ದೇವೇಗೌಡರಿಗೆ ರಾಜ್ಯಸಭೆ ಟಿಕೆಟ್ ತಪ್ಪಿದ ಬಗ್ಗೆ ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ನೀಡಿದ ಸ್ಪಷ್ಟನೆ ಹೀಗಿದೆ
ಮಂಡ್ಯ, ಜೂನ್ 9: ರಾಜ್ಯಸಭಾ ಚುನಾವಣೆಗೆ ಎನ್‌ಡಿಎ ಮೈತ್ರಿಕೂಟದ ಅಧಿಕೃತ ಅಭ್ಯರ್ಥಿಯಾಗಿ ಹಿಂದುಳಿದ ವರ್ಗದ ಪ್ರಮುಖ ನಾಯಕ ಪ್ರೊ.ಎಂ.ನಾಗರಾಜ ಅವರ ಹೆಸರನ್ನು ಬಿಜೆಪಿ ಪ್ರಕಟಿಸಿದೆ. ಈ ಘೋಷಣೆಯ ಬೆನ್ನಲ್ಲೇ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ಅವರಿಗೆ ಈ ಬಾರಿ ಟಿಕೆಟ್ ಸಿಗದಿರುವುದನ್ನು ಅಸ್ತ್ರವಾಗಿ ಬಳಸಿಕೊಂಡಿರುವ ಕಾಂಗ್ರೆಸ್ ಪಕ್ಷವು ಜೆಡಿಎಸ್-ಬಿಜೆಪಿ ಮೈತ್ರಿ ವಿರುದ್ಧ ಮುಗಿಬಿದ್ದಿದೆ. ಇದಕ್ಕೆ ಪ್ರತಿಯಾಗಿ ಕೇಂದ್ರ ಸಚಿವ ಎಚ್‌ಡಿ ಕುಮಾರಸ್ವಾಮಿ ಅವರು ತಿರುಗೇಟು ನೀಡುವ ಕೆಲಸ ಮಾಡಿದ್ದಾರೆ.
ಈ ಕುರಿತು ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ ಅವರು ಇಂದು ಮಾಧ್ಯಮಗಳ ಮುಂದೆ ಸ್ಪಷ್ಟನೆ ನೀಡಿದ್ದಾರೆ. ದೇವೇಗೌಡರಿಗೆ ರಾಜ್ಯಸಭಾ ಸೀಟು ಕೈತಪ್ಪಲು ಕಾರಣವೇನು ಮತ್ತು ಇದರ ಹಿಂದಿರುವ ವಾಸ್ತವ ಸಂಗತಿಗಳೇನು ಎಂಬುದನ್ನು ಅವರು ಅಧಿಕೃತವಾಗಿ ಬಹಿರಂಗಪಡಿಸುವ ಮೂಲಕ ಕಾಂಗ್ರೆಸ್ ಟೀಕೆಗಳಿಗೆ ತಿರುಗೇಟು ನೀಡಿದ್ದಾರೆ.

ಕಾಂಗ್ರೆಸ್ ವಿರುದ್ಧ ವಾಗ್ದಾಳಿ
'ರಾಜ್ಯಸಭೆ ಟಿಕೆಟ್ ವಿಚಾರದಲ್ಲಿ ಮಾಜಿ ಪ್ರಧಾನಿಗಳಾದ ಎಚ್.ಡಿ.ದೇವೇಗೌಡರ ಮೇಲೆ ಕಾಂಗ್ರೆಸ್ ನಾಯಕರಿಗೆ ಅತಿಯಾದ ಅನುಕಂಪ ಬಂದಿದೆ. ಜೆಡಿಎಸ್ ಮತ್ತು ಬಿಜೆಪಿ ನಡುವಿನ ಮೈತ್ರಿಯಲ್ಲಿ ಬಿರುಕು ಸೃಷ್ಟಿಸಲು ಈ ಅಸ್ತ್ರ ಪ್ರಯೋಗಿಸುತ್ತಿದೆ,' ಎಂದು ಕೇಂದ್ರ ಸಚಿವ ಹಾಗೂ ಜೆಡಿಎಸ್ ರಾಜ್ಯ ಅಧ್ಯಕ್ಷರಾದ ಎಚ್.ಡಿ. ಕುಮಾರಸ್ವಾಮಿ ಅವರು ಕಟುವಾಗಿ ಟೀಕಿಸಿದರು. ಮಂಡ್ಯ ಜಿಲ್ಲೆಯ ಶ್ರೀರಂಗಪಟ್ಟಣ ವಿಧಾನಸಭೆ ಕ್ಷೇತ್ರದ ತಗ್ಗಹಳ್ಳಿ ಗ್ರಾಮದಲ್ಲಿ ಸಿಎಸ್ಆರ್ ನಿಧಿ ಅನುದಾನದಿಂದ ನೂತನವಾಗಿ ನಿರ್ಮಾಣಗೊಂಡಿರುವ ಶಾಲಾ ಕೊಠಡಿಗಳನ್ನು ಉದ್ಘಾಟಿಸಿದ ನಂತರ ಅವರು ಮಾಧ್ಯಮಗಳ ಜೊತೆ ಮಾತನಾಡಿದರು.
'ತನ್ನಲ್ಲಿ ಆಗುತ್ತಿರುವ ಬೆಳವಣಿಗೆಗಳು ಮತ್ತು ವೈಫಲ್ಯಗಳನ್ನು ಮುಚ್ಚಿಟ್ಟುಕೊಳ್ಳಲು ಕಾಂಗ್ರೆಸ್ ಪಕ್ಷವು ದೇವೇಗೌಡರನ್ನು ನೆಪ ಮಾಡಿಕೊಂಡು ರಾಜಕೀಯ ಮಾಡುತ್ತಿದೆ. ದೇವೇಗೌಡರು ಅಧಿಕಾರಕ್ಕಾಗಿ ಹಪಾಹಪಿಸಿದವರಲ್ಲ. ಸ್ವಾಭಿಮಾನಕ್ಕೆ ಧಕ್ಕೆಯಾದಾಗ ಪ್ರಧಾನಿ ಸ್ಥಾನವನ್ನೇ ಬಿಟ್ಟು ಬಂದರು ಅವರು. ಅದೆಲ್ಲವೂ ಕಾಂಗ್ರೆಸ್ ಪಕ್ಷಕ್ಕೆ ಗೊತ್ತಿಲ್ಲವೇ?,' ಎಂದು ತೀಕ್ಷ್ಣವಾಗಿ ಪ್ರಶ್ನಿಸಿದರು.
ಎಚ್‌ಡಿಡಿ ಅವಿರೋಧ ಆಯ್ಕೆ ಬಗ್ಗೆ HDK ಹೇಳಿದ್ದಿಷ್ಟು
ಕಳೆದ ಬಾರಿ ದೇವೇಗೌಡರ ಅವಿರೋಧ ಆಯ್ಕೆಗೆ ಕಾಂಗ್ರೆಸ್ ಬೆಂಬಲದ ಬಗ್ಗೆ ಮಾತನಾಡಿದ ಕುಮಾರಸ್ವಾಮಿ ಅವರು, 'ಆಗ ದೇವೇಗೌಡರ ವಿರುದ್ಧ ಇನ್ನೊಬ್ಬ ಅಭ್ಯರ್ಥಿ ನಿಲ್ಲುವ ಅವಕಾಶ ಇರಲಿಲ್ಲ. ಆ ಸಂದರ್ಭದಲ್ಲಿ ಯಾವುದೇ ಪಕ್ಷಕ್ಕೆ ತನ್ನ ಅಭ್ಯರ್ಥಿಯನ್ನು ನಿಲ್ಲಿಸಿ ಗೆಲ್ಲಿಸಿಕೊಳ್ಳುವಷ್ಟು ಸಂಖ್ಯಾಬಲ ಇರಲಿಲ್ಲ. ನಮ್ಮ ಪಕ್ಷಕ್ಕೆ ಸಂಖ್ಯಾಬಲ ಇತ್ತು, ಹೀಗಾಗಿ ರಾಜ್ಯಸಭೆಗೆ ದೇವೇಗೌಡರು ಆಯ್ಕೆ ಆದರು. ಅವರು ಕಾಂಗ್ರೆಸ್ ಬೆಂಬಲದಿಂದ ರಾಜ್ಯಸಭೆಗೆ ಹೋಗಲಿಲ್ಲ,' ಎಂದು ಅವರು ತಿರುಗೇಟು ನೀಡಿದರು.
ಜಮೀರ್ ಸಂಪರ್ಕದ ಬಗ್ಗೆ ಎಚ್‌ಡಿಕೆ ಹೇಳಿದ್ದೇನು?
ಇದೇ ಮಾಜಿ ಸಚಿವ ಜಮೀರ್ ಅಹಮದ್ ಅವರು ತಮ್ಮ ಜೊತೆ ಸಂಪರ್ಕ ಹೊಂದಿದ್ದಾರೆ ಎಂಬ ವದಂತಿಗಳನ್ನು ಕೂಡ ಕುಮಾರಸ್ವಾಮಿ ಅವರು ಸ್ಪಷ್ಟವಾಗಿ ತಳ್ಳಿ ಹಾಕಿದ್ದಾರೆ. ಅಲ್ಲದೆ, ಕಾಂಗ್ರೆಸ್‌ನ ಯಾವ ನಾಯಕರನ್ನು ನಾನು ಸಂಪರ್ಕಿಸಿಲ್ಲ ಎಂದು ಸ್ಪಷ್ಟಪಡಿಸಿದರು.
ತಮ್ಮ ನಿವಾಸಕ್ಕೆ ರಾಜ್ಯದ ಮುಖ್ಯಮಂತ್ರಿ ಭೇಟಿ ನೀಡುತ್ತಾರಂತಲ್ಲ, ಕುಮಾರಸ್ವಾಮಿ ಅವರ ಸಲಹೆ ಕೇಳುವುದಾಗಿ ಹೇಳಿದ್ದಾರೆ ಹೌದಾ ಎಂದು ಸುದ್ದಿಗಾರರು ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು,' ನಾನೇನು ಸಲಹೆ ನೀಡಲಿ, ಕುಮಾರಸ್ವಾಮಿ ಎರಡು ಬಾರಿ ಮುಖ್ಯಮಂತ್ರಿ ಆಗಿ ಏನು ಮಾಡಿದ್ದಾರೆ ಎಂದು ಹೇಳಿದ್ದಾರೆ. ಎಲ್ಲದಕ್ಕೂ ಸಾಕ್ಷಿ ಗುಡ್ಡೇ ಕೇಳುತ್ತಾರೆ. ನಾನೇನು ಮಾಡಿಲ್ಲ, ನನ್ನ ಬಳಿ ಬಂದು ಏನು ಸಲಹೆ ಕೇಳುತ್ತಾರೆ ಅವರು. ಎಲ್ಲವನ್ನು ನಾನು ಬಲ್ಲೆ. ಹಿರಿಯರು ಒಂದು ಮಾತು ಹೇಳಿದ್ದಾರೆ, 'ಅತಿ ವಿನಯಂ ದೂರ್ತ ಲಕ್ಷಣಂ' ಅಂತ. ಆ ಮಾತು ನನಗೆ ಪದೇಪದೇ ನೆನಪಿಗೆ ಬರುತ್ತಿದೆ,' ಎಂದು ಕುಟುಕಿದರು.
ವಿಧಾನ ಪರಿಷತ್ ಚುನಾವಣೆಗೆ ಜೆಡಿಎಸ್ ಪಕ್ಷ ಅಭ್ಯರ್ಥಿ ಹಾಕಿರುವ ವಿಚಾರಕ್ಕೆ ಪ್ರತಿಕ್ರಿಯಿಸಿದ ಅವರು, 'ನಮಗೂ ಎರಡು ಮತ ಬೇಕು, ಕಾಂಗ್ರೆಸ್ ಪಕ್ಷಕ್ಕೂ ಎರಡು ಮತ ಬೇಕು. ಇದರಲ್ಲಿ ಯಾವುದೇ ಗೇಮ್ ಪ್ಲಾನ್ ಇಲ್ಲ. ನಾವು ಬಿಜೆಪಿಯಿಂದ ಉಚ್ಚಾಟನೆಯಾಗಿರುವ ಬಸನಗೌಡ ಪಾಟೀಲ ಯತ್ನಾಳ್ ಅವರನ್ನು ಮತ ಹಾಕುವಂತೆ ಕೇಳುತ್ತೇವೆ. ನಮ್ಮ ಪ್ರಯತ್ನ ನಾವು ಮಾಡುತ್ತೇವೆ. ಕಾಂಗ್ರೆಸ್‌ನವರಿಗೆ ಹಣ ಬಲ, ಅಧಿಕಾರ ಬಲ ಇದೆ. ಮುಂದೆ ನೋಡೋಣ ಏನಾಗುತ್ತದೆ,' ಎಂದು ತಿಳಿಸಿದರು.
ಇದೇ ಕಾರಣದಿಂದ ಬೆಲೆ ಏರಿಕೆ
ಗ್ಯಾಸ್, ಪೆಟ್ರೋಲ್ ಬೆಲೆ ಏರಿಕೆ ಬಗ್ಗೆ ಮಾತನಾಡಿದ ಅವರು, 'ಯುದ್ದದ ಹಿನ್ನೆಲೆಯಲ್ಲಿ ಬೆಲೆ ಏರಿಕೆಯಾಗಿದೆ. ಇದು ಭಾರತದಲ್ಲಿ ಮಾತ್ರ ಆಗಿರುವುದಲ್ಲ. ಜಗತ್ತಿನ ಎಲ್ಲಾ ದೇಶಗಾಳಿಗೂ ಈ ಪರಿಸ್ಥಿತಿ ಬಂದಿದೆ. ಕಾಂಗ್ರೆಸ್‌ನವರು ಎಲ್ಲದಕ್ಕೂ ರಾಜಕೀಯ ಮಾಡುತ್ತಿದ್ದಾರೆ. ರಾಜ್ಯದಲ್ಲೇ ನೋಡುವುದಾದರೆ ಇಲ್ಲಿನ ಕಾಂಗ್ರೆಸ್ ಸರ್ಕಾರ ನಿರಂತರವಾಗಿ ಕಳೆದ ಮೂರೂವರೆ ವರ್ಷದಿಂದ ಬೆಲೆ ಏರಿಸುತ್ತಾ ಬಂದಿದ್ದಾರೆ. ಅದಕ್ಕೆ ಏನೆಂದು ಹೇಳುವುದು?,' ಎಂದು ಪ್ರಶ್ನೆ ಮಾಡುವ ಮೂಲಕ ತೀವ್ರ ತರಾಟೆಗೆ ತೆಗೆದುಕೊಂಡರು.












Click it and Unblock the Notifications