ಮುಂಬೈ ವಾಂಖೆಡೆಯಲ್ಲಿ ಟೀಂ ಇಂಡಿಯಾ ಬೆಂಬಲಿಸಲು ಬಂದ ಕ್ರಿಕೆಟ್ ದಿಗ್ಗಜರು, ಸಿನಿ ತಾರೆಯರು, ಉದ್ಯಮಿಗಳು, ರಾಜಕೀಯ ಗಣ್ಯರು
T20 World Cup 2026: ಮುಂಬೈನ ವಾಂಖೆಡೆ ಕ್ರೀಡಾಂಗಣದಲ್ಲಿ ಗುರುವಾರ ನಡೆದ ಟಿ20 ವಿಶ್ವಕಪ್ ಸೆಮಿಫೈನಲ್ ಪಂದ್ಯ ವೀಕ್ಷಣೆಗೆ ಭಾರತೀಯ ಕ್ರಿಕೆಟ್ ದಿಗ್ಗಜರು, ಸಿನಿ ತಾರೆಯರು, ಉದ್ಯಮಿಗಳ ದಂಡೇ ನೆರೆದಿತ್ತು. ಇವರೆಲ್ಲಾ ಸೂರ್ಯಕುಮಾರ್ ಯಾದವ್ ನಾಯಕತ್ವದ ಟೀಂ ಇಂಡಿಯಾ ತಂಡವನ್ನು ಹುರಿದುಂಬಿಸಿ ಬೆಂಬಲ ನೀಡುವ ಕೆಲಸ ಮಾಡಿದರು. ಈ ಫೋಟೋ, ವಿಡಿಯೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿವೆ.
ಐಸಿಸಿ ಪುರುಷರ ಟಿ20 ವಿಶ್ವಕಪ್ ಸೆಮಿಫೈನಲ್ ಪಂದ್ಯದಲ್ಲಿ ಟೀಂ ಇಂಡಿಯಾ ಇಂಗ್ಲೆಂಡ್ ವಿರುದ್ಧ ಕಣಕ್ಕಿಳಿದಾಗ, ಭಾರತೀಯ ಕ್ರಿಕೆಟ್ ದಿಗ್ಗಜರು, ಬಾಲಿವುಡ್ ಸೂಪರ್ ಸ್ಟಾರ್‌ಗಳು ಹಾಗೂ ಪ್ರಮುಖ ಉದ್ಯಮಿಗಳು ವಾಂಖೆಡೆ ಕ್ರೀಡಾಂಗಣದಲ್ಲಿ ಹಾಜರಿದ್ದು ಪಂದ್ಯವನ್ನು ಕಣ್ತುಂಬಿಕೊಂಡರು.

ಜೊತೆಗೆ ಕಾಣಿಸಿಕೊಂಡ ಧೋನಿ, ರೋಹಿತ್
ಭಾರತ ತಂಡದ ಮಾಜಿ ನಾಯಕ ಎಂಎಸ್ ಧೋನಿ ಅವರು ಪಂದ್ಯ ನಡೆಯುತ್ತಿದ್ದ ಮೈದಾನದ ವಿಐಪಿ ಬಾಕ್ಸ್‌ನಲ್ಲಿ ಕಾಣಿಸಿಕೊಂಡರು. ಅವರು ತಮ್ಮ ಪತ್ನಿ ಸಾಕ್ಷಿ ಸಿಂಗ್ ಅವರೊಂದಿಗೆ ಭಾರತ ತಂಡವನ್ನು ಚಪ್ಪಾಳೆ ತಟ್ಟಿ ಬೆಂಬಲಿಸಿದ ದೃಶ್ಯಗಳು ಗಮನ ಸೆಳೆದವು. ಇದೇ ವೇಳೆ ಅದೇ ಬಾಕ್ಸ್‌ನಲ್ಲಿ ರೋಹಿತ್ ಶರ್ಮಾ ಕೂಡ ಎಂಎಸ್ ಧೋನಿ ಅವರ ಜೊತೆ ಕಾಣಿಸಿಕೊಂಡರು. ಭಾರತಕ್ಕೆ ಟಿ20 ವಿಶ್ವಕಪ್ ಗೆಲುವು ತಂದುಕೊಟ್ಟ ಇಬ್ಬರು ನಾಯಕರೂ ಒಂದೇ ಕಡೆ ಜೊತೆಯಾಗಿ ನಿಂತಿದ್ದ ಕ್ಷಣ ಅಭಿಮಾನಿಗಳ ಗಮನ ಸೆಳೆಯಿತು.
ಪಂದ್ಯ ವೀಕ್ಷಿಸಿದ ಕನ್ನಡಿಗ ಕೆ.ಎಲ್.ರಾಹುಲ್
ಮತ್ತೊಬ್ಬ ಭಾರತೀಯ ಕ್ರಿಕೆಟರ್, ಕನ್ನಡಿಗ ಕೆ.ಎಲ್.ರಾಹುಲ್ ಕೂಡ ಮುಂಬೈನ ವಾಂಖೆಡೆ ಕ್ರೀಡಾಂಗಣದಲ್ಲಿ ಕಾಣಿಸಿಕೊಂಡರು. ಅವರು ತಮ್ಮ ಮಾವನ ಮಗ ಅಹಾನ್ ಶೆಟ್ಟಿ ಅವರೊಂದಿಗೆ ಪ್ರೇಕ್ಷಕ ಸ್ಟ್ಯಾಂಡ್‌ನಲ್ಲಿ ಕುಳಿತು ಭಾರತ ತಂಡ ಮೊದಲ ಇನಿಂಗ್ಸ್‌ನಲ್ಲಿ ಬ್ಯಾಟಿಂಗ್ ಮಾಡುತ್ತಿರುವುದನ್ನು ಕಣ್ತುಂಬಿಕೊಂಡರು. ಮಹಾರಾಷ್ಟ್ರ ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್, ಬಾಲಿವುಡ್ ತಾರೆಗಳಾದ ರಣಬೀರ್ ಕಪೂರ್, ಆಲಿಯಾ ಭಟ್, ವರುಣ್ ಧವನ್ ಹಾಗೂ ಅನಿಲ್ ಕಪೂರ್ ಸೇರಿದಂತೆ ಅಂಬಾನಿ ಕುಟುಂಬದ ಸದಸ್ಯರೂ ಈ ಮಹತ್ವದ ಪಂದ್ಯವನ್ನು ವೀಕ್ಷಿಸಲು ಕ್ರೀಡಾಂಗಣದಲ್ಲಿ ಹಾಜರಿದ್ದರು.
ಟೀಕೆಗಳಿಗೆ ಗುರಿಯಾದ ಅಭಿಷೇಕ್ ಶರ್ಮಾ
ಮೊದಲು ಬ್ಯಾಟಿಂಗ್ ಮಾಡಲು ಆಹ್ವಾನಿಸಲ್ಪಟ್ಟ ಭಾರತ ತಂಡ ಭರ್ಜರಿ ಆರಂಭ ನೀಡಿತು. ಉತ್ತಮ ಫಾರ್ಮ್‌ನಲ್ಲಿದ್ದ ಸಂಜು ಸ್ಯಾಮ್ಸನ್ ತಮ್ಮ ಅದ್ಭುತ ಪ್ರದರ್ಶನವನ್ನು ಮುಂದುವರಿಸಿದರು. ಆದರೆ, ಅಭಿಷೇಕ್ ಶರ್ಮಾ ಮತ್ತೊಮ್ಮೆ ಉತ್ತಮ ಆರಂಭ ನೀಡಲು ವಿಫಲರಾದರು. ಅವರು ಬೇಗನೇ ವಿಕೆಟ್ ಒಪ್ಪಿಸುವ ಮೂಲಕ ಮತ್ತೊಮ್ಮೆ ಫ್ಲಾಪ್ ಆಗಿ ಟೀಕೆಗಳಿಗೆ ಗುರಿಯಾಗಿದ್ದಾರೆ.
ಸಂಜು ಸ್ಯಾಮ್ಸನ್ ಅದ್ಭುತ ಬ್ಯಾಟಿಂಗ್ ಮೂಲಕ 89 ರನ್‌ಗಳೊಂದಿಗೆ ಭಾರತ ತಂಡಕ್ಕೆ ಉತ್ತಮ ಆರಂಭ ನೀಡಿದರು. ಇಶಾನ್ ಕಿಶನ್ ಕೂಡ ವೇಗವಾಗಿ ರನ್‌ಗಳನ್ನು ಕಲೆಹಾಕಿ 18 ಎಸೆತಗಳಲ್ಲಿ 39 ರನ್‌ಗಳ ಕೊಡುಗೆ ನೀಡಿದರು. ಶಿವಂ ದುಬೆ 25 ಎಸೆತಗಳಲ್ಲಿ 43 ರನ್‌ಗಳನ್ನು ಸಿಡಿಸಿ ಮಿಂಚಿದರು. ನಾಯಕ ಸೂರ್ಯಕುಮಾರ್ ಯಾದವ್ 11, ಹಾರ್ದಿಕ್ ಪಾಂಡ್ಯಾ 27, ತಿಲಕ್ ವರ್ಮಾ 21 ರನ್ ಬಾರಿಸಿದರು. ಈ ಮೂಲಕ ತಂಡದ ಮೊತ್ತವನ್ನು 250ರ ಗಡಿ ದಾಟಿಸಿದರು. ಟೀಂ ಇಂಡಿಯಾವು ನಿಗದಿತ 20 ಓವರ್‌ಗಲ್ಲಿ 7 ವಿಕೆಟ್ ನಷ್ಟಕ್ಕೆ ಬರೋಬ್ಬರಿ 253 ರನ್‌ಗಳನ್ನು ಕಲೆಹಾಕಿತು.
ಟೀಂ ಇಂಡಿಯಾ ನೀಡಿದ ಗುರಿ ಬೆನ್ನತ್ತಿದ ಇಂಗ್ಲೇಂಡ್ ಆರಂಭದಲ್ಲೇ ಉತ್ತಮ ಬ್ಯಾಟಿಂಗ್ ಪ್ರದರ್ಶನ ಮಾಡಿತು. ಬೆಥೆಲ್ ಕೇವಲ 48 ಎಸೆತಗಳಲ್ಲಿ 8 ಬೌಂಡರಿ, 7 ಸಿಕ್ಸ್‌ಗಳೊಂದಿಗೆ 105 ರನ್ ಬಾರಿಸಿ ತಂಡವನ್ನು ಗೆಲುವಿನ ಸಮೀಪ ತಂದರು. ಆದರೆ, ಕೊನೆಯಲ್ಲಿ ಟೀಂ ಇಂಡಿಯಾ ಬೌಲರ್‌ಗಳ ಮಾರಕ ಬೌಲಿಂಗ್ ದಾಳಿ ನಡೆಸಿ ಇಂಗ್ಲೆಂಡ್ ಬ್ಯಾಟರ್‌ಗಳ ವೇಗಕ್ಕೆ ಕಡಿವಾಣ ಹಾಕಿ 246 ರನ್‌ಗಳಿಗೆ ಕಟ್ಟಿಹಾಕಿದರು. ಈ ಮೂಲಕ ಟೀಂ ಇಂಡಿಯಾ ಭರ್ಜರಿ ಗೆಲುವು ಸಾಧಿಸಿ ಫೈನಲ್ ಪ್ರವೇಶ ಮಾಡಿತು.












Click it and Unblock the Notifications