ಮಕ್ಕಳಿಗೆ ಕೆಮ್ಮಿನ ಸಿರಪ್ ಬಳಕೆ: ಮಹತ್ವದ ಅಪ್ಡೇಟ್ಸ್ ಕೊಟ್ಟ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್
ಕೆಮ್ಮಿನ ಸಿರಪ್ ಸೇವನೆ ಮಾಡಿದ ಮೇಲೆ ಮೂತ್ರಪಿಂಡದ ವೈಫಲ್ಯವಾಗಿ 14ಕ್ಕೂ ಹೆಚ್ಚು ಮಕ್ಕಳು ಮಧ್ಯಪ್ರದೇಶದಲ್ಲಿ ಮೃತಪಟ್ಟಿದ್ದು. ದೇಶದಾದ್ಯಂತ ಕೆಮ್ಮಿನ (ಕಾಫ್ ಸಿರಪ್)ಗೆ ಸಂಬಂಧಿಸಿದಂತೆ ಮಹತ್ವದ ಕ್ರಮಗಳನ್ನು ತೆಗೆದುಕೊಳ್ಳಲಾಗುತ್ತಿದೆ. ಇದೀಗ ಕರ್ನಾಟಕ ಸರ್ಕಾರವು ಸಹ ಈ ವಿಚಾರದಲ್ಲಿ ಕೆಲವೊಂದು ಮಹತ್ವದ ಮಾರ್ಗಸೂಚಿಯನ್ನು ಬಿಡುಗಡೆಗೆ ಮುಂದಾಗಿದೆ.
ದೇಶದ ಬೇರೆ ರಾಜ್ಯಗಳಲ್ಲಿ ಕೆಮ್ಮಿನ ಸಿರಪ್ ದುರಂತ ಸಂಭವಿಸಿದ ಹಿನ್ನೆಲೆಯಲ್ಲಿ ರಾಜ್ಯದಲ್ಲಿ ಕಟ್ಟೆಚ್ಚರ ವಹಿಸಲಾದೆ ಎಂದು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಹೇಳಿದ್ದಾರೆ. ಈ ವಿಚಾರವಾಗಿ ಸುದ್ದಿಗಾರರೊಂದಿಗೆ ಮಾತನಾಡಿರುವ ಅವರು, ಕಳಪೆ ಕೆಮ್ಮಿನ ಸಿರಪ್ ಕರ್ನಾಟಕ ರಾಜ್ಯದಲ್ಲಿ ಸರಬರಾಜು ಆಗಿಲ್ಲ ಎಂದು ಸ್ಪಷ್ಟಪಡಿಸಿದರು.

ಮುನ್ನೆಚ್ವರಿಕೆ ಕ್ರಮವಾಗಿ ಎಲ್ಲಾ ಕಂಪನಿಗಳ ಕೆಮ್ಮಿನ ಸಿರಪ್‌ಗಳ ಮಾದರಿ ಸಂಗ್ರಹಿಸಿ ತಪಾಸಣೆಗೆ ಒಳಪಡಿಸಲಾಗುತ್ತಿದೆ. ರಾಜ್ಯದಲ್ಲಿಯ ಕೆಮ್ಮಿನ ಸಿರಪ್‌ಗಳ ಟೆಸ್ಟ್‌ಗೆ ಇಲಾಖೆ ಮುಂಜಾಗ್ರತ ಕ್ರಮ ಕೈಗೊಂಡಿದೆ. ರಾಜ್ಯದಲ್ಲಿ ಈ ಮೊದಲಿನಿಂದಲು ಔಷಧಿ ನಿಯಂತ್ರಣ ಇಲಾಖೆ ಎಚ್ಚರಿಕೆ ವಹಿಸಿದೆ. ಹೆಚ್ಚಿನ ಔಷಧಿಗಳನ್ನು ತಪಾಸಣೆಗೆ ಒಳಪಡಿಸುತ್ತಿದ್ದು, ಇದರಲ್ಲಿ ಕರ್ನಾಟಕ ದೇಶದಲ್ಲೇ ಮುಂಚೂಣಿಯಲ್ಲಿದೆ ಎಂದಿದ್ದಾರೆ. ರಾಜ್ಯ ಆರೋಗ್ಯ ಇಲಾಖೆಯಿಂದ ಕೆಮ್ಮಿನ ಸಿರಪ್ ಬಳಕೆ ಬಗ್ಗೆ ಮಾರ್ಗಸೂಚಿ ಬಿಡುಗಡೆ ಅಧಿಕಾರಿಗಳಿಗೆ ಸೂಚನೆ ನೀಡಿದ್ದೇನೆ. ಈಗಾಗಲೇ ಬೇರೆ ಬೇರೆ ಕಂಪನಿಗಳ ಎಲ್ಲಾಕೆಮ್ಮಿನ ಸಿರಪ್‌ಗಳ ಮಾದರಿ ಸಂಗ್ರಹಿಸಿ ತಪಾಸಣೆ ನಡೆಸಲಾಗುತ್ತಿದೆ ಎಂದು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಇದೇ ಸಂದರ್ಭದಲ್ಲಿ ಹೇಳಿದ್ದಾರೆ.
ಕರ್ನಾಟಕದಲ್ಲಿ ಸರಬರಾಜು ಆಗಿಲ್ಲ: ಇನ್ನು ಬೇರೆ ರಾಜ್ಯಗಳಲ್ಲಿ ಮಕ್ಕಳ ಸಾವಿಗೆ ಕಾರಣವಾಗಿರುವ ಕೆಮ್ಮಿನ ಸಿರಪ್ ಕರ್ನಾಟಕದಲ್ಲಿ ಸರಬರಾಜು ಆಗಿಲ್ಲ. ಹಾಗಾಗಿ ಇಲ್ಲಿ ಯಾವುದೇ ಅನಾಹುತ ನಡೆದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ಔಷಧಿ ತಯಾರಿಕಾ ಘಟಕಗಳ ಬೇಜವಾಬ್ದಾರಿಯಿಂದಾಗಿ ತಮಿಳುನಾಡು, ಮಧ್ಯಪ್ರದೇಶ, ಒಡಿಶಾ, ರಾಜಸ್ಥಾನ, ಪುದುಚೆರಿ ಭಾಗದಲ್ಲಿ ಈ ದುರ್ಘಟನೆ ಸಂಭವಿಸಿದೆ ಎಂದಿದ್ದಾರೆ.
ಪೋಷಕರು ಎಚ್ಚರಿಕೆ ವಹಿಸಬೇಕು: ಇನ್ನು ಮುಖ್ಯವಾಗಿ ಈ ವಿಚಾರದಲ್ಲಿ ರಾಜ್ಯದಲ್ಲಿ 5 ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳಿಗೆ ಯಾವುದೇ ಕೆಮ್ಮಿನ ಸಿರಪ್ ಕುಡಿಸುವಾಗಲೂ ಪೋಷಕರು ಬಹಳ ಎಚ್ಚರಿಕೆ ವಹಿಸಬೇಕು. ಕಾಫ್ ಸಿರಫ್ ಸೇವನೆ ಕಡಿಮೆ ಮಾಡಬೇಕೆಂದು ಸಲಹೆ ನೀಡಿದರು.
ಕೇಂದ್ರಕ್ಕೆ ಪತ್ರ: ಕೆಲ ಔಷಧಿಗಳ ಕಲಬೆರಕೆ, ನಕಲಿ ಔಷಧಿ ಮತ್ತು ತಪಾಸಣೆ ಕುರಿತಂತೆ ಈ ಹಿಂದೆಯೇ ಕೇಂದ್ರ ಸರ್ಕಾರಕ್ಕೆ ಪತ್ರ ಬರೆದಿದ್ದೆ. ಯಾವುದೇ ಡ್ರಗ್ಸ್ ಕಲಬೆರಕೆ ಎಂದು ಗೊತ್ತಾದಲ್ಲಿ ತ್ವರಿತವಾಗಿ ದೇಶಾದ್ಯಂತ ಮಾಹಿತಿ ರವಾನೆ-ವಿನಿಮಯಕ್ಕೆ ಪ್ರತ್ಯೇಕ ʼವೆಬ್‌ಸೈಟ್ʼ ರಚಿಸುವಂತೆ ಕೇಂದ್ರ ಆರೋಗ್ಯ ಸಚಿವರ ಗಮನ ಸೆಳೆದಿದ್ದೆ. ಔಷಧಿಗಳ ಕಲಬೆರಿಕೆ ವಿಚಾರದಲ್ಲಿ ಕೇಂದ್ರ ಸರ್ಕಾರ ಕಠಿಣ ಕಾನೂನನ್ನು ಜಾರಿಗೆ ತರುವ ಅವಶ್ಯಕತೆ ಇದೆ. ಅಲ್ಲದೇ ರಾಜ್ಯ ರಾಜ್ಯಗಳ ನಡುವೆ ಮಾಹಿತಿ ಸಿಗುವಂತಹ ವ್ಯವಸ್ಥೆ ಜಾರಿಗೆ ತರುವತ್ತ ಕೇಂದ್ರ ಸರ್ಕಾರ ಮುಂದಾಗಬೇಕು ಎಂದು ಅವರು ಇದೇ ಸಂದರ್ಭದಲ್ಲಿ ಆಗ್ರಹಿಸಿದ್ದಾರೆ.












Click it and Unblock the Notifications