'ಕುಮಾರಸ್ವಾಮಿ ರಾಮನಗರ ಮೇಲೆ ನಂಬಿಕೆ ಇಲ್ಲದೆ ಮಂಡ್ಯಕ್ಕೆ ಹೋಗಿದ್ದಾರೆ'
ಬೆಂಗಳೂರು, ಏಪ್ರಿಲ್ 12: ಈಗ ರಾಮನಗರದಲ್ಲಿ ನಂಬಿಕೆ ಇಲ್ಲದೆ ಮಂಡ್ಯಕ್ಕೆ ಹೋಗಿ ಸ್ಪರ್ಧೆ ಮಾಡುತ್ತಿದ್ದಾರೆ. ನಿಮ್ಮ ಊರಲ್ಲಿ ನಿನಗೆ ನಂಬಿಕೆ ಇಲ್ಲದಿದ್ದರೆ ಬೇರೆ ಊರಲ್ಲಿ ಹೋಗಿ ನಿಂತು ಏನು ಮಾಡುತ್ತೀರಿ? ನನ್ನ ಪ್ರಕಾರ ಮಂಡ್ಯ, ಬೆಂಗಳೂರು ಗ್ರಾಮಾಂತರ, ಕೋಲಾರ, ಹಾಸನ ಈ ನಾಲ್ಕು ಕ್ಷೇತ್ರಗಳಲ್ಲಿ ಅವರು ಗೆಲ್ಲುವುದಿಲ್ಲ ಎಂದು ಮಾಜಿ ಸಿಎಂ ಹೆಚ್ ಡಿ ಕುಮಾರಸ್ವಾಮಿ ಅವರ ವಿರುದ್ಧ ಪರೋಕ್ಷವಾಗಿ ಡಿ ಕೆ ಶಿವಕುಮಾರ್ ವಾಗ್ದಾಳಿ ನಡೆಸಿದರು.
ಈ ಕುರಿತು ಮಾಧ್ಯಮಗಳ ಜೊತೆಗೆ ಮಾತನಾಡಿದ ಅವರು, ನೀವು ಚನ್ನಪಟ್ಟಣದಲ್ಲಿ ಒಂದು ಮತ ಲೀಡ್ ಕೊಡಿ ಸಾಕು. ಯೋಗೇಶ್ವರ್ ಗೆ ಏನು ಮಾಡಬೇಕೋ ಅದನ್ನು ಕುಮಾರಸ್ವಾಮಿ ಮಾಡುತ್ತಾರೆ. ಅವರಿಗೆ ಮೊದಲ ಬಲಿ ಯೋಗೇಶ್ವರ್. ಯೋಗೇಶ್ವರ್ ಕೂಡ ಕಮ್ಮಿ ಇಲ್ಲ. ಅವರು ಮಾಡಿರುವ ಕರ್ಮಗಳು ವಿಪರೀತ ಇವೆ. ಚುನಾವಣೆ ಮುಗಿಯಲಿ ಅಂತಾ ಸುಮ್ಮನೆ ಇದ್ದೇನೆ ಎಂದು ಹೇಳಿದರು.

ನಮಗೆ ಪ್ರತಿ ಬಾರಿ ಹಿನ್ನಡೆಯಾಗುತ್ತಿದ್ದ ಬೆಂಗಳೂರು ದಕ್ಷಿಣದಲ್ಲೂ ಈ ಬಾರಿ ನಮಗೆ ಮುನ್ನಡೆ ಸಿಗುತ್ತಿದೆ. ಅದರ ಜತೆ ರಾಜರಾಜೇಶ್ವರಿ ನಗರ, ಆನೇಕಲ್ ನಲ್ಲೂ ನಮಗೆ ಲೀಡ್ ಬರಲಿದೆ. ಎಲ್ಲೂ ಮೋದಿ ಗಾಳಿ ಇಲ್ಲ. ಕುಮಾರಸ್ವಾಮಿ ಅವರು ದೆಹಲಿಯಿಂದ ಒಂದು ದಿನ ಬಂದು ಬಿಜೆಪಿ ನಮ್ಮನ್ನು ಸರಿಯಾಗಿ ನಡೆಸಿಕೊಳ್ಳುತ್ತಿಲ್ಲ ಎಂದರು.
ಮರುದಿನ ನನ್ನ ಮೇಲೆ ಟೀಕೆ ಮಾಡುತ್ತಿದ್ದಾರೆ. ನಮ್ಮ ಜಿಲ್ಲೆಯವರು ಸಿಎಂ ಆಗಲಿ ಎಂದು ಬೆಂಬಲ ನೀಡಿದರೆ, ನಾನೇ ವಿಷ ಹಾಕಿದ್ದೇನೆ ಎಂದು ಕುಮಾರಸ್ವಾಮಿ ಹೇಳುತ್ತಿದ್ದಾರೆ. ನಮ್ಮ ಕಾರ್ಯಕರ್ತರ ವಿರೋಧದ ನಡುವೆ ಅವರಿಗೆ ಬೆಂಬಲ ಕೊಟ್ಟಿದ್ದೆ. ಈ ಚುನಾವಣೆಯನ್ನು ದೇಶವೇ ನೋಡುತ್ತಿದೆ. ಆದರೂ ನೀವು ತಲೆ ಕೆಡಿಸಿಕೊಳ್ಳಬೇಡಿ. 2013ರಲ್ಲಿ ಉಪಚುನಾವಣೆ ಎದುರಾದಾಗ ನಾನು ಮಂತ್ರಿಯಾಗಿರಲಿಲ್ಲ. ಆಗ ನಮ್ಮ ಕೇವಲ 3 ಶಾಸಕರೂ ಇದ್ದರೂ ಉಪಚುನಾವಣೆಯಲ್ಲಿ ಡಿ.ಕೆ. ಸುರೇಶ್ ಅವರು ಸ್ಪರ್ಧೆ ಮಾಡಿದಾಗ ಬಿಜೆಪಿ ಹಾಗೂ ಜೆಡಿಎಸ್ ಸೇರಿ ಸಹೋದರಿ ಅನಿತಾ ಕುಮಾರಸ್ವಾಮಿ ಅವರನ್ನು ನಿಲ್ಲಿಸಿದರು. ಅವರಿಬ್ಬರೂ ಸೇರಿ 2.50 ಲಕ್ಷ ಮತಗಳ ಮುನ್ನಡೆಯಲ್ಲಿದ್ದರು. ಆದರೂ ಸುರೇಶ್ 1.50 ಲಕ್ಷ ಮತಗಳ ಅಂತರದಿಂದ ಗೆದ್ದರು. ಇಂದೂ ಅದೇ ಪರಿಸ್ಥಿತಿ ಇದೆ.
ಸುರೇಶ್ ಕೋವಿಡ್ ಪರಿಸ್ಥಿತಿಯಲ್ಲಿ ಮಾಡಿದ ಕೆಲಸ ಯಾರೂ ಮರೆಯಲು ಸಾಧ್ಯವಿಲ್ಲ. ಹೆಣ ಸುಡುವುದರಿಂದ, ಔಷಧಿ ವಿತರಣೆ, ರೈತರಿಂದ ತರಕಾರಿ ಖರೀದಿ ಮಾಡಿ ಹಂಚಿದ್ದು ಸೇರಿದಂತೆ ಅವರಂತೆ ಬೇರೆ ಯಾರೂ ಕೆಲಸ ಮಾಡಿಲ್ಲ ಎಂದು ಉಪಮುಖ್ಯಮಂತ್ರಿ ಡಿ ಕೆ ಶಿವಕುಮಾರ್ ಹೇಳಿದರು.
ನಮ್ಮನ್ನು ನಂಬಿ ಬಿಜೆಪಿ ಜೆಡಿಎಸ್ ಬಿಟ್ಟು ಕಾಂಗ್ರೆಸ್ ಸೇರುತ್ತಿದ್ದೀರಿ. ನೀವೆಲ್ಲರೂ ಒಟ್ಟಾಗಿ ಕೆಲಸ ಮಾಡಿ. ನಮ್ಮ ಗ್ಯಾರಂಟಿ ಯೋಜನೆಗಳೇ ನಿಮಗೆ ದೊಡ್ಡ ಶಕ್ತಿ. ಅಧಿಕಾರಕ್ಕೆ ಬಂದ ಐದೇ ತಿಂಗಳಲ್ಲಿ ಗೃಹಲಕ್ಷ್ಮಿ, ಗೃಹಜ್ಯೋತಿ, ಅನ್ನಭಾಗ್ಯ, ಶಕ್ತಿ, ಯುವನಿಧಿ ಎಲ್ಲಾ ಗ್ಯಾರಂಟಿ ಯೋಜನೆ ಜಾರಿ ಮಾಡಿದ್ದೇವೆ. 92% ಜನರಿಗೆ ನಮ್ಮ ಯೋಜನೆ ತಲುಪುತ್ತಿವೆ. ಯಾರಿಗೆ ತಲುಪಿಲ್ಲ, ಅವರ ಸಮಸ್ಯೆ ಬಗೆಹರಿಸಲು ಪ್ರಯತ್ನ ಮಾಡುತ್ತಿದ್ದೇವೆ. ನಮ್ಮ ಯೋಜನೆಯಿಂದ ಕುಟುಂಬ ಪ್ರತಿ ತಿಂಗಳು 5 ಸಾವಿರ ಉಳಿತಾಯ ಮಾಡುತ್ತಿದ್ದೆ.
ಕೇಂದ್ರದಲ್ಲಿ ನಮ್ಮ ಸರ್ಕಾರ ಬಂದರೆ ಬಡ ಮಹಿಳೆಯರಿಗೆ ವಾರ್ಷಿಕ 1 ಲಕ್ಷ, ಯುವಕರಿಗೆ ವಾರ್ಷಿಕ 1 ಲಕ್ಷ ಶಿಷ್ಯ ವೇತನ, 25 ಲಕ್ಷ ವರೆಗೂ ಆರೋಗ್ಯ ವಿಮೆ ಸೇರಿದಂತೆ ರೈತರಿಗೆ, ಕಾರ್ಮಿಕರಿಗೆ ಅನೇಕ ಯೋಜನೆ ನೀಡಿದ್ದೇವೆ.
ಮುಂದಿನ ದಿನಗಳಲ್ಲಿ ಬೇರೆ ಕಡೆಗಳಲ್ಲಿ ಪ್ರವಾಸ ಮಾಡಬೇಕು. ನೀವೇ ಚನ್ನಪಟ್ಟಣದಲ್ಲಿ ಚುನಾವಣೆ ಮಾಡಬೇಕು. ಕೆಲ ದಿನಗಳಲ್ಲಿ ಚನ್ನಪಟ್ಟಣಕ್ಕೆ ಭೇಟಿ ನೀಡುತ್ತೇನೆ. ನೀವೇ ಅಭ್ಯರ್ಥಿ ಎಂದು ಭಾವಿಸಿ ಕೆಲಸ ಮಾಡಿ. ಇನ್ನು ಯಾರೆಲ್ಲಾ ಪಕ್ಷಕ್ಕೆ ಸೇರಿಸಿಕೊಳ್ಳಬೇಕು ಹೇಳಿ, ಸೇರಿಸಿಕೊಳ್ಳೋಣ.












Click it and Unblock the Notifications