ರೌಡಿಶೀಟರ್ ತೆರೆಯಲು ಮಾನದಂಡಗಳೇನು?: ಹೈಕೋರ್ಟ್ ಮಾರ್ಗಸೂಚಿ ಹೀಗಿವೆ
ಬೆಂಗಳೂರು, ಏ.22. ಅಪರಾಧ ಚುಟವಟಿಕೆಯಲ್ಲಿ ಸಕ್ರಿಯಾಗಿರುವ ರೌಡಿಗಳ ವಿರುದ್ಧ ರೌಡಿಶೀಟರ್ ತೆಗೆಯುವ ವಿಚಾರದಲ್ಲಿ ಅನುಸರಿಸಬೇಕಾದ ನಿಯಮಗಳ ಕುರಿತು ಹೈಕೋರ್ಟ್ ವಿವರವಾದ ಮಾರ್ಗಸೂಚಿಗಳನ್ನು ರಚನೆ ಮಾಡಿದೆ.
ಅಲ್ಲದೆ, 'ಇದೇ ವೇಳೆ ನ್ಯಾಯಾಲಯ ಒಬ್ಬ ವ್ಯಕ್ತಿಯ ವಿರುದ್ಧ ಎಫ್‌ಐಆರ್ ದಾಖಲಾಗದೇ ಇದ್ದರೂ ಮತ್ತು ನ್ಯಾಯಾಲಯದಿಂದ ಯಾವುದೇ ಶಿಕ್ಷೆಗೆ ಗುರಿಯಾಗಿಲ್ಲ ಎಂದರೂ ಅಂತಹವರನ್ನು ರೌಡಿ ಪಟ್ಟಿಗೆ ಸೇರಿಸಬಹುದು,' ಎಂದು ಹೈಕೋರ್ಟ್ ಮಹತ್ವದ ತೀರ್ಪು ನೀಡಿದೆ.
ಅಪರಾಧ ಪ್ರಕರಣಗಳಿಗೆ ಸಂಬಂಧಿಸಿದ ಆರೋಪಗಳಿಂದ ಮುಕ್ತನಾಗಿದ್ದರೂ ಪೊಲೀಸರು ತಮ್ಮ ವಿರುದ್ಧ ರೌಡಿಶೀಟರ್ ತೆಗೆದಿದ್ದಾರೆ. ಖುಲಾಸೆಯಾದ ನಂತರೂ ರೌಡಿಶೀಟ್ ತೆಗೆಯುವುದು ಮೂಲಭೂತ ಹಕ್ಕಿನ ಚ್ಯುತಿಯಾಗಿದೆ ಎಂದು ಆಕ್ಷೇಪಿಸಿ ರೌಡಿಶೀಟರ್‌ಗಳಾದ ನಾಗರಾಜು ಅಲಿಯಾಸ್ ಬಾಂಬ್‌ನಾಗ, ಮತ್ತವರು ಮೂವರು ಪುತ್ರರು, ರಾಕೇಶ್ ಮಲ್ಲಿ ಸೇರಿದಂತೆ ಒಟ್ಟು 18 ಮಂದಿ ರೌಡಿಗಳು ಹೈಕೋರ್ಟ್ ಮೊರೆ ಹೋಗಿದ್ದರು.

ಎಲ್ಲ ಅರ್ಜಿಗಳ ವಿಚಾರಣೆ ಪೂರ್ಣಗೊಳಿಸಿ ಕಾಯ್ದಿರಿಸಿದ್ದ ತೀರ್ಪನ್ನು ನ್ಯಾಯಮೂರ್ತಿ ಕೃಷ್ಣ ಎಸ್. ದೀಕ್ಷಿತ್ ಅವರು ಶುಕ್ರವಾರ ಪ್ರಕಟಿಸಿದೆ.
ಹಲವು ವರ್ಷಗಳಿಂದ ಕ್ರಿಮಿನಲ್ ತಮ್ಮ ವಿರುದ್ಧ ಯಾವುದೇ ಕ್ರಿಮಿನಲ್ ಪ್ರಕರಣ ದಾಖಲಾಗಿಲ್ಲ. ಈಗಾಗಲೇ ದಾಖಲಾಗಿದ ಪ್ರಕರಣದಿಂದ ಖುಲಾಸೆಯಾಗಿದ್ದರೂ ಪೊಲೀಸರು ರೌಡಿಶೀಟ್ ತೆಗೆದಿದ್ದಾರೆ. ಇದರಿಂದ ತಮ್ಮ ಮೂಲಭೂತ ಹಕ್ಕು ಉಲ್ಲಂಘನೆಯಾಗಿದೆ. ಆದ್ದರಿಂದ ತಮ್ಮ ವಿರುದ್ಧ ರೌಡಿ ಶೀಟ್ ತೆಗೆಯಲು ಪೊಲೀಸ್ ಇಲಾಖೆ ಹೊರಡಿಸಿದ್ದ ಆದೇಶ ರದ್ದುಪಡಿಸಬೇಕು ಎಂಬ ಅರ್ಜಿದಾರರ ಮನವಿಯನ್ನು ಹೈಕೋರ್ಟ್ ತಿರಸ್ಕರಿಸಿದೆ.
'ಹತ್ತಿಪ್ಪತ್ತು ವರ್ಷಗಳ ಹಿಂದೆಯೇ ರೌಡಿ ಶೀಟರ್‌ನಿಂದ ಖುಲಾಸೆ ಆಗಿದ್ದಾನೆ ಎಂದ ಮಾತ್ರಕ್ಕೆ ಅಂತಹ ವ್ಯಕ್ತಿಯನ್ನು ರೌಡಿ ಪಟ್ಟಿಯಿಂದ ಕೈಬಿಡಲು ಆಗುವುದಿಲ್ಲ. ಈ ವಿಷಯದಲ್ಲಿ ಪೊಲೀಸರು ಸೂಕ್ಷ್ಮ ಮಾಹಿತಿ ಆಧರಿಸಿಯೇ ತೀರ್ಮಾನಕ್ಕೆ ಬಂದಿರುತ್ತಾರೆ. ಹಾಗಾಗಿ ಪೊಲೀಸರಿಗೆ ಅನುಮಾನ ಇದ್ದರೆ ಅಂತಹವರನ್ನು ರೌಡಿ ಶೀಟರ್‌ನಿಂದ ತೆಗೆಯಲು ಆಗುವುದಿಲ್ಲ. ಅಂತೆಯೇ ಪೊಲೀಸರು ರೌಡಿ ಪಟ್ಟಿಯನ್ನು ಪ್ರತಿ ಎರಡು ವರ್ಷಕ್ಕೊಮ್ಮೆ ಪರಿಷ್ಕರಣೆ ಮಾಡಬೇಕು,' ಎಂದು ನ್ಯಾಯಪೀಠ ಸೂಚಿಸಿದೆ.
ಕಾನೂನು ರಚಿಸಲು ಸಲಹೆ :
'ಒಬ್ಬ ಅಪರಾಧಿಕ ವ್ಯಕ್ತಿಯನ್ನು ರೌಡಿ ಶೀಟರ್ ಎಂದು ಹೆಸರಿಸುವ ಹಾಗೂ ಅಂತಹ ಇತಿಹಾಸ ಹೊಂದಿರುವವರನ್ನು ರೌಡಿ ಪಟ್ಟಿಯಿಂದ ಕೈಬಿಡಬೇಕು ಎಂಬ ಕೋರಿಕೆಗಳ ಬಗ್ಗೆ ಶಾಸಕಾಂಗ ವಿಸ್ತೃತ ಕಾನೂನು ರಚಿಸಬೇಕು,' ಎಂದು ನ್ಯಾಯಪೀಠ ಅಭಿಪ್ರಾಯಪಟ್ಟಿದೆ.
ಅಲ್ಲದೆ, ಅಪರಾಧ ಪ್ರಕರಣಗಳ ಆರೋಪದಿಂದ ಖುಲಾಸೆಯಾಗಿದ್ದರೂ ರೌಡಿ ಶೀಟ್ ಆರಂಭಿಸುವುದು ಮೂಲಭೂತ ಹಕ್ಕಿನ ಉಲ್ಲಂಘನೆಯಾಗುವುದಿಲ್ಲ. ರೌಡಿಯಾಗಿದ್ದರೆ ಅವರು ಮುಂದೆಯೂ ಅಪರಾಧ ಚಟುವಟಿಕೆಯಲ್ಲಿ ಭಾಗಿಯಾಗುವ ಸಾಧ್ಯತೆಯಿರುತ್ತದೆ. ಹಾಗಾಗಿ, ಖುಲಾಸೆಯಾಗಿದ್ದಾರೆ ಎಂಬ ಮಾತ್ರಕ್ಕೆ ರೌಡಿಶೀಟ್‌ನಿಂದ ಹೆಸರು ತೆಗೆಯುವಂತಿಲ್ಲ. ಇನ್ನೂ ಖುಲಾಸೆಯಾಗಿದ್ದರೂ ರೌಡಿಶೀಟ್ ತೆಗೆಯಬಹುದು. ಮುಖ್ಯವಾಗಿ ರೌಡಿಶೀಟ್ ಆರಂಭಿಸುವ ರೌಡಿಗಳ ಚುಟುವಟಿಕೆಗಳ ಮೇಲೆ ನಿಗಾ ಇಡುವ ಕಾರಣಕ್ಕೆ. ಆದ್ದರಿಂದ ಇದು ನ್ಯಾಯಸಮ್ಮತವಾದ ನಿರ್ಬಂಧವಾಗಿದೆ ಎಂದು ಹೈಕೋರ್ಟ್ ಅಭಿಪ್ರಾಯಪಟ್ಟಿದೆ.
ಹೊಸ ಮಾರ್ಗಸೂಚಿ ಅಂಶಗಳೇನು?
1. ರೌಡಿ ಶೀಟ್ ತೆರಯುವ ಮುನ್ನ ಸಂಬಂಧಿಸಿದ ವ್ಯಕ್ತಿಗೆ ನೋಟಿಸ್ ಜಾರಿ ಮಾಡಿ ಆ ಬಗ್ಗೆ ಮಾಹಿತಿ ನೀಡಬೇಕು.
2. ರೌಡಿ ಶೀಟ್ ಹಾಕದಂತೆ ಮನವಿ ಸಲ್ಲಿಸಲು ಆ ವ್ಯಕ್ತಿಗೆ ಅವಕಾಶ ನೀಡಬೇಕು.
3. ರೌಡಿ ಶೀಟ್ ಹಾಕುವಾಗ ಸಕಾರಣ ನೀಡಿ ಲಿಖಿತ ಆದೇಶ ನೀಡಬೇಕು.
4. ಅಪರಾಧ ಪ್ರಕರಣದಿಂದ ಖುಲಾಸೆಯಾದರೂ ಗುಪ್ತಚರ ವರದಿ ಹಾಗೂ ನಿಖರ ಮಾಹಿತಿ ಹೊಂದಿದ್ದರೆ ಪೊಲೀಸರು ರೌಡಿ ಪಟ್ಟಿ ತೆರೆಯಬಹುದು.
5. ಜಿಲ್ಲೆಯಲ್ಲಿ ಉಪ ಪೊಲೀಸ್ ವರಿಷ್ಠಾಧಿಕಾರಿ ಮತ್ತು ನಗರದಲ್ಲಿ ಸಹಾಯಕ ಪೊಲೀಸ್ ಆಯುಕ್ತರು ರೌಡಿ ಶೀಟ್ ತೆಗೆಯಲು ಅಧಿಕೃತ ಲಿಖಿತ ಆದೇಶ ಹೊರಡಿಸಬೇಕು.
6. ಪ್ರತಿ ವರ್ಷ ರೌಡಿ ಶೀಟ್ ಮರು ಪರಿಶೀಲಿಸಿ, ಆಗಲೂ ಸಕಾರಣಗಳೊಂದಿಗೆ ಸಮಗ್ರವಾದ ಲಿಖಿತ ಆದೇಶ ಹೊರಡಿಸಬೇಕು
7. ಒಂದು ವೇಳೆ ರೌಡಿ ಶೀಟ್ ತೆರೆದ ನಂತರ ಅದನ್ನು ಪ್ರಶ್ನಿಸಿ ಪೊಲೀಸ್ ದೂರು ಪ್ರಾಧಿಕಾರಕ್ಕೆ ಮೇಲ್ಮನವಿಗೆ ಅವಕಾಶ ಮಾಡಿಕೊಡಬೇಕು.












Click it and Unblock the Notifications