ಕುಮಾರಸ್ವಾಮಿ ಒಳ್ಳೆಯ ಪ್ರೊಡ್ಯೂಸರ್, ಆಡಿಯೋ ಫೇಕ್ : ಬಿಎಸ್‌ವೈ
ಬೆಂಗಳೂರು, ಫೆಬ್ರವರಿ 08 : 'ಎಚ್.ಡಿ.ಕುಮಾರಸ್ವಾಮಿ ಒಳ್ಳೆಯ ಪ್ರೊಡ್ಯೂಸರ್. ನನ್ನ ವಿರುದ್ಧ ಅವರು ಮಾಡಿರುವ ಆರೋಪ ಸುಳ್ಳು. ಆರೋಪಗಳು ಸಾಬೀತಾದರೆ ರಾಜಕೀಯ ನಿವೃತ್ತಿ ಪಡೆಯುತ್ತೇನೆ' ಎಂದು ಕರ್ನಾಟಕ ಬಿಜೆಪಿ ಅಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಹೇಳಿದರು.
ಕರ್ನಾಟಕದ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಬಿಡುಗಡೆ ಮಾಡಿದ ಆಡಿಯೋ ಬಗ್ಗೆ ಪ್ರತಿಕ್ರಿಯೆ ನೀಡಿದ ಯಡಿಯೂರಪ್ಪ ಅವರು, 'ನಾನು ಯಾವ ಶಾಸಕರನ್ನು ಭೇಟಿಯಾಗಿಲ್ಲ. ಮುಖ್ಯಮಂತ್ರಿಗಳು ಮಾಡಿರುವ ಆರೋಪಗಳು ಸತ್ಯಕ್ಕೆ ದೂರವಾದವು' ಎಂದರು.

'ಕುಮಾರಸ್ವಾಮಿ ಅವರು ಒಳ್ಳೆಯ ಪ್ರೊಡ್ಯೂಸರ್. ನಕಲಿ ಆಡಿಯೋವನ್ನು ಅವರು ಬಿಡುಗಡೆ ಮಾಡಿದ್ದಾರೆ. ನನ್ನ ವಿರುದ್ಧದ ಆರೋಪಗಳು ಸಾಬೀತಾದರೆ ರಾಜಕೀಯ ನಿವೃತ್ತಿಯನ್ನು ಪಡೆಯುತ್ತೇನೆ' ಎಂದು ಹೇಳಿದರು.
'ಈ ಸರ್ಕಾರ ಆಡಳಿತ ನಡೆಸಲು ವಿಫಲವಾಗಿದೆ. ಕಾನೂನಿನ ಮೇಲೆ ಇವರಿಗೆ ಗೌರವ ಇದ್ದರೆ. ಸಂವಿಧಾನದ ಮೇಲೆ ನಂಬಿಕೆ ಹೊಂದಿದ್ದರೆ ರಾಜೀನಾಮೆ ಕೊಟ್ಟು ಮನೆಗೆ ಹೋಗಲಿ' ಎಂದು ಯಡಿಯೂರಪ್ಪ ಆಕ್ರೋಶ ವ್ಯಕ್ತಪಡಿಸಿದರು.
'ಇಂದು ಬಜೆಟ್ ಅಧಿವೇಶನದಲ್ಲಿ ನಾವು ಭಾಗವಹಿಸುತ್ತೇವೆ. ಚರ್ಚೆಯಲ್ಲಿ ಪಾಲ್ಗೊಳ್ಳುತ್ತೇವೆ. ತರಾತುರಿಯಲ್ಲಿ ಚರ್ಚೆಯನ್ನು ಮುಗಿಸುವುದಿಲ್ಲ. ಇನ್ನೂ ಮೂರು ದಿನ ಹೆಚ್ಚು ಚರ್ಚೆಯನ್ನು ಮಾಡಲು ಅವಕಾಶ ಮಾಡಿಕೊಡಲಿ' ಎಂದು ಯಡಿಯೂರಪ್ಪ ಒತ್ತಾಯಿಸಿದರು.
'ಕಳೆದ ಎಂಟು ತಿಂಗಳಿನಲ್ಲಿ ನೀವು ಆಡಳಿತದ ಹೆಸರಿನಲ್ಲಿ ಮಾಡಿದ ಕರ್ಮಕಾಂಡವನ್ನು ಬಿಚ್ಚಿಡುತ್ತೇವೆ. ಸಚಿವರಿಗೆ ಹಣ ಕೊಡಲು ಬಂದು ಸಿಕ್ಕಿ ಬಿದ್ದಿದ್ದು ಯಾರು, ಹಣ ಕೊಡಲು ಬಂದಿದ್ದೇ ಎಂದು ಅವರೇ ಒಪ್ಪಿಕೊಂಡಿದ್ದಾರೆ. ಸಚಿವರನ್ನು ಸಂಪುಟದಿಂದ ಕೈ ಬಿಟ್ಟಿದ್ದೀರಾ?' ಎಂದು ಯಡಿಯೂರಪ್ಪ ಪ್ರಶ್ನಿಸಿದರು.












Click it and Unblock the Notifications