Heat Wave: ಕರ್ನಾಟಕಕ್ಕೆ ಶಾಖದ ಅಲೆಯ ಭೀತಿ; ಸುಡುವ ಬಿಸಿಲಿನಿಂದ ನಿಮ್ಮ ಆರೋಗ್ಯ ಕಾಪಾಡಿಕೊಳ್ಳಲು ಇಲ್ಲಿದೆ ಟಿಪ್ಸ್
ಕರ್ನಾಟಕದಲ್ಲಿ ಈ ವರ್ಷದ ಬೇಸಿಗೆಯು ವಾಡಿಕೆಗಿಂತ ಹೆಚ್ಚು ಬಿಸಿಯಾಗಿರಲಿದ್ದು, ರಾಜ್ಯದ ಹಲವು ಜಿಲ್ಲೆಗಳಲ್ಲಿ ತೀವ್ರ ಶಾಖದ ಅಲೆ (Heat Wave) ಎದುರಾಗಲಿದೆ ಎಂದು ಭಾರತೀಯ ಹವಾಮಾನ ಇಲಾಖೆ (ಐಎಂಡಿ) ಮುನ್ಸೂಚನೆ ನೀಡಿದೆ. ರಾಜ್ಯದಲ್ಲಿ ಈ ಬಾರಿ ಬೇಸಿಗೆಯ ತಾಪಮಾನವು ವಾಡಿಕೆಗಿಂತ 2ರಿಂದ 6 ಡಿಗ್ರಿ ಸೆಲ್ಸಿಯಸ್ ಹೆಚ್ಚಾಗುವ ಸಾಧ್ಯತೆಯಿದೆ. ಮುಖ್ಯವಾಗಿ ಉತ್ತರ ಒಳನಾಡು ಮತ್ತು ಕರಾವಳಿ ಜಿಲ್ಲೆಗಳಲ್ಲಿ ಶಾಖದ ಅಲೆಯ ಪ್ರಭಾವ ಹೆಚ್ಚಿರಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.
ಒಟ್ಟು 15 ಜಿಲ್ಲೆಗಳಲ್ಲಿ ಸರಾಸರಿ ತಾಪಮಾನವು 4 ಡಿಗ್ರಿ ಸೆಲ್ಸಿಯಸ್ ಹೆಚ್ಚಾಗುವ ಸಾಧ್ಯತೆಯಿದೆ. ಬೀದರ್, ಕಲಬುರಗಿ, ರಾಯಚೂರು ಮತ್ತು ಬಾಗಲಕೋಟೆ ಜಿಲ್ಲೆಗಳಲ್ಲಿ ಮಾರ್ಚ್ ಮತ್ತು ಏಪ್ರಿಲ್ ತಿಂಗಳಲ್ಲಿ ಶಾಖದ ಅಲೆ ಕಾಣಿಸಿಕೊಳ್ಳಬಹುದು ಎಂದು ಮುನ್ಸೂಚನೆ ನೀಡಿದೆ. ಕರಾವಳಿ ಕರ್ನಾಟಕ ಭಾಗದಲ್ಲಿ ತಾಪಮಾನದ ಜೊತೆಗೆ ಆರ್ದ್ರತೆ (Humidity) ಹೆಚ್ಚಿರುವುದರಿಂದ ಜನರಿಗೆ ಹೆಚ್ಚು ಸುಸ್ತು ಮತ್ತು ಅಸ್ವಸ್ಥತೆ ಉಂಟಾಗುವ ಸಾಧ್ಯತೆಯೂ ಇದೆ.

ಮೇ ಅಂತ್ಯದಲ್ಲಿ ಪೂರ್ವ ಮುಂಗಾರು
ದಕ್ಷಿಣ ಒಳನಾಡು ಭಾಗಲ್ಲಿ ಸದ್ಯಕ್ಕೆ ಶಾಖದ ಅಲೆಯ ದಿನಗಳು ಕಂಡುಬರದಿದ್ದರೂ, ಕಳೆದ ವರ್ಷಕ್ಕಿಂತ 1.5 ರಿಂದ 2 ಡಿಗ್ರಿ ಸೆಲ್ಸಿಯಸ್ ಉಷ್ಣಾಂಶ ಹೆಚ್ಚಾಗಲಿದೆ. ಪ್ರಸ್ತುತ ರಾಜ್ಯದ 31 ಜಿಲ್ಲೆಗಳ ಪೈಕಿ 16 ಜಿಲ್ಲೆಗಳಲ್ಲಿ ತಾಪಮಾನವು ಈಗಾಗಲೇ 35 ಡಿಗ್ರಿ ಸೆಲ್ಸಿಯಸ್ ದಾಟಿದೆ. ಹಾವೇರಿ (36.7°C) ಮತ್ತು ರಾಯಚೂರು (36.5°C) ಭಾಗಗಳಲ್ಲಿ ಅತಿ ಹೆಚ್ಚು ಉಷ್ಣಾಂಶ ದಾಖಲಾಗಿದೆ. ಮಾರ್ಚ್ ಮತ್ತು ಏಪ್ರಿಲ್ ತಿಂಗಳುಗಳು ಬಹುತೇಕ ಒಣ ಹವೆಯಿಂದ ಕೂಡಿರಲಿವೆ. ಮುಂಗಾರು ಪೂರ್ವ ಮಳೆಯು ಮೇ ತಿಂಗಳ ಅಂತ್ಯದ ವೇಳೆಗೆ ನಿರೀಕ್ಷಿಸಬಹುದಾಗಿದೆ.
ಶಾಖದ ಅಲೆಗೆ ಕಾರಣವೇನು?
ಸತತ 5 ಅಥವಾ ಅದಕ್ಕಿಂತ ಹೆಚ್ಚು ದಿನಗಳ ಕಾಲ ಗರಿಷ್ಠ ತಾಪಮಾನವು ಸಾಮಾನ್ಯಕ್ಕಿಂತ 5 ಡಿಗ್ರಿ ಸೆಲ್ಸಿಯಸ್ ಹೆಚ್ಚಾಗಿದ್ದರೆ ಅದನ್ನು 'ಶಾಖದ ಅಲೆ' ಎಂದು ಪರಿಗಣಿಸಲಾಗುತ್ತದೆ. ಈ ಬಾರಿ ಕರ್ನಾಟಕದಲ್ಲಿ ಇಂತಹ ಸರಿಸುಮಾರು 6 ದಿನಗಳ ಕಾಲ ಉಷ್ಣಾಂಶ ವಿಪರೀತವಾಗಿ ಏರಲಿದೆ. ಹವಾಮಾನ ಇಲಾಖೆಯ ವರದಿಯ ಪ್ರಕಾರ, ಪ್ರಸ್ತುತ ಸಕ್ರಿಯವಾಗಿರುವ ಎಲ್ ನಿನೋ ವಿದ್ಯಮಾನಗಳು ಭಾರತದಾದ್ಯಂತ ತಾಪಮಾನ ಏರಿಕೆಗೆ ಪ್ರಮುಖ ಕಾರಣವಾಗಿವೆ.

ಬೇಸಿಗೆಯ ಶಾಖದ ಅಲೆ (Heat Wave) ಆರಂಭವಾಗುತ್ತಿರುವ ಈ ಸಮಯದಲ್ಲಿ ನಿಮ್ಮ ಆರೋಗ್ಯವನ್ನು ಕಾಪಾಡಿಕೊಳ್ಳಲು ಈ ಕೆಳಗಿನ ಮುನ್ನೆಚ್ಚರಿಕೆಗಳನ್ನು ಅನುಸರಿಸುವುದು ಬಹಳ ಮುಖ್ಯ:
* ಮಧ್ಯಾಹ್ನ 12ರಿಂದ 4 ಗಂಟೆಯವರೆಗೆ ಬಿಸಿಲಿಗೆ ಹೋಗುವುದನ್ನು ತಪ್ಪಿಸಿ.
* ದೇಹವನ್ನು ಹೈಡ್ರೇಟ್ ಆಗಿಡಿ: ಬಾಯಾರಿಕೆ ಇಲ್ಲದಿದ್ದರೂ ನೀರು ಕುಡಿಯಿರಿ: ಪ್ರತಿ ಅರ್ಧ ಗಂಟೆಗೊಮ್ಮೆ ನೀರು ಕುಡಿಯುವ ಅಭ್ಯಾಸ ಮಾಡಿಕೊಳ್ಳಿ.
* ಎಳನೀರು, ಮಜ್ಜಿಗೆ, ನಿಂಬೆ ಹಣ್ಣಿನ ರಸದಂತಹ ನೈಸರ್ಗಿಕ ಪಾನೀಯಗಳನ್ನು ಸೇವಿಸಿ. ಇವು ದೇಹದ ಲವಣಾಂಶವನ್ನು ಕಾಪಾಡುತ್ತದೆ.
* ಅತಿಯಾದ ಕಾಫಿ, ಚಹಾ, ಕಾರ್ಬೊನೇಟೆಡ್ ಕೂಲ್ ಡ್ರಿಂಕ್ಸ್ ಮತ್ತು ಮದ್ಯಪಾನವನ್ನು ತಪ್ಪಿಸಿ. ಇವು ದೇಹದಲ್ಲಿನ ನೀರನ್ನು ಬೇಗನೆ ಬರಿದು ಮಾಡುತ್ತವೆ
* ಹಗುರವಾದ ಆಹಾರ: ಸುಲಭವಾಗಿ ಜೀರ್ಣವಾಗುವ ಆಹಾರವನ್ನು ಸೇವಿಸಿ. ಅತಿಯಾದ ಎಣ್ಣೆ ಪದಾರ್ಥ ಮತ್ತು ಮಸಾಲೆಯುಕ್ತ ಆಹಾರ ಬೇಡ.
* ಹಣ್ಣು-ತರಕಾರಿಗಳು: ಕಲ್ಲಂಗಡಿ, ಸೌತೆಕಾಯಿ, ಕಿತ್ತಳೆ ಮತ್ತು ದ್ರಾಕ್ಷಿಯಂತಹ ನೀರಿನಂಶ ಹೆಚ್ಚಿರುವ ಹಣ್ಣುಗಳನ್ನು ಹೆಚ್ಚು ತಿನ್ನಿ.
* ತಾಜಾ ಆಹಾರ: ಬೇಸಿಗೆಯಲ್ಲಿ ಆಹಾರವು ಬೇಗನೆ ಹಾಳಾಗುವುದರಿಂದ ಸದಾ ತಾಜಾ ಮತ್ತು ಬಿಸಿ ಆಹಾರವನ್ನೇ ಸೇವಿಸಿ.
* ಉಡುಪು: ಹಗುರವಾದ, ಸಡಿಲವಾದ ಮತ್ತು ತಿಳಿ ಬಣ್ಣದ ಹತ್ತಿ (Cotton) ಬಟ್ಟೆಗಳನ್ನು ಧರಿಸಿ.
* ಹೊರಗೆ ಹೋಗುವಾಗ ಛತ್ರಿ, ಟೋಪಿ ಅಥವಾ ತಲೆಗೆ ತೆಳುವಾದ ಬಟ್ಟೆಯನ್ನು ಸುತ್ತಿಕೊಳ್ಳಿ. ಸನ್ ಗ್ಲಾಸ್ (ಕನ್ನಡಕ) ಮತ್ತು ಸನ್ ಸ್ಕ್ರೀನ್ ಲೋಷನ್ ಬಳಸುವುದು ಒಳ್ಳೆಯದು.
* ಚಿಕ್ಕ ಮಕ್ಕಳು ಮತ್ತು ವಯಸ್ಸಾದವರಿಗೆ ಶಾಖದ ಅಲೆಯ ಪರಿಣಾಮ ಬೇಗನೆ ತಟ್ಟುತ್ತದೆ. ಅವರನ್ನು ಸದಾ ತಂಪಾದ ಜಾಗದಲ್ಲಿರುವಂತೆ ನೋಡಿಕೊಳ್ಳಿ.
* ಮನೆಯ ಕಿಟಕಿಗಳಿಗೆ ಪರದೆಗಳನ್ನು ಹಾಕಿ, ಸೂರ್ಯನ ಶಾಖ ನೇರವಾಗಿ ಮನೆಯೊಳಗೆ ಬರದಂತೆ ತಡೆಯಿರಿ.












Click it and Unblock the Notifications