ಹಾಸನ: ಮಗುವಿನ ಶವ ಇಲಿಗಳ ಪಾಲು
ಹಾಸನ, ಜೂ.25: ಎರಡು ತಿಂಗಳ ಮಗುವಿನ ಶವದ ಮುಖದ ಒಂದು ಭಾಗವನ್ನು ಇಲಿಗಳು ತಿಂದಿರುವ ಘಟನೆ ಹಾಸನ ವೈದ್ಯಕೀಯ ವಿಜ್ಞಾನಗಳ ಮಹಾವಿದ್ಯಾಲಯದ ಶವಾಗಾರದಲ್ಲಿ ನಡೆದಿದೆ.
ಅರಸೀಕೆರೆ ತಾಲ್ಲೂಕು ಗಂಡಸಿಯ ಜಗದೀಶ್ ಮತ್ತು ಯೋಗಮ್ಮ ಅವರ ಮಗು ಸೋಮವಾರ ಸಂಜೆ ಖಾಸಗಿ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿತ್ತು. ವೈದ್ಯರ ನಿರ್ಲಕ್ಷ್ಯದಿಂದಲೇ ಮಗು ಸಾವನ್ನಪ್ಪಿದೆ ಎಂದು ಮಗುವಿನ ಪೋಷಕರು ಆರೋಪ ಮಾಡಿದ್ದರಿಂದ ಮರಣೋತ್ತರ ಪರೀಕ್ಷೆ ನಡೆಸಲು ಶವವನ್ನು ಹಿಮ್ಸ್' ಶವಾಗಾರದಲ್ಲಿಡಲಾಗಿತ್ತು. ಮಂಗಳವಾರ ಬೆಳಿಗ್ಗೆ ಹೋಗಿ ನೋಡಿದಾಗ ಶವದ ಮುಖದ ಬಲಭಾಗವನ್ನು ಇಲಿಗಳು ತಿಂದಿರುವುದು ಕಾಣಿಸಿತು.

ಸುದ್ದಿ ತಿಳಿದು ಇನ್ನಷ್ಟು ಆಘಾತಕ್ಕೆ ಒಳಗಾದ ಮಗುವಿನ ಪಾಲಕರ ಕಡೆಯವರು ಜಿಲ್ಲಾಧಿಕಾರಿ ಕಚೇರಿ ಮುಂದೆ ಪ್ರತಿಭಟನೆ ನಡೆಸಿ ತಪ್ಪಿತ್ತಸ್ಥರ ವಿರುದ್ಧ ಶಿಸ್ತುಕ್ರಮ ಕೈಗೊಳ್ಳುವಂತೆ ಜಿಲ್ಲಾಧಿಕಾರಿಯವರಲ್ಲಿ ಮನವಿ ಸಲ್ಲಿಸಿದ್ದರು.[ಹಾಸನ: ಅನಸ್ತೇಶಿಯಾ ಓವರ್ ಡೋಸ್ ಬಾಣಂತಿ ಸಾವು]
ಮಗುವಿನ ಶವವನ್ನು ಕೆಟ್ಟು ಹೋಗಿದ್ದ ಬಾಕ್ಸ್‌ನಲ್ಲಿ ಆಸ್ಪತ್ರೆಯ 'ಡಿ' ದರ್ಜೆ ನೌಕರರೊಬ್ಬರು ಇಟ್ಟಿದ್ದರಿಂದ ಈ ಘಟನೆ ಸಂಭವಿಸಿದೆ . ಈ ಹಿನ್ನೆಲೆಯಲ್ಲಿ ಆಸ್ಪತ್ರೆಯ 'ಡಿ' ದರ್ಜೆ ನೌಕರ ಪರಮೇಶ್ ಅವರನ್ನು ಅಮಾನತು ಮಾಡಲಾಗಿದೆ ಎಂದು ಜಿಲ್ಲಾ ಶಸ್ತ್ರಚಿಕಿತ್ಸಕ ಡಾ.ಶಂಕರ್ ತಿಳಿಸಿದ್ದಾರೆ.
ಸೋಮವಾರ ಸಂಜೆ ಶವಾಗಾರದ ಸಿಬ್ಬಂದಿ ಮರಣೋತ್ತರ ಪರೀಕ್ಷೆ ಮುಗಿಸಿ ಸ್ನಾನಕ್ಕೆ ಹೋಗಿದ್ದರು. ಆ ಸಂದರ್ಭದಲ್ಲಿ ಅಲ್ಲಿದ್ದ ಸಿಬ್ಬಂದಿಯೊಬ್ಬರು ಮಗುವಿನ ಶವವನ್ನು ಕೆಟ್ಟುಹೋಗಿದ್ದ ಬಾಕ್ಸ್‌ನಲ್ಲಿ ಇಟ್ಟಿದ್ದರು. ರಾತ್ರಿ ವೇಳೆ ಬಾಕ್ಸ್‌ಗೆ ಇಲಿಗಳು ಬಂದು, ಮಗುವಿನ ಮುಖದ ಒಂದು ಭಾಗವನ್ನು ತಿಂದು ಹಾಕಿವೆ ಎಂದು ಡಾ.ಶಂಕರ್ ಹೇಳಿದ್ದಾರೆ.












Click it and Unblock the Notifications