Prakash Raj: ನಿನ್ನ ಆ ದಾರಿ ತಪ್ಪಿದ ಮಗ ಎಲ್ಲಿದ್ದಾನೆ? ಕುಮಾರಸ್ವಾಮಿಗೆ ಪ್ರಕಾಶ್ ರಾಜ್ ಪ್ರಶ್ನೆ
ಬೆಂಗಳೂರು, ಏಪ್ರಿಲ್ 29: ಹಾಸನದ ಹಾಲಿ ಸಂಸದ ಪ್ರಜ್ವಲ್ ರೇವಣ್ಣ ವಿರುದ್ಧದ ಲೈಂಗಿಕ ಕಿರುಕುಳ ಆರೋಪ ಕೇಳಿ ಬಂದಿದ್ದು, ಈ ಸಂಬಂಧ ವಿಶೇಷ ತನಿಖಾ ತಂಡ ತನಿಖೆ ಆರಂಭಿಸಿದೆ. ಹಾಸನ ಅಶ್ಲೀಲ ವಿಡಿಯೋ ವೈರಲ್ ಪ್ರಕರಣ ರಾಜ್ಯ ರಾಜಕೀಯದಲ್ಲಿ ಸಂಚಲನ ಮೂಡಿಸಿದ್ದು, ಕಾಂಗ್ರೆಸ್ ನಾಯಕರು ಜೆಡಿಎಸ್ ವಿರುದ್ಧ ಕ್ಷಣ ಕ್ಷಣಕ್ಕೂ ಕಿಡಿಕಾರುತ್ತಿದ್ದಾರೆ.
ಇದರ ನಡುವೆಯೇ ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ಜೆಡಿಎಸ್ ಜೊತೆ ಮೈತ್ರಿ ಮಾಡಿಕೊಂಡ ಬಿಜೆಪಿ ವಿರುದ್ಧ ನಟ ಪ್ರಕಾಶ್ ರಾಜ್ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ರಾಯಚೂರಿನ ಸಮಾವೇಶದಲ್ಲಿ ಮಾತನಾಡಿದ ನಟ ಪ್ರಕಾಶ್ ರಾಜ್, ನಮ್ಮ ಪ್ರತಿನಿಧಿಗಳನ್ನು ನಾವೇ ಆರಿಸಬೇಕು ಎಂದು ಮಾತನಾಡುತ್ತಾ ಹಾಸನ ಪ್ರಜ್ವಲ್ ರೇವಣ್ಣ ಅವರ ಪ್ರಕರಣವನ್ನು ಪ್ರಸ್ತಾಪಿಸಿ, ಬಿಜೆಪಿ ನಾಯಕರು ಹಾಗೂ ಮಾಜಿ ಸಿಎಂ ಹೆಚ್.ಡಿ ಕುಮಾರಸ್ವಾಮಿ ವಿರುದ್ಧ ವಾಗ್ದಾಳಿ ನಡೆಸಿದರು.

ನಾನು ಮಹಾಪ್ರಭುಗಳಿಗೆ ಕೇಳಬೇಕು ಅಂದುಕೊಂಡಿದ್ದೆ ಎಂದು ಪರೋಕ್ಷವಾಗಿ ಪ್ರಧಾನಿ ನರೇದ್ರ ಮೋದಿ ಅವರ ಮೇಲೆ ಕಿಡಿಕಾರಿದ ಪ್ರಕಾಶ್ ರಾಜ್, ನಿನ್ನ ಜೊತೆ ಮೈತ್ರಿ ಮಾಡಿಕೊಂಡ ಅಣ್ಣ ಇದಾನಲ್ಲ. ಆ ಅಣ್ಣ ಹೆಣ್ಣು ಮಕ್ಕಳಿಗೆ ಉಚಿತ ಬಸ್ ಕೊಟ್ಟರೆ ದಾರಿ ತಪ್ಪಿದ್ರು ಅಂದ್ರು. ಆದ್ರೆ ನಿನ್ನ ಆ ದಾರಿ ತಪ್ಪಿದ ಮಗ ಈಗ ಎಲ್ಲವ್ನೆ ವಸಿ ಹೇಳಪ್ಪಾ ಎಂದು ಮಾಜಿ ಸಿಎಂ ಹೆಚ್.ಡಿ ಕುಮಾರಸ್ವಾಮಿ ವಿರುದ್ಧ ಪ್ರಕಾಶ್ ರಾಜ್ ವ್ಯಂಗ್ಯವಾಡಿದರು.
ಹುಬ್ಬಳ್ಳಿಯಲ್ಲಿ ಹತ್ಯೆಯಾದ ವಿದ್ಯಾರ್ಥಿನಿ ನೇಹಾ ಹಿರೇಮಠ ಪ್ರಕರಣದಲ್ಲಿ ಬಿಜೆಪಿಗರು ಎಷ್ಟೆಲ್ಲಾ ಮಾಡಿದರು. ಆದರೆ ದಾರಿ ತಪ್ಪಿದ ಮಗನಿಂದ ಹಾಳಾದ ಹೆಣ್ಣುಮಕ್ಕಳು ಹಿಂದೂ ಮಹಿಳೆಯರಲ್ವಾ? ದಾರಿ ತಪ್ಪಿದ ಮಗನಿಂದ ಹಾಳಾದ 2,000ಕ್ಕೂ ಹೆಚ್ಚು ಮಹಿಳೆಯರಿಗೋಸ್ಕರ ನಿಮಗೆ ಆಕ್ರೋಶ ಬರಲ್ವಾ? ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ನಿಮ್ಮ ರಾಜಕಾರಣ ನಮಗೆ ಅರ್ಥ ಆಗುವುದಿಲ್ಲ ಎಂದು ಕೊಂಡಿದ್ದೀರಾ..? ದೊಡ್ಡ ಮನಸ್ಸಿನವರು ನಾವು ಕ್ಷಮಿಸಬಹುದು ಆದರೆ ಮರೆಯಲ್ಲ. ಪ್ರಜಾಪ್ರಭುತ್ವದಲ್ಲಿ ಪ್ರಜೆಗಳಾದ ನಮ್ಮ ಜವಾಬ್ದಾರಿ ಮುಖ್ಯ. ಸೂಕ್ತ ವ್ಯಕ್ತಿಯನ್ನು ಆರಿಸುವುದು ನಮ್ಮ ಜವಾಬ್ದಾರಿ. ಅವರನ್ನು ಯಾರನ್ನು ಬೈಬೇಡಿ ನೀವು. ಅಂಧ ಭಕ್ತರು ಅಂತೆಲ್ಲಾ ಬೈಬೇಡಿ. ಅವರು ನಮ್ಮವರೇ, ಅವರಿಗೆ ಮತ್ತೆ ಮತ್ತೆ ತಿಳಿ ಹೇಳೋಣ. ಇಲ್ಲಿಂದ ಹೋಗಿ ನೀವು ನಿಮ್ಮ ಗೆಳೆಯರಿಗೆ ಸಾಧ್ಯವಾದಷ್ಟು ಮೇ ಏಳನೇ ತಾರೀಕಿನವರೆಗೆ ಮೊದಲು ಈ ಪ್ರತಿನಿಧಿಗಳನ್ನು ಇಳಿಸುವ ಕೆಲಸ ಮಾಡೋಣ ಎಂದು ಅರ್ಥ ಮಾಡಿಸಿ.
ಇದಾದ ನಂತರ ಬರುವ ಯಾವುದೇ ಸರ್ಕಾರವಿದ್ದರೂ, ನಾವು ಮತ್ತೆ ಹೀಗೆ ಸೇರಿ ಹಿರಿಯರೊಂದಿಗೆ ಚರ್ಚಿಸಿ ನಮ್ಮ ಬೇಡಿಕೆಯನ್ನು ಇನ್ನೂ ತೀವ್ರವಾಗಿ ಇಡೋಣ ಅವರ ಮುಂದೆ ಎಂದು ಮತದಾರರಿಗೆ ಕರೆ ಕೊಟ್ಟಿದ್ದಾರೆ.












Click it and Unblock the Notifications