Heavy Rain: ಕಾವೇರಿ ಉಗಮಸ್ಥಾನದಲ್ಲಿ ಭಾರೀ ಮಳೆ
ಮಳೆಗಾಗಿ ಕಾಯುತ್ತಿರುವ ರಾಜ್ಯದ ಜನತೆಗೆ ನೆಮ್ಮದಿಯ ಸುದ್ದಿ ಸಿಕ್ಕಿದೆ. ಯುಗಾದಿ ಹಬ್ಬದ ಬಳಿಕ ರಾಜ್ಯದ ಹಲವು ಜಿಲ್ಲೆಗಳಿಗೆ ಮಳೆಯಾಗುವ ಮುನ್ಸೂಚನೆ ಇದೆ ಎಂದು ಹವಾಮಾನ ಇಲಾಖೆ ಹೇಳಿದೆ. ಭಾನುವಾರ ಕೊಡಗು ಜಿಲ್ಲೆಯ ಹಲವು ಕಡೆಗಳಲ್ಲಿ ಭಾರಿ ಮಳೆಯಾಗಿದ್ದು, ಮೈಸೂರು, ಚಿಕ್ಕಮಗಳೂರು ಜಿಲ್ಲೆಯಲ್ಲೂ ಮಳೆಯಾಗುತ್ತಿದೆ.
ಜೀವನದಿ ಕಾವೇರಿ ಉಗಮಸ್ಥಾನ ಭಾಗಮಂಡದಲ್ಲಿ 2024ರ ಮೊದಲ ಮಳೆಯಾಗಿದ್ದು, ಸಂಭ್ರಮವನ್ನು ಹೆಚ್ಚಿಸಿದೆ. ಭಾಗಮಂಡಲ ಮಾತ್ರವಲ್ಲದೆ ಸುತ್ತಮುತ್ತಲಿನ ಹಲವು ಪ್ರದೇಶಗಳಲ್ಲಿ ವ್ಯಾಪಕ ಮಳೆಯಾಗುತ್ತಿದೆ.

ಭಾನುವಾರ ಮಧ್ಯಾಹ್ನವೇ ಜಿಲ್ಲೆಯ ಹಲವು ಕಡೆಗಳಲ್ಲಿ ಮಳೆ ಆರಂಭವಾಗಿದ್ದು, ಸಂಜೆ ವೇಳೆ ಹಲವು ಪ್ರದೇಶಗಳಲ್ಲಿ ಬಿರುಸಿನ ಮಳೆಯಾಗಿದೆ.
ಈ ಪ್ರದೇಶಗಳಲ್ಲಿ ಭಾರಿ ಮಳೆ
ಕೊಡಗು ಜಿಲ್ಲೆಯ ಎಮ್ಮೆಮಾಡು, ನೆಳಾಜಿ, ಐಯಂಗೇರಿ, ಪೇರೂರು, ಬಲ್ಲಮಾವಟಿ, ಕಾರುಗುಂದ, ಚೇರಂಬಾಣಿ ಸೇರಿದಂತೆ ಹಲವು ಕಡೆಗಳಲ್ಲಿ ಉತ್ತಮ ಮಳೆಯಾಗಿದ್ದು ಕಾದಿದ್ದ ಭೂಮಿ ತಂಪಾಗಿದೆ. ಸಂಜೆ ವೇಳೆಗೆ ಬಲ್ಲಮಾವಟಿಯಲ್ಲಿ 18 ಮಿ.ಮೀ ಮಳೆಯಾಗಿದ್ದರೆ, ಬೆಂಗೂರಿನಲ್ಲಿ 10 ಮಿ.ಮೀ ಮಳೆಯಾಗಿದೆ ಎಂದು ವರದಿಯಾಗಿದೆ.
#ಎಮ್ಮೆಮಾಡುವಿನಲ್ಲಿ_ಇಂದು_ಉತ್ತಮ_ಮಳೆ.🌧🌧 pic.twitter.com/3Wv8LWpjp6
— Coorgthekashmirofkarnataka (@Coorgthekashmir) April 7, 2024
ಮಳೆ ಮೋಡಗಳು ಮೈಸೂರು ಮತ್ತು ಚಿಕ್ಕಮಗಳೂರು ಜಿಲ್ಲೆಯಲ್ಲೂ ಕಾಣಿಸಿಕೊಂಡಿದ್ದು ಭಾನುವಾರ ರಾತ್ರಿ ಹಲವು ಕಡೆಗಳಲ್ಲಿ ಮಳೆಯಾಗುವ ಸಾಧ್ಯತೆ ಹೆಚ್ಚಾಗಿದೆ.
ಯುಗಾದಿ ಬಳಿಕ ಭರ್ಜರಿ ಮಳೆ
ಯುಗಾದಿ ಬಳಿಕ ರಾಜ್ಯದ ಹಲವು ಜಿಲ್ಲೆಗಳಲ್ಲಿ ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆಯಲ್ಲಿ ತಿಳಿಸಿದೆ. ಏಪ್ರಿಲ್ 10ರಿಂದ ರಾಜ್ಯದ ಹಲವು ಜಿಲ್ಲೆಗಳಲ್ಲಿ ಸಾಧಾರಣ ಮಳೆಯ ಮುನ್ಸೂಚನೆ ನೀಡಲಾಗಿದೆ.
#ಭಾಗಮಂಡಲದಲ್ಲಿ_ವರ್ಷದ_ಮೊದಲ_ಮಳೆ 🌧🌧 pic.twitter.com/W1dkKusZW1
— Coorgthekashmirofkarnataka (@Coorgthekashmir) April 7, 2024
ಆದರೆ ಅದಕ್ಕೂ ಮುನ್ನವೇ ಕೊಡಗು, ಚಿಕ್ಕಮಗಳೂರು, ಮೈಸೂರು ಜಿಲ್ಲೆಗಳಲ್ಲಿ ಚದುರಿದಂತೆ ಉತ್ತಮ ಮಳೆಯಾಗುತ್ತಿರುವುದು ಸ್ವಲ್ಪ ನೆಮ್ಮದಿ ತರಿಸಿದೆ. ಕಳೆದ ವರ್ಷ ಬರಗಾಲವಿದ್ದ ಕಾರಣ ಕೆರೆ, ನದಿ, ಜಲಾಶಯಗಳು ನೀರಿಲ್ಲದೆ ಬಣಗುಡುತ್ತಿವೆ. ಎಲ್ ನಿನೊ ಪರಿಣಾಮವಾಗಿ ಈ ಬಾರಿ ತಾಪಮಾನ ಕೂಡ ಹೆಚ್ಚಾಗಿದ್ದು, ಜನ ಪರದಾಡುವಂತಾಗಿದೆ.
ಏನಾದರೂ ಆಗಲಿ ಮೊದಲು ಮಳೆಯಾದರೆ ಸಾಕು ಎನ್ನುವ ಸ್ಥಿತಿ ಇದೆ. ಕೊಡಗು, ಚಿಕ್ಕಮಗಳೂರು ಜಿಲ್ಲೆಯ ಕಾಫಿ ಬೆಳೆಗಾರರು ಮಳೆಗಾಗಿ ಕಾಯುತ್ತಿದ್ದಾರೆ. ಬೆಳೆ ಉಳಿಸಿಕೊಳ್ಳಲು ಅವರಿಗೆ ಈಗ ಮಳೆ ಅನಿವಾರ್ಯವಾಗಿದೆ. ಬೇಸಿಗೆಯಲ್ಲೇ ಅಲ್ಪಸ್ವಲ್ಪ ಮಳೆಯಾಗುತ್ತಿರುವುದು ಕಾಫಿ ಬೆಳೆಗಾರರ ನಿರೀಕ್ಷೆಯನ್ನು ಹೆಚ್ಚಿಸಿದೆ.
ಇನ್ನು ಬೆಂಗಳೂರು ನಗರದಲ್ಲಿ ಕೂಡ ಶೀಘ್ರದಲ್ಲೇ ಮಳೆಯಾಗುವ ಸಾಧ್ಯತೆ ಇದೆ. ಏಪ್ರಿಲ್ 13 ಅಥವಾ 14ರಂದು ನಗರದಲ್ಲಿ ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದ್ದು, ಸದ್ಯ ಅವರ ಹೇಳಿಕೆಯಂತೆ ಮಳೆಯಾದರೆ ಸಾಕು ಎಂದು ಜನತೆ ಕಾಯುತ್ತಿದ್ದಾರೆ.












Click it and Unblock the Notifications