ನಮ್ಮನ್ನು ಕೆಣಕಿದ್ದಾರೆ, ಅಷ್ಟು ಸುಲಭಕ್ಕೆ ಬಿಡಲ್ಲ: ವಿರೋಧಿಗಳಿಗೆ ಕುಮಾರಸ್ವಾಮಿ ಖಡಕ್ ವಾರ್ನಿಂಗ್
ಬೆಂಗಳೂರು, ಮೇ 02: ಹಾಸನದಲ್ಲಿ ಹರಿದಾಡುತ್ತಿರುವ ಅಶ್ಲೀಲ ವಿಡಿಯೋ ಪ್ರಕರಣ ರಾಜ್ಯ ರಾಜಕೀಯದಲ್ಲೇ ಸಂಚಲನ ಮೂಡಿಸಿದೆ. ಜೆಡಿಎಸ್ ಪಕ್ಷಕ್ಕೆ ಇದು ಸಂಕಷ್ಟದ ಕಾಲವಾಗಿದ್ದು, ಈ ಪ್ರಕರಣವನ್ನು ಎದುರಿಸುವುದು ಜೆಡಿಎಸ್ ದಳಪತಿಗಳಿಗೆ ದೊಡ್ಡ ಸವಾಲಾಗಿದೆ. ಈ ಪ್ರಕರಣದ ಬಗ್ಗೆ ರಾಜ್ಯ ಮಾತ್ರವಲ್ಲದೇ ಕೇಂದ್ರ ರಾಜಕೀಯ ನಾಯಕರು ಸಹ ಹೇಳಿಕೆ ನೀಡುತ್ತಿದ್ದು, ಈ ಸಮಯವನ್ನು ಎದುರಿಸಲು ಜೆಡಿಎಸ್ ವರಿಷ್ಠರಿಂದ ಸಾಲು ಸಾಲು ಸಭೆಗಳು ನಡೆಯುತ್ತಿದೆ.
ಪ್ರಜ್ವಲ್ ರೇವಣ್ಣ ಪ್ರಕರಣದಿಂದ ದಿನಕ್ಕೆ ಹೆಚ್ಚು ಹೈಪ್ ಪಡೆದುಕೊಳ್ಳುತ್ತಿರುವ ಹಿನ್ನೆಲೆಯಲ್ಲಿ ಮಾಜಿ ಸಿಎಂ ಹೆಚ್.ಡಿ ಕುಮಾರಸ್ವಾಮಿ ಮಾತನಾಡಿದ್ದು, ನಮ್ಮನ್ನ, ನನ್ನನ್ನು ಕೆಣಕಿದ್ದಾರೆ. ಅಷ್ಟು ಸುಲಭಕ್ಕೆ ಬಿಡುವುದಿಲ್ಲ. ಏನು ಮಾಡಬೇಕು ಅಂತ ಗೊತ್ತು ಎಂದು ತಮ್ಮ ವಿರೋಧಿಗಳಿಗೆ ಎಚ್ಚರಿಕೆಯ ಸಂದೇಶ ರವಾನಿಸಿದ್ದಾರೆ.

ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಿನ್ನೆ ದಿನ ಆ ಡ್ರೈವರ್‌ದು ಒಂದು ಹೇಳಿಕೆ ಬಿಡುಗಡೆ ಆಗಿದೆ. ಆತ ಏನು ಪ್ರೆಸ್‌ಮೀಟ್ ಮಾಡಿ ಹೇಳಿದ್ದನಾ..? ಅಲ್ಲ ತಾನೆ. ವಿಡಿಯೋ ರಿಲೀಸ್ ಮಾಡಿದ್ದಾನೆ. ಆ ವಿಡಿಯೋವನ್ನು ಎಲ್ಲಿಂದ ಮಾಡಿದರು. ಯಾರು ಮಾಡಿದರು. ನಿನ್ನೆ ಅವರ ಕೈಯಿಂದ ವಿಡಿಯೋ ಬಿಟ್ಟರಲ್ಲಾ. ಅವನು ಏನು ಹೇಳಿಕೆ ಕೊಟ್ಟಾ? ನಾನು ದೇವರಾಜಗೌಡರ ಕೈಯಲ್ಲಿ ಕೊಟ್ಟಿದ್ದೆ, ಇನ್ಯಾರ ಕೈಯಲ್ಲೂ ಕೊಟ್ಟಿಲ್ಲ ಅಂತಾ ಹೇಳಿದ್ದಾನೆ.
ಆದರೆ ಈ ಚಿಲ್ಲರೆ ಅಣ್ಣಾ ತಮ್ಮಂದಿರು, ಕುಮಾರಸ್ವಾಮಿಯೇ ವಿಡಿಯೋ ಬಿಟ್ಟಿರಬೇಕು, ದೇವರಾಜಗೌಡರನ್ನು ಕುಮಾರಸ್ವಾಮಿ ಮೊದಲು ಭೇಟಿ ಮಾಡಿದ್ದು, ಕುಮಾರಸ್ವಾಮಿಯೇ ವಿಡಿಯೋ ಬಿಟ್ಟಿರಬೇಕು ಎಂದು ಈ 420ಗಳು ಹೇಳಿಕೆ ಕೊಟ್ಟಿದ್ದಾರೆ. ಹೇಳಿಕೆ ಕೊಟ್ಟ ಕಾರ್ತಿಕ್ ಎಲ್ಲಿದ್ದಾನೆ. ಯಾರು ಕಳುಹಿಸಿದ್ದು ಅವನನ್ನು ಎನ್ನುವ ವಿಷಯ ತಿಳಿದುಕೊಳ್ಳಿ ಮೊದಲು ಎಂದರು.
ಅವನು ಎಲ್ಲಿಂದ ವಿಡಿಯೋ ಮಾಡಿ ಬಿಟ್ಟಿದ್ದಾನೆ. ಯಾಕೆ ತರಾತುರಿಯಲ್ಲಿ ವಿಡಿಯೋ ಮಾಡಿ ಬಿಟ್ಟರು, ಯಾಕೆ ನ್ಯೂಸ್ ಚಾನೆಲ್‌ಗಳಿಗೆ ನೀಡಿದರು. ಕಾರ್ತಿಕ್ ಮಲೇಶಿಯಾದಲ್ಲಿದ್ದಾನೆ. ಯಾರು ಕಳುಹಿಸಿದ್ದು ಅವನನ್ನು ಮಲೇಶಿಯಾಗೆ. ಅಲ್ಲಿಂದ ವಿಡಿಯೋ ಮಾಡಿ ಕಳುಹಿಸುವಂತದ್ದು ಏನಿದೆ ಎಂದು ಪ್ರಶ್ನಿಸಿದರು.
ಅಷ್ಟು ಸುಲಭವಾಗಿ ಯಾವುದನ್ನೂ ಬಿಡುವುದಿಲ್ಲ, ನಮ್ಮನ್ನು ಕೆಣಕಿದ್ದಾರೆ, ನನ್ನನ್ನು ಕೆಣಕಿದ್ದಾರೆ, ಈ ಕೆಣಕಿರುವುದಕ್ಕೆ ಏನು ಮಾಡಬೇಕು ಎನ್ನುವುದು ನನಗೆ ಗೊತ್ತು. ಇದನೆಲ್ಲಾ ಬಹಳ ನೋಡಿದ್ದೇನೆ. ಕಾರ್ತಿಕ್ ಎಲ್ಲಿದ್ದಾನೆ ಮೊದಲು ಅದನ್ನು ಹುಡುಕಿ ಮಿಕ್ಕಿದನ್ನು ಮತ್ತೆ ಚರ್ಚಿಸೋಣ ಎಂದಿದ್ದಾರೆ.












Click it and Unblock the Notifications