರ ಹೊಸ ವರ್ಷ ಅಡಿ ಇಡುತ್ತಿದ್ದಂತೆ ರಾಜಕೀಯ ಚಟುವಟಿಕೆಗಳು ಬಿರುಸು ಪಡೆದುಕೊಳ್ಳಲಿದ್ದು, ದೇಶಾದ್ಯಂತ ಹೊಸ ವರ್ಷದ ಸಂಭ್ರಮದ ನಡುವೆ ಚುನಾವಣಾಕಣ ಕೂಡ ರಂಗೇರಿದೆ. 2025 ರಲ್ಲಿ ಕೇವಲ ಎರಡು ರಾಜ್ಯಗಳ ವಿಧಾನಸಭಾ ಚುನಾವಣೆ ಹಾಗೂ ಉಪಚುನಾವಣೆಗಳು ನಡೆದಿದ್ದರೇ 2026ರಲ್ಲಿ ಚುನಾಔಣಾ ಪರ್ವವೇ ಶುರುವಾಗಿದೆ. ಈ ವರ್ಷ ಕರ್ನಾಟಕ ರಾಜ್ಯದ ಸ್ಥಳೀಯ ಅಖಾಡ ಸೇರಿದಂತೆ ಐದು ವಿಧಾನಸಭಾ ಚುನಾವಣೆಗಳು ನಡೆಯಲಿವೆ.
ಕರ್ನಾಟಕದಲ್ಲಿ ಈ ವರ್ಷ ಸಾಲು ಸಾಲು ಚುನಾವಣೆಗಳು ನಡೆಯಲಿವೆ. 2023ರಲ್ಲಿ ವಿಧಾನಸಭಾ ಚುನಾವಣೆ, 2024 ರಲ್ಲಿ ಲೋಕಸಭಾ ಚುನಾವಣೆ ನಡೆದಿತ್ತು. ಇದೀಗ 2026ರಲ್ಲಿ ಸ್ಥಳೀಯ ಚುನಾವಣೆ ಮೂಲಕ ಚುನಾವಣಾ ಅಖಾಡ ರಂಗೇರಿದೆ. ರಾಜ್ಯ ರಾಜಧಾನಿ ಬೆಂಗಳೂರಿನ ವಿಧಾಸೌಧದ ಪಡಶಾಲೆಯಿಂದ ಹಿಡಿದು, ರಾಜ್ಯದ ಜಿಲ್ಲೆಯ ಕೊನೆ ಗ್ರಾಮದವರೆಗೂ ಇಡೀ ರಾಜ್ಯ ಚುನಾವಣಾ ಕಣವಾಗಲಿದೆ. ಕರ್ನಾಟಕದಲ್ಲಿ 7 ರಿಂದ 8 ವಿವಿಧ ಚುನಾವಣೆಗಳು ನಡೆಯಲಿದ್ದು, ವಿವಿಧ ರಾಜ್ಯದಲ್ಲಿ ಹಲವು ವಿಧಾನಸಭೆ ಚುನಾವಣೆಗಳಿಗೆ ವೇದಿಕೆ ಸಜ್ಜಾಗುತ್ತಿದೆ. ಹಾಗಾದ್ರೆ 2026ರಲ್ಲಿ ನಡೆಯುವ ಪಂಚ ರಾಜ್ಯದ ಚುನಾವಣೆಗಳು ಯಾವುವು? ಯಾವ್ಯಾವ ಕ್ಷೇತ್ರದಲ್ಲಿ ಚುನಾವಣೆ ನಡೆಯಲಿದೆ ಎಂಬ ಸಂಪೂರ್ಣ ಮಾಹಿತಿ ಇಲ್ಲಿದೆ ನೋಡಿ.

2026ರಲ್ಲಿ ಕರ್ನಾಟಕದಲ್ಲಿ ಚುನಾವಣೆಗಳ ಹಬ್ಬ
2023 ರ ವಿಧಾನಸಭಾ ಚುನಾವಣೆಯಲ್ಲಿ ಭರ್ಜರಿ ಬಹುಮತದಿಂದ ಅಧಿಕಾರಕ್ಕೆ ಬಂದ ಕಾಂಗ್ರೆಸ್ ಇದೀಗ ಎರಡು ವರ್ಷದ ಬಳಿಕ ಸ್ಥಳೀಯ ಸಂಸ್ಥೆಗಳ ಚುನಾವಣೆ ನಡೆಸಲು ಸಜ್ಜಾಗಿದೆ. 2026ರಲ್ಲಿ ಕಾಂಗ್ರೆಸ್ ನಲ್ಲಿನ ನಾಯಕತ್ವ ಬದಲಾವಣೆಯ ಜೊತೆ ಜೊತೆಗೆ ಹೊಸ ವರ್ಷದಲ್ಲಿ ಒಗ್ಗಟ್ಟಿನ ಮಂತ್ರ ಜಪಿಸಿರುವ ಕಾಂಗ್ರೆಸ್, ಸಿಎಂ ಮತ್ತು ಡಿಸಿಎಂ ನೇತೃತ್ವದಲ್ಲಿ ಕರ್ನಾಟಕದ ಸರ್ವಾಂಗೀಣ ಅಭಿವೃದ್ಧಿಯ ಶಪಥ ಮಾಡಿದೆ. ಇದರ ಜೊತೆಗೆ ಈ ವರ್ಷ ಹಲವು ಚುನಾವಣೆಗಳು ಕರ್ನಾಟಕದಲ್ಲಿ ನಡೆಯಲಿದೆ. ಎರಡು ವಿಧಾನಸಭಾ ಕ್ಷೇತ್ರದ ಉಪಚುನಾವಣೆ ಸೇರಿದಂತೆ ಬರೋಬ್ಬರಿ 8 ಚುನಾವಣೆಗಳು ನಡೆಯಲಿವೆ.
ಕರ್ನಾಟಕದಲ್ಲಿ ನಡೆಯುವ ಚುನಾವಣೆಗಳ ಪಟ್ಟಿ
* ಗ್ರಾಮ ಪಂಚಾಯತಿ ಚುನಾವಣೆ
* ತಾಲೂಕು ಪಂಚಾಯತಿ ಚುನಾವಣೆ
* ಜಿಲ್ಲಾ ಪಂಚಾಯತಿ ಚುನಾವಣೆ
* ಪಟ್ಟಣ ಪಂಚಾಯತಿ, ಪುರಸಭೆ, ನಗರ ಸಭೆ ಚುನಾವಣೆ (ನಗರ ಸ್ಥಳೀಯ ಸಂಸ್ಥೆ)
* ಜಿಬಿಎ ಪಾಲಿಕೆ ಚುನಾವಣೆ (ಗ್ರೇಟರ್ ಬೆಂಗಳೂರು ಪ್ರಾಧಿಕಾರ)
* ಮಹಾ ನಗರ ಪಾಲಿಕೆ ಚುನಾವಣೆ
* ವಿಧಾನಸಭಾ ಕ್ಷೇತ್ರಗಳ ಉಪ ಚುನಾವಣೆ
* ವಿಧಾನ ಪರಿಷತ್ ಚುನಾವಣೆ
ಪಂಚ ರಾಜ್ಯಗಳ ಚುನಾವಣೆ
2024ರ ಲೋಕಸಭಾ ಚುನಾವಣೆಯ ಬಳಿಕ 2025ರಲ್ಲಿ ದೆಹಲಿ ಮತ್ತು ಬಿಹಾರ ಚುನಾವಣೆಗಳು ಮಾತ್ರ ನಡೆದಿವೆ. ಈ ಎರಡು ರಾಜ್ಯಗಳಲ್ಲಿ ಬಿಜೆಪಿ ನೇತೃತ್ವದ ಎನ್‌ಡಿಎ ಗೆಲುವು ದಾಖಲಿಸಿ ವಿರೋಧ ಪಕ್ಷಗಳಿಗೆ ಭಾರಿ ಹೊಡೆತವನ್ನೇ ನೀಡಿದೆ. ಇದೀಗ ಈ ವರ್ಷ ನಡೆಯಲಿರುವ ಪಂಚ ರಾಜ್ಯಗಳ ಚುನಾವಣೆಯತ್ತ ಎಲ್ಲರ ದೃಷ್ಟಿ ನೆಟ್ಟಿದೆ. ಅಸ್ಸಾಂ, ತಮಿಳುನಾಡು, ಕೇರಳ, ಪಶ್ಚಿಮ ಬಂಗಾಳ ಮತ್ತು ಪುದುಚೇರಿಯಲ್ಲಿ ವಿಧಾನಸಭಾ ಚುನಾವಣೆಗಳು 2026ರಲ್ಲಿ ನಡೆಯಲಿದೆ. ಜತೆಗೆ ಖಾಲಿಯಾಗಲಿರುವ 75 ರಾಜ್ಯಸಭಾ ಸ್ಥಾನಗಳಿಗೂ ಚುನಾವಣೆ ನಡೆಯುವ ನಿರೀಕ್ಷೆ ಇದೆ.
ಕೇರಳ ವಿಧಾನಸಭಾ ಚುನಾವಣೆ
ಕೇರಳದಲ್ಲಿ ಸಿಪಿಎಂ ನೇತೃತ್ವದ ಆಡಳಿತಾರೂಢ ಎಲ್‌ಡಿಎಫ್, ರಾಜ್ಯದಲ್ಲಿ ದಾಖಲೆಯ ಮೂರನೇ ಗೆಲುವಿನ ನಿರೀಕ್ಷೆಯಲ್ಲಿದ್ದರೆ ಕಾಂಗ್ರೆಸ್ ನೇತೃತ್ವದ ಯುಡಿಎಫ್‌ನಿಂದ ಕಠಿಣ ಸವಾಲನ್ನು ಎದುರಿಸಲಿದೆ. ಇತ್ತೀಚೆಗೆ ನಡೆದಸ್ಥಳೀಯ ಸಂಸ್ಥೆ ಚುನಾವಣೆಯಲ್ಲಿ ಯುಡಿಎಫ್ ನಿರ್ಣಾಯಕ ಸ್ಥಾನ ಪಡೆದಿರುವುದು ಆಡಳಿತ ವಿರೋಧಿ ಅಲೆಯ ಸೂಚನೆ ಎನ್ನಲಾಗುತ್ತಿದೆ. ಕೇರಳದಲ್ಲಿ ಮೇ ಒಳಗೆ ಚುನಾವಣೆ ನಡೆಯಲಿದೆ.
ಅಸ್ಸಾಂ ವಿಧಾನಸಭಾ ಚುನಾವಣೆ
ಅಸ್ಸಾಂನಲ್ಲಿ ವಿಧಾನಸಭಾ ಚುನಾವಣೆಗೆ ಅಖಾಡ ಸಜ್ಜಾಗುತ್ತಿದೆ. ಅಸ್ಸಾಂನಲ್ಲಿ ಬಿಜೆಪಿ ನೇತೃತ್ವದ ಎನ್‌ಡಿಎ ಅಧಿಕಾರವನ್ನು ಉಳಿಸಿಕೊಳ್ಳಲು ಹೋರಾಟ ನಡೆಸಲಿದೆ. ಮುಖ್ಯಮಂತ್ರಿ ಹಿಮಂತ ಬಿಸ್ವಾ ಶರ್ಮಾ ಮತ್ತು ಕಾಂಗ್ರೆಸ್‌ನ ಗೌರವ್ ಗೊಗೊಯ್ ನಡುವೆ ತೀವ್ರ ಸ್ಪರ್ಧೆ ಏರ್ಪಟ್ಟಿದ್ದು, ಇದು ದೇಶದ ಗಮನವನ್ನು ಸೆಳೆಯಲಿದೆ. 2021ರಲ್ಲಿ ಬಿಜೆಪಿ ನೇತೃತ್ವದ ಎನ್‌ಡಿಎ ಇಲ್ಲಿನ 126 ಸ್ಥಾನಗಳಲ್ಲಿ 75 ಸ್ಥಾನಗಳನ್ನು ಗೆದ್ದು ಅಧಿಕಾರಕ್ಕೆ ಬಂದಿದ್ದರೆ ಕಾಂಗ್ರೆಸ್ ನೇತೃತ್ವದ ವಿರೋಧ ಪಕ್ಷವು 29 ಸ್ಥಾನಗಳನ್ನು ಗೆಲ್ಲುವಲ್ಲಿ ಯಶಸ್ವಿಯಾಗಿತ್ತು. ಇದೀಗ ಈ ವರ್ಷ ಅಧಿಕಾರದ ಗದ್ದುಗೆಗಾಗಿ ಚುನಾವಣಾ ತಂತ್ರಗಾರಿಕೆಯನ್ನ ಆರಂಭಿಸಿವೆ.
ಪಶ್ಚಿಮ ಬಂಗಾಳ ವಿಧಾನಸಭಾ ಚುನಾವಣೆ
ಪಶ್ಚಿಮ ಬಂಗಾಳ ವಿಧಾನಸಭಾ ಚುನಾವಣೆಯೂ ಈ ಬಾರಿಯೂ ದೇಶದ ಗಮನ ಸೆಳೆಯಲಿದೆ. ಪಶ್ಚಿಮ ಬಂಗಾಳ ರಾಜ್ಯದಲ್ಲಿ 2011ರಿಂದ ಅಧಿಕಾರದಲ್ಲಿರುವ ಮಮತಾ ಬ್ಯಾನರ್ಜಿ ಸರ್ಕಾರವನ್ನು ಉರುಳಿಸುವ ಪ್ರಯತ್ನದಲ್ಲಿ ಬಿಜೆಪಿಯು ಈ ಬಾರಿಯ ಚುನಾವಣೆಯಲ್ಲಿಯೂ ಹೋರಾಟ ನಡೆಸಲಿದೆ.ಆಡಳಿತಾರೂಢ ಟಿಎಂಸಿ ವಿರುದ್ಧ 2021ರಲ್ಲಿ ಬಿಜೆಪಿ ತನ್ನ ಸ್ಥಾನಗಳ ಸಂಖ್ಯೆಯನ್ನು 3ರಿಂದ 77ಕ್ಕೆ ಏರಿಸಿತ್ತು. ಈ ಬಾರಿ ಭ್ರಷ್ಟಾಚಾರ ಆರೋಪಗಳು, ಮಹಿಳೆಯರ ಮೇಲಿನ ಅಪರಾಧಗಳು ಸೇರಿದಂತೆ ಕೆಲವು ಪ್ರಮುಖ ವಿಷಯಗಳಲ್ಲಿ ಆಡಳಿತ ವಿರೋಧಿ ಅಲೆ ಟಿಎಂಸಿಗೆ ಹೊಡೆತ ನೀಡುವ ಸಾಧ್ಯತೆ ಇದೆ. ಪಶ್ಚಿಮ ಬಂಗಾಲ ಚುನಾವಣೆ ಬಿಜೆಪಿ ಪ್ರತಿಷ್ಠೆಯಾಗಿದ್ದು, ಈ ಬಾರಿಯೂ ಪಶ್ಚಿಮ ಬಂಗಾಳ ಚುನಾವಣೆಯೂ ದೇಶದ ಗಮನ ಸೆಳೆಯಲಿದೆ.
ತಮಿಳುನಾಡು ವಿಧಾನಸಭಾ ಚುನಾವಣೆ
ತಮಿಳುನಾಡಿನಲ್ಲಿ ವಿಧಾನಸಭಾ ಚುನಾವಣಾ ಕಾವು ನಿಧಾನವಾಗಿ ಏರುತ್ತಿದೆ. ತಮಿಳುನಾಡಿನಲ್ಲಿ ಏಪ್ರಿಲ್ - ಮೇನಲ್ಲಿ ಎಲೆಕ್ಷನ್ ನಡೆಯಲಿದ್ದು, ಆಳುವ ಡಿಎಂಕೆ ಸರಕಾರದ ವಿರುದ್ಧ ಪ್ರತಿಪಕ್ಷಗಳು ಮುಗಿಬಿದ್ದಿದ್ದು, ಇದೀಗ ತಮಿಳು ಚಿತ್ರರಂಗದ ಜನಪ್ರಿಯ ನಟ ವಿಜಯ್ ಅವರ ರಾಜಕೀಯ ಪ್ರವೇಶದ ನಂತರ ತಮಿಳುನಾಡಿನ ರಾಜಕೀಯ ಚಿತ್ರಣವೇ ಬದಲಾಗುತ್ತಿದೆ. ತಮಿಳುನಾಡಿನ ರಾಜಕಾರಣ ಅಂದರೆ ಅದು ಡಿಎಂಕೆ ಹಾಗೂ ಅಣ್ಣಾಡಿಎಂಕೆ ನಡುವಿನ ಜಿದ್ದಾಜಿದ್ದಿ ಕಣವಾಗಿತ್ತು. ಇದೀಗ ನಟ ವಿಜಯ್ ಅವರ ಪ್ರವೇಶದಿಂದ ತ್ರಿಕೋನ ಸ್ಪರ್ಧೆಗೆ ಅಖಾಡ ಸಜ್ಜಾಗಿದೆ.
ಪುದುಚೇರಿ ವಿಧಾನಸಭಾ ಚುನಾವಣೆ
ಪುದುಚೇರಿ ವಿಧಾನಸಭಾ ಚುನಾವಣೆ 2026 ರ ಏಪ್ರಿಲ್-ಮೇ ತಿಂಗಳಿನಲ್ಲಿ ನಡೆಯಲಿದೆ .ಚುನಾವಣೆ ಕುರಿತು ಇನ್ನೂ ಅಧಿಕೃತವಾಗಿ ಘೋಷಿಸಲಾಗಿಲ್ಲ, ಆದರೆ ವಿಧಾನಸಭೆಯ ಕಾಲಮಿತಿ ಜೂನ್ 15, 2026 ಕ್ಕೆ ಮುಕ್ತಾಯಗೊಳ್ಳುತ್ತದೆ. ಪ್ರಸ್ತುತ ಚುನಾವಣೆಯಲ್ಲಿ ಎನ್‌ಡಿಎ ಮತ್ತು ಸೆಕ್ಯುಲರ್ ಪ್ರೊಗ್ರೆಸಿವ್ ಅಲೈಯೆನ್ಸ್ (ಎಸ್‌ಪಿಎ) ನಡುವೆ ತೀವ್ರ ಸ್ಪರ್ಧೆ ನಿರೀಕ್ಷಿಸಲಾಗಿದೆ.












Click it and Unblock the Notifications