Heavy Rain: ಬೇಸಿಗೆ ಮಳೆ ಅಬ್ಬರ; ಈ ಜಿಲ್ಲೆಗಳಲ್ಲಿ ವರ್ಷಧಾರೆ
ರಾಜ್ಯದ ಹಲವು ಕಡೆಗಳಲ್ಲಿ ಬೇಸಿಗೆಯಲ್ಲೇ ಮಳೆ ಆರಂಭವಾಗಿದೆ. ಹಲವು ಜಿಲ್ಲೆಗಳು ಈಗಾಗಲೇ ವರ್ಷದ ಮೊದಲ ಮಳೆಯ ದರ್ಶನ ಮಾಡಿವೆ. ಭಾನುವಾರ ಕೂಡ ರಾಜ್ಯದ ಹಲವು ಜಿಲ್ಲೆಗಳಲ್ಲಿ ಉತ್ತಮ ಮಳೆಯಾಗಿದೆ. ತಮಿಳುನಾಡು, ಕೇರಳದ ಹಲವು ಕಡೆಗಳಲ್ಲಿ ವ್ಯಾಪಕ ಮಳೆಯಾಗಿದ್ದು, ರಾಜ್ಯದ ಮೈಸೂರು, ಚಾಮರಾಜನಗರ ಮತ್ತು ಕೊಡಗು ಜಿಲ್ಲೆಯ ಹಲವು ಭಾಗಗಳಲ್ಲಿ ವ್ಯಾಪಕ ಮಳೆಯಾಗಿದೆ.
ಚಾಮರಾಜನಗರ, ಕೊಡಗು ಮತ್ತು ಮೈಸೂರು ಜಿಲ್ಲೆಗಳ ಹಲವು ಸ್ಥಳಗಳಲ್ಲಿ ಗುಡುಗು ಸಹಿತ ಮಳೆಯಾಗುವ ಸಾಧ್ಯತೆ ಇದೆ ಎಂದು ಐಎಂಡಿ ಮಾಹಿತಿಯನ್ನು ಆಧರಿಸಿ ಕೆಎಸ್‌ಎಂಡಿಸಿ ಮುನ್ಸೂಚನೆ ಕೊಟ್ಟಿತ್ತು, ಅದರಂತೆ ಭಾನುವಾರ ಸಂಜೆ ಹಲವು ಕಡೆಗಳಲ್ಲಿ ಗುಡುಗು ಮಿಂಚು ಸಹಿತ ಉತ್ತಮ ಮಳೆಯಾಗಿದೆ.

ಹೆಚ್.ಡಿ.ಕೋಟೆ, ಸರಗೂರು, ಹುಣಸೂರು, ದಕ್ಷಿಣ ಕೊಡಗು ಭಾಗದಲ್ಲಿ ಬಿರುಗಾಳಿ ಸಹಿತ ಮಳೆಯಾಗಿದೆ. ನಾಗರಹೊಳೆ ಅರಣ್ಯದ ದ್ಯಾಮನಕಟ್ಟೆ ಭಾಗದಲ್ಲಿ ವ್ಯಾಪಕ ಮಳೆಯಾಗಿದೆ ಎಂದು ಹವ್ಯಾಸಿ ಹವಾಮಾನ ವೀಕ್ಷಕ ರವಿಕೀರ್ತಿ ಗೌಡ ಎಕ್ಸ್‌ನಲ್ಲಿ ಮಾಹಿತಿ ನೀಡಿದ್ದಾರೆ.
ಈ ಭಾಗದಲ್ಲಿ ಉತ್ತಮ ಮಳೆ
ಮೈಸೂರು ಜಿಲ್ಲೆ ಮತ್ತು ಕೇರಳದ ವಯನಾಡು ಭಾಗಕ್ಕೆ ಹೊಂದಿಕೊಂಡಿರುವಂತೆ ಕೊಡಗು ಜಿಲ್ಲೆಯ ಹಲವು ಕಡೆಗಳಲ್ಲಿ ಭಾರಿ ಗಾಳಿಯೊಂದಿಗೆ ಮಳೆಯಾಗಿದೆ. ದಕ್ಷಿಣ ಕೊಡಗಿನಲ್ಲಿ ಭಾರಿ ಮಳೆಯಾಗಿದ್ದು, ರಾತ್ರಿ ಮತ್ತಷ್ಟು ಮಳೆಯಾಗುವ ಸಾಧ್ಯತೆ ಇದೆ. ದಕ್ಷಿಣ ಕೊಡಗು, ಕಬಿನಿ ಅಣೆಕಟ್ಟು ಭಾಗ ಮತ್ತು ವಯನಾಡು ಜಿಲ್ಲೆಯ ಕೆಲವು ಭಾಗಗಳಲ್ಲಿ ಬಿರುಗಾಳಿ ಬೀಸಿದೆ.
Lightning activity seen from South Mysuru.#MysuruRains https://t.co/ub4ejsKyw5 pic.twitter.com/xvuUvtC1HO
— Mysuru Weather (@MysuruWeather) March 16, 2025
ಎಲ್ಲೆಲ್ಲಿ ಎಷ್ಟೆಷ್ಟು ಮಳೆ
ಭಾನುವಾರ ಸಂಜೆ ಮೈಸೂರು ಜಿಲ್ಲೆಯ ಸಾಗರದಲ್ಲಿ 49.50 ಮಿಮೀ ಮಳೆಯಾಗಿದ್ದು, ತುಂಬಸೋಗೆಯಲ್ಲಿ 38 ಮಿಮೀ ಮಳೆ ದಾಖಲಾಗಿದೆ. ನಾಗನಹಳ್ಳಿಯಲ್ಲಿ 34 ಮಿಮೀ ಮಳೆ ದಾಖಲಾಗಿದೆ. ಹಿರೇಹಳ್ಳಿಯಲ್ಲಿ 31 ಮಿಮೀ ಮಳೆಯಾಗಿದ್ದರೆ, ಬೀಚನಹಳ್ಳಿಯಲ್ಲಿ 30 ಮಿಮೀ ಮಳೆ ಸುರಿದಿದೆ ಎಂದು ರವಿಕೀರ್ತಿ ಗೌಡ ಮಾಹಿತಿ ನೀಡಿದ್ದಾರೆ.
ಕೊಡಗು/ಮೈಸೂರು ಜಿಲ್ಲೆಯ ವಯನಾಡ್ ಮತ್ತು ಕಣ್ಣೂರು ಭಾಗದಲ್ಲಿ ಗುಡುಗು ಸಹಿತ ಮಳೆಯಾಗಿದ್ದು, ಕೇರಳದ ಐಎಂಡಿ ವಯನಾಡ್‌ಗೆ ಭಾರೀ ಗುಡುಗು ಸಹಿತ ಮಳೆಯಾಗುವ ಎಚ್ಚರಿಕೆ ನೀಡಲಾಗಿದೆ.
ರಾಜ್ಯದ ಹಲವು ಜಿಲ್ಲೆಗಳಲ್ಲಿ ಮಾರ್ಚ್ ಮೂರನೇ ವಾರದಿಂದ ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ತಿಳಿಸಿದೆ. ಈ ಬಾರಿ ರಾಜ್ಯದಲ್ಲಿ ಪೂರ್ವ ಮುಂಗಾರು ಉತ್ತಮವಾಗಿರಲಿದ್ದು, ಮಾರ್ಚ್ ಕೊನೆಯ ವಾರ ವ್ಯಾಪಕ ಮಳೆಯಾಗಬಹುದು ಎಂದು ಐಎಂಡಿ ಹೇಳಿದೆ.












Click it and Unblock the Notifications