ರಾಜ್ಯದ ದಕ್ಷಿಣ ಒಳನಾಡಿನಲ್ಲಿ ಮುಂದಿನ 3 ದಿನ ಭಾರಿ ಮಳೆ
ಬೆಂಗಳೂರು, ಆಗಸ್ಟ್ 21: ರಾಜ್ಯದಲ್ಲಿ ಇಂದಿನಿಂದ ಮೂರು ದಿನಗಳ ಕಾಲ ಭಾರಿ ಮಳೆಯಾಗುವ ಮುನ್ಸೂಚನೆಗಳಿವೆ.
ಇಂದಿನಿಂದ ಆಗಸ್ಟ್ 24ರ ವರೆಗೆ ಕರಾವಳಿ ಭಾಗದಲ್ಲಿ ಹೆಚ್ಚಿನ ಪ್ರಮಾಣದ ಮಳೆಯಾಗಲಿದ್ದು, ರಾಜ್ಯದ ದಕ್ಷಿಣ ಒಳನಾಡಿನಲ್ಲಿ ಮೂರು ದಿನಗಳ ಕಾಲ ಮಳೆ ಮುಂದುವರಿಯಲಿದೆ.
ಆ.23 ಮತ್ತು 24ರಂದು ದಕ್ಷಿಣ ಒಳನಾಡಿನಲ್ಲಿ ಮಳೆ ಹೆಚ್ಚಾಗುವ ಮುನ್ಸೂಚನೆಗಳಿವೆ. ಬೆಂಗಳೂರು ಸುತ್ತಮುತ್ತ ಮೋಡ ಕವಿದ ವಾತಾವರಣವಿದ್ದು, ಹಗುರದಿಂದ ಸಾಧಾರಣ ಮಳೆ ಮುಂದುವರಿಯಲಿದೆ.
ಉತ್ತರ ಒಳನಾಡಿನಲ್ಲಿ ಇನ್ನೆರಡು ದಿನ ಚದುರಿದಂತೆ ಕೆಲವೆಡೆ ಸಾಧಾರಣ ಮಳೆಯಾಗಲಿದೆ. ಆ.23 ಮತ್ತು 24ರಂದು ಆ ಭಾಗದಲ್ಲಿ ಮಳೆ ಪ್ರಮಾಣ ಕಡಿಮೆಯಾಗಲಿದೆ ಎಂದು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಅರಬ್ಬಿ ಸಮುದ್ರದ ಪೂರ್ವಭಾಗದಲ್ಲಿ ಕಡಿಮೆ ಒತ್ತಡವಿರುವ ವಿಸ್ತರಿಸಿದ ಪ್ರದೇಶ ನಿರ್ಮಾಣವಾಗಿದ್ದು, ಕರಾವಳಿ ಭಾಗದ ಎಲ್ಲ ಜಿಲ್ಲೆಗಳಲ್ಲಿ ವ್ಯಾಪಕ ಪ್ರಮಾಣದ ಮಳೆಯಾಗುವ ಸಾಧ್ಯತೆಗಳಿವೆ ಎಂದು ಬೆಂಗಳೂರಿನ ಭಾರತೀಯ ಹವಾಮಾನ ಇಲಾಖೆ ನಿರ್ದೇಶಕ ಸಿ.ಎಸ್.ಪಾಟೀಲ್ ತಿಳಿಸಿದ್ದಾರೆ.
ಕರಾವಳಿಯ ದಕ್ಷಿಣ ಕನ್ನಡ, ಉಡುಪಿ, ಉತ್ತರ ಕನ್ನಡ ಮತ್ತು ಉತ್ತರ ಒಳನಾಡಿನ ಬೆಳಗಾವಿ, ಬೀದರ್, ಧಾರವಾಡ, ಗದಗ, ಹಾವೇರಿ, ಕಲಬುರಗಿ, ಕೊಪ್ಪಳ, ರಾಯಚೂರು ಮತ್ತು ಯಾದಗಿರಿ ಜಿಲ್ಲೆಯಲ್ಲಿ ಮಳೆ ಹೆಚ್ಚಾಗಿದೆ. ಕಳೆದ 10 ದಿನಗಳಿಂದ ಶಿವಮೊಗ್ಗ, ಉತ್ತರ ಕನ್ನಡ, ಚಿಕ್ಕಮಗಳೂರು, ಕೊಡಗಿನಲ್ಲಿ ಭಾರೀ ಮಳೆಯಾಗುತ್ತಿದೆ. ಬೆಂಗಳೂರಿನಲ್ಲಿ ಮಳೆ ಕಡಿಮೆ ಇರಲಿದೆ.

ಬಹುತೇಕ ಜಿಲ್ಲೆಗಳಲ್ಲಿ ಮಳೆ
ಉತ್ತರ ಒಳನಾಡಿನಲ್ಲಿ ಆ.22ರವರೆಗೆ ಕೆಲವು ಕಡೆ ಮಳೆಯಾಗುವ ಸಾಧ್ಯತೆಯಿದ್ದು, ಬಳಿಕ ಮಳೆಯ ಪ್ರಮಾಣ ಕಡಿಮೆಯಾಗುವ ಸಾಧ್ಯತೆಯಿದೆ. ದಕ್ಷಿಣ ಒಳನಾಡಿನಲ್ಲಿ ಆ.22 ರಂದು ಬಹುತೇಕ ಎಲ್ಲ ಕಡೆ ಮಳೆಯಾಗಲಿದೆ. ನಂತರ ಮಳೆಯ ಪ್ರಮಾಣ ಹೆಚ್ಚಬಹುದು ಎಂದು ಅವರು ಹೇಳಿದ್ದಾರೆ.
ಆಗಸ್ಟ್ 24ರವರೆಗೆ ರಾಜ್ಯದ ಕರಾವಳಿಯ ಬಹುತೇಕ ಎಲ್ಲ ಸ್ಥಳಗಳಲ್ಲಿ ವ್ಯಾಪಕ ಮಳೆಯಾಗಲಿದೆ ಎಂದು ಭಾರತೀಯ ಹವಾಮಾನ ಇಲಾಖೆಯ ನಿರ್ದೇಶಕ ಸಿ.ಎಸ್ ಪಾಟೀಲ್ ತಿಳಿಸಿದ್ದಾರೆ.
ಉಡುಪಿಯ ಕೋಟ 6 ಸೆಂ.ಮೀ, ಉತ್ತರ ಕನ್ನಡ ಜಿಲ್ಲೆಯ ಮಂಕಿ, ಗೋಕರ್ಣ, ರಾಯಚೂರಿನ ಅರೆಕಾಲಿನ ಹವಾಮಾನ ವೀಕ್ಷಣಾಲಯ, ಬೆಳಗಾವಿಯ ಕನಬರ್ಗಿ, ಬೆಂಗಳೂರಿನ ಗೋಪಾಲ ನಗರ, ಸೋಂಪುರದಲ್ಲಿ ತಲಾ 3 ಸೆಂ.ಮೀ ಮಳೆಯಾಗಿದೆ.
ಶುಕ್ರವಾರ ರಾಜ್ಯದ ಬಹುತೇಕ ಕಡೆ ಮುಂಗಾರು ಮಳೆ ಸಾಮಾನ್ಯವಾಗಿತ್ತು. ಕರಾವಳಿಯ ಬಹುತೇಕ ಕಡೆ, ದಕ್ಷಿಣ ಒಳನಾಡಿನ ಹಲವು ಕಡೆ ಮತ್ತು ಉತ್ತರ ಒಳನಾಡಿನ ಕೆಲವು ಕಡೆ ಮಳೆಯಾಗಿದೆ.

9ಕ್ಕೂ ಅಧಿಕ ಜಿಲ್ಲೆಗಳಲ್ಲಿ ಮಳೆ
ರಾಜ್ಯದ 9 ಜಿಲ್ಲೆಗಳಲ್ಲಿ ನಾಳೆಯಿಂದ 3 ದಿನಗಳ ಕಾಲ ಭಾರೀ ಮಳೆಯಾಗುವ ಸಾಧ್ಯತೆ ಇದೆ. ಆಗಸ್ಟ್ 23 ಮತ್ತು 24ರಂದು ಕರ್ನಾಟಕದ ಬಹುತೇಕ ಪ್ರದೇಶಗಳಲ್ಲಿ ಮಳೆಯ ಅಬ್ಬರ ಹೆಚ್ಚಾಗಲಿದೆ. ಮುಖ್ಯವಾಗಿ ಕರಾವಳಿ ಮತ್ತು ದಕ್ಷಿಣ ಒಳನಾಡಿನ ಜಿಲ್ಲೆಗಳಲ್ಲಿ ವರುಣ ತನ್ನ ಆರ್ಭಟ ತೋರಿಸಲಿದ್ದಾನೆ. ಶಿವಮೊಗ್ಗ, ರಾಮನಗರ, ಕೊಡಗು, ಚಿಕ್ಕಬಳ್ಳಾಪುರ, ಚಿಕ್ಕಮಗಳೂರು, ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ, ಹಾಸನ ಮತ್ತು ಕೋಲಾರ ಈ 9 ಜಿಲ್ಲೆಗಳಲ್ಲಿ ಆಗಸ್ಟ್ 24ರವರೆಗೆ ಅಧಿಕ ಮಳೆಯಾಗಲಿದ್ದು, ಹಳದಿ ಅಲರ್ಟ್ ಘೋಷಿಸಲಾಗಿದೆ.
ಬಂಗಾಳಕೊಲ್ಲಿಯಲ್ಲಿ ವಾಯುಭಾರ ಕುಸಿತ ಉಂಟಾಗಿರುವುದರಿಂದ ರಾಜ್ಯದ ಕರಾವಳಿ, ಮಲೆನಾಡು ಸೇರಿದಂತೆ ಬಹುತೇಕ ಭಾಗಗಳಲ್ಲಿ ಕಳೆದ ಮೂರು ದಿನಗಳಿಂದ ಮಳೆಯ ಆರ್ಭಟ ಹೆಚ್ಚಾಗಿದೆ. ಆಗಸ್ಟ್ 24ರವರೆಗೂ ಕರ್ನಾಟಕದಲ್ಲಿ ಅಧಿಕ ಮಳೆಯಾಗಲಿದೆ ಎಂದು ಭಾರತೀಯ ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಕರ್ನಾಟಕ ಸೇರಿದಂತೆ ಕೇರಳ, ತಮಿಳುನಾಡಿನಲ್ಲೂ ಮಳೆಯಾಗಲಿದೆ ಎಂದು ತಿಳಿದು ಬಂದಿದೆ.
ಶಿವಮೊಗ್ಗ, ಉತ್ತರ ಕನ್ನಡದಲ್ಲಿ ಮಳೆ ಸಾಧ್ಯತೆ
ಮುಂದಿನ ಮೂರು ದಿನ ಉತ್ತರ ಕನ್ನಡ, ಶಿವಮೊಗ್ಗದಲ್ಲಿ ಭಾರಿ ಮಳೆಯಾಗುವ ಸಾಧ್ಯತೆ ಇದೆ ಎಂದು ಹೇಳಲಾಗಿದೆ.
ಕಳೆದ ಮೂರ್ನಾಲ್ಕು ದಿನಗಳಿಂದ ಶಿವಮೊಗ್ಗ, ಉತ್ತರ ಕನ್ನಡ, ಚಿಕ್ಕಮಗಳೂರು ಹಾಗೂ ಕೊಡಗಿನಲ್ಲಿ ಭಾರೀ ಮಳೆಯಾಗುತ್ತಿದೆ. ರಾಜ್ಯ ರಾಜಧಾನಿ ಬೆಂಗಳೂರಿನಲ್ಲೂ ಮಂಗಳವಾರ ಸಂಜೆಯಿಂದ ಮಳೆಯ ಆರ್ಭಟ ಹೆಚ್ಚಾಗಿದೆ. ಇಂದು ಕೂಡ ಬೆಂಗಳೂರಿನಲ್ಲಿ ಮಳೆಯಾಗುವ ನಿರೀಕ್ಷೆಯಿದೆ ಎಂದು ಹವಾಮಾನ ತಜ್ಞರು ಮುನ್ಸೂಚನೆ ನೀಡಿದ್ದಾರೆ.
ಗುಡುಗು ಸಹಿತ ಧಾರಾಕಾರ ಮಳೆಯಾಗಲಿದೆ. ಉಡುಪಿ, ದಕ್ಷಿಣ ಕನ್ನಡ, ಉತ್ತರ ಕನ್ನಡ, ಬೆಳಗಾವಿ, ಬೀದರ್, ಗದಗ, ರಾಯಚೂರು, ಧಾರವಾಡ, ಹಾವೇರಿ, ಕಲಬುರಗಿ, ವಿಜಯಪುರ, ಕೊಪ್ಪಳ, ಯಾದಗಿರಿಯಲ್ಲಿ ನಾಳೆಯಿಂದ ಮಳೆಯ ಪ್ರಮಾಣ ಹೆಚ್ಚಾಗಲಿದೆ ಎಂದು ಹವಾಮಾನ ಇಲಾಖೆ ಮಾಹಿತಿ ನೀಡಿದೆ.
Recommended Video

ಬೆಂಗಳೂರು ಹವಾಮಾನ
ಬೆಂಗಳೂರಿನಲ್ಲಿ ಮೋಡಕವಿದ ವಾತಾವರಣವಿದ್ದು ಆಗಾಗ ಮಳೆಯಾಗಲಿದೆ. 29 ಡಿಗ್ರಿ ಸೆಲ್ಸಿಯಸ್ ಗರಿಷ್ಠ ಉಷ್ಣಾಂಶ, 20 ಡಿಗ್ರಿ ಸೆಲ್ಸಿಯಸ್ ಕನಿಷ್ಠ ಉಷ್ಣಾಂಶ ದಾಖಲಾಗಿದೆ. ಎಚ್‌ಎಎಲ್‌ನಲ್ಲಿ 28.9 ಡಿಗ್ರಿ ಸೆಲ್ಸಿಯಸ್ ಗರಿಷ್ಠ ಉಷ್ಣಾಂಶ, 18.8 ಡಿಗ್ರಿ ಸೆಲ್ಸಿಯಸ್ ಕನಿಷ್ಠ ಉಷ್ಣಾಂಶ, ಬೆಂಗಳೂರು ನಗರದಲ್ಲಿ 28.4 ಡಿಗ್ರಿ ಸೆಲ್ಸಿಯಸ್ ಗರಿಷ್ಠ ಉಷ್ಣಾಂಶ, 20.4 ಡಿಗ್ರಿ ಸೆಲ್ಸಿಯಸ್ ಕನಿಷ್ಠ ಉಷ್ಣಾಂಶ, ಕೆಐಎಎಲ್‌ನಲ್ಲಿ 28.8 ಡಿಗ್ರಿ ಸೆಲ್ಸಿಯಸ್ ಗರಿಷ್ಠ ಉಷ್ಣಾಂಶ, 19.4 ಡಿಗ್ರಿ ಸೆಲ್ಸಿಯಸ್ ಕನಿಷ್ಠ ಉಷ್ಣಾಂಶ ದಾಖಲಾಗಿದೆ.












Click it and Unblock the Notifications